ದಾವಣಗೆರೆ ದಕ್ಷಿಣ ಕ್ಷೇತ್ರ: ಹ್ಯಾಟ್ರಿಕ್ ಹೊಡಿತಾರಾ ಶಾಮನೂರು?

7
ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್‌ ಎಸ್‌ಎಸ್‌ಗೆ ಸಿಗುತ್ತಾ? ಕುಟುಂಬದ ಸದಸ್ಯರಿಗೆ ಕೊಡಿಸುತ್ತಾರಾ?

ದಾವಣಗೆರೆ ದಕ್ಷಿಣ ಕ್ಷೇತ್ರ: ಹ್ಯಾಟ್ರಿಕ್ ಹೊಡಿತಾರಾ ಶಾಮನೂರು?

Published:
Updated:
ದಾವಣಗೆರೆ ದಕ್ಷಿಣ ಕ್ಷೇತ್ರ: ಹ್ಯಾಟ್ರಿಕ್ ಹೊಡಿತಾರಾ ಶಾಮನೂರು?

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ ಹ್ಯಾಟ್ರಿಕ್‌ ಟಿಕೆಟ್‌ ಗಿಟ್ಟಿಸುತ್ತೀರಾ? ಅಥವಾ ಈ ಬಾರಿ ಟಿಕೆಟ್‌ ವಂಚಿತರಾಗುತ್ತಾರಾ? ಇಲ್ಲಾ ಕುಟುಂಬದ ಸದಸ್ಯರೊಬ್ಬರಿಗೆ ಸ್ಥಾನ ಬಿಟ್ಟುಕೊಡುತ್ತಾರಾ? ಈ ರೀತಿಯ ಚರ್ಚೆಗಳು ಕ್ಷೇತ್ರದಲ್ಲಿ ಈಗಾಗಲೇ ಬಿರುಸುಗೊಂಡಿವೆ.

ಕ್ಷೇತ್ರ ಪುನರ್‌ವಿಂಗಡಣೆಯಿಂದ ದಾವಣಗೆರೆ ವಿಧಾನಸಭಾ ಕ್ಷೇತ್ರ 2008ರಲ್ಲಿ ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ ಎಂಬ ಎರಡು ಕ್ಷೇತ್ರಗಳಾಗಿ ವಿಭಜನೆಗೊಂಡವು. ದಾವಣಗೆರೆ ದಕ್ಷಿಣ ಕ್ಷೇತ್ರ ಆದಾಗಿನಿಂದ ಶಾಮನೂರು ಶಿವಶಂಕರಪ್ಪ ಅವರೇ ಟಿಕೆಟ್‌ ಪಡೆದುಕೊಳ್ಳುತ್ತಾ ಬಂದಿದ್ದಾರೆ. 2008, 2013 ಎರಡೂ ಚುನಾವಣೆಗಳಲ್ಲಿ ಅವರೇ ಜಯಶಾಲಿಯಾಗಿದ್ದಾರೆ. ಆದರೆ, ಈ ಬಾರಿ ಹಲವು ಕಾರಣಗಳಿಂದಾಗಿ ಅವರಿಗೇ ಟಿಕೆಟ್‌ ಸಿಗುತ್ತದೆ ಎಂಬ ಬಗ್ಗೆ ಖಾತ್ರಿ ಇಲ್ಲ ಎಂದು ಅನುಮಾನ ವ್ಯಕ್ತಪಡಿಸುತ್ತಾರೆ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು.

ಲಿಂಗಾಯತ ಸ್ವತಂತ್ರ ಧರ್ಮ ಕುರಿತ ಸರ್ಕಾರದ ನಿಲುವಿಗೆ ಶಾಮನೂರು ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಈ ಸಂಬಂಧ ವರದಿ ನೀಡಲು ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗ ರಚಿಸಿದ ತಜ್ಞರ ಸಮಿತಿಯನ್ನೂ ಅವರು ವಿರೋಧಿಸಿದ್ದಾರೆ. ಈ ಕಾರಣಗಳ ಜತೆಗೆ ವಯಸ್ಸಿನ ಅಂಶವೂ ಸೇರಿಕೊಂಡು ಟಿಕೆಟ್‌ ತಪ್ಪುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧನಾ ಸಂಭ್ರಮ ಕಾರ್ಯಕ್ರಮಕ್ಕೆ ಜಿಲ್ಲೆಗೆ ಬಂದು, ಶಾಮನೂರು ಮನೆಯಲ್ಲೇ ಆತಿಥ್ಯ ಸ್ವೀಕರಿಸಿದರೂ ಅವರಿಗೇ ಟಿಕೆಟ್‌ ನೀಡುವುದಾಗಿ ಎಲ್ಲಿಯೂ ಸ್ಪಷ್ಟವಾಗಿ ಹೇಳಲಿಲ್ಲ. ಈ ಹಿಂದೆಯೇ ಅವರನ್ನು ಸಚಿವ ಸ್ಥಾನದಿಂದ ಮುಕ್ತಗೊಳಿಸಿದಾಗಲೇ ಮುಂದೆ ಟಿಕೆಟ್‌ ಸಿಗುವುದು ಕಷ್ಟ ಎಂಬ ಮಾತುಗಳು ಕೇಳಿ ಬಂದಿದ್ದವು.

ಒಂದು ವೇಳೆ ಶಾಮನೂರಿಗೆ ಟಿಕೆಟ್‌ ಕೈ ತಪ್ಪಿದರೆ ದಾವಣಗೆರೆ ದಕ್ಷಿಣದಿಂದ ಮತ್ಯಾರಿಗೆ ಎಂಬ ಪ್ರಶ್ನೆ ಸಹಜವಾಗಿ ಎದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ ಅವರ ಪತ್ನಿ, ದಂತ ವೈದ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಹೆಸರು ಬಲವಾಗಿ ಕೇಳಿಬಂದಿದೆ.

ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಸಚಿವರ ಬದಲಿಗೆ ಅವರು ಭಾಗವಹಿಸುತ್ತಿದ್ದಾರೆ. ಅಷ್ಟೇ ಅಲ್ಲ, ಎಸ್‌.ಎಸ್‌.ಹೈಟೆಕ್‌ ಆಸ್ಪತ್ರೆ ಹಾಗೂ ಅವರದೇ ಟ್ರಸ್ಟ್‌ ನೇತೃತ್ವದಲ್ಲಿ ನಗರದ ಆಸುಪಾಸಿನ ಪ್ರದೇಶಗಳಲ್ಲಿ ಶಿಬಿರ ಆಯೋಜಿಸುವುದರಲ್ಲಿ ಸಕ್ರಿಯರಾಗಿದ್ದಾರೆ. ಧಾರ್ಮಿಕ ಕಾರ್ಯ

ಕ್ರಮಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ.

ರಂಭಾಪುರಿ ಸ್ವಾಮೀಜಿ ಅವರೇ ಒಂದು ಕಾರ್ಯಕ್ರಮದಲ್ಲಿ ಪ್ರಭಾ ಅವರು ರಾಜಕಾರಣಕ್ಕೆ ಬರಬೇಕು ಎಂದು ಹೇಳಿದ್ದಕ್ಕೆ, ಅದೇ ವೇದಿಕೆಯಲ್ಲಿದ್ದ ಪ್ರಭಾ ಅವರು ಇದನ್ನು ನಿರಾಕರಿಸಿರಲಿಲ್ಲ. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಶಾಮನೂರು, ‘ಪ್ರಭಾ ರಾಜಕೀಯ ಪ್ರವೇಶ ಸದ್ಯಕ್ಕಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಮುಂದೆ ಬರಬಹುದು ಎಂಬ ವಿಶ್ಲೇಷಣೆಗೆ ಈ ಮಾತು ಒತ್ತಾಸೆಯಾಗಿದೆ. ಈ ಮಧ್ಯೆ ಶಾಮನೂರು ಅಥವಾ ಅವರ ಕುಟುಂಬಕ್ಕೆ ಟಿಕೆಟ್‌ ಕೈ ತಪ್ಪಿದರೆ ತಮಗೆ ಸಿಗಬಹುದೆಂಬ ದೂರದ ಆಸೆ ಕಾಂಗ್ರೆಸ್‌ನ ಕೆಲವು ಮುಸ್ಲಿಂ ಮುಖಂಡರಿಗಿದೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 2008ರಲ್ಲಿ 10 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, 2013ರಲ್ಲಿ ಈ ಸಂಖ್ಯೆ 15ಕ್ಕೆ ಏರಿತು. ಅಲ್ಲದೇ, ಈ ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಡೆದ ಶೇಕಡವಾರು ಮತಗಳ ಪ್ರಮಾಣವೂ ಏರಿಕೆಯಾಗಿದೆ ಎಂಬ ಅಂಕಿಅಂಶಗಳನ್ನು ಹಿರಿಯ ಪರ್ತಕರ್ತ ನಜೀರ್ ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.

13 ಚುನಾವಣೆಗಳು

ಕ್ಷೇತ್ರ ಪುನರ್‌ ವಿಂಗಡಣೆಯಾದಾಗ ದಾವಣಗೆರೆ ವಿಧಾನಸಭಾ ಕ್ಷೇತ್ರ ದಕ್ಷಿಣ, ಉತ್ತರ ಎಂದು ಎರಡು ಕ್ಷೇತ್ರಗಳಾಗಿ ಮಾರ್ಪಟ್ಟವು. ಇದಕ್ಕೂ ಮೊದಲು ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ 1952ರಿಂದ 2004ರವರೆಗೆ ಒಟ್ಟು 13 ಚುನಾವಣೆಗಳು ನಡೆದಿವೆ.

ಇದರಲ್ಲಿ 9 ಬಾರಿ ಕಾಂಗ್ರೆಸ್, ಸಿಪಿಐ 3 ಸಲ ಹಾಗೂ ಪ್ರಜಾ ಸೋಷಲಿಸ್ಟ್‌ ಪಕ್ಷ (ಪಿಎಸ್‌ಪಿ) 1 ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿವೆ.

‘ಶಾಮನೂರುಗೆ ಟಿಕೆಟ್‌ ಕೊಡದಿದ್ದರೆ ಪಕ್ಷಕ್ಕೆ ನಷ್ಟ’

ಶಾಮನೂರು ಅವರಿಗೇ ಟಿಕೆಟ್‌ ನೀಡುವುದರಿಂದ ಜಿಲ್ಲೆಯಲ್ಲಿ ಅಷ್ಟೇ ಅಲ್ಲ ವೀರಶೈವ ಧರ್ಮ ಪ್ರಾಬಲ್ಯದ ಹಲವು ಜಿಲ್ಲೆಗಳಲ್ಲೂ ಕಾಂಗ್ರೆಸ್‌ ಗೆಲ್ಲಲು ಸಾಧ್ಯವಾಗಲಿದೆ ಎಂಬ ಮಾತನ್ನು ಸಿದ್ದರಾಮಯ್ಯ ಅವರ ಗಮನಕ್ಕೆ ಕೆಲವು ಕಾಂಗ್ರೆಸ್‌ ಮುಖಂಡರು ತಂದಿದ್ದಾರೆ. ಇಂತಹ ಪ್ರಬಲ ನಾಯಕರಿಗೆ ಟಿಕೆಟ್‌ ನೀಡದಿದ್ದರೆ ಕಾಂಗ್ರೆಸ್ ಕೆಲವು ಸ್ಥಾನಗಳನ್ನು ಕಳೆದುಕೊಳ್ಳುವುದು ನಿಶ್ಚಿತ ಎಂದು ಮುಖಂಡರು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

****

ಚುನಾವಣೆ ವರ್ಷ      ಅಭ್ಯರ್ಥಿ                              ಪಡೆದ ಮತ      ಶೇ

2008             ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್‌)  41,675      41.50

                     ಯಶವಂತರಾವ್‌ ಜಾಧವ್ (ಬಿಜೆಪಿ)       35,317

2013              ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್‌)  66,320      55.05

                      ಸೈಯದ್‌ ಸೈಫುಲ್ಲಾ          (ಜೆಡಿಎಸ್‌)   26,162   

                      ಬಿ.ಲೋಕೇಶ್                (ಬಿಜೆಪಿ)       21,247

                      ಬಿ.ಎಂ.ಸತೀಶ್              (ಕೆಜೆಪಿ)         3,200

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry