ಟ್ಯಾಕ್ಸಿ ಪ್ರಯಾಣಕ್ಕೆ ಕನಿಷ್ಠ–ಗರಿಷ್ಠ ದರ ನಿಗದಿ

7
ಅಧಿಸೂಚನೆ ಹೊರಡಿಸಿದ ಸಾರಿಗೆ ಇಲಾಖೆ

ಟ್ಯಾಕ್ಸಿ ಪ್ರಯಾಣಕ್ಕೆ ಕನಿಷ್ಠ–ಗರಿಷ್ಠ ದರ ನಿಗದಿ

Published:
Updated:
ಟ್ಯಾಕ್ಸಿ ಪ್ರಯಾಣಕ್ಕೆ ಕನಿಷ್ಠ–ಗರಿಷ್ಠ ದರ ನಿಗದಿ

ಬೆಂಗಳೂರು: ನಗರ ಕ್ಯಾಬ್‌ಗಳು ಮತ್ತು ಟ್ಯಾಕ್ಸಿಗಳ ಪ್ರಯಾಣ ದರ ಪರಿಷ್ಕರಣೆ ಮಾಡಿರುವ ಸಾರಿಗೆ ಇಲಾಖೆ, ಇದೇ ಮೊದಲ ಬಾರಿಗೆ ಕನಿಷ್ಠ ಮತ್ತು ಗರಿಷ್ಠ ದರ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ.

ಅಧಿಸೂಚನೆಗೂ ಮುನ್ನ ಕರಡಿನಲ್ಲಿ ಇದ್ದ ದುಬಾರಿ ದರಕ್ಕೆ ಭಾರಿ ವಿರೋಧ ವ್ಯಕ್ತವಾದ ಬಳಿಕ ಪ್ರಯಾಣಿಕರ ಪಾಲಿಗೆ ಅಷ್ಟೇನು ದುಬಾರಿಯಲ್ಲದ ದರ ನಿಗದಿ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ವಾಹನಗಳ ಮೌಲ್ಯ ಆಧರಿಸಿ ನಾಲ್ಕು ವಿಭಾಗವಾಗಿ ವಿಂಗಡಿಸಿ ದರ ನಿಗದಿ ಮಾಡಲಾಗಿದೆ. ವಾಹನಗಳ ಬೆಲೆ ಮತ್ತು ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಹೆಚ್ಚಾಗಿರುವುದರಿಂದ ಟ್ಯಾಕ್ಸಿ ದರ ಪರಿಷ್ಕರಣೆ ಮಾಡಲಾಗಿದೆ. ಬುಧವಾರದಿಂದಲೇ ಹೊಸ ದರ ಜಾರಿಗೆ ಬರಲಿದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಟೋಲ್ ಶುಲ್ಕವನ್ನು ಚಾಲಕರೇ ಪಾವತಿಸಬೇಕಾಗುತ್ತದೆ. ಸಮಯದ ಆಧಾರದಲ್ಲಿ ದರ ವಿಧಿಸದೆ, ಕಿಲೋ ಮೀಟರ್ ಆಧಾರದಲ್ಲಿ ಮಾತ್ರ ದರ ಪಡೆಯಬೇಕು ಎಂದೂ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕಾಯುವಿಕೆಗೆ ಮೊದಲ 20 ನಿಮಿಷ ಉಚಿತ, ನಂತರದ ಪ್ರತಿ 15 ನಿಮಿಷಗಳಿಗೆ ₹ 10ನ್ನು ಪ್ರಯಾಣಿಕರಿಂದ ಪಡೆಯಬಹುದು. ಇದನ್ನು ಹೊರತಾಗಿ ಬೇರೆ ಯಾವ ದರವನ್ನೂ ಪ್ರಯಾಣಿಕರಿಗೆ ವಿಧಿಸುವಂತಿಲ್ಲ ಎಂದೂ ಉಲ್ಲೇಖಿಸಲಾಗಿದೆ.

ಹೊಸ ಅಧಿಸೂಚನೆ ಬೆಂಗಳೂರು ನಗರಕ್ಕೆ ಮಾತ್ರ ಅನ್ವಯವಾಗಲಿದ್ದು, ಉಳಿದ ಜಿಲ್ಲೆಗಳಿಗೆ 2013ರಲ್ಲಿ ನಿಗದಿಪಡಿಸಿರುವ ದರಗಳೇ ಚಾಲ್ತಿಯಲ್ಲಿರುತ್ತವೆ ಎಂದೂ ಆದೇಶದಲ್ಲಿ ಸ್ಪಷ್ಪಪಡಿಸಲಾಗಿದೆ.

2013ರ ಅಧಿಸೂಚನೆಯಂತೆ ಹವಾ ನಿಯಂತ್ರಿತ ಟ್ಯಾಕ್ಸಿಗಳಿಗೆ ಕನಿಷ್ಠ ₹ 80 (4 ಕಿ.ಮೀಗೆ) ನಿಗದಿಯಾಗಿತ್ತು. ನಂತರದ ಪ್ರತಿ ಕಿ.ಮೀಗೆ ಗರಿಷ್ಠ ದರ ₹ 19.50 ಇತ್ತು. ಹವಾ ನಿಯಂತ್ರಿತ ರಹಿತ ಟ್ಯಾಕ್ಸಿಗಳಿಗೆ ₹ 70 ( 4 ಕಿ.ಮೀಗೆ) ಮತ್ತು ನಂತರದ ಪ್ರತಿ ಕಿ.ಮೀಗೆ ಗರಿಷ್ಠ ದರ ₹ 14.50 ಇತ್ತು.

***

ವಾಹನದ ಮೌಲ್ಯ(₹ ಲಕ್ಷಗಳಲ್ಲಿ) ಕನಿಷ್ಠ ದರಗಳು(4 ಕಿ.ಮೀಗೆ ₹ಗಳಲ್ಲಿ) ನಂತರದ ಪ್ರತಿ ಕಿ.ಮೀಗೆ(ಕನಿಷ್ಠ ಮತ್ತು ಗರಿಷ್ಠ ದರ ₹ಗಳಲ್ಲಿ)

5ರ ಒಳಗೆ 44 11–22

5ರಿಂದ 10 52 12–24

10ರಿಂದ 16 68 16–34

16ರ ಮೇಲ್ಪಟ್ಟು 80 20–45

ಅವೈಜ್ಞಾನಿಕ ದರ: ಅಸಮಾಧಾನ

ಚುನಾವಣೆ ಗಮನದಲ್ಲಿಟ್ಟುಕೊಂಡು ತರಾತುರಿಯಲ್ಲಿ ಸರ್ಕಾರ ಅವೈಜ್ಞಾನಿಕವಾಗಿ ದರ ನಿಗದಿ ಮಾಡಿದೆ ಎಂದು ಕರ್ನಾಟಕ ರಾಜ್ಯ ಟ್ಯಾಕ್ಸಿ ಚಾಲಕ ಮಾಲೀಕರ ಸಂಘಟನೆಯ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ.

ಓಲಾ ಮತ್ತು ಉಬರ್ ಸಂಸ್ಥೆಗಳನ್ನು ಖುಷಿ ಪಡಿಸಲು ಹಾಗೂ ಆ ಸಂಸ್ಥೆಗಳಿಗೆ ಆದಾಯ ಹೆಚ್ಚಿಸಲು ಮಾಡಿರುವ ಆದೇಶ. ಚಾಲಕರಿಗೆ ಮಾಲೀಕರಿಗೆ ಯಾವುದೇ ಪ್ರಯೋಜನವಿಲ್ಲ. ಗ್ರಾಹಕರಿಗೂ ಹೊರೆಯಾಗಲಿದೆ ಎಂದು ಒಕ್ಕೂಟದ ಅಧ್ಯಕ್ಷ ತನ್ವೀರ್ ಪಾಷಾ ಅಭಿಪ್ರಾಯಪಟ್ಟಿದ್ದಾರೆ.

‘ಅವೈಜ್ಞಾನಿಕ ದರ ಪರಿಷ್ಕರಣೆಯನ್ನು ಖಂಡಿಸುತ್ತೇವೆ. ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇವೆ’ ಎಂದೂ ಅವರು ತಿಳಿಸಿದ್ದಾರೆ.

ಸಾರಿಗೆ ಇಲಾಖೆ ಕನಿಷ್ಠ ಮತ್ತು ಗರಿಷ್ಠ ದರಗಳನ್ನು ನಿಗದಿ ಮಾಡುವ ಮೂಲಕ ಗೊಂದಲ ಸೃಷ್ಟಿಸಿದೆ. ಕಂಪೆನಿಗಳು ಮನಸ್ಸಿಗೆ ಬಂದ ದರ ನಿಗದಿ ಮಾಡುತ್ತವೆ. ಈ ಸಂದರ್ಭದಲ್ಲಿ ಚಾಲಕರು ಮತ್ತು ಪ್ರಯಾಣಿಕರ ನಡುವೆ ಘರ್ಷಣೆಗೆ ಕಾರಣವಾಗಲಿದೆ. ಹೀಗಾಗಿ ಅಧೀಸೂಚನೆ ವಾಪಸ್ ಪಡೆದು ಇಂತಿಷ್ಟೇ ದರ ಪಡೆಯಬೇಕು ಎಂಬುದನ್ನು ನಿಗದಿ ಮಾಡಬೇಕು ಎಂದು ಕರ್ನಾಟಕ ಸಿಟಿ ಟ್ಯಾಕ್ಸಿ ಕಂಟ್ರೋಲರ್ ಅಸೋಸಿಯೇಷನ್ ಅಧ್ಯಕ್ಷ  ಹಮೀದ್ ಅಕ್ಬರ್ ಅಲಿ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry