ಏರ್‌ ಇಂಡಿಯಾ: ಶೇ49 ಎಫ್‌ಡಿಐಗೆ ಅನುಮತಿ

7

ಏರ್‌ ಇಂಡಿಯಾ: ಶೇ49 ಎಫ್‌ಡಿಐಗೆ ಅನುಮತಿ

Published:
Updated:
ಏರ್‌ ಇಂಡಿಯಾ: ಶೇ49 ಎಫ್‌ಡಿಐಗೆ ಅನುಮತಿ

ನವದೆಹಲಿ : ವಿದೇಶಿ ನೇರ ಹೂಡಿಕೆಯಲ್ಲಿ (ಎಫ್‌ಡಿಐ) ಬಜೆಟ್‌ಗೆ ಮುನ್ನವೇ ಹಲವು ಸುಧಾರಣಾ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಸಾಲದಿಂದ ಜರ್ಜರಿತವಾಗಿರುವ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾದಲ್ಲಿ ಶೇ 49ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡಲಾಗಿದೆ.

ಇದಲ್ಲದೆ, ಏಕಬ್ರ್ಯಾಂಡ್‌ ಚಿಲ್ಲರೆ ಮಾರಾಟ, ನಿರ್ಮಾಣ ಕ್ಷೇತ್ರ ಮತ್ತು ಇಂಧನ ವಿನಿಮಯ ರಂಗಗಳಲ್ಲಿ ವಿದೇಶಿ ನೇರ ಹೂಡಿಕೆಯ ನಿಯಮಗಳನ್ನು ಕೇಂದ್ರ ಸಂಪುಟ ಸರಳಗೊಳಿಸಿದೆ.

ವೈದ್ಯಕೀಯ ಸಲಕರಣೆಗಳು, ವಿದೇಶದಿಂದ ಹಣ ಪಡೆಯುವ ಕಂಪನಿಗಳಿಗೆ ಸಂಬಂಧಿಸಿದ ಲೆಕ್ಕ ಪರಿಶೋಧನೆ ಸಂಸ್ಥೆಗಳಲ್ಲಿ ಎಫ್‌ಡಿಐ ನಿಯಮಗಳನ್ನೂ ಸಡಿಲಗೊಳಿಸಲಾಗಿದೆ.

ಸರ್ಕಾರದ ಕ್ರಮದಿಂದ ಏಕಬ್ರ್ಯಾಂಡ್‌ ಚಿಲ್ಲರೆ ಮಾರಾಟ ಕಂಪನಿಗಳಿಗೆ ಅನುಕೂಲ ಆಗಲಿದೆ. ಈಗಲೂ, ಏಕಬ್ರ್ಯಾಂಡ್‌ ಚಿಲ್ಲರೆ ಮಾರಾಟದಲ್ಲಿ ಶೇ ನೂರರಷ್ಟು  ವಿದೇಶಿ ನೇರ ಹೂಡಿಕೆಗೆ ಅವಕಾಶ ಇದೆ. ಆದರೆ ಅದಕ್ಕೆ ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಳ್ಳಬೇಕು. ಇನ್ನುಮುಂದೆ ಶೇ ನೂರರಷ್ಟು ಎಫ್‌ಡಿಐಗೆ ಸರ್ಕಾರದ ಅನುಮತಿ ಅಗತ್ಯ ಇಲ್ಲ.

ನಿರ್ಮಾಣ ಅಭಿವೃದ್ಧಿ ವಿಭಾಗದಲ್ಲಿ ಇನ್ನಷ್ಟು ಉದಾರೀಕರಣದ ನಿರ್ಧಾರ ಕೈಗೊಳ್ಳಲಾಗಿದೆ. ‘ರಿಯಲ್‌ ಎಸ್ಟೇಟ್‌ ದಲ್ಲಾಳಿ ಸೇವೆಯನ್ನು ರಿಯಲ್‌ ಎಸ್ಟೇಟ್‌ ವ್ಯಾಪಾರ ಎಂದು ಪರಿಗಣಿಸಲಾಗದು. ಹಾಗಾಗಿ ನಿರ್ಮಾಣ ಅಭಿವೃದ್ಧಿ ವಿಭಾಗದಲ್ಲಿ ಶೇ ನೂರರಷ್ಟು ಎಫ್‌ಡಿಐಗೆ ಅವಕಾಶ ನೀಡಲಾಗಿದೆ’ ಎಂದು ಸರ್ಕಾರ ಹೇಳಿದೆ.

ಎಫ್‌ಡಿಐಗೆ ಸಂಬಂಧಿಸಿ 2016ರ ಜೂನ್‌ನಲ್ಲಿ ಕೆಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈಗಿನದ್ದು ಈ ಸರ್ಕಾರದ ಎರಡನೇ ಮಹತ್ವದ ಸುಧಾರಣಾ ಕ್ರಮವಾಗಿದೆ.

ಟಿಎಸ್‌ಪಿಎಲ್‌ ಮುಚ್ಚಲು ಒಪ್ಪಿಗೆ

ಹೊಸಪೇಟೆಯ ತುಂಗಭದ್ರಾ ಸ್ಟೀಲ್‌ ಪ್ರೊಡಕ್ಟ್ಸ್‌ ಲಿ. (ಟಿಎಸ್‌ಪಿಎಲ್‌) ಮುಚ್ಚುವ ನಿರ್ಧಾರವನ್ನು ಕೇಂದ್ರ ಸಂಪುಟ ಕೈಗೊಂಡಿದೆ.

ಟಿಎಸ್‌ಪಿಎಲ್‌ನಿಂದ ಬಾಕಿ ಇರುವ ಸಾಲ ಚುಕ್ತಾ ಆದ ಬಳಿಕ ಕಂಪನಿಗಳ ರಿಜಿಸ್ಟ್ರಾರ್‌ ಪಟ್ಟಿಯಿಂದ ಟಿಎಸ್‌ಪಿಎಲ್‌ ಹೆಸರನ್ನು ಅಳಿಸಿ ಹಾಕಲು ಅನುಮೋದನೆ ನೀಡಲಾಗಿದೆ.

ಕಂಪನಿಯ ಉದ್ಯೋಗಿಗಳು, ಕೆಲಸಗಾರರು ಮತ್ತು ಸಾಲದಾತರ ಎಲ್ಲ ಬಾಕಿ ಚುಕ್ತಾ ಆದ ಬಳಿಕ ಕಂಪನಿಯನ್ನು ಮುಚ್ಚಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2015ರ ಡಿಸೆಂಬರ್‌ನಲ್ಲಿಯೇ ಅನುಮೋದನೆ ನೀಡಿತ್ತು.

ಕಂಪನಿಯ ಮೆಟಲರ್ಜಿಕಲ್‌ ಮತ್ತು ಮೆಟೀರಿಯಲ್‌ ಹ್ಯಾಂಡ್ಲಿಂಗ್‌ ಘಟಕ ಮತ್ತು ಅದರ 20 ಸಾವಿರ ಚದರ ಮೀಟರ್‌ ಸ್ಥಳವನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸುವುದಕ್ಕೂ ಒಪ್ಪಿಗೆ ನೀಡಲಾಗಿದೆ. ಕಂಪನಿಯು ಹೊಸ‍ಪೇಟೆಯಲ್ಲಿ ಹೊಂದಿರುವ 82.37 ಎಕರೆ ಭೂಮಿಯನ್ನು ಎಕರೆಗೆ ₹66 ಲಕ್ಷ ದರದಲ್ಲಿ ಕರ್ನಾಟಕ ಸರ್ಕಾರಕ್ಕೆ ಮಾರಾಟ ಮಾಡುವುದಕ್ಕೂ ಅನುಮತಿ ಕೊಡಲಾಗಿದೆ.

ಮೂರು ವರ್ಷದ ಅವಧಿ

ಆಟಿಸಂ ಮತ್ತು ಇತರ ಅಂಗವೈಕಲ್ಯಗಳನ್ನು ಹೊಂದಿರುವವರ ಕಲ್ಯಾಣಕ್ಕಾಗಿ ಸ್ಥಾಪಿಸಲಾಗಿರುವ ರಾಷ್ಟ್ರೀಯ ಟ್ರಸ್ಟ್‌ನ ಅಧ್ಯಕ್ಷರ ಅಧಿಕಾರಾವಧಿಯನ್ನು ಮೂರು ವರ್ಷಕ್ಕೆ ನಿಗದಿ ಮಾಡುವ ನಿರ್ಧಾರಕ್ಕೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry