ಮಹಾದಾಯಿ ಮಾತುಕತೆ ಇಲ್ಲವೇ ಇಲ್ಲ : ಗೋವಾ ಮುಖ್ಯಮಂತ್ರಿ ಮನೋಹರ್ ಪರ‍್ರೀಕರ್ ಘೋಷಣೆ

7

ಮಹಾದಾಯಿ ಮಾತುಕತೆ ಇಲ್ಲವೇ ಇಲ್ಲ : ಗೋವಾ ಮುಖ್ಯಮಂತ್ರಿ ಮನೋಹರ್ ಪರ‍್ರೀಕರ್ ಘೋಷಣೆ

Published:
Updated:
ಮಹಾದಾಯಿ ಮಾತುಕತೆ ಇಲ್ಲವೇ ಇಲ್ಲ : ಗೋವಾ ಮುಖ್ಯಮಂತ್ರಿ ಮನೋಹರ್ ಪರ‍್ರೀಕರ್ ಘೋಷಣೆ

ಪಣಜಿ (ಪಿಟಿಐ): ‘ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ನ್ಯಾಯಮಂಡಳಿಯಲ್ಲೇ ಬಗೆಹರಿಸಿಕೊಳ್ಳುತ್ತೇವೆ’ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ‍್ರೀಕರ್ ಹೇಳಿದರು.

ಕರ್ನಾಟಕದ ಜತೆಗೆ ನದಿ ನೀರು ಹಂಚಿಕೊಳ್ಳುವ ಮಾತುಕತೆ ನಡೆಸಲು ಉತ್ಸುಕರಾಗಿದ್ದೇವೆ ಎಂದು ಪರ‍್ರೀಕರ್ ಕಳೆದ ಡಿಸೆಂಬರ್‌ನಲ್ಲಿ ಕರ್ನಾಟಕದ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು.

ಪ್ರಧಾನಿ ಜೊತೆಗಿನ ಭೇಟಿಯ ವಿವರಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ ಇಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಪತ್ರಿಕಾಗೋಷ್ಠಿ ಆರಂಭವಾಗುತ್ತಿದ್ದಂತೆಯೇ ಪತ್ರಕರ್ತರು ಮಹದಾಯಿ ವಿವಾದಕ್ಕೆ ಸಂಬಂಧಿಸಿ ಪ್ರಶ್ನೆಗಳನ್ನು ಕೇಳಿದರು. ಆಗ ಸಿಡಿಮಿಡಿಗೊಂಡ ಪರ‍್ರೀಕರ್ ಪತ್ರಕರ್ತರ ಮೇಲೆ ಹರಿಹಾಯ್ದರು.

‘ನಿಮಗೆ (ಮಾಧ್ಯಮಗಳಿಗೆ) ಸುದ್ದಿ ಬೇಕಿತ್ತು. ಹೀಗಾಗಿಯೇ ಮಹಾದಾಯಿ ವಿವಾದವನ್ನು ನೀವೇ ಸೃಷ್ಟಿಸಿದಿರಿ. ನೀರು ಹಂಚಿಕೆ ವಿವಾದ ನ್ಯಾಯಮಂಡಳಿಯ ಅಂಗಳದಲ್ಲಿದೆ. ನಾವು ಅಲ್ಲೇ ಹೋರಾಡುತ್ತೇವೆ’ ಎಂದು ಹರಿಹಾಯ್ದರು.

ಈ ಸಂಬಂಧದ ಪ್ರತಿಕ್ರಿಯೆಗೆ ಯಡಿಯೂರಪ್ಪ ಸಿಗಲಿಲ್ಲ. ಆಮೇಲೆ ಹೇಳಿಕೆ ಕೊಡಿಸುವುದಾಗಿ ಆಪ್ತ ಸಿಬ್ಬಂದಿ ಯೊಬ್ಬರು ಹೇಳಿ ಫೋನ್‌ ಇಟ್ಟರು.

ಬಿಜೆಪಿ ನಾಟಕ ಬಯಲಾಗಿದೆ: ಸಿದ್ದರಾಮಯ್ಯ

ಬೆಂಗಳೂರು: ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ ಪರ್ರೀಕರ್‌ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆಡಿದ ನಾಟಕ ಈಗ ಬಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

‘ನಾನು ಮಾತುಕತೆಗೆ ತಯಾರಿದ್ದೇನೆ ಎಂದು ಗೋವಾ ಮುಖ್ಯಮಂತ್ರಿಯವರು ಪತ್ರ ಬರೆಯಬೇಕಾಗಿದ್ದದ್ದು ನನಗೆ. ಯಡಿಯೂರಪ್ಪ ಅವರಿಗಲ್ಲ’ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.

‘ಹುಬ್ಬಳ್ಳಿಯಲ್ಲಿ ಬಿಜೆಪಿ ಸಮಾವೇಶ ಏರ್ಪಡಿಸಿದ್ದರಿಂದ ಮಹದಾಯಿ ಹೋರಾಟಗಾರರು, ರೈತ ನಾಯಕರ ಮೈಮೇಲೆ ಬೀಳಬಹುದು ಎಂಬ ಭಯದಿಂದ ಗೋವಾ ಮುಖ್ಯಮಂತ್ರಿಯವರು ಯಡಿಯೂರಪ್ಪ ಅವರಿಗೆ ಪತ್ರ ಬರೆದರು. ಇಬ್ಬರೂ ಸೇರಿ ನಾಟಕವಾಡಿ ಸಿಕ್ಕಿ ಹಾಕಿಕೊಂಡರು’ ಎಂದು ಗೇಲಿ ಮಾಡಿದರು.

ಗೋವಾದ ಪ್ರತಿಪಕ್ಷಗಳ ಮನವೊಲಿಸಲು ಪರ್ರೀಕರ್‌ ಅವರಿಂದ ಸಾಧ್ಯವಾಗಿಲ್ಲ ಎಂದೂ ಅವರು ಟೀಕಿಸಿದರು.

ಮಾತುಕತೆಗೆ ಸದಾ ಸಿದ್ದ :‘ಪ್ರಧಾನಿಯವರಿಗೆ ಮತ್ತೆ ಪತ್ರ ಬರೆಯುತ್ತೇನೆ. ಸರ್ವಪಕ್ಷ ಸಭೆ ಕರೆದು ಸಮಾಲೋಚಿಸುತ್ತೇನೆ. ಎಲ್ಲರ ಅಭಿಪ್ರಾಯ ಕೇಳಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಮುಖ್ಯಮಂತ್ರಿ ನುಡಿದರು.

ಆಗಸ್ಟ್ 15ರೊಳಗೆ ನ್ಯಾಯ ಮಂಡಳಿ ತನ್ನ ಅಂತಿಮ ತೀರ್ಪು ನೀಡಲಿದೆ. ತೀರ್ಪು ಏನಾಗುವುದೋ ನೋಡೋಣ ಎಂದೂ ಅವರು ಹೇಳಿದರು.

***

ಕಠಿಣ ಕ್ರಮ

‘ಕರ್ನಾಟಕದಿಂದ ಕಾನೂನುಬದ್ಧವಾಗಿ ಗೋಮಾಂಸವನ್ನು ತರಿಸಿಕೊಳ್ಳುವವರಿಗೆ ತೊಂದರೆ ಕೊಡುವ ಗೋರಕ್ಷಕರ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳುತ್ತೇವೆ’ ಎಂದು ಮನೋಹರ್ ಪರ‍್ರೀಕರ್ ಘೋಷಿಸಿದರು.

‘ಗೋಮಾಂಸ ತರಿಸಿಕೊಳ್ಳುವವರ ಬಳಿ ಅಗತ್ಯ ದಾಖಲೆಗಳು ಮತ್ತು ರಸೀದಿ ಇದ್ದರೆ ಅವರನ್ನು ತಡೆಯುವಂತಿಲ್ಲ. ಅಂತಹವರಿಗೆ ತೊಂದರೆ ಕೊಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪೊಲೀಸರಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಕಾನೂನು ಪ್ರಕಾರ

ನಡೆದುಕೊಳ್ಳುವಂತೆ ಪೊಲೀಸರಿಗೆ ಹೇಳಿದ್ದೇನೆ’ ಎಂದರು.

ಕರ್ನಾಟಕದ ಬೆಳಗಾವಿಯಿಂದ ಗೋಮಾಂಸವನ್ನು ಹೊತ್ತು ಬರುವ ವಾಹನಗಳನ್ನು ಗೋವಾದ ಗಡಿಯಲ್ಲಿ ‘ಗೋ ರಕ್ಷಕ ಅಭಿಯಾನ’ದ ಕಾರ್ಯಕರ್ತರು ತಡೆದು, ಚಾಲಕರ ಮೇಲೆ ಹಲ್ಲೆ ನಡೆಸಿದ ಹಲವು ಪ್ರಕರಣಗಳು ವರದಿಯಾಗಿದ್ದವು. ‘ಗೋರಕ್ಷಕರ ಹಾವಳಿ ನಿಲ್ಲಿಸದಿದ್ದರೆ ಕರ್ನಾಟಕದಿಂದ ಗೋಮಾಂಸ ತರಿಸಿಕೊಳ್ಳುವುದಿಲ್ಲ’ ಎಂದು ಗೋವಾ ಗೋಮಾಂಸ ಮಾರಾಟಗಾರರ ಒಕ್ಕೂಟ ನಾಲ್ಕು ದಿನಗಳ ಮುಷ್ಕರ ನಡೆಸಿತ್ತು. ಮುಖ್ಯಮಂತ್ರಿ ಮಾತುಕತೆಯ ನಂತರವಷ್ಟೇ ಮಂಗಳವಾರ ಮುಷ್ಕರವನ್ನು ಹಿಂಪಡೆಯಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry