ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರೋಪಾದಿಯಲ್ಲಿ ಪೂರ್ಣಗೊಳಿಸಿ

ಶ್ರವಣಬೆಳಗೊಳ: ಮಹಾಮಸ್ತಕಾಭಿಷೇಕ ಮಹೋತ್ಸವ ಕಾಮಗಾರಿ– ನವೀನ್‌ಸಿಂಗ್‌ ಸೂಚನೆ
Last Updated 11 ಜನವರಿ 2018, 8:51 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬಾಕಿ ಉಳಿದಿರುವ ಅಭಿವೃದ್ಧಿ ಕೆಲಸಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‍ರಾಜ್ ಸಿಂಗ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಗಣ್ಯಾತಿಗಣ್ಯರ ಅತಿಥಿಗೃಹದಲ್ಲಿ ಬುಧವಾರ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಎಸ್‌ಡಿಜೆಎಂಎಂಸಿ ಟ್ರಸ್ಟ್‍ನ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈವರೆಗೆ ಆದಂತಹ ಅಭಿವೃದ್ದಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಪಡೆದ ಅವರು, ಬಾಕಿ ಇರುವ ಕಾಮಗಾರಿಗಳನ್ನು ಯಾವುದೇ ಲೋಪದೋಷವಿಲ್ಲದೆ ತ್ವರಿತವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.

ಎಲ್ಲಾ ತಾತ್ಕಾಲಿಕ ನಗರಗಳಲ್ಲಿ ನಿರಂತರ ವಿದ್ಯುತ್ ವ್ಯವಸ್ಥೆಗೆ ಕ್ರಮವಹಿಸಬೇಕು. ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾದ ಸಂದರ್ಭದಲ್ಲಿ ಜನರೇಟರ್ ಮೂಲಕ ವಿದ್ಯುತ್ ಸರಬರಾಜಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಭಿವೃದ್ಧಿ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ನೀಡಲು ತಿಳಿಸಿದ ಅವರು, ಬರುವಂತಹ ಭಕ್ತರು, ಯಾತ್ರಾರ್ಥಿಗಳಿಗೆ ಊಟ ಉಪಚಾರ ಕೊರತೆ ಉಂಟಾಗದಂತೆ ಗಮನಹರಿಸಲು ಮಠದ ಪ್ರತಿನಿಧಿಗಳಿಗೆ ತಿಳಿಸಲಾಯಿತು. ಮಹೋತ್ಸವದ ಹಿನ್ನಲೆಯಲ್ಲಿ ಜನದಟ್ಟಣೆ ಇರುವ ಸ್ಥಳಗಳನ್ನು ಗುರುತಿಸಿ ಪ್ರತಿ 200 ಮೀಟರ್‍ಗೆ ತಾತ್ಕಾಲಿಕ ಶೌಚಾಲಯ ನಿರ್ಮಿಸುವಂತೆ ತಿಳಿಸಿದರು.

ವಸ್ತು ಪ್ರದರ್ಶನದಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸೇರಿದಂತೆ ಒಟ್ಟು 500 ವೈವಿಧ್ಯಮಯ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಈಗಾಗಲೇ 300 ಮಳಿಗೆಗಳಿಗೆ ಆನ್ ಲೈನ್ ಮೂಲಕ ಅರ್ಜಿಗಳು ಸ್ವೀಕೃತವಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ತಾತ್ಕಾಲಿಕ ನಗರಗಳಲ್ಲಿ ದೂಳು ನಿಯಂತ್ರಿಸಲು 2 ಟ್ಯಾಂಕರ್ ಮೂಲಕ ನೀರು ಸಿಂಪರಣೆ ಮಾಡಲಾಗುವುದು ಎಂದು ಮಹಾಮಸ್ತಕಾಭಿಷೇಕ ವಿಶೇಷ ಅಧಿಕಾರಿ ವರಪ್ರಸಾದ್ ರೆಡ್ಡಿ ತಿಳಿಸಿದರು.

ಸಾರಿಗೆ, ಕಲಾತಂಡ ನಿಯೋಜನೆ, ಪೊಲೀಸ್ ಬಂದೋಬಸ್ತ್, ಪ್ರಚಾರ, ಕುಡಿಯುವ ನೀರು, ವೈದ್ಯಕೀಯ ಸೇವೆ ಸೇರಿದಂತೆ ಇತರೆ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ತ್ಯಾಗಿ ನಗರವನ್ನು ಮಠಕ್ಕೆ ಹಸ್ತಾಂತರಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಜಾನಕಿ, ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್‍ವಾಡ್, ಮಹಮಸ್ತಾಭಿಷೇಕದ ಕಾರ್ಯದರ್ಶಿ ಜಿತೇಂದ್ರಕುಮಾರ್, ವಿನೋದ್ ಭಾರತಿವಾಲ ಹಾಜರಿದ್ದರು.

ತ್ಯಾಗಿ ನಗರ, ಪಂಚಕಲ್ಯಾಣಿ ನಗರ, ಜನಪ್ರತಿನಿಧಿ ನಗರ ಸೇರಿದಂತೆ ವಿವಿಧ ನಗರಗಳಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಕುರಿತು ನವೀನ್ ರಾಜ್‌ ಸಿಂಗ್, ಜಿಲ್ಲಾಧಿಕಾರಿ ಮತ್ತು ವರಪ್ರಸಾದ್ ರೆಡ್ಡಿ ಅವರು ತಾತ್ಕಾಲಿಕ ನಗರಗಳನ್ನು ವೀಕ್ಷಿಸಿದರು.

*
ಲಭ್ಯವಿರುವ ಅನುದಾನದಲ್ಲಿ ಕೆಲಸಗಳನ್ನು ಉತ್ತಮ ರೀತಿಯಲ್ಲಿ ಅಧಿಕಾರಿಗಳು ಪೂರ್ಣಗೊಳಿಸಬೇಕು.
–ನವೀನ್‍ರಾಜ್ ಸಿಂಗ್,
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT