ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂ ದುರ್ಬಳಕೆ ಶಂಕೆ: ಜಿ.ಪರಮೇಶ್ವರ

Last Updated 8 ಫೆಬ್ರುವರಿ 2018, 8:58 IST
ಅಕ್ಷರ ಗಾತ್ರ

ಕಲಬುರ್ಗಿ: ನಾನು ಹೇಳಿದಂತೆ ಕೆಲಸ ಮಾಡಿ, ಚುನಾವಣೆಯಲ್ಲಿ ಗೆಲ್ಲಿಸಿ ಕೊಡುವುದು ನನ್ನ ಕೆಲಸ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿಕೆ ಅನುಮಾನಗಳನ್ನು ಹುಟ್ಟು ಹಾಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇವಿಎಂ ಗಳನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆ ಗೆಲ್ಲುವ ಪಿತೂರಿಯನ್ನು ಬಿಜೆಪಿ ನಡೆಸಿದೆ. ಬಿಜೆಪಿ ಮುಖಂಡರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಬರೀ ಚುನಾವಣೆಯಲ್ಲಿ ಗೆಲುವು ಸಾಧಿಸುವ ಬಗ್ಗೆಯಷ್ಟೇ ಮಾತನಾಡುತ್ತಿದ್ದಾರೆ. ತಾನೇ ನಿಂತು ಚುನಾವಣೆ ಗೆಲ್ಲಿಸಿ ಕೊಡುವುದಾಗಿ ಹೇಳುತ್ತಿರುವುದು ಇವಿಎಂ ಯಂತ್ರಗಳ ದುರ್ಬಳಕೆಯ ಶಂಕೆ ವ್ಯಕ್ತವಾಗುತ್ತಿದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಇವಿಎಂ ಬಳಕೆ ಮಾಡದಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಬಿಜೆಪಿ ನಾಯಕರಿಗೆ ಮುಂದಿನ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭೀತಿ ಎದುರಾಗಿದೆ. ಹೀಗಾಗಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪದೇಪದೇ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಬಂದಾಗಲೆಲ್ಲಾ ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎಂಬ ಕಾರಣಕ್ಕಾಗಿ ಅಮಿತ್ ಷಾ ಹೀಗೆ ಮಾಡುತ್ತಿದ್ದಾರೆ. ಅಮಿತ್ ಷಾ ಮತ್ತು ಪ್ರಧಾನಿ ಮೋದಿ ಏನೇ ತಂತ್ರ ಮಾಡಿದರೂ ರಾಜ್ಯದಲ್ಲಿ ಬಿಜೆಪಿ ಗೆಲುವು ಕಷ್ಟ. ರಾಜ್ಯದಲ್ಲಿ ಅವರ ಆಟ ನಡೆಯುವುದಿಲ್ಲ ಎಂದರು.

ಬಿಜೆಪಿಯಿಂದ ಕೋಮುವಾದ ಸೃಷ್ಟಿ
ಮುವಾದ ಟ್ರಂಪ್ ಕಾಡ್೯ ಇಟ್ಟುಕೊಂಡು ಬಿಜೆಪಿ ಚುನಾವಣೆಗೆ ಮುಂದಾಗಿದೆ. ಬಿಜೆಪಿಯಿಂದ ರಾಜ್ಯದಲ್ಲಿ ಕೋಮುವಾದ ಹೆಚ್ಚಾಗುತ್ತಿದೆ. ಮಂಗಳೂರು ಗಲಭೆ ವಿಚಾರದಲ್ಲಿ ಬಿಜೆಪಿ ಕೋಮುವಾದ ಸೃಷ್ಟಿಸುತ್ತಿದೆ ಎಂದು ಜಿ.ಪರಮೇಶ್ವರ ಹೇಳಿದರು.

ಗೋವಾ ಮುಖ್ಯಮಂತ್ರಿ ಪತ್ರ ಬರೆಯಲಿ
ಕರ್ನಾಟಕಕ್ಕೆ ಕುಡಿಯಲು ನೀರು ಕೊಡುವುದಾಗಿ ಗೋವಾ ಮುಖ್ಯಮಂತ್ರಿ ಪತ್ರ ಬರೆಯಲಿ. ಈಗಲೇ ನಾವು ಗೋವಾ ಕಾಂಗ್ರೆಸ್ ಮುಖಂಡರನ್ನು ಒಪ್ಪಿಸಲು ಸಿದ್ಧ. ಬಿಜೆಪಿಯವರು ದ್ವಂದ್ವ ನಿಲುವನ್ನು ಮೊದಲು ಕೈಬಿಡಲಿ. ಒಮ್ಮೆ ನೀರು ಬಿಡುವುದಾಗಿ ಮತ್ತೊಮ್ಮೆ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಹೇಳುವ ಗೋವಾ ಸಿಎಂ ಮನೋಹರ ಪರಿಕ್ಕರ್ ವರ್ತನೆ ಬಿಜೆಪಿಯ ದ್ವಂದ್ವ ನಿಲುವಿಗೆ ಸಾಕ್ಷಿಯಾಗಿದೆ ಎಂದರು.

ರಾಜ್ಯದ ಹಿತದೃಷ್ಟಿಯಿಂದ ನಾವು ಗೋವಾದ ಕಾಂಗ್ರೆಸ್ ಮುಖಂಡರನ್ನು ಒಪ್ಪಿಸಲು ಸಿದ್ಧ. ಮೊದಲು ನೀರು ಬಿಡುವುದಾಗಿ ಗೋವಾ ಸಿಎಂ ಕರ್ನಾಟಕದ ಮುಖ್ಯಮಂತ್ರಿಗೆ ಪತ್ರ ಬರೆಯಲಿ ಎಂದು ಹೇಳಿದರು.

ಮುಂದಿನ ಮುಖ್ಯಮಂತ್ರಿ ನಾನೆ: ಸಿದ್ದರಾಮಯ್ಯ ಹೇಳಿಕೊಳ್ಳುವುದರಲ್ಲಿ ತಪ್ಪೇನಿಲ್ಲ

ಮುಂದಿನ ಮುಖ್ಯಮಂತ್ರಿ ನಾನೆ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಡಾ.ಜಿ.ಪರಮೇಶ್ವರ ಹೇಳಿದರು.

ಪ್ರಸ್ತುತ ಅವರೇ ಸಿಎಂ‌ ಇದ್ದಾರೆ, ಹೀಗಾಗಿ ಮುಂದಿನ ಸಿಎಂ ತಾವೇ ಅಂತಾ ಹೇಳಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೂ ಸಿಎಲ್‌ಪಿ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಆಗುತ್ತದೆ ಎಂದರು.

ಸರ್ಕಾರದ ಸಾಧನೆಗಳ ಬಗ್ಗೆ ನಮ್ಮ ಬಳಿ ಡಾಟಾ ಇದೆ. ಮನ್‌ಕಿ ಬಾತ್, ಕೈ ಮೇಲೆತ್ತಿ ಅಚ್ವೇದಿನ್ ಬರುತ್ತೆ ಅಂತಾ ಹೇಳ್ತಾರೆ. ಆದರೆ, ಬಿಜೆಪಿಯ ಆಟ ಈ ಚುನಾವಣೆಯಲ್ಲಿ ನಡೆಯಲ್ಲ. ಮುಂದೆ ಕಾಂಗ್ರೆಸ್‌ನಿಂದಲೇ ಅಚ್ಚೆ ದಿನ್ ಬರುತ್ತವೆ ಎಂದರು.

ಮಾಜಿ ಸಚಿವ ವೈಜನಾಥ ಪಾಟೀಲ್ ಅಸಮಾಧನ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಹಿರಿಯರು, ಮಗನಿಗೆ ಟಿಕೆಟ್ ಕೇಳಿದ್ದರು, ಕೊಡಲಿಲ್ಲ. ಅದಕ್ಕೆ ನನ್ನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಕೇಳಿದ ತಕ್ಷಣ ಕೊಡೋಕೆ ಆಗಲ್ಲ. ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT