ತೋಟಗಾರಿಕಾ ಸಂಶೋಧನಾ ಕೇಂದ್ರ ಆರಂಭಿಸುವ ಭರವಸೆ

7
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ

ತೋಟಗಾರಿಕಾ ಸಂಶೋಧನಾ ಕೇಂದ್ರ ಆರಂಭಿಸುವ ಭರವಸೆ

Published:
Updated:
ತೋಟಗಾರಿಕಾ ಸಂಶೋಧನಾ ಕೇಂದ್ರ ಆರಂಭಿಸುವ ಭರವಸೆ

ಹಿರಿಯೂರು: ಬಿಜೆಪಿ ಅಧಿಕಾರಿಕ್ಕೆ ಬಂದರೆ ಇಲ್ಲಿನ ವಾಣಿ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸುವ ಜತೆಗೆ, ತಾಲ್ಲೂಕಿನಲ್ಲಿ ತೋಟಗಾರಿಕಾ ಸಂಶೋಧನಾ ಕೇಂದ್ರವನ್ನು ಆರಂಭಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.

ನಗರದ ನೆಹರೂ ಮೈದಾನದಲ್ಲಿ ಬುಧವಾರ ನಡೆದ ಪರಿವರ್ತನಾ ಯಾತ್ರೆಯ ಬೃಹತ್ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ತರಕಾರಿ, ಹಣ್ಣು ಹೆಚ್ಚಾಗಿ ಬೆಳೆಯುತ್ತಾರೆ. ಇವುಗಳ ಸಂಗ್ರಹಕ್ಕೆ ಶೈತ್ಯಾಗಾರಗಳು ಮತ್ತು ಉತ್ತಮ ಮಾರುಕಟ್ಟೆ ಮತ್ತು ಬೆಳೆದ ಉತ್ಪನ್ನಗಳಿಗೆ ಬೆಂಬಲ ಬೆಲೆ ಕೊಡಿಸುವುದಾಗಿ ಅವರು ತಿಳಿಸಿದರು.

ವಾಣಿವಿಲಾಸ ಸಾಗರಕ್ಕೆ ಹೆಚ್ಚುವರಿ ನೀರು, ಧರ್ಮಪುರಕ್ಕೆ ತಾಲ್ಲೂಕು ಕೇಂದ್ರದ ಮಾನ್ಯತೆ, ಪಟ್ಟಣಕ್ಕೆ ಹೈಟೆಕ್ ಆಸ್ಪತ್ರೆ ನಿರ್ಮಾಣ, ಹಟ್ಟಿ ಗೊಲ್ಲ, ಅಡವಿ ಗೊಲ್ಲರನ್ನು ಕಾಡುಗೊಲ್ಲ ಎಂದು ಸೇರ್ಪಡೆ ಸೇರಿದಂತೆ ತಾಲ್ಲೂಕಿನ ನಾಗರಿಕರಲ್ಲಿರುವ ಬೇಡಿಕೆಗಳನ್ನು ಈಡೇರಿಸುವುದಾಗಿ ಅವರು ಭರವಸೆ ನೀಡಿದರು.

ಸಂಸದ ಶ್ರೀರಾಮುಲು, ‘ಪರಿವರ್ತನೆಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಇದನ್ನು ನೋಡಿಯೇ ಶಾಸಕರಿಗೆ ನಿದ್ದೆ ಬರುವುದಿಲ್ಲ. ಜಿಲ್ಲೆಗೆ ನೀರುಣಿಸುವ ಭದ್ರ ಮೇಲ್ದಂಡೆ ನಮ್ಮ ಪಕ್ಷದ ಯೋಜನೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ತ್ವರಿತಗತಿಯಲ್ಲಿ ಪೂರ್ಣಗೊಳಿಸುತ್ತೇವೆ’ ಎಂದು ಭರವಸೆ ನೀಡಿದರು.

ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಡಿ.ಟಿ.ಶ್ರೀನಿವಾಸ, ಮುಖಂಡ ಸಿದ್ದೇಶ್‌ಯಾದವ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿದರು. ನಗರದಾದ್ಯಂತ ಬೈಕ್ ರ‍್ಯಾಲಿ ನಡೆಸಲಾಯಿತು. ಪರಿವರ್ತನಾ ಯಾತ್ರೆಯನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪುಟ್ಟಸ್ವಾಮಿ, ಸಂಘಟನಾ ಕಾರ್ಯದರ್ಶಿ ರವಿಕುಮಾರ್, ವಕ್ತಾರ ಅನ್ವರ್‌ ಮಾಣ್ಪಾಡಿ, ಮಾಜಿ ಸಚಿವ ರೇಣುಕಾಚಾರ್ಯ, ಅಬ್ದುಲ್ ಅಜೀಂ, ಪರಿವರ್ತನಾ ಯಾತ್ರೆ ಉಸ್ತುವಾರಿ ಮಧುಶ್ರೀ, ನಗರಸಭಾಧ್ಯಕ್ಷ ಟಿ.ಚಂದ್ರಶೇಖರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನವೀನ್, ಮಾಜಿ ಶಾಸಕ ರಾಮಯ್ಯ, ಮುಖಂಡ ಎಂ.ಜಯಣ್ಣ, ತಾಲೂಕು ಅಧ್ಯಕ್ಷ ದ್ಯಾಮೇಗೌಡ, ತಾಲೂಕಿನ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯ್ತಿ  ನಗರಸಭಾ ಸದಸ್ಯರು ಇದ್ದರು.

‘ಕಾಂಗ್ರೆಸ್‌ಗೆ ತಾಲಿಬಾನ್ ಜತೆ ಸಂಬಂಧ’

‘ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್‌ಎಸ್‌ಎಸ್, ಬಜರಂಗದಳ, ವಿಶ್ವ ಹಿಂದೂ ಪರಿಷತ್‌ಗಳನ್ನು ಉಗ್ರಗಾಮಿ ಸಂಘಟನೆಗಳೆಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ನಿಜವಾಗಿಯೂ ತಾಲಿಬಾನ್ ಜತೆ ಸಂಬಂಧ ಇಟ್ಟುಕೊಂಡಿರುವವರು ಕಾಂಗ್ರೆಸ್‌ನವರು’ ಎಂದು ಶಾಸಕ ಸಿ.ಟಿ.ರವಿ ಆರೋಪಿಸಿದರು.

‘ನಮ್ಮದು ಮದಕರಿ ನಾಯಕ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವನ ಇತಿಹಾಸದ ನಾಡು. ಟಿಪ್ಪು, ಹೈದರಾಲಿ ನಮ್ಮ ನಾಯಕರಲ್ಲ. ದೇಶವನ್ನು ಪಾಕಿಸ್ತಾನ ಮಾಡುತ್ತೇನೆ ಎಂದು ಹೇಳುವವರೊಂದಿಗೆ ಕಾಂಗ್ರೆಸ್‌ನವರು ನೆಂಟಸ್ತನ ಬೆಳೆಸುತ್ತಾರೆ. ಇವರ ಗೋಸುಂಬೆ ಬಣ್ಣ ಸದ್ಯದಲ್ಲೇ ಬಯಲಾಗಲಿದೆ’ ಎಂದರು.

ಸಿಎಂ ನಡೆ ಖಂಡನೀಯ: ಯಡಿಯೂರಪ್ಪ

ಚಾಮರಾಜನಗರದಲ್ಲಿ ನಡೆದ ಸರ್ಕಾರಿ ಕ್ರಾರ್ಯಕ್ರಮದಲ್ಲಿ ನಮ್ಮ ಪಕ್ಷದ ತಾ.ಪಂ ಸದಸ್ಯ ದಯಾನಿಧಿ ಅಭಿವೃದ್ದಿ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಅವನ್ನು ಬೆದರಿಸಿ, ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದು ಖಂಡನೀಯ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ವೆಚ್ಚದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೇರೆ ಪಕ್ಷದವರನ್ನು ಹೀಗೆ ನಡೆಸಿಕೊಂಡಿದ್ದು ಅಕ್ಷಮ್ಯ. ಇದಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕಂದು ಪಕ್ಷದೊಳಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆಎಂದು ಅವರು ಪ್ರತಿಕ್ರಿಯಿಸಿದರು.

ಇತ್ತಿಚೇಗೆ ಮುಖ್ಯಮಂತ್ರಿ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಭಯೋತ್ಪಾದಕರು ಎಂದು ಆರೋಪಿಸಿದ್ದಾರೆ. ಆದರೆ ನಮ್ಮ ಕಾರ್ಯಕರ್ತರು ಭಯೋತ್ಪಾದಕರಲ್ಲ, ದೇಶಭಕ್ತರು, ಸಮಾಜಸೇವಕರು ಎಂದು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry