ಎಂಬಿಎ ವಿದ್ಯಾರ್ಥಿ ಹತ್ಯೆ; ಇಬ್ಬರ ಬಂಧನ

7

ಎಂಬಿಎ ವಿದ್ಯಾರ್ಥಿ ಹತ್ಯೆ; ಇಬ್ಬರ ಬಂಧನ

Published:
Updated:

ಬೆಂಗಳೂರು: ಡಿ.31ರ ರಾತ್ರಿ ಸಾರಕ್ಕಿ ಬಳಿ ನಡೆದಿದ್ದ ಎಂಬಿಎ ವಿದ್ಯಾರ್ಥಿ ಅಮಿತ್ ಕೊಲೆ ಪ್ರಕರಣ ಭೇದಿಸಿರುವ ಜೆ.ಪಿ.ನಗರ ಪೊಲೀಸರು, ರಘುವನಹಳ್ಳಿಯ ಅಜಯ್ (19) ಹಾಗೂ 17 ವರ್ಷದ ಬಾಲಕನನ್ನು ಬಂಧಿಸಿದ್ದಾರೆ.

ಶಿರಸಿ ತಾಲೂಕಿನ ಅಮಿತ್, ಬಿಎಂಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿಕೊಂಡು ಶಾಕಾಂಬರಿನಗರದ ಪೇಯಿಂಗ್ ಗೆಸ್ಟ್‌ ಕಟ್ಟಡದಲ್ಲಿ ನೆಲೆಸಿದ್ದ. ಹೊಸ ವರ್ಷದ ಸಂಭ್ರಮಾಚರಣೆಗೆಂದು ಡಿ.31ರ ರಾತ್ರಿ ಬ್ರಿಗೇಡ್ ರಸ್ತೆಗೆ ತೆರಳಿದ್ದ ಆತ, 1.30ರ ಸುಮಾರಿಗೆ ಪಿ.ಜಿ.ಕಟ್ಟಡಕ್ಕೆ ವಾಪಸಾಗುತ್ತಿದ್ದ. ಈ ವೇಳೆ ಆರೋಪಿಗಳು ಚಾಕುವಿನಿಂದ ಇರಿದು ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

‘ಹೊಸ ವರ್ಷದ ಪ್ರಯುಕ್ತ ಆ ರಾತ್ರಿ ಪಾರ್ಟಿ ಮಾಡಿ ಪಾನಮತ್ತರಾಗಿದ್ದೆವು. ನಂತರ ಗೆಳೆಯರೆಲ್ಲ ಬೈಕ್‌ಗಳಲ್ಲಿ ಮೋಜಿನ ಸುತ್ತಾಟಕ್ಕೆ ಹೊರಟೆವು. ನಾವಿಬ್ಬರೂ ಶಾಕಾಂಬರಿನಗರದ ಕಡೆಗೆ ಬಂದಾಗ, ನಮಗೆ ಒಂಟಿ ಯುವಕನೊಬ್ಬ ಎದುರಾದ. ಅವನನ್ನು ಬೆದರಿಸಿ ಸುಲಿಗೆ ಮಾಡಲು ಯತ್ನಿಸಿದೆವು. ಹಣ ಕೊಡಲು ನಿರಾಕರಿಸಿದ ಆತ, ನಮ್ಮ ಮೇಲೆಯೇ ಹಲ್ಲೆಗೆ ಮುಂದಾದ. ಜಗಳ ಅತಿರೇಕಕ್ಕೆ ಹೋದಾಗ ನಮ್ಮಿಂದ ಕೊಲೆ ನಡೆಯಿತು’ ಎಂದು ಆರೋಪಿಗಳು ಹೇಳಿಕೆ ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸ್ಥಳೀಯರಿಂದ ಸುಳಿವು: ‌ಹತ್ಯೆ ಸಂಬಂಧ ಶಾಕಾಂಬರಿನಗರದ ನಿವಾಸಿಗಳನ್ನು ವಿಚಾರಣೆ ನಡೆಸಿದಾಗ, ‘ರಾತ್ರಿ 12 ಗಂಟೆ ಸುಮಾರಿಗೆ ಕೆಲ ಪುಂಡರು ರಸ್ತೆಯಲ್ಲಿ ಕೇಕೇ ಹಾಕಿ ದಾಂದಲೆ ಮಾಡುತ್ತಿದ್ದರು. ಅವರೇ ಕೃತ್ಯ ಎಸಗಿರಬಹುದು’ ಎಂದು ಸಂಶಯ ವ್ಯಕ್ತಪಡಿಸಿದರು. ಸುತ್ತಮುತ್ತಲ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಕೆಲ ಹುಡುಗರ ಚಹರೆ ಸಿಕ್ಕಿತು. ಬನಶಂಕರಿ ದೇವಸ್ಥಾನ ಸಮೀಪದ ‘ಅಡ್ಡ’ದಲ್ಲಿದ್ದ ಆ ಹುಡುಗರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಆರೋಪಿಗಳ ಬಗ್ಗೆ ಬಾಯ್ಬಿಟ್ಟರು. ನಂತರ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry