ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಾತಿ ಆಯ್ಕೆ: ಇವರಿಗೆ ಮಾತಿನ ಹಂಗಿಲ್ಲ, ಜಾತಿಯೂ ಬೇಕಿಲ್ಲ!

Last Updated 10 ಜನವರಿ 2018, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಸಸ್ಯಹಾರಿ, ನೀನು? ನಿಮ್ಮನೆಯಲ್ಲಿ ಯಾರೆಲ್ಲ ಇದ್ದಾರೆ. ಕುಡಿಯುವವರನ್ನು ಕಂಡರೆ ನನಗೆ ಆಗೋಲ್ಲ. ನೀನು ಕುಡಿಯುತ್ತೀಯಾ’ ಎಂದು ಯುವತಿಯೊಬ್ಬಳು ಕೇಳಿದಳು.

’ಹೌದಾ.. ನಾನು ಮಾಂಸ ತಿನ್ನಲ್ಲ. ಕುಡಿತದ ಅಭ್ಯಾಸ ಇಲ್ಲ.. ಅಮ್ಮ, ಅಕ್ಕ, ಚಿಕ್ಕಪ್ಪ ಇವರೆಲ್ಲ ಇರುವ ಕೂಡುಕುಟುಂಬ ನಮ್ಮದು. ನಿನಗೆ ಈ ಬಗ್ಗೆ ಚಿಂತೆ ಬೇಡ’ ಎಂದು ಯುವಕ ಉತ್ತರಿಸಿದ.

ವಿಶೇಷವೆಂದರೆ ಈ ಸಂಭಾಷಣೆ ನಡೆದದ್ದು ಕೈಸನ್ನೆ, ಬಾಯಿಸನ್ನೆ ಹಾಗೂ ಮುಖದ ಹಾವಭಾವಗಳಲ್ಲಿ.

ಕಿವಿ ಕೇಳಿಸದವರು ಮತ್ತು ಮಾತು ಬಾರದವರಿಗಾಗಿ ಸ್ವಯಂವರ ಟ್ರಸ್ಟ್‌ ವತಿಯಿಂದ ನಗರದಲ್ಲಿ ಆಯೋಜಿಸಿದ್ದ  ವಧು–ವರರ ಮುಖಾಮುಖಿ ಕಾರ್ಯಕ್ರಮದಲ್ಲಿ ಕಂಡ ದೃಶ್ಯವಿದು.

ಯುವಕ– ಯುವತಿಯರು ಅಭಿಪ್ರಾಯ ಹಂಚಿಕೊಂಡು, ಪರಸ್ಪರ ಇಷ್ಟಪಟ್ಟ ಬಳಿಕ ಅವರ ಕುಟುಂಬದವರೂ ವಿವಾಹ ಮಾತುಕತೆ ಮುಂದುವರಿಸಿದರು. ಅಚ್ಚರಿ ಎಂದರೆ ಸಂಗಾತಿಯ ಆಯ್ಕೆಗೆ ಇಲ್ಲಿ ಧರ್ಮ, ಜಾತಿ, ಭಾಷೆಗಳ ಮೇರೆಗಳಿರಲಿಲ್ಲ. 8 ಜೋಡಿಗಳ ಮದುವೆ ನಿಶ್ಚಯವಾಯಿತು! ಇದರಲ್ಲಿ ಹಾಸನದ ವಿಮಲಾ ಹಾಗೂ ಕಾರವಾರದ ವೆಂಕಟೇಶ್‌ ಅವರದು ಅಂತರ್ಜಾತಿ ವಿವಾಹ. ಕೇರಳದ ಮನೋಜ್ ಹಾಗೂ ಬೆಂಗಳೂರಿನ ನಿತ್ಯಾ ಅವರದು ಅಂತರಧರ್ಮೀಯ ವಿವಾಹ. ಮೂರು ಜೋಡಿಗಳ ಮದುವೆ ಇಲ್ಲಿಯೇ ನಡೆಯಿತು.  

ಬೆಂಗಳೂರು, ಮೈಸೂರು, ಮಂಡ್ಯ, ಧಾರವಾಡ, ದಾವಣಗೆರೆ, ದಾಂಡೇಲಿ, ಯಲ್ಲಾಪುರ ಹೀಗೆ ರಾಜ್ಯದ ನಾನಾ ಭಾಗಗಳಿಂದ ಯುವಕ, ಯುವತಿಯರು ಸಂಗಾತಿ ಹುಡುಕಿಕೊಳ್ಳಲು ಇಲ್ಲಿಗೆ ಬಂದಿದ್ದರು. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶದಿಂದ ಬಂದವರೂ ಇಲ್ಲಿದ್ದರು. 65ಕ್ಕೂ ಹೆಚ್ಚು ವಧು–ವರರು ಹಾಗೂ ಅವರ ಕುಟುಂಬಸ್ಥರು ಇದರಲ್ಲಿ ಪಾಲ್ಗೊಂಡರು.

ನೆಚ್ಚಿನ ಸಂಗಾತಿ ಆರಿಸಿಕೊಳ್ಳಲು ಯುವತಿಯರ ಅಭಿಪ್ರಾಯಕ್ಕೆ ಮೊದಲ ಮನ್ನಣೆ. ನಂತರವಷ್ಟೇ ಎರಡೂ ಕುಟುಂಬದವರು ಮಾತುಕತೆ ನಡೆಸುತ್ತಿದ್ದರು.

ಸಂಗಾತಿ ಸಿಕ್ಕ ಖುಷಿಯಲ್ಲಿ ಕೆಲವರು ಸಂಭ್ರಮಿಸಿದರು. ಮಾತುಕತೆ ಸಫಲವಾಗದಿದ್ದವರು ಹೆಚ್ಚೇನೂ ಬೇಸರಿಸದೆ ಮತ್ತೊಂದು ಜೋಡಿಯ ಹುಡುಕಾಟದಲ್ಲಿ ತೊಡಗಿದ್ದರು. ಅನ್ಯ ಧರ್ಮ, ಜಾತಿಯಾದರೂ ಪರವಾಗಿಲ್ಲ, ಹುಡುಗ–ಹುಡುಗಿ ಪರಸ್ಪರ ಇಷ್ಟಪಡಬೇಕು ಎಂಬುದು ಬಹುತೇಕರ ಪೋಷಕರ ಆಶಯವಾಗಿತ್ತು.

ಈ ಹಿಂದೆ ‘ಸ್ವಯಂವರ’ ಕಾರ್ಯಕ್ರಮದಲ್ಲಿ ಸಂಗಾತಿ ಹುಡುಕಿ ಮದುವೆಯಾದವರೂ ತಮ್ಮ ಸ್ನೇಹಿತರು, ಸಂಬಂಧಿಕರಿಗೆ ವಧು–ವರರನ್ನು ಗೊತ್ತು ಮಾಡಲು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT