ಮತದಾರರ ಪಟ್ಟಿ ಪರಿಷ್ಕರಣೆ: ನಿಷ್ಪಕ್ಷಪಾತವಾಗಿ ಕೆಲಸ ಮಾಡಿ

7
ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಮೇಶ್‌ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ: ನಿಷ್ಪಕ್ಷಪಾತವಾಗಿ ಕೆಲಸ ಮಾಡಿ

Published:
Updated:
ಮತದಾರರ ಪಟ್ಟಿ ಪರಿಷ್ಕರಣೆ: ನಿಷ್ಪಕ್ಷಪಾತವಾಗಿ ಕೆಲಸ ಮಾಡಿ

ದಾವಣಗೆರೆ: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಒ)ಗಳು ಒಳಗೊಂಡಂತೆ ಎಲ್ಲರೂ ಪಕ್ಷಾತೀತ ವಾಗಿ, ಸರ್ಕಾರದ ಪ್ರತಿನಿಧಿಗಳಂತೆ, ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಹೇಳಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಬುಧವಾರ ಮಾಯಕೊಂಡ ವಿಧಾನಸಭಾ ಕ್ಷೇತ್ರ (108) ವ್ಯಾಪ್ತಿಯ ಮತಗಟ್ಟೆ ಮಟ್ಟದ ಅಧಿಕಾರಿಗಳ ವಿಶೇಷ ಸಮಗ್ರ ಪರಿಷ್ಕರಣ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಚುನಾವಣಾ ಆಯೋಗ ಚುನಾವಣೆ ಕುರಿತು ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಿದ್ದು, ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ನೇರವಾಗಿ ಬೂತ್ ಮಟ್ಟದ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ. ಹಾಗಾಗಿ, ಆಯೋಗದ ನಿಯಮಗಳ ಅನುಸಾರ ಕರ್ತವ್ಯ ನಿರ್ವಹಿಸ ಬೇಕು. ಇದರಿಂದ ಚುನಾವಣಾ ಕಾರ್ಯ ಸುಗಮವಾಗುತ್ತದೆ ಎಂದು ಹೇಳಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ 1,896 ಮತಗಟ್ಟೆಗಳಿದ್ದು, ಪ್ರಸ್ತುತ 8 ಮತಗಟ್ಟೆಗಳನ್ನು ಹೆಚ್ಚುವರಿ ಯಾಗಿ ಸೇರಿಸಲಾಗಿದ್ದು 1,904 ಮತಗಟ್ಟೆಗಳಾಗಿ ವಿಸ್ತರಿಸಲಾಗುತ್ತಿದೆ. ಕಳೆದ 2 ವರ್ಷಗಳಿಂದ 284 ಮತಗಟ್ಟೆಗಳಲ್ಲಿ ಮರಣ ಹೊಂದಿದ ಮತದಾರರ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಆಗಿಲ್ಲ. ಅಂದರೆ ವರ್ಗಾವಣೆ, ಮರಣ ಆಗಿಲ್ಲ ಎನ್ನಲು ಸಾಧ್ಯವಿಲ್ಲ. ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆಯ ಕೆಲವೊಂದು ಸಂದರ್ಭಗಳಲ್ಲಿ ನ್ಯೂನತೆಗಳ ತಿದ್ದುಪಡಿಗಾಗಿ ಮೇಲಧಿಕಾರಿಗಳ ಸಹಕಾರ ಪಡೆದುಕೊಳ್ಳಿ ಎಂದರು.

ನವೆಂಬರ್‌ನಿಂದ ಇಲ್ಲಿಯವರೆಗೂ ಮತದಾರರ ಪಟ್ಟಿ ಪರಿಷ್ಕರಣೆಗೆ ಒಟ್ಟು 33 ಸಾವಿರ ಅರ್ಜಿಗಳು ಬಂದಿವೆ. ಅದರಲ್ಲಿ 262 ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಪರಿಷ್ಕರಣೆ ಮಾಡಿ ಸಿದ್ಧ ಗೊಳಿಸಲಾಗಿದೆ. ಉಳಿದ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಯಾವುದನ್ನು ಸೇರಿಸಬೇಕು ಅಥವಾ ಕೈಬಿಡಬೇಕು ಎಂಬುದನ್ನು ಸರಿಯಾಗಿ ಪರಿಷ್ಕರಣೆ ಮಾಡಿ, ಫೆಬ್ರುವರಿ 20 ರ ಒಳಗೆ ಚುನಾವಣಾ ಗುರುತಿನ ಚೀಟಿಗಳನ್ನು ಸಿದ್ಧಪಡಿಸಬೇಕು ಎಂದು ಸೂಚಿಸಿದರು.

ಭಾರತೀಯ ಚುನಾವಣಾ ಆಯೋಗ ಈ ಬಾರಿ ‘ಆಕ್ಸೆಸ್ ಟು ಎವರಿವನ್’ ಎಂಬ ಘೋಷವಾಕ್ಯದಡಿ ಚುನಾವಣೆಗೆ ಸಿದ್ಧತೆ ನಡೆಸಿದೆ. ಅದರಂತೆ ಪ್ರತಿಯೊಬ್ಬರೂ ಕೂಡ ಮತದಾನ ಮಾಡಬೇಕು. ಇದರಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಸೂಪರ್‌ವೈಸರ್‌ಗಳ ಪಾತ್ರ ಮುಖ್ಯವಾಗುತ್ತದೆ. ಜಿಲ್ಲೆಯಲ್ಲಿ 35 ಸಾವಿರ ಅಂಗವಿಕಲರು ಇದ್ದು, ಅವರೂ ಮತದಾನ ಮಾಡುವಂತಾಗಬೇಕು. ಪ್ರತಿ ಬೂತ್ ಮಟ್ಟದಲ್ಲಿ ಎಷ್ಟು ಜನ ಅಂಗವಿಕಲರು ಎಂಬುದನ್ನು ಮೊದಲೇ ಗುರುತಿಸಿರಬೇಕು ಎಂದು ಹೇಳಿದರು.

ಎಲ್ಲ ಮತಗಟ್ಟೆಗಳಲ್ಲಿ ಚುನಾವಣಾ ಆಯೋಗ ಹೊರಡಿಸಿರುವ 6 ಮೂಲಸೌಲಭ್ಯಗಳಾದ ನೀರು, ರಸ್ತೆ, ವಿದ್ಯುತ್, ಸೂಚನಾಫಲಕ, ಕಟ್ಟಡ ವ್ಯವಸ್ಥೆ ಮತ್ತು ಭದ್ರತೆ ವ್ಯವಸ್ಥಿತವಾಗಿ ಹಾಗೂ ಅನುಕೂಲಕರವಾಗಿರುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅಂತಹ ಸೌಲಭ್ಯಗಳಿಲ್ಲದೇ ಇರುವಂತಹ ಮತಗಟ್ಟೆಗಳ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಿ ಎಂದರು.

ಉಪ ವಿಭಾಗಾಧಿಕಾರಿ ಎನ್.ಸಿದ್ದೇಶ್ವರ, ತಹಶೀಲ್ದಾರ್ ಸಂತೋಷ್‌ ಕುಮಾರ್, ಚುನಾವಣಾ ತಹಶೀಲ್ದಾರ್ ಎಸ್.ಎ.ಪ್ರಸಾದ್ ಮಾತನಾಡಿದರು. ಚುನಾವಣೆ ಶಿರಸ್ತೇದಾರ್ ರಾಜೇಶ್ ಕುಮಾರ್, ಕಂದಾಯ ಇಲಾಖೆಯ ಉಪ ತಹಶೀಲ್ದಾರರು, ಗ್ರಾಮ ಲೆಕ್ಕಾಧಿಕಾರಿಗಳು, ಬೂತ್ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry