ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆ

7
ಕುಡ್ಲೂರು, ಕೊರಟೀಕೆರೆ, ಕೋರನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ಮುತ್ತಿಗೆ

ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆ

Published:
Updated:
ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆ

ಅಜ್ಜಂಪುರ: ನೀರಿನ ಸಮಸ್ಯೆಯನ್ನು ಪೂರೈಸುವ ನಿಟ್ಟಿನಲ್ಲಿ ಭದ್ರಾ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಪಟ್ಟಣ ಸಮೀಪ ಕುಡ್ಲೂರು, ಕೊರಟೀಕೆರೆ, ಕೋರನಹಳ್ಳಿ ಪಂಚಾಯಿತಿ ವ್ಯಾಪ್ತಿಯ ನೂರಾರು ಗ್ರಾಮಸ್ಥರು ಕುಡ್ಲೂರು ಗ್ರಾಮ ಪಂಚಾಯಿತಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.

‘ಪಂಚಾಯಿತಿಗೆ ಒಳಪಡುವ ಗ್ರಾಮಗಳಲ್ಲಿ ಸ್ಥಳೀಯ ಪಂಚಾಯಿತಿ ನೀರು ಪೂರೈಸುತ್ತಿಲ್ಲ. ಇನ್ನು ಕೈಪಂಪುಗಳಲ್ಲೂ ನೀರಿಲ್ಲ. ಕೆರೆ-ಕಟ್ಟೆಗಳೂ ಒಣಗಿವೆ. ನೀರಿಗಾಗಿ ಜನ-ಜಾನುವಾರು ಪರದಾಡುವಂತಾಗಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಸ್ಥಳೀಯ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸದಸ್ಯರಿಗೆ ತಿಳಿಸಿದರೂ ಪ್ರಯೋಜನ ಆಗಿಲ್ಲ. ಜತೆಗೆ ಇಒ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮಸ್ಥರು ದೂರಿದರು.ಸಮಸ್ಯೆಗೆ ಹಾಲಿ, ಮಾಜಿ ಶಾಸಕರೇ ಕಾರಣ: ನಮ್ಮ ನೀರಿನ ಸಮಸ್ಯೆಗೆ ಹಾಲಿ ಮತ್ತು ಮಾಜಿ ಶಾಸಕರೇ ಕಾರಣ. 50 ವರ್ಷಗಳಿಂದಲೂ ಗ್ರಾಮ ನೀರಿನ ಕೊರತೆ ಅನುಭವಿಸುತ್ತಿದೆಯಾದರೂ ಯಾರೊಬ್ಬರೂ ನಮಗೆ ಶಾಶ್ವತ ಪರಿಹಾರ ಒದಗಿಸಲು ಮುಂದಾಗಲಿಲ್ಲ. ಚುನಾವಣೆ ವೇಳೆ ಕೇವಲ ಓಟಿಗಾಗಿ ಮನೆ ಬಾಗಿಲಿಗೆ ಅಲೆಯುವ ಜನಪ್ರತಿನಿಧಿಗಳು, ನಾವು ಸಮಸ್ಯೆಯಲ್ಲಿರುವ ಈ ಸಮಯದಲ್ಲಿ ಹತ್ತಿರ ಸುಳಿಯುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಿಖಿತ ಭರವಸೆ ನೀಡಲು ಒತ್ತಾಯ: ‘ನಮ್ಮ ನೀರಿನ ಸಮಸ್ಯೆ ನಿಮಗೆ ಅರ್ಥವಾಗುತ್ತಿಲ್ಲ. ನಾವು ಕೂಲಿ ಕೆಲಸ ಮಾಡೋ ಜನ ಇದ್ದೀವಿ. ಕುಡಿಯೋ ನೀರಿಗಾಗಿ ಕೆಲಸಕ್ಕೂ ಹೋಗದೇ ತೋಟಗಳ ಕೊಳವೆ ಬಾವಿಯಿಂದ ನೀರು ತರಬೇಕಾಗಿದೆ. ನಮಗೆ ನಿಮ್ಮ ಸುಳ್ಳು ಆಶ್ವಾಸನೆ-ಭರವಸೆಗಳು ಬೇಡ ಎಂದು ಕಿಡಿಕಾರಿದ ಮಹಿಳೆಯರು. ಕೂಡಲೇ ಗ್ರಾಮಕ್ಕೆ ಭದ್ರಾದಿಂದ ನೀರು ಪೂರೈಸುವ ಕಾಮಗಾರಿ ಆರಂಬಿಸುವ ಬಗ್ಗೆ ಲಿಖಿತ ಮಾಹಿತಿ ನೀಡಿ, ಬಳಿಕ ಪಂಚಾಯಿತಿಯಿಂದ ತೆರಳಿ’ ಎಂದು ಆಗ್ರಹಿಸಿದರು.ಟ್ಯಾಂಕರ್ ನೀರು ಬಿಲ್ ಬಾಕಿ: ‘6 ತಿಂಗಳ ಅವಧಿಯಲ್ಲಿ ಕೊರಟೀಕೆರೆ, ವೀರಾಪುರ ಹೊಸೂರು, ನಾಗವಂಗಲ, ಸೋಮೇನಹಳ್ಳಿ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿದ ₹6 ಲಕ್ಷ, ಮುಂಡ್ರೆ ಪಂಚಾಯಿತಿ ವ್ಯಾಪ್ತಿಗೆ ನೀರು ಪೂರೈಸಿದ ₹12 ಲಕ್ಷ ಬಿಲ್ ಬಾಕಿ ಜಿಲ್ಲಾ ಪಂಚಾಯಿತಿಯಿಂದ ಇದುವರೆಗೂ ಪಾವತಿ ಆಗಿಲ್ಲ’ ಎಂದು ಮುಖಂಡ ರಾಮಕೃಷ್ಣಪ್ಪ ದೂರಿದರು.

‘ಪಂಚಾಯಿತಿ ವ್ಯಾಪ್ತಿಯಲ್ಲಿನ ನೀರಿನ ಸಮಸ್ಯೆ ಬಗೆಹರಿಸುವಂತೆ ಒಂದು ತಿಂಗಳಿಂದ ಈಚೆಗೆ ಎಇಇ, ಇಒ, ತಹಶೀಲ್ದಾರ್‍ಗೆ ಮೂರು ಬಾರಿ ಪತ್ರ ಬರೆದಿದ್ದೇನೆ. ಇದೇ ವಿಷಯವಾಗಿ ಚರ್ಚಿಸಿದಾಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನಿಮ್ಮ ಹಂತದಲ್ಲಿಯೇ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದರು. ಆದರೆ ಪಂಚಾಯಿತಿಯಲ್ಲಿ ಹಣದ ಕೊರತೆ ಇರುವುದರಿಂದ ಹೆಚ್ಚಿನ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ’ ಎಂದು ಪಿಡಿಒ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಎಇಇ ಮನೋಹರ್ ಮಾತನಾಡಿ ‘ಭದ್ರಾ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ 11 ತಿಂಗಳು ಕಾಲಾವಕಾಶ ಬೇಕಾಗುವುದು. ಆದರೆ ಪೈಪ್ ಟ್ಯಾಪಿಂಗ್ ಮೂಲಕ ಒಂದೂವರೆ ತಿಂಗಳಲ್ಲಿ ನೀರು ನೀಡಲಾಗುವುದು. ಅಲ್ಲಿಯವರೆಗೆ ಕುಡ್ಲೂರು, ಕೊರಟೀಕೆರೆ ಪಂಚಾಯಿತಿಯಲ್ಲಿ ತಲಾ ಎರಡು, ಮುಂಡ್ರೆಯಲ್ಲಿ ಒಂದು ಕೊಳವೆ ಬಾವಿ ಕೊರೆಯಿಸಿ, ನೀರು ನೀಡಲಾಗುವುದು. ಅಲ್ಲಿಯವರೆಗೆ ಪ್ರತಿಭಟನೆ ಕೈಬಿಡಿ’ ಎಂದು ಮನವಿ ಮಾಡಿದರು.

ಅಧಿಕಾರಿಗಳ ಭರವಸೆಯನ್ನು ಒಪ್ಪದ ನೂರಾರು ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಪಂಚಾಯಿತಿ ಮುಂಭಾಗ ಅಹೋರಾತ್ರಿ ಪ್ರತಿಭಟನೆ ಮುಂದುವರೆಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ, ಭಾರತೀಯ ಕಿಸಾನ್ ಸಂಘ, ಮಹಿಳಾ ಸ್ತ್ರೀಶಕ್ತಿ ಸಂಘ, ಸ್ವ-ಸಹಾಯ ಸಂಘ ಸದಸ್ಯರು ಪಾಲ್ಗೂಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry