ಬಿಬಿಎಂಪಿ ಆಡಳಿತದಲ್ಲಿ ಜಂಗಲ್‌ ರಾಜ್‌

7
ಅಧಿಕಾರಿಗಳ ಕಾರ್ಯವೈಖರಿಗೆ ಹೈಕೋರ್ಟ್‌ ಕಿಡಿ

ಬಿಬಿಎಂಪಿ ಆಡಳಿತದಲ್ಲಿ ಜಂಗಲ್‌ ರಾಜ್‌

Published:
Updated:

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ಕಾರ್ಯ ವೈಖರಿಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿರುವ ಹೈಕೋರ್ಟ್‌ ನಗರದ ಆಡಳಿತ ‘ಜಂಗಲ್‌ ರಾಜ್‌’ ಆಗಿ ಪರಿವರ್ತನೆ ಆಗಿದೆ ಎಂದು ಕಿಡಿಕಾರಿದೆ.

’ನಕ್ಷೆ ಮಂಜೂರಾತಿ ಪಡೆಯದೆ ರಾಜಕಾಲುವೆ ಮೇಲೆ ಅಕ್ರಮವಾಗಿ ನಾಲ್ಕು ಮಹಡಿ ಕಟ್ಟಡ ನಿರ್ಮಿಸಲಾಗಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ವಕೀಲ ಅರ್ಜುನ್ ವಾದಿಸಿ, ‘ರಾಮಚಂದರ್ 2017ರ ಸೆ.14ರಂದು ರಾಜಕಾಲುವೆ ಮೇಲೆ ಕೇವಲ ಮೂರು ತಿಂಗಳಲ್ಲಿ ಮೂರು ಮಹಡಿ ಕಟ್ಟಡ ನಿರ್ಮಿಸಿದ್ದಾರೆ.  ಕಟ್ಟಡದ ಸುತ್ತಲೂ ಸೆಟ್‍ಬ್ಯಾಕ್ ಬಿಟ್ಟಿಲ್ಲ ಹಾಗೂ ನಿರ್ಮಾಣಕ್ಕೆ ಬಿಬಿಎಂಪಿ ನಕ್ಷೆಯ ಮಂಜೂರಾತಿ ಪಡೆದಿಲ್ಲ. ಇದರಿಂದ ಸುತ್ತಲಿನ ನಿವಾಸಿಗಳಿಗೆ ತೊಂದರೆಯಾಗಿದೆ. ಬಿಬಿಎಂಪಿ ಅಧಿಕಾರಿಗಳೂ ಈತನಕ ಸ್ಥಳ ಪರಿಶೀಲನೆ ನಡೆಸಿಲ್ಲ’ ಎಂದು ದೂರಿದರು.

ಇದಕ್ಕೆ ನ್ಯಾಯಪೀಠ, ‘ಇದೇನು ಜಂಗಲ್‌ ರಾಜ್ಯವಾಗಿದೆಯೇ’ ಎಂದು ಪ್ರಶ್ನಿಸಿದರಲ್ಲದೆ, ‘ಬಿಬಿಎಂಪಿ ಅಧಿಕಾರಿಗಳು ಇಂತಹ ಕಟ್ಟಡಗಳ ಪರಿಶೀಲನೆ ನಡೆಸಬೇಕು’ ಎಂದು ಸೂಚಿಸಿ ಪ್ರತಿವಾದಿ ರಾಮಚಂದ್ರ ಅವರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು.

‘ಬಿಬಿಎಂಪಿ ವ್ಯಾಪ್ತಿಯ ಉತ್ತರ ತಾಲ್ಲೂಕಿನ ಬೇಗೂರು ಹೋಬಳಿಯ ಯಲೇನಹಳ್ಳಿಯ ಖಾಲಿ ನಿವೇಶನದ ಸಂಖ್ಯೆ 31ರಲ್ಲಿ ಡಿ.ರಾಮಚಂದರ್ ಎಂಬುವರು ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆ’ ಎಂದು ಆರೋಪಿಸಿ ಹುಳಿಮಾವು ನಿವಾಸಿ ಸುನೀಲ್ ಕುಮಾರ್ ಸಲ್ಲಿಸಿರುವ ಅರ್ಜಿ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry