ಪಿಎಸಿಎಲ್‌ ವಂಚನೆ; ಹಣ ಹಿಂದಿರುಗಿಸಲು ಒತ್ತಾಯ

7

ಪಿಎಸಿಎಲ್‌ ವಂಚನೆ; ಹಣ ಹಿಂದಿರುಗಿಸಲು ಒತ್ತಾಯ

Published:
Updated:
ಪಿಎಸಿಎಲ್‌ ವಂಚನೆ; ಹಣ ಹಿಂದಿರುಗಿಸಲು ಒತ್ತಾಯ

ಬೆಂಗಳೂರು: ‘ಪರ್ಲ್ಸ್‌ ಆಗ್ರೊ ಟೆಕ್‌ ಕಾರ್ಪೊರೇಷನ್‌’ ಸಂಸ್ಥೆಯಲ್ಲಿ (ಪಿಎಸಿಎಲ್‌) ಹೂಡಿಕೆ ಮಾಡಿರುವ ಹಣವನ್ನು ಹಿಂದಿರುಗಿಸಬೇಕು ಎಂದು ಒತ್ತಾಯಿಸಿ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಗ್ರಾಹಕರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

‘ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು. ‘ತೊಲಗಲಿ ತೊಲಗಲಿ ರೈತರ ಹಣ ದೋಚುವ ಕಂಪನಿಗಳು ತೊಲಗಲಿ’, ‘ಬೇಕೇ ಬೇಕು ಹಣವನ್ನು ಹಿಂದಿರುಗಿಸಲೇ ಬೇಕು’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

ಉದ್ಯಾನದಲ್ಲಿ ನಡೆದ ಸಭೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ‘ಸಂಸ್ಥೆಯಲ್ಲಿ ರಾಜ್ಯದ ಸಾವಿರಾರು ಮಂದಿ ₹5,000 ಕೋಟಿಗೂ ಅಧಿಕ ಹಣವನ್ನು ಹೂಡಿಕೆ ಮಾಡಿದ್ದಾರೆ. ಅದನ್ನು ಪಡೆದ ಸಂಸ್ಥೆಯು ಲಾಭಾಂಶವನ್ನೂ ನೀಡದೆ ಹೂಡಿಕೆದಾರರನ್ನು ವಂಚಿಸಿದೆ’ ಎಂದು ಆರೋಪಿಸಿದರು.

18 ಶಾಖೆ ತೆರೆದು ವಂಚನೆ: ‘1996ರಲ್ಲಿ ಕಾರ್ಯಾರಂಭ ಮಾಡಿದ್ದ ಸಂಸ್ಥೆಯು ದೇಶದಲ್ಲಿ 350ಕ್ಕೂ ಹೆಚ್ಚು ಶಾಖೆಗಳನ್ನು ತೆರೆದಿತ್ತು. ರಾಜ್ಯದಲ್ಲಿ 18 ಶಾಖೆಗಳನ್ನು ತೆರೆದು, ಅದರ ಮೂಲಕವೇ ಪ್ರತಿನಿಧಿಗಳು ಹಾಗೂ ಗ್ರಾಹಕರನ್ನು ವಂಚಿಸಿದೆ’ ಎಂದು ಪ್ರತಿಭಟನಾಕಾರರು ದೂರಿದರು.

‘ರಾಜ್ಯದಲ್ಲಿ ಸುಮಾರು 40 ಸಾವಿರ ಪ್ರತಿನಿಧಿಗಳು, ಗ್ರಾಹಕರಿಂದ ಹಣ ಸಂಗ್ರಹಿಸಿ ಸಂಸ್ಥೆಗೆ ಪಾವತಿಸಿದ್ದಾರೆ. ಆದರೆ, ಸಂಸ್ಥೆಯು ಹಣವನ್ನು ವಾಪಸ್‌ ನೀಡಿಲ್ಲ. ಇದರಿಂದ ಗ್ರಾಹಕರು, ಪ್ರತಿನಿಧಿಗಳ ವಿರುದ್ಧ ಹರಿಹಾಯುತ್ತಿದ್ದಾರೆ. ಅದಕ್ಕೆ ಹೆದರಿ ಕೆಲ ಪ್ರತಿನಿಧಿಗಳು, ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

ಆಸ್ತಿ ಮುಟ್ಟುಗೋಲು ಬಳಿಕವೂ ಹಣವಿಲ್ಲ; ‘ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) 2013–14ರಲ್ಲಿ ಪಿಎಸಿಎಲ್‌ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿತ್ತು. ಬಳಿಕ ಸಂಸ್ಥೆಯ ವ್ಯವಹಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಜತೆಗೆ ಸಂಸ್ಥೆಯ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸಿ ವರದಿ ನೀಡಿತ್ತು. ಬಳಿಕ ಸುಪ್ರೀಂ ಕೋರ್ಟ್‌, ಸಂಸ್ಥೆಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿವೃತ್ತ ನ್ಯಾಯಮೂರ್ತಿ ಆರ್‌.ಎಂ.ಲೋಧಾ ನೇತೃತ್ವದ ಸಮಿತಿ ರಚಿಸಿತ್ತು. ಜತೆಗೆ ಸಂಸ್ಥೆಯ ಆಸ್ತಿಗಳನ್ನು ಹರಾಜು ಹಾಕಿ, ಬಂದ ಹಣವನ್ನು ಗ್ರಾಹಕರಿಗೆ ಹಿಂದಿರುಗಿಸುವಂತೆ ಸೂಚಿಸಿತ್ತು’ ಎಂದು ಪ್ರತಿಭಟನಾಕಾರರು ಮಾಹಿತಿ ನೀಡಿದರು.

‘ಸಮಿತಿ ರಚನೆಯಾಗಿ ಒಂದೂವರೆ ವರ್ಷವಾದರೂ ಗ್ರಾಹಕರಿಗೆ ಹಣ ಹಿಂದಿರುಗಿಸಿಲ್ಲ. ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ, ಸಮಿತಿಯಿಂದ ಬರಬೇಕಾದ ಹಣವನ್ನು  ವಾಪಸ್‌ ಕೊಡಿಸಬೇಕು’ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry