ಐದು ವರ್ಷದಲ್ಲಿ 35 ಮಂದಿ ಅಗ್ನಿಗೆ ಆಹುತಿ

7

ಐದು ವರ್ಷದಲ್ಲಿ 35 ಮಂದಿ ಅಗ್ನಿಗೆ ಆಹುತಿ

Published:
Updated:
ಐದು ವರ್ಷದಲ್ಲಿ 35 ಮಂದಿ ಅಗ್ನಿಗೆ ಆಹುತಿ

ಬೆಂಗಳೂರು: ನಗರದಲ್ಲಿ ಐದು ವರ್ಷಗಳಲ್ಲಿ (2013ರಿಂದ 2017ರವರೆಗೆ) ಸಂಭವಿಸಿದ ಅಗ್ನಿ ಅವಘಡಗಳಲ್ಲಿ 35 ಮಂದಿ ಮೃತಪಟ್ಟು, 223 ಮಂದಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆಯ ಮಾಹಿತಿಯು ಇದನ್ನು ಹೇಳುತ್ತದೆ.

2017ರ ಪೈಕಿ ಬೇಸಿಗೆಯಲ್ಲಿ ಹೆಚ್ಚಿನ ಅವಘಡ ಸಂಭವಿಸಿದ್ದು, ಫೆಬ್ರುವರಿಯಿಂದ ಜೂನ್‌ವರೆಗೆ 1,095 ಅವಘಡದ ಕರೆಗಳು ಬಂದಿದ್ದವು. ಆ ಆರು ತಿಂಗಳುಗಳಲ್ಲೇ ಮೂವರು ಮೃತಪಟ್ಟು, 15 ಮಂದಿ ಗಾಯಗೊಂಡಿದ್ದಾರೆ.

‘2013ರಲ್ಲಿ 11 ಮಂದಿ ಅಗ್ನಿಗೆ ಬಲಿಯಾಗಿದ್ದರು. ಐದು ವರ್ಷಗಳ ಪೈಕಿ ಅದು ಹೆಚ್ಚು. 2017ರಲ್ಲಿ ಸಂಭವಿಸಿದ್ದ 608 ಅವಘಡಗಳಿಗೆ ವಿದ್ಯುತ್‌ ಶಾರ್ಟ್‌ ಸರ್ಕೀಟ್‌ ಕಾರಣ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದರು.

‘ಮನೆಗಳಲ್ಲಿ ಸಂಭವಿಸಿದ ಅವಘಡಗಳಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಆಗಿರುವುದೇ ಹೆಚ್ಚು. 2017ರಲ್ಲಿ ಅಂಥ 174 ಅವಘಡಗಳು ಸಂಭವಿಸಿವೆ. ಅನಿಲ ಸೋರಿಕೆ ಉಂಟಾಗದಂತೆ ತಡೆಯುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನರಲ್ಲಿ ಇನ್ನಷ್ಟು ತಿಳಿವಳಿಕೆ ಮೂಡಿಸುವ ಅಗತ್ಯವಿದೆ’ ಎಂದರು.

‘ಅನೇಕ ಪ್ರಕರಣಗಳಲ್ಲಿ, ಕಟ್ಟಡಗಳ ಮಾಲೀಕರು ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರದ ಕಾರಣ ಹಾನಿಯ ಪ್ರಮಾಣ ಹೆಚ್ಚಾಗಿದೆ. ಕಟ್ಟಡದಲ್ಲಿ ಕೆಲಸ ಮಾಡುವ ಕಾರ್ಮಿಕರು ಮಾಲೀಕರ ನಿರ್ಲಕ್ಷ್ಯದಿಂದಾಗಿ ಜೀವ ಕಳೆದುಕೊಂಡಿದ್ದಾರೆ. ಹೀಗಾಗಿಯೇ ಈ ವರ್ಷದಿಂದ ಪ್ರತಿಯೊಂದು ಕಟ್ಟಡದಲ್ಲೂ ಅಗ್ನಿಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದನ್ನು ಕಡ್ಡಾಯಗೊಳಿಸಲು ಕ್ರಮಕೈಗೊಳ್ಳುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ದಾರಿಹೋಕರಿಂದ ಮಾಹಿತಿ: ‘ಬಹುತೇಕ ಪ್ರಕರಣಗಳಲ್ಲಿ ದಾರಿಹೋಕರೇ ನಿಯಂತ್ರಣಾ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರಿಂದಲೇ ಸಾಕಷ್ಟು ಕಾರ್ಯಾಚರಣೆಗಳನ್ನು ಕೈಗೊಂಡಿದ್ದೇವೆ’ ಎಂದರು.

ಯಾವುದೇ ಕಟ್ಟಡದಲ್ಲಿ ಬೆಂಕಿ ತಗುಲಿದರೆ, ಅಲ್ಲಿರುವ ಸಿಬ್ಬಂದಿ ಅದನ್ನು ಆರಿಸಲು ಪ್ರಯತ್ನಿಸುತ್ತಾರೆ. ಆ ವೇಳೆ ಅಗ್ನಿಶಾಮಕ ದಳದ ನಿಯಂತ್ರಣ ಕೊಠಡಿಗೆ ಕರೆ ಮಾಡುವುದಿಲ್ಲ. ಬೆಂಕಿ ಹೆಚ್ಚಾದ ಮೇಲೆಯೇ ಅವರಿಗೆ ಅದು ನೆನಪಾಗುತ್ತದೆ. 2017ರಲ್ಲಿ ಸಂಭವಿಸಿದ 200ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈ ರೀತಿ ಆಗಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಮಾಹಿತಿ ನೀಡಿದರೆ, ಆಸ್ತಿ ಹಾಗೂ ಜೀವ ಎರಡನ್ನೂ ಉಳಿಸಬಹುದಿತ್ತು ಎಂದು ತಿಳಿಸಿದರು.

‘ಕೆಲವೊಮ್ಮೆ ದಾರಿಹೋಕರು ಕರೆ ಮಾಡಿ, ಘಟನಾ ಸ್ಥಳದಿಂದ ಹೋಗಿ ಬಿಟ್ಟುತ್ತಾರೆ. ಅವರು ಪುನಃ ಸಂಪರ್ಕಕ್ಕೆ ಸಿಗುವುದೇ ಇಲ್ಲ. ಆ ಸಂದರ್ಭಗಳಲ್ಲಿ ಆಯಾ ಪೊಲೀಸ್‌ ಠಾಣೆಗಳನ್ನು ಸಂಪರ್ಕಿಸಿ ವಿಳಾಸ ತಿಳಿದುಕೊಳ್ಳುತ್ತೇವೆ. ಅದರಿಂದಾಗಿ ಸ್ಥಳಕ್ಕೆ ಹೋಗುವುದು ತಡವಾಗುತ್ತದೆ. ಅಷ್ಟರಲ್ಲಿ ಸಾಕಷ್ಟು ಹಾನಿ ಉಂಟಾಗಿರುತ್ತದೆ. ಅಂಥ ಪ್ರಕರಣಗಳು ನಮಗೂ ನಿರಾಸೆ ತರಿಸಿವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry