ತಸ್ಲೀಮಾ ಕೊಲೆ ಪ್ರಕರಣ * ಮಾಜಿ ಪ್ರಿಯಕರನೇ ಹಂತಕ * ದುಬೈನಿಂದ ಬಂದು ಕೊಲೆಗೈದಿದ್ದ

7

ತಸ್ಲೀಮಾ ಕೊಲೆ ಪ್ರಕರಣ * ಮಾಜಿ ಪ್ರಿಯಕರನೇ ಹಂತಕ * ದುಬೈನಿಂದ ಬಂದು ಕೊಲೆಗೈದಿದ್ದ

Published:
Updated:
ತಸ್ಲೀಮಾ ಕೊಲೆ ಪ್ರಕರಣ * ಮಾಜಿ ಪ್ರಿಯಕರನೇ ಹಂತಕ * ದುಬೈನಿಂದ ಬಂದು ಕೊಲೆಗೈದಿದ್ದ

ಬೆಂಗಳೂರು: ಪತಿ–ಮಕ್ಕಳನ್ನು ತೊರೆದು ತನ್ನೊಂದಿಗೆ ದುಬೈಗೆ ಬರಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ತಸ್ಲೀಮಾ ಭಾನು (29) ಎಂಬುವರನ್ನು ಹತ್ಯೆಗೈದು, ತಾನು ಉಡುಗೊರೆಯಾಗಿ ಕೊಟ್ಟಿದ್ದ ಒಡವೆಗಳನ್ನು ತೆಗೆದುಕೊಂಡು ಹೋಗಿದ್ದ ಅವರ ಮಾಜಿ ಪ್ರಿಯಕರ ಮಹಮದ್ ಮುಬಿನ್‌ಸಾಬ್ (30) ಕಾಮಾಕ್ಷಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಸುಂಕದಕಟ್ಟೆಯ ರಾಜೀವ್‌ಗಾಂಧಿನಗರ ನಿವಾಸಿ ತಸ್ಲೀಮಾ ಭಾನು, ಡಿ.26ರಂದು ತಮ್ಮ ಮನೆಯಲ್ಲೇ ಬರ್ಬರವಾಗಿ ಕೊಲೆಯಾಗಿದ್ದರು. ಮೃತರ ಮೊಬೈಲ್‌ಗೆ ಬಂದು ಹೋಗಿದ್ದ ಕರೆಗಳ ವಿವರ (ಸಿಡಿಆರ್) ಪರಿಶೀಲಿಸಿದ ಪೊಲೀಸರಿಗೆ, ಮುಬಿನ್‌ಸಾಬ್‌ ಮೇಲೆ ಅನುಮಾನ ವ್ಯಕ್ತವಾಯಿತು. ಕಾರವಾರದಲ್ಲಿ ಸ್ನೇಹಿತನ ಜತೆ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಅಡಗಿದ್ದ ಆತನನ್ನು ಜ.5ರಂದು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ‘ನನ್ನೊಂದಿಗೆ ಬರಲು ನಿರಾಕರಿಸಿದ ಕಾರಣಕ್ಕೆ ಕೊಲೆಗೈದೆ’ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲ್ಯದ ಸ್ನೇಹ, 12 ವರ್ಷದ ಪ್ರೀತಿ: ‘ಆರೋಪಿ ಮುಬಿನ್‌ಸಾಬ್ ಹಾಗೂ ತಸ್ಲೀಮಾ ಒಂದೇ ಊರಿನವರು. ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಅಕ್ಕ–ಪಕ್ಕದ ಮನೆಗಳಲ್ಲಿ ನೆಲೆಸಿದ್ದ ಇವರು, ಒಟ್ಟಿಗೇ ಆಟವಾಡಿಕೊಂಡು ಬೆಳೆದವರು. ಮುಬಿನ್‌ಸಾಬ್ ಕಾಲೇಜು ಓದುತ್ತಿದ್ದಾಗ ತಸ್ಲೀಮಾ ಅವರನ್ನು ಪ್ರೇಮಿಸಲು ಶುರು ಮಾಡಿದ್ದ. ಅದಕ್ಕೆ ಅವರು ಸಹ ಒಪ್ಪಿಕೊಂಡಿದ್ದರು. ಈ ಸಂಗತಿ ಇಬ್ಬರು ಕುಟುಂಬದವರಿಗೂ ಗೊತ್ತಾಗಿ, ಗಲಾಟೆ ಸಹ ಆಗಿತ್ತು’ ಎಂದು ಪೊಲೀಸರು ಹೇಳಿದರು.

2006ರಲ್ಲಿ ಗ್ರಾಮದಲ್ಲಿ ಜಾತ್ರೆ ನಡೆಯುವಾಗ ನಡೆದ ಗಲಾಟೆ ಸಂಬಂಧ ಶಿರಸಿ ಪೊಲೀಸರು ಮುಬಿನ್‌ಸಾಬ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ಅವಧಿಯಲ್ಲಿ ತಸ್ಲೀಮಾ ಪೋಷಕರು, ಹಾವೇರಿಯಲ್ಲಿ ಮೆಕ್ಯಾನಿಕ್ ಆಗಿದ್ದ ತಮ್ಮ ಸಂಬಂಧಿ ಅಬ್ದುಲ್ ರಜಾಕ್ ಜತೆ ಮಗಳ ಮದುವೆ ಮಾಡಿದ್ದರು. ಬಳಿಕ ದಂಪತಿ ಬೆಂಗಳೂರಿಗೆ ಬಂದು ನೆಲೆಸಿದ್ದರು.

ಆರು ತಿಂಗಳ ಬಳಿಕ ಕಾರಾಗೃಹ ದಿಂದ ಹೊರಬಂದ ಮುಬಿನ್‌ಸಾಬ್, ಪ್ರೇಯಸಿಗೆ ಮದುವೆ ಆಗಿರುವ ವಿಚಾರ ತಿಳಿದು ಕೆಂಡಾಮಂಡಲನಾಗಿದ್ದ. ಜೈಲಿನಿಂದ ಬಿಡುಗಡೆಯಾದ ದಿನವೇ ಬೆಂಗಳೂರಿಗೆ ಬಂದು ತಸ್ಲೀಮಾ ಅವರನ್ನು ಭೇಟಿಯಾದ ಆತ, ‘ನಾನು ಈಗಲೂ ನಿನ್ನನ್ನು ಪ್ರೀತಿಸುತ್ತಿ

ದ್ದೇನೆ. ಇಬ್ಬರೂ ಮದುವೆಯಾಗಿ ಊರು ಬಿಟ್ಟು ಹೋಗೋಣ’ ಎಂದಿದ್ದ. ಅದಕ್ಕೆ ಒಪ್ಪದ ಅವರು, ‘ಇನ್ನು ಮುಂದೆ ನಮ್ಮಿಬ್ಬರ ಮದುವೆ ವಿಷಯ ಪ್ರಸ್ತಾಪಿಸಬೇಡ. ಬೇಕಿದ್ದರೆ ಒಳ್ಳೆಯ ಸ್ನೇಹಿತರಾಗಿ ಇದ್ದುಬಿಡೋಣ’ ಎಂದಿದ್ದರು.

ಆ ಮಾತು ಕೇಳಿ ದಿಕ್ಕು ತೋಚದಂತಾದ ಆರೋಪಿ, ಹೆಚ್ಚು ಹಣ ಸಂಪಾದಿಸಿ ಬಂದರೆ ತಸ್ಲೀಮಾ ತನ್ನನ್ನು ಮದುವೆ ಆಗಲು ಒಪ್ಪಬಹುದು ಎಂದು ಅದೇ ವರ್ಷ ದುಬೈಗೆ ತೆರಳಿದ್ದ. ಅಲ್ಲಿ ನಿವೃತ್ತ ಸೇನಾಧಿಕಾರಿಯೊಬ್ಬರ ಮನೆಗೆ ಕಾರು ಚಾಲಕನಾಗಿ ಸೇರಿಕೊಂಡ ಆರೋಪಿ, ದುಡಿಮೆಯ ಹಣದಲ್ಲೇ ಆಗಾಗ್ಗೆ ತಸ್ಲೀಮಾ ಅವರಿಗೆ ಉಡುಗೊರೆಗಳನ್ನು ಕಳುಹಿಸುತ್ತಿದ್ದ. ಪರಸ್ಪರರು ಕರೆ–ಸಂದೇಶಗಳ ಮೂಲಕ ಸಂಪರ್ಕ ಮುಂದುವರಿಸಿದ್ದರು. ಆರು ತಿಂಗಳಿಗೊಮ್ಮೆ ಬೆಂಗಳೂರಿಗೆ ಬಂದು, ಅವರನ್ನು ಶಾಪಿಂಗ್‌ ಕರೆದುಕೊಂಡು ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಪುನಃ ಮದುವೆ ವಿಚಾರ ಪ್ರಸ್ತಾಪಿಸಿದ್ದ. ಅದಕ್ಕೆ ತಸ್ಲೀಮಾ, ‘ನನಗೆ ಈಗ ಇಬ್ಬರು ಮಕ್ಕಳಿದ್ದಾರೆ. ಅವರನ್ನು ಬಿಟ್ಟು ಬರಲು ಸಾಧ್ಯವೇ ಇಲ್ಲ. ನೀನಿನ್ನೂ ಅದೇ ಮನಸ್ಥಿತಿಯಲ್ಲಿಯೇ ಇದ್ದರೆ, ಇನ್ನು ಮುಂದೆ ಭೇಟಿಯಾಗುವುದೇ ಬೇಡ’ ಎಂದಿದ್ದರು. ಇದರಿಂದ ಕುಪಿತಗೊಂಡ ಮುಬಿನ್‌ಸಾಬ್, ಮುಖಾಮುಖಿ ಮಾತುಕತೆಗಾಗಿ 2017ರ ಡಿ.20ರಂದು ದುಬೈನಿಂದ ಬೆಂಗಳೂರಿಗೆ ಬಂದಿದ್ದ.

ಡಿ.26ರ ಬೆಳಿಗ್ಗೆ ರಜಾಕ್ ಅವರು ಮಕ್ಕಳನ್ನು ಶಾಲೆಗೆ ಬಿಟ್ಟು ತಾವೂ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಆರೋಪಿ ಅವರ ಮನೆಗೆ ಹೋಗಿದ್ದ. ತನ್ನ ಜತೆ ದುಬೈಗೆ ಬರುವಂತೆ ಎಷ್ಟೇ ಮನವೊಲಿಸಿದರೂ ಒಪ್ಪದಿದ್ದಾಗ, ಅಡುಗೆ ಕೋಣೆಯಲ್ಲಿದ್ದ ಚಾಕುವಿನಿಂದ ಕುತ್ತಿಗೆ, ಹೊಟ್ಟೆ, ಬೆನ್ನು ಹಾಗೂ ಕೈಗಳ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದ. ಅಲ್ಲದೆ, ತಾನು ಉಡುಗೊರೆ ರೂಪದಲ್ಲಿ ಕೊಡಿಸಿದ್ದ ಚಿನ್ನದ ಸರ, ಬಳೆಗಳು ಹಾಗೂ ಕರಿಮಣಿ ಸರವನ್ನೂ ತೆಗೆದುಕೊಂಡು ಹೋಗಿದ್ದ.

ಮನೆಗೆ ಬಂದ ಮಕ್ಕಳು: ತಸ್ಲೀಮಾ ಅವರ 8 ಹಾಗೂ 5 ವರ್ಷದ ಮಕ್ಕಳಿಬ್ಬರು, ಶಾಲೆಯಿಂದ ಸಂಜೆ 5.30ಕ್ಕೆ ಮನೆಗೆ ಬಂದರು. ರಕ್ತದ ಮಡುವಿನಲ್ಲಿ ತಾಯಿ ಸತ್ತು ಬಿದ್ದಿರುವುದನ್ನು ನೋಡಿ ಜೋರಾಗಿ ಅಳಲಾರಂಭಿಸಿದ್ದರು. ಅಳುವಿನ ಶಬ್ದ ಕೇಳಿ ಮನೆಗೆ ಬಂದ ಸ್ಥಳೀಯರು, ತಸ್ಲೀಮಾ ಅವರ ಪತಿ ಹಾಗೂ ಅಣ್ಣ ಮಹಮದ್ ಹುಸೇನ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಕರೆ, ಸಂದೇಶಗಳೇ ಸುಳಿವು: ‘ಮೃತರ ಮೊಬೈಲ್‌ ಪರಿಶೀಲಿಸಿದಾಗ, ಒಂದು ಸಂಖ್ಯೆಯಿಂದ ಅವರಿಗೆ ಹೆಚ್ಚು ಕರೆ ಹಾಗೂ ಸಂದೇಶಗಳು ಬಂದಿರುವುದು ಗೊತ್ತಾಯಿತು. ಹತ್ಯೆ ನಡೆದ ಬೆಳಿಗ್ಗೆ ಕೂಡ ಆ ಸಂಖ್ಯೆಯಿಂದ ಕರೆ ಬಂದಿತ್ತು. ಅದನ್ನು ಬಳಸುತ್ತಿರುವವನೇ ಹಂತಕ ಎಂಬುದು ಖಾತ್ರಿಯಾಯಿತು’ ಎಂದು ಪೊಲೀಸರು ವಿವರಿಸಿದರು.

‘ಆ ಸಂಖ್ಯೆಯಿಂದ ಬೇರೆ ಯಾರ‍್ಯಾರಿಗೆ ಕರೆಗಳು ಹೋಗಿವೆ ಎಂಬುದನ್ನು ಪರಿಶೀಲಿಸಿದೆವು. ಆಗ, ಮುಬಿನ್‌ಸಾಬ್‌ನ ಗೆಳೆಯರೊಬ್ಬರು ಸಿಕ್ಕಿದರು. ಅವರನ್ನು ಸಂಪರ್ಕಿಸಿದಾಗ ‘ಡಿ.20ರಂದು ಈ ಸಂಖ್ಯೆಯಿಂದ ನನಗೆ ಕರೆ ಮಾಡಿದ್ದ ಮುಬಿನ್‌ಸಾಬ್, ಬೆಂಗಳೂರಿಗೆ ಬಂದಿರುವುದಾಗಿ ಹೇಳಿದ್ದ’ ಎಂದು ಹೇಳಿಕೆ ಕೊಟ್ಟರು. ತಸ್ಲೀಮಾ–ಮುಬಿನ್‌ಸಾಬ್ ಮೊದಲು ಪ್ರೀತಿ ಮಾಡುತ್ತಿದ್ದ ಸಂಗತಿ ಕೂಡ ಮೃತರ ಸಂಬಂಧಿಕರ ವಿಚಾರಣೆಯಿಂದ ತಿಳಿಯಿತು.

ಬಳಿಕ ಆತನ ಇನ್ನೊಂದು ಮೊಬೈಲ್ ಸಂಖ್ಯೆ ಪಡೆದು ‘ಟವರ್‌ ಡಂಪ್’ ತನಿಖೆ ಮಾಡಿದಾಗ, ಆ ಸಂಖ್ಯೆ ಕಾರವಾರದ ಟವರ್‌ನಿಂದ ಸಂಪರ್ಕ ಪಡೆಯುತ್ತಿರುವುದು ಗೊತ್ತಾಯಿತು. ತಕ್ಷಣ ಅಲ್ಲಿಗೆ ತೆರಳಿದ ಇನ್‌ಸ್ಪೆಕ್ಟರ್ ಆರ್‌.ಜಿ.ರವಿಕುಮಾರ್ ನೇತೃತ್ವದ ತಂಡ, ಆರೋಪಿಯನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿತು. ಆತನನ್ನು ಜ.5ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಧೀಶರು ಜ.12ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.

ಅಣ್ಣನಿಗೆ ಅಪಘಾತವಾಗಿದೆ ಎಂದಿದ್ದ’

ತಸ್ಲೀಮಾ ಅವರನ್ನು ಭೇಟಿಯಾಗಲು ಆರೋಪಿ, ‘ನನ್ನ ಅಣ್ಣನಿಗೆ ಅಪಘಾತವಾಗಿದೆ. ಆತ ಸಾವು–ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ’ ಎಂದು ದುಬೈನಲ್ಲಿ ಮಾಲೀಕರಿಗೆ ಸುಳ್ಳು ಹೇಳಿ 15 ದಿನಗಳ ರಜೆ ಪಡೆದಿದ್ದ. ಈಗ ಆ ಮಾಲೀಕರಿಗೆ ಕರೆ ಮಾಡಿ, ಅಸಲಿ ವಿಚಾರ ತಿಳಿಸಿದ್ದೇವೆ ಎಂದು ಪೊಲೀಸರು ಹೇಳಿದರು.

‘ಕೈ ಮೇಲೆ ಹಚ್ಚೆ’

‘ದುಬೈ ಸೇರಿದ ಬಳಿಕ ತಸ್ಲೀಮಾಳ ನೆನಪು ತುಂಬಾ ಕಾಡುತ್ತಿತ್ತು. ಹೀಗಾಗಿ, ಆಕೆಯ ಹೆಸರನ್ನು ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದೆ. ಇನ್ನು ಮುಂದೆ ನಾವಿಬ್ಬರು ಭೇಟಿಯಾಗುವುದೇ ಬೇಡ ಎಂದು ಆಕೆ ಹೇಳಿದಾಗ ಸಿಟ್ಟಿನಲ್ಲಿ ಹಚ್ಚೆ ಅಳಿಸಲು ಮುಂದಾದೆ. ಚಾಕುವಿನಿಂದ ಕೈ ಕುಯ್ದುಕೊಂಡರೂ, ಹೆಸರು ಪೂರ್ಣವಾಗಿ ಹೋಗಲಿಲ್ಲ’ ಎಂದು ಮುಬಿನ್‌ಸಾಬ್ ಹೇಳಿಕೆ ನೀಡಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry