ಜಾತಿಯ ವಿಷಬೀಜ ಬಿತ್ತುತ್ತಿರುವ ಕಾಂಗ್ರೆಸ್: ಸಿದ್ದರಾಮಯ್ಯ ವಿರುದ್ಧ ಬಿಎಸ್‌ವೈ ಟೀಕೆ

7

ಜಾತಿಯ ವಿಷಬೀಜ ಬಿತ್ತುತ್ತಿರುವ ಕಾಂಗ್ರೆಸ್: ಸಿದ್ದರಾಮಯ್ಯ ವಿರುದ್ಧ ಬಿಎಸ್‌ವೈ ಟೀಕೆ

Published:
Updated:
ಜಾತಿಯ ವಿಷಬೀಜ ಬಿತ್ತುತ್ತಿರುವ ಕಾಂಗ್ರೆಸ್: ಸಿದ್ದರಾಮಯ್ಯ ವಿರುದ್ಧ ಬಿಎಸ್‌ವೈ ಟೀಕೆ

ಹೊಳಲ್ಕೆರೆ: ಕಾಂಗ್ರೆಸ್ ಪಕ್ಷ ಕೇವಲ ಮತಕ್ಕಾಗಿ ಸಮಾಜದಲ್ಲಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪ ಮಾಡಿದರು.

ಪಟ್ಟಣದ ಕೊಟ್ರೆನಂಜಪ್ಪ ಪಿಯು ಕಾಲೇಜು ಆವರಣದಲ್ಲಿ ಬುಧವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅನಿವಾಸಿ ಭಾರತೀಯರನ್ನು ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ಬಿಜೆಪಿ ಜಾತಿ ಧರ್ಮಗಳನ್ನು ಒಡೆಯುತ್ತಿದೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ಲಘುವಾಗಿ ಮಾತನಾಡಿದ್ದು, ಕಾಂಗ್ರೆಸ್‌ಗೆ ಮೋದಿ ಅವರ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ತಿಳಿಸಿದರು.

ನಿಜವಾಗಿ ದೇಶದಲ್ಲಿ ಜಾತಿಗಳ ಮಧ್ಯ ವಿವಾದ ಏರ್ಪಡಿಸುತ್ತಿರುವುದು ಕಾಂಗ್ರೆಸ್ ಪಕ್ಷ ಎಂಬುದು ಇಡೀ ದೇಶಕ್ಕೇ ತಿಳಿದಿದೆ. ಇಂತಹ ಒಡೆದು ಆಳುವ ಮನೋಭಾವದಿಂದಲೇ ಕಾಂಗ್ರೆಸ್ ಎಲ್ಲಾ ಕಡೆ ನಿರ್ನಾಮ ಆಗುತ್ತಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್‌ಬರೇಲಿ, ಅಮೇಥಿ ಕ್ಷೇತ್ರಗಳಲ್ಲಿ ಕೂಡ ಕಾಂಗ್ರೆಸ್ ನೆಲಕಚ್ಚುತ್ತಿದೆ ಎಂದರು.

‘ಬಿಜೆಪಿಯ ಚಾಣಕ್ಯ ಎಂದೇ ಹೇಳುವ ಅಮಿತ್ ಷಾ ಇಡೀ ದೇಶದಲ್ಲಿ ಕಮಲ ಅರಳುವಂತೆ ಮಾಡಿದ್ದಾರೆ. ಉತ್ತರ ಪ್ರದೇಶದಂತ ದೊಡ್ಡ ರಾಜ್ಯದಲ್ಲಿ 325 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ತಮ್ಮ ತಾಕತ್ತು ತೋರಿಸಿದ್ದಾರೆ. ಮುಂದೆ ನಮ್ಮ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ನಿಮ್ಮ ಸಮ್ಮುಖದಲ್ಲಿ ಅಮಿತ್ ಷಾ ಅವರಿಗೆ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಭರವಸೆ ನೀಡುತ್ತಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ನಾವು ಅಧಿಕಾರಕ್ಕೆ ಬಂದ ನಂತರ ಕಾಡುಗೊಲ್ಲರನ್ನು ಜಾತಿಪಟ್ಟಿಗೆ ಸೇರಿಸಲಾಗುವುದು. ಬೆಂಗಳೂರಿನಲ್ಲಿ ನಡೆಯುವ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ 5 ಲಕ್ಷ ಜನರನ್ನು ಸೇರಿಸಲಾಗುವುದು’ ಎಂದು ಬಿಎಸ್‌ವೈ ಹೇಳಿದರು.

ಮಾಜಿ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ‘ಚಿತ್ರದುರ್ಗ ಜಿಲ್ಲೆ ಕಳೆದ 103 ವರ್ಷಗಳಲ್ಲಿ 78 ವರ್ಷ ಬರಗಾಲಕ್ಕೆ ತುತ್ತಾಗಿದೆ. ಬಿಎಸ್‌ವೈ ಬಯಲು ಸೀಮೆಗೆ ನೀರಾವರಿ ಒದಗಿಸುವ ಪಣತೊಟ್ಟಿದ್ದಾರೆ. ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಿ, ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಅಂಶ ಸೇರಿಸಲು ಮನವಿ ಮಾಡಿದ್ದೇವೆ’ ಎಂದರು.

ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಮಾತನಾಡಿ, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಇದ್ದೂ ಸತ್ತಂತಿದೆ. ಇಲ್ಲಿನ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಮ್ಮ ಇಲಾಖೆಯ ಶೇ 40ರಷ್ಟು ಅನುದಾನವನ್ನು ಮಾತ್ರ ಬಳಕೆ ಮಾಡಿದ್ದಾರೆ. ಹಿಂದೆ ಎಂ.ಚಂದ್ರಪ್ಪ ಶಾಸಕರಾಗಿದ್ದಾಗ ನಡೆದ ಕೆಲಸಗಳನ್ನು ಬಿಟ್ಟರೆ ಸಚಿವರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ’ ಎಂದು ದೂರಿದರು.

ಸಂಸದ ಶ್ರೀರಾಮುಲು ಮಾತನಾಡಿ, ‘ಇಂದು ಸೇರಿರುವ ಜನಸಾಗರ ನೋಡಿದರೆ ಇಲ್ಲಿನ ಸಚಿವ ಎಚ್.ಆಂಜನೇಯ ಎಲ್ಲಿಗೆ ಜಿಗಿಯುತ್ತಾರೋ ಗೊತ್ತಿಲ್ಲ. ಅವರು ಭ್ರಷ್ಟಾಚಾರದಲ್ಲಿ ನಂ.1 ಆಗಿದ್ದಾರೆ. ಕಾಂಗ್ರೆಸ್ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಈ ಬಾರಿ ಕಾಂಗ್ರೆಸ್ ಧೂಳೀಪಟವಾಗಲಿದ್ದು, ಬಿಎಸ್‌ವೈ ಕರ್ನಾಟಕದ ಮೋದಿ ಆಗಲಿದ್ದಾರೆ’ ಎಂದು ಹೊಗಳಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಮಹಾನ್ ಸುಳ್ಳುಗಾರ. 2014ರಲ್ಲಿ ಇಲ್ಲಿನ ಸಮಾರಂಭವೊಂದರಲ್ಲಿ ಇನ್ನು 2 ವರ್ಷಗಳಲ್ಲಿ ಜಿಲ್ಲೆಗೆ ನೀರು ಹರಿಸಲಾಗುವುದು ಎಂದು ಭಾಷಣ ಬಿಗಿದು ಹೋಗಿದ್ದರು. ಆದರೆ ಅದು ಇದುವರೆಗೆ ಕಾರ್ಯಗತ ಆಗಿಲ್ಲ. ರಾಮನ ಭಂಟ ಆಂಜನೇಯ ಏನೂ ಕೆಲಸ ಮಾಡಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಗೆ ಸೇರಿಸಲಾಗುವುದು’ ಎಂದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ‘ಬಿಎಸ್‌ವೈ ದಣಿವರಿಯದ ನಾಯಕ. ಹಿಂದೆ ಎಂ.ಚಂದ್ರಪ್ಪ ಶಾಸಕರಾಗಿದ್ದಾಗ ಈ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿದ್ದರು. ಚಂದ್ರಪ್ಪ ರಸ್ತೆರಾಜ ಎಂಬ ಬಿರುದು ಪಡೆದಿದ್ದು, ಅವರು ಸದಾ ಜನರ ಜತೆಯಲ್ಲಿರುತ್ತಾರೆ’ ಎಂದು ಹೇಳಿದರು.

ಬಿಜೆಪಿ ಮುಖಂಡ ಗೋವಿಂದ ಕಾರಜೋಳ ಮಾತನಾಡಿ,‘ ಕಾಂಗ್ರೆಸ್ ಸರ್ಕಾರ ದಲಿತರ ಪಾಲಿಗೆ ಒಂದು ಶಾಪ. ರಾಜ್ಯದಲ್ಲಿ ದಲಿತರು, ಹಿಂದುಳಿದವರ ಮೇಲೆ ದೌರ್ಜನ್ಯ ನಡೆದ 10,281 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಕೇವಲ 38 ಜನರಿಗೆ ಮಾತ್ರ ಶಿಕ್ಷೆ ಆಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry