ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ: 19ರಿಂದ ಅಂತರರಾಷ್ಟ್ರೀಯ ಮೇಳ

Last Updated 10 ಜನವರಿ 2018, 19:53 IST
ಅಕ್ಷರ ಗಾತ್ರ

ಬೆಂಗಳೂರು: ಸಾವಯವ ಕೃಷಿ ಮತ್ತು ಸಿರಿಧಾನ್ಯ ಬೆಳೆಗೆ ಉತ್ತೇಜನ ನೀಡಲು ನಗರದ ಅರಮನೆ ಮೈದಾನದಲ್ಲಿ ಇದೇ 19ರಿಂದ 21ರವರೆಗೆ ಅಂತರರಾಷ್ಟ್ರೀಯ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗುವುದು ಎಂದು ಕೃಷಿ ಇಲಾಖೆ ಆಯುಕ್ತ ಜಿ.ಸತೀಶ್‌ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಸಿರಿಧಾನ್ಯಗಳ ಬಿತ್ತನೆ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಸಾವಯವ ಆಹಾರ ಪದಾರ್ಥಗಳಿಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಿದೆ. ರೈತರು ಮತ್ತು ಉದ್ಯಮಿಗಳ ನಡುವೆ ಸಂಪರ್ಕ ಕಲ್ಪಿಸುವುದು ಹಾಗೂ ಈ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಕಂಡುಕೊಳ್ಳುವುದು ಮೇಳದ ಉದ್ದೇಶ’ ಎಂದರು.

‘ತುಮಕೂರು ಜಿಲ್ಲೆಯಲ್ಲಿ 550 ಎಕರೆ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುತ್ತಿದ್ದೇವೆ. ಸಿರಿಧಾನ್ಯಗಳು ಹೆಚ್ಚು ದಿನ ಬಾಳಿಕೆ ಬರುತ್ತವೆ. ಇವುಗಳ ಬೆಳೆಗೆ ಕಡಿಮೆ ನೀರು ಸಾಕು. ಖರ್ಚೂ ಕಡಿಮೆ. ಯಾವುದೇ ರಾಸಾಯನಿಕ ಔಷಧ, ಗೊಬ್ಬರ ಬಳಸುವ ಅಗತ್ಯ ಇಲ್ಲ. ಕೀಟಬಾಧೆ ಸಹ ಇಲ್ಲ’ ಎಂದು ತುಮಕೂರು ಸಿರಿಧಾನ್ಯ ಪ್ರಾಂತೀಯ ಒಕ್ಕೂಟದ ಅಧ್ಯಕ್ಷ ಗೋವಿಂದರಾಜು ತಿಳಿಸಿದರು.

‘ಸಿರಿಧಾನ್ಯ ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದು. ಇದರಿಂದ ನಮ್ಮ ಆದಾಯವೂ ಹೆಚ್ಚಿದೆ. ಆರಂಭದ ಒಂದೆರಡು ವರ್ಷ ಇದನ್ನು ಬೆಳೆಯುವುದು ಕಷ್ಟ ಆಗಬಹುದು’ ಎಂದು ಚಿತ್ರದುರ್ಗದ ಮಲ್ಲೇಶ್ವರಪ್ಪ ಅನುಭವ ಹಂಚಿಕೊಂಡರು.

‘ಎಲ್ಲ ಹವಾಮಾನಕ್ಕೂ ಈ ಬೆಳೆ ಹೊಂದಿಕೊಳ್ಳುತ್ತದೆ. ಉತ್ತಮ ತಳಿಯಿಂದ ಹೆಚ್ಚು ಇಳುವರಿ ಪಡೆಯಬಹುದು. ನವಣೆಯಲ್ಲಿ ಎಚ್‌.ಎನ್‌ 46 ತಳಿಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಇದು ಸಾಮಾನ್ಯ ತಳಿಗಿಂತ ಎರಡು ಪಟ್ಟು ಹೆಚ್ಚು ಇಳುವರಿ ಕೊಡುತ್ತದೆ’ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ತಳಿ ಅಭಿವೃದ್ಧಿ ವಿಜ್ಞಾನಿ ಎಲ್.ಎನ್‌.ಯೋಗೇಶ್‌ ತಿಳಿಸಿದರು.

‘ಈ ಬಾರಿ ಕೊರಲೆಯನ್ನು ಸಿರಿಧಾನ್ಯದ ಪಟ್ಟಿಗೆ ಸೇರಿಸಿದ್ದಾರೆ. ಇದರ ಬಗ್ಗೆ ಬಹುತೇಕರಿಗೆ ತಿಳಿದಿರಲಿಲ್ಲ. ಈ ವರ್ಷ ಕೊರಲೆಯನ್ನು ಹೆಚ್ಚು ಬೆಳೆಯಲಾಗಿದೆ’ ಎಂದು ತುಮಕೂರಿನ ರೈತ ರಘು ತಿಳಿಸಿದರು. 

‘ಸಿರಿಧಾನ್ಯಗಳಲ್ಲಿ ದೇಹಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶಗಳೂ ಲಭ್ಯ. ಮಧುಮೇಹ ಇರುವವರಿಗೆ ಇದು ಒಳ್ಳೆಯದು. ದೇಹದಲ್ಲಿರುವ ಕೊಲೆಸ್ಟರಾಲ್‌ ಪ್ರಮಾಣವನ್ನು ಇದು ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಯನ್ನೂ ನಿಯಂತ್ರಿಸುತ್ತದೆ. ದಿನದಲ್ಲಿ ಒಂದು ಹೊತ್ತಿನ ಊಟಕ್ಕಾದರೂ ಇವುಗಳನ್ನು ಬಳಸಿ. ಮಕ್ಕಳಲ್ಲಿ ಬುದ್ಧಿಶಕ್ತಿಯನ್ನು ಇದು ಹೆಚ್ಚಿಸುತ್ತದೆ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಉಮಾ. ಎನ್‌. ಕುಲಕರ್ಣಿ ಹೇಳಿದರು.

‘10 ಸಾವಿರ ರೈತರು ಭಾಗವಹಿಸುವ ನಿರೀಕ್ಷೆ’

ಮೂರು ದಿನಗಳ ಮೇಳದಲ್ಲಿ ರಾಜ್ಯದಾದ್ಯಂತ 10 ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲಿದ್ದಾರೆ. ಅಮೆರಿಕ, ಜರ್ಮನಿ, ಸ್ವಿಡ್ಜರ್ಲೆಂಡ್‌, ಯುಎಇ, ದಕ್ಷಿಣ ಕೊರಿಯಾ, ಉಗಾಂಡ, ಚೀನಾ ಮತ್ತು ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳ 225 ಕಂಪನಿಗಳು ಭಾಗವಹಿಸಲಿವೆ. ಬ್ರಿಟಾನಿಯಾ, ನೆಸ್ಲೆ, ಮಯ್ಯಾಸ್‌, ನಾಮಧಾರಿ, ಫ್ಲಿಪ್‌ಕಾರ್ಟ್‌ನಂತಹ ಬೃಹತ್‌ ಕಂಪನಿಗಳ ಹಾಗೂ ಕೆಲವು ಚಿಲ್ಲರೆ ವಹಿವಾಟು ಕಂಪನಿಗಳ ಪ್ರಮುಖರು ಭಾಗವಹಿಸಲಿದ್ದಾರೆ. 63 ಸಂವಾದಗಳು ನಡೆಯಲಿವೆ ಎಂದು ಸತೀಶ್‌ ತಿಳಿಸಿದರು.

ಮೊದಲ ಬಾರಿಗೆ ರಾಷ್ಟ್ರಮಟ್ಟದ ಜೈವಿಕ್‌ ಇಂಡಿಯನ್‌ ಪ್ರಶಸ್ತಿಯನ್ನು ಕೃಷಿ, ರಫ್ತು, ಬ್ರಾಂಡಿಂಗ್‌, ರಿಟೇಲ್‌ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೂ ನೀಡಲಾಗುವುದು ಎಂದರು.

ಸಿರಿಧಾನ್ಯಗಳಿಂದ ತಯಾರಿಸಿದ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಮೇಳದಲ್ಲಿ ಪರಿಚಯಿಸಲಾಗುವುದು. ವಿದ್ಯಾರ್ಥಿಗಳಿಗೆ ಪೋಸ್ಟರ್‌ ತಯಾರಿ ಸ್ಪರ್ಧೆ, ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT