ಸ್ಮಾರ್ಟ್‌ಸಿಟಿ ಯೋಜನೆ ಶೀಘ್ರ ಜಾರಿಗೆ ಸಿದ್ಧತೆ

7
16ರಂದು ಎಸ್‌ಪಿವಿ ಮೊದಲ ಸಭೆ

ಸ್ಮಾರ್ಟ್‌ಸಿಟಿ ಯೋಜನೆ ಶೀಘ್ರ ಜಾರಿಗೆ ಸಿದ್ಧತೆ

Published:
Updated:

ಬೆಂಗಳೂರು:  ಸ್ಮಾರ್ಟ್‌ಸಿಟಿ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಸಿದ್ಧತೆ ನಡೆದಿದೆ. ಯೋಜನೆಯ ಕಾಮಗಾರಿಗಳ ಮೇಲ್ವಿಚಾರಣೆಗಾಗಿ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ರಚಿಸಲಾಗಿದ್ದು, ಇದೇ 16ರಂದು ಮೊದಲ ಸಭೆ ನಡೆಯಲಿದೆ.

ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರು ಬುಧವಾರ ಈ ಕುರಿತು ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.

ದೇಶದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿರುವ 30 ನಗರಗಳಲ್ಲಿ ಬೆಂಗಳೂರು ಸಹ ಸೇರಿದೆ. ಮೂಲಸೌಕರ್ಯ ಅಭಿವೃದ್ಧಿಪಡಿಸುವ ಈ ಯೋಜನೆಗೆ ಕಳೆದ ವರ್ಷ ₹1,700 ಕೋಟಿ ಅನುದಾನ ಹಂಚಿಕೆ ಮಾಡಲಾಗಿತ್ತು. ವಿಶೇಷ ಉದ್ದೇಶದ ಘಟಕವು ಯೋಜನೆ ಅನುಷ್ಠಾನಗೊಳಿಸುವ ಸಂಪೂರ್ಣ ಹೊಣೆ ಹೊರಲಿದೆ.

ಕಾಮಗಾರಿಯ ವಿನ್ಯಾಸ ರೂಪಿಸಿ, ಅದರ ಮೌಲ್ಯಮಾಪನ ನಡೆಸಿ ಅನುದಾನ ಬಿಡುಗಡೆ ಮಾಡಲಿದೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್‌ ಅವರನ್ನು ಇದರ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಕಾಮಗಾರಿಗಳ ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ. ಆದರೆ, ಅದಕ್ಕೆ ಎಸ್‌ಪಿವಿಯ ಮೊದಲ ಸಭೆಯ ಬಳಿಕವಷ್ಟೇ ಮಂಜೂರಾತಿ ಸಿಗಲಿದೆ ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದರು.

‘ಕೆ.ಆರ್‌.ಮಾರುಕಟ್ಟೆಯನ್ನು ಮೆಟ್ರೊ ಟರ್ಮಿನಲ್‌ ಜೊತೆ ಸಂಪರ್ಕಿಸಿ, ಇನ್ನಷ್ಟು ಗ್ರಾಹಕಸ್ನೇಹಿಯನ್ನಾಗಿ ರೂಪಿಸಲಾಗುವುದು. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಮುನ್ನ ಇಲ್ಲಿನ ವ್ಯಾಪಾರಿಗಳ ಅಭಿಪ್ರಾಯವನ್ನೂ ಪಡೆಯುತ್ತೇವೆ. ಅವರು ದಶಕಗಳಿಂದ ಇಲ್ಲಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಅವರ ಬದುಕು ಈ ಮಾರುಕಟ್ಟೆಯನ್ನೇ ಅವಲಂಬಿಸಿದೆ’ ಎಂದರು.

‘ರಸೆಲ್‌ ಮಾರುಕಟ್ಟೆಗೆ ಆಧುನಿಕ ಸ್ಪರ್ಶ ನೀಡಲಿದ್ದೇವೆ. ಇಲ್ಲಿ ಸ್ಮಾರ್ಟ್‌ ಬಿನ್‌ಗಳನ್ನು ಬಳಸುತ್ತೇವೆ. ಸರಕುಗಳನ್ನು ವಾಹನಗಳಿಗೆ ಲೋಡ್‌ ಮಾಡಲು ಹಾಗೂ ವಾಹನಗಳಿಂದ ಇಳಿಸುವುದಕ್ಕೆ ಪ್ರತ್ಯೇಕ ಪಥ ನಿರ್ಮಿಸುತ್ತೇವೆ’ ಎಂದು ವಿವರಿಸಿದರು. ‘ಈ ಯೋಜನೆ ಅಡಿ 50 ಕಿ.ಮಿ. ಉದ್ದದ 25ಕ್ಕೂ ಹೆಚ್ಚು ರಸ್ತೆಗಳನ್ನು ಟೆಂಡರ್‌ಶ್ಯೂರ್‌ ರಸ್ತೆಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲಿದ್ದೇವೆ. ಸ್ವತಂತ್ರಪಾಳ್ಯ ಕೊಳೆಗೇರಿ ಅಭಿವೃದ್ಧಿ ಕಾಮಗಾರಿಯನ್ನೂ ಯೋಜನೆಯ ಮೊದಲ ಹಂತದಲ್ಲೇ ಕೈಗೆತ್ತಿಕೊಳ್ಳುತ್ತೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry