ವಿವಿಧ ಬೇಡಿಕೆ: ಸಂಘಟನೆಗಳ ಪ್ರತಿಭಟನೆ

7
ಎನ್‌ಎಂಸಿ ಸ್ಥಾಪನೆ, ಕುಡಿಯುವ ನೀರು ಪೂರೈಕೆಗೆ ಒತ್ತಾಯ

ವಿವಿಧ ಬೇಡಿಕೆ: ಸಂಘಟನೆಗಳ ಪ್ರತಿಭಟನೆ

Published:
Updated:
ವಿವಿಧ ಬೇಡಿಕೆ: ಸಂಘಟನೆಗಳ ಪ್ರತಿಭಟನೆ

ಕಲಬುರ್ಗಿ: ಕೇಂದ್ರ ಸರ್ಕಾರ ಕೂಡಲೇ ಉದ್ದೇಶಿತ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಭಾರತೀಯ ಆಯುಷ್ ಫೆಡರೇಷನ್ ಕರ್ನಾಟಕ ಸಮಿತಿ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಘೋಷಣೆ ಕೂಗಿದರು.

ಎನ್‌ಎಂಸಿ ಸ್ಥಾಪನೆಯಿಂದ ದೇಶದಾದ್ಯಂತ ಇರುವ ಎಲ್ಲಾ ಪದವೀಧರ ಹಾಗೂ ನೋಂದಾಯಿತ ಆಯುಷ್ ವೈದ್ಯರಿಗೆ ಅನುಕೂಲವಾಗುತ್ತದೆ. ಅಲೋಪಥಿ, ಆಯುರ್ವೇದ, ಹೋಮಿಯೊಪಥಿ ಮತ್ತು ಯುನಾನಿ ವೈದ್ಯ ಪದ್ಧತಿಗಳನ್ನು ಒಂದೇ ವ್ಯವಸ್ಥೆಯಡಿ ತರುತ್ತಿರುವುದು ಸ್ವಾಗತಾರ್ಹ. ಇದರಿಂದ ಎಲ್ಲ ರೋಗಿಗಳಿಗೂ ಸಕಾಲದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಬಹುದಾಗಿದೆ. ದೇಶದ 12 ರಾಜ್ಯಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದ್ದು, ರಾಜ್ಯದಲ್ಲೂ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷ ಡಾ. ಎನ್.ಎ.ಮಗದುಮ್, ಕಾರ್ಯದರ್ಶಿ ಡಾ. ಮಹಾವೀರ ಹಾವೇರಿ, ಸಂಘಟನಾ ಕಾರ್ಯದರ್ಶಿ ಡಾ. ಎಸ್.ಎಸ್.ಹುದ್ದಾರ, ಖಜಾಂಚಿ ಡಾ. ಆನಂದ ಎಸ್.ಕಿರಿಶಾಳ ಇದ್ದರು.

ನೀರು ಪೂರೈಕೆಗೆ ಒತ್ತಾಯ: ಹನುಮಾನ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಅಲ್ಲಿನ ನಿವಾಸಿಗಳು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ–ಸಿ) ನೇತೃತ್ವದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಕಚೇರಿ ಎದುರು ಬುಧವಾರ ಪ್ರತಿಭಟನೆ ಮಾಡಿದರು.

ಎರಡು ವರ್ಷಗಳಿಂದ ಕುಡಿಯುವ ನೀರಿಗೆ ಪರದಾಡುತ್ತಿದ್ದೇವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಚರಂಡಿ ನೀರು ಮನೆ ಒಳಗೆ ಹರಿದು ಬರುತ್ತಿದೆ. ಆದ್ದರಿಂದ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎಸ್‌ಯುಸಿಐನ ಎಸ್.ಎಂ.ಶರ್ಮಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ವಿದ್ಯಾರ್ಥಿ ನಿಲಯ; ಕಟ್ಟಡ ನಿರ್ಮಾಣಕ್ಕೆ ಒತ್ತಾಯ: ಇಲ್ಲಿನ ಸೇಡಂ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ಕಟ್ಟಡವು ಬೀಳುವ ಹಂತದಲ್ಲಿದ್ದು, ಅದನ್ನು ಒಡೆದು ಹಾಕಿ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಒತ್ತಾಯಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ಮಾಡಿದರು.

ಸಮಾಜ ಕಲ್ಯಾಣ ಇಲಾಖೆಯ ಅನೇಕ ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಹೆಚ್ಚಿನ ಸ್ಥಳಾವಕಾಶ ಸಿಗದ ಕಾರಣ ವಿದ್ಯಾರ್ಥಿಗಳು ತೊಂದರೆ ಪಡುವಂತಾಗಿದೆ. ಆದ್ದರಿಂದ ಕೂಡಲೇ ಹೊಸ ಕಟ್ಟಡ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಸ್ಥಾಪಕ ಅಧ್ಯಕ್ಷ ಸಚಿನ್ ಫರಹತಾಬಾದ್, ಕಾಶಿನಾಥ ಮಾಳಗೆ, ಅಣವೀರ ಪಾಟೀಲ, ಸುರೇಶ ಹುನಗುಂಡಿ, ಸಂದೇಶ ಪವಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry