ಭಾರತ ಮಾತೆ ಕೇವಲ ಬ್ರಾಹ್ಮಣ ಮಾತೆ ಆಗಲಿದ್ದಾಳೆ

7
ಸಾವಿತ್ರಿಭಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಚಂಪಾ ಆತಂಕ

ಭಾರತ ಮಾತೆ ಕೇವಲ ಬ್ರಾಹ್ಮಣ ಮಾತೆ ಆಗಲಿದ್ದಾಳೆ

Published:
Updated:
ಭಾರತ ಮಾತೆ ಕೇವಲ ಬ್ರಾಹ್ಮಣ ಮಾತೆ ಆಗಲಿದ್ದಾಳೆ

ಬೆಂಗಳೂರು: ಭಾರತ ಮಾತೆ ಇಂದು ಹಿಂದೂ ಮಾತೆಯಾಗಿದ್ದಾಳೆ. ಕೆಲವು ದಿನಗಳಲ್ಲಿ ಕೇವಲ ಬ್ರಾಹ್ಮಣ ಮಾತೆಯಾಗಿ ಉಳಿಯುತ್ತಾಳೆ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಆತಂಕ ವ್ಯಕ್ತಪಡಿಸಿದರು.

ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ಭೀಮಾ ಕೋರೆಗಾಂವ್‌ ವಿಜಯೋತ್ಸವ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ನ್ಯಾಯ ಹಾಗೂ ಜಾತ್ಯತೀತ ಮನೋಭಾವಕ್ಕೆ ಧಕ್ಕೆ ತರುವ ಬೆಳವಣಿಗೆಗಳು ಹೆಚ್ಚುತ್ತಿವೆ. ಜಾತ್ಯತೀತತೆ ಎಂಬುದೇ ಮಹಾಸುಳ್ಳು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳುತ್ತಾರೆ. ನಾವು ಬಂದಿರುವುದೇ ಸಂವಿಧಾನದ ಬದಲಾವಣೆಗೆ ಎಂದು ಸಚಿವ ಅನಂತಕುಮಾರ ಹೆಗಡೆ ಹೇಳುತ್ತಾರೆ. ಅವರಿಬ್ಬರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಳವಳ ಉಂಟಾಗುತ್ತದೆ’ ಎಂದರು.

ಬೈಬಲ್, ಕುರ್‌ಆನ್‌ ಹಾಗೂ ಭಗವದ್ಗೀತೆ ಜಡವಾದ ಧರ್ಮಗ್ರಂಥಗಳು. ಯಾವುದೋ ಕಾಲಘಟ್ಟದಲ್ಲಿ ಮಹಾಪುರುಷರು ಹೇಳಿದ ಮಾತುಗಳ ಆಧಾರದಲ್ಲಿ ನಿಂತಿವೆ. ಅಲ್ಲಿರುವ ಸಂದೇಶಗಳು ಸಾರ್ವಕಾಲಿಕ ಸತ್ಯಗಳಲ್ಲ. ಸತ್ಯ ಎನ್ನುವುದು ನಿರಂತರವಾಗಿ ಬದಲಾಗುತ್ತದೆ ಎಂದು ಹೇಳಿದರು.

ಮಾನವೀಯ ಮೌಲ್ಯಗಳ ಮೇಲೆ ಕಟ್ಟಿದ ಬಹುದೊಡ್ಡ ಕಟ್ಟಡ ಸಂವಿಧಾನ. ಅದೇ ನಮಗೆ ಮೂಲ. ಕಾಲಕ್ಕೆ ತಕ್ಕಂತೆ ಅದರ ಬಾಗಿಲು, ಕಿಟಕಿಗಳನ್ನು ಬದಲಾವಣೆ ಮಾಡಬಹುದು. ಅದರ ಬುನಾದಿಗೆ ಕೈ ಹಾಕುತ್ತೇವೆ ಎನ್ನುವವರ ವಿರುದ್ಧ ಹೋರಾಡಬೇಕಿದೆ ಎಂದರು.

‘ಸಮಾನತೆ ನೀಡದ ಧರ್ಮ ನಮಗೆ ಬೇಡ. ಮೂಲ ಧರ್ಮವಾದ ಬೌದ್ಧ ಧರ್ಮಕ್ಕೆ ಸೇರುತ್ತೇವೆ ಎಂದು ದಲಿತರು ನಿರ್ಧರಿಸಿದರೆ, ಒಂದೇ ವರ್ಷದೊಳಗೆ ದೇಶ ಬುದ್ಧ, ಭೀಮ ಭಾರತವಾಗುತ್ತದೆ. ಈ ದಿಸೆಯಲ್ಲಿ ನಮ್ಮ ಪ್ರಯತ್ನಗಳು ಸಾಗಬೇಕು’ ಎಂದರು.

***

ಭಾರತ ಮಾತೆಯನ್ನು ಕೆಲವರು ಹೈಜಾಕ್ ಮಾಡಿದ್ದಾರೆ. ಹೀಗಾಗಿ, ನಾನು ಜೈ ಭಾರತ ಮಾತೆ ಎನ್ನುವುದಿಲ್ಲ. ಜೈ ಇಂಡಿಯಾ ಎನ್ನುತ್ತೇನೆ

–ಚಂದ್ರಶೇಖರ ಪಾಟೀಲ, ಸಾಹಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry