ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಯೋಜನೆ: ಆಯ್ಕೆ ಪಾರದರ್ಶಕವಾಗಿರಲಿ

ಮಲೇಬೆನ್ನೂರು ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ
Last Updated 11 ಜನವರಿ 2018, 6:23 IST
ಅಕ್ಷರ ಗಾತ್ರ

ಮಲೇಬೆನ್ನೂರು: ಪುರಸಭೆ ವ್ಯಾಪ್ತಿಯ ವಸತಿ ಯೋಜನೆ ಫಲಾನುಭವಿ ಆಯ್ಕೆ ಪಾರದರ್ಶಕವಾಗಿರಬೇಕು ಎಂದು ಸದಸ್ಯರು ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.

ಪುರಸಭೆ ವಶದಲ್ಲಿರುವ ಐದು ಎಕರೆ ಜಮೀನಿನಲ್ಲಿ ವಸತಿರಹಿತರಿಗೆ ‘ಜಿ ಪ್ಲಸ್ ಟು’ ಮಾದರಿ ಮನೆನಿರ್ಮಿಸಿ ವಿತರಣೆ ಮಾಡಲಾಗುವುದು ಎಂದು ಕೆಲವರು ಭರವಸೆ ನೀಡಿ ನಾಗರಿಕರಿಂದ ಅರ್ಜಿ, ಆಧಾರ್ ಕಾರ್ಡ್, ಭಾವಚಿತ್ರ ಸಂಗ್ರಹಿಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿ ಎಂದು ಸದಸ್ಯ ಭಾನುವಳ್ಳಿ ಸುರೇಶ್ ಪ್ರಶ್ನಿಸಿದರು.

‘ಆಶ್ರಯ ಸಮಿತಿ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಫಲಾನುಭವಿಗಳ ಆಯ್ಕೆ ನಡೆಯುತ್ತದೆ. ನಮ್ಮ ಪಾತ್ರ ಇರುವುದಿಲ್ಲ’ ಎಂದು ಪುರಸಭೆ ಅಧ್ಯಕ್ಷೆ ಹೇಳಿದರು. ಇದಕ್ಕೆ ಸದಸ್ಯರು ಒಪ್ಪಲಿಲ್ಲ.

ಪುರಸಭೆ ಮುಖ್ಯಾದಿಕಾರಿ, ಅಧ್ಯಕ್ಷರು ಆಶ್ರಯ ಸಮಿತಿ ಸದಸ್ಯರಾಗಿದ್ದರೂ, ಸದಸ್ಯರು ಶಿಫಾರಸು ಮಾಡಿದ ಒಬ್ಬ ಫಲಾನುಭವಿ ಕೂಡ ಈವರೆಗೆ ಆಯ್ಕೆ ಆಗಿಲ್ಲ ಎಂದು ಸದಸ್ಯ ಆರೀಫ್ ಅಲಿ ಬೇಸರ ವ್ಯಕ್ತಪಡಿಸಿದರು.

ಸದಸ್ಯರಿಗೆ ತಿಳಿಸದೇ ವಸತಿ ಯೋಜನೆಗಳ ಜಿಪಿಎಸ್ ನಡೆಸುತ್ತಿದ್ದಾರೆ ಎಂದು ಮಾಸಿಣಗಿ ಶೇಖರಪ್ಪ ದನಿಗೂಡಿಸಿದರು.

ರಾಜೀವ್ ಗಾಂಧಿ ಸಬ್ ಮಿಷನ್ ಯೋಜನೆ ಅಡಿ ಪಟ್ಟಣದ ಮೂರು ವಿಭಾಗಗಳಿಗೆ ವಾರದಲ್ಲಿ ಮೂರು ದಿನ ಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತಿದೆ ಎಂದು ಗ್ರಾಮೀಣ ನೀರು ಪೂರೈಕೆ ವಿಭಾಗದ ಎಂಜಿನಿಯರ್ ರಾಜೀವ್ ಮಾಹಿತಿ ನೀಡಿ ನೀರಗಂಟಿಗಳ ಸಹಕಾರ ಕೋರಿದರು. ವಿದ್ಯುತ್ ಪೂರೈಕೆ ವ್ಯತ್ಯಯವಾದರೆ ನೀರು ಸರಬರಾಜು ಸ್ವಲ್ಪ ವ್ಯತ್ಯಯ ಆಗಲಿದೆ ಎಂದರು.

ಆಶ್ರಯ ಕಾಲೊನಿಯಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಘಟಕ ಸ್ಥಾಪನೆಗೆ ಸದಸ್ಯರು ಒತ್ತಾಯಿಸಿದಾಗ ಅಧ್ಯಕ್ಷರು ಒಪ್ಪಲಿಲ್ಲ.

ಸದಸ್ಯರಾದ ಆರಿಫ್ ಅಲಿ, ದಾದಾವಲಿ, ಹನುಮಂತಪ್ಪ, ಪಿ. ನಿಜಲಿಂಗಪ್ಪ, ಯೂಸೂಫ್, ನರಸಿಂಹಪ್ಪ ಸಲಹೆಯಂತೆ ಮುಂದೆ ಬಜೆಟ್‌ನಲ್ಲಿ ₹10 ಲಕ್ಷ ಸಮುದಾಯ ಭವನಕ್ಕೆ ಮೀಸಲಿಟ್ಟು, ಈಗ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲು ಸಮ್ಮತಿಸಿದರು.

ಪುರಸಭೆಗೆ ಸರಬರಾಜು ಮಾಡಿರುವ ಎಲ್ಇಡಿ ಬೀದಿ ದೀಪ ಕಡಿಮೆ ಗುಣಮಟ್ಟದ್ದು, ಹೆಚ್ಚಿನ ಬೆಲೆ ನೀಡಲಾಗಿದೆ ಎಂದು ಸದಸ್ಯರು ಆರೋಪಿಸಿದರು.

ಬೀದಿದೀಪ ಖರೀದಿ ಕಾನೂನು ಬದ್ಧವಾಗಿದೆ. ಕಳಪೆ ಕಂಡುಬಂದರೆ ಬಿಲ್ ಪಾವತಿಸುವುದಿಲ್ಲ ಎಂದು ಅಧಿಕಾರಿಗಳು ಉತ್ತರಿಸಿದರು.

ಭದ್ರಾ ನಾಲೆಗೆ ಕಸ ಕಡ್ಡಿ, ಚರಂಡಿ ನೀರು ಸೇರುವುದನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಯಿತು. ಒಂದು ಟ್ಯಾಂಕರ್ ನೀರು ಪೂರೈಕೆಗೆ ₹ 500 ನಿಗದಿ ಮಾಡಲು ಸಭೆ ಸಮ್ಮತಿಸಿತು. ಉಪಾಧ್ಯಕ್ಷ ಬಿ.ಎಂ.ಚನ್ನೇಶ್, ಪುರಸಭೆ ಸಿಬ್ಬಂದಿ, ಸದಸ್ಯರು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT