ಅಧಿಕಾರಿಗಳಿಂದ ಜನಪ್ರತಿನಿಧಿಗಳಿಗೆ ಅಗೌರವ

7
ಅರಕಲಗೂಡು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ

ಅಧಿಕಾರಿಗಳಿಂದ ಜನಪ್ರತಿನಿಧಿಗಳಿಗೆ ಅಗೌರವ

Published:
Updated:
ಅಧಿಕಾರಿಗಳಿಂದ ಜನಪ್ರತಿನಿಧಿಗಳಿಗೆ ಅಗೌರವ

ಅರಕಲಗೂಡು: ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಿಗೆ ಬಿಡುಗಡೆಯಾದ ಅನುದಾನ ಹಾಗೂ ಖರ್ಚಿನ ವಿವರವನ್ನು ದಾಖಲೆಗಳ ಸಹಿತ ನೀಡದೆ ತಾಲ್ಲೂಕು ಆರೋಗ್ಯಾಧಿಕಾರಿ ಸ್ವಾಮಿಗೌಡ ಜನಪ್ರತಿನಿಧಿಗಳಿಗೆ ಅಗೌರವ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಸದಸ್ಯರು ಸಭೆ ಬಹಿಷ್ಕರಿಸಲು ಮುಂದಾದ ಪ್ರಸಂಗ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಅಧ್ಯಕ್ಷೆ ಎಚ್‌.ಆರ್‌.ವೀಣಾ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾದಾಗ ಸದಸ್ಯ ವೀರಾಜ್‌ ಮಾತನಾಡಿ, ತಾಲ್ಲೂಕಿನ ಆರೋಗ್ಯ ಕೇಂದ್ರಗಳಿಗೆ ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಅನುದಾನ ಹಾಗೂ ಇದರ ವೆಚ್ಚ ಕುರಿತು ದಾಖಲೆಗಳ ಸಹಿತ ಮಾಹಿತಿ ನೀಡುವಂತೆ ಹಲವಾರು ಸಭೆಗಳಲ್ಲಿ ಕೇಳುತ್ತಿದ್ದರೂ ಸ್ವಾಮಿಗೌಡ ನೀಡಿಲ್ಲ ಎಂದು ಆಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿಗೌಡ ಅವರು, ‘ನಿರ್ದಿಷ್ಟ ಕೇಂದ್ರದ ಮಾಹಿತಿ ಕೇಳಿದರೆ ಒದಗಿಸಲು ಸಾಧ್ಯ. ತಾಲ್ಲೂಕಿನ ಎಲ್ಲ ಕೆಂದ್ರಗಳ ಮಾಹಿತಿ ನೀಡಬೇಕು ಎಂದರೆ 80 ಸಾವಿರ ಪ್ರತಿಗಳಿದ್ದು, ಅವುಗಳನ್ನು ಜೆರಾಕ್ಸ್ ಪ್ರತಿ ಮಾಡಿಸಲು ಹಣ ಯಾರು ಕೊಡುತ್ತಾರೆ. ಹಣ ದುರುಪಯೋಗ ಆಗಿದ್ದರೆ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ’ ಎಂದು ಏರುಧ್ವನಿಯಲ್ಲಿ ವೇದಿಕೆ ಮುಂಭಾಗ ಬಂದು ಉತ್ತರಿಸಿದರು.

ಈ ಹಂತದಲ್ಲಿ ಉಪಾಧ್ಯಕ್ಷ ನಾಗರಾಜ್‌, ಜಿ.ಪಂ ಸದಸ್ಯ ರವಿ, ‘ಸಭೆಗೆ ಮಾಹಿತಿ ನೀಡಲು ನಿರಾಕರಿಸಿದ ಆರೋಗ್ಯಾಧಿಕಾರಿ ಹೇಳಿಕೆ ದಾಖಲಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ನಿರ್ಣಯ ಅಂಗೀಕರಿಸಬೇಕು’ ಎಂದು ಒತ್ತಾಯಿಸಿದರು.

ಮಾಹಿತಿ ಕೇಳಿದರೆ ಅಧಿಕಾರಿ ಏರುಧ್ವನಿಯಲ್ಲಿ ಉತ್ತರ ನೀಡುವ ಮೂಲಕ ಜನಪ್ರತಿನಿಧಿಗಳಿಗೆ ಅಗೌರವ ತೋರಿದ್ದಾರೆ. ಜನಪ್ರತಿನಿಧಿಗಳಿಗೆ ಗೌರವ ದೊರೆಯದಿದ್ದ ಮೇಲೆ ನಾವು ಸಭೆಯಲ್ಲಿ ಏಕೆ ಭಾಗವಹಿಸಬೇಕು ಎಂದು ಸದಸ್ಯ ವೀರಾಜ್‌ ಹಾಗೂ ಉಪಾಧ್ಯಕ್ಷ ನಾಗರಾಜ್‌ ಸಭೆ ಬಹಿಷ್ಕರಿಸಿ ಹೊರ ಹೋಗಲು ಮುಂದಾದರು. ಜಿ.ಪಂ ಸದಸರಾದ ರೇವಣ್ಣ, ರವಿ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಪುಟ್ಟರಾಜ್‌ ಅವರ ಮನವೊಲಿಸಿ ಸಭೆಗೆ ವಾಪಾಸ್‌ ಕರೆತಂದರು.

ಅಧ್ಯಕ್ಷೆ ವೀಣಾ ಮಂಜುನಾಥ್‌, ‘ಜನಪ್ರತಿನಿಧಿಗಳಿಗೆ ಗೌರವ ಕೊಡುವುದನ್ನು ಅಧಿಕಾರಿಗಳು ಕಲಿಯಬೇಕು. ಅಗತ್ಯ ಮಾಹಿತಿಯನ್ನು ಸದಸ್ಯರಿಗೆ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿ ಕೆಲಕಾಲ ಸಭೆಯನ್ನು ಮುಂದೂಡಿ ಹೊರನಡೆದರು.

ಬಳಿಕ ಮತ್ತೆ ಸೇರಿದ ಸಭೆಯಲ್ಲಿ ಉಪಾಧ್ಯಕ್ಷ ನಾಗರಾಜ್‌, ‘ಅಕ್ಷರ ದಾಸೋಹ ಊಟಕ್ಕಾಗಿ ತಾಲ್ಲೂಕಿನ ಎಲ್ಲ ಶಾಲೆಗಳಿಗೆ ಸರಬರಾಜು ಮಾಡಿರುವ ತೊಗರಿ ಬೇಳೆಯಲ್ಲಿ ಹುಳು ಬಿದ್ದಿದೆ ಎಂದು ಬೇಳೆಯನ್ನು ಸಭೆಯಲ್ಲಿ ಪ್ರದರ್ಶಿಸಿದರು.

ಈ ಕುರಿತು ಮಾಹಿತಿ ಪಡೆಯಲು ಅಕ್ಷರ ದಾಸೋಹ ಅಧಿಕಾರಿ ಸಭೆಗೆ ಗೈರು ಹಾಜರಾಗಿ ಸಹಾಯಕರನ್ನು ಕಳುಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳಪೆ ಆಹಾರ ನೀಡಿ ಮಕ್ಕಳ ಆರೋಗ್ಯ ಹಾಳು ಮಾಡಲಾಗುತ್ತಿದೆ. ಈ ಕುರಿತು ಕ್ರಮ ಅಗತ್ಯ ಎಂದು ಸದಸ್ಯ ವೀರಾಜ್‌, ಜಿ.ಪಂ ಸದಸ್ಯ ರವಿ, ರೇವಣ್ಣ ಆಗ್ರಹಿಸಿದರು

‘ಕೆಟ್ಟಿರುವ ವಿದ್ಯುತ್ ಪರಿವರ್ತಕಗಳನ್ನು ಬದಲಿಸಿದೆ ದೀರ್ಘ ಕಾಲದವರೆಗೆ ಸತಾಯಿಸಿ ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಕುಡಿಯುವ ನೀರು ಪೂರೈಕೆಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ನೀಡದೇ ನಿರ್ಲಕ್ಷ್ಯಿಸಲಾಗುತ್ತಿದೆ’ ಎಂದು ಸದಸ್ಯರಾದ ನಿಂಗೇಗೌಡ, ಸೂರೇಗೌಡ, ಕೃಷ್ಣೇಗೌಡ, ಸರಿತಾ, ಜಿ.ಪಂ ಸದಸ್ಯ ರವಿ, ರೇವಣ್ಣ ಸೆಸ್ಕ್ ಎಂಜಿನಿಯರ್ ವಿರುದ್ದ ಹರಿಹಾಯ್ದರು.

ತೋಟಗಾರಿಕೆ ಇಲಾಖೆ ವತಿಯಿಂದ ದೊರೆಯುವ ಸವಲತ್ತುಗಳ ಕುರಿತು ರೈತರಿಗಾಗಲಿ, ಜನಪ್ರತಿನಿಧಿಗಳಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಫಲಾನುಭವಿಗಳ ಆಯ್ಕೆಯನ್ನು ತಾ.ಪಂ ಗಮನಕ್ಕೆ ತರದೆ ಬೇಕಾಬಿಟ್ಟಿ ಆಯ್ಕೆ ಮಾಡಲಾಗುತ್ತಿದೆ. ತೆಂಗು ಬೆಳೆ ಪರಿಹಾರ ವಿತರಣೆ ಕ್ರಮಬದ್ಧವಾಗಿ ನಡೆದಿಲ್ಲ. ಬೆಳೆ ಬೆಳೆಯದವರಿಗೂ ಪರಿಹಾರ ನೀಡಿ ಲೋಪ ಎಸಗಲಾಗಿದೆ ಎಂದು ರವಿ ದೂರಿದರು.

ಗ್ರಾ.ಪಂ ವ್ಯಾಪ್ತಿಯಲ್ಲಿ ವಾರ್ಡ್‌ ಸಭೆ, ಗ್ರಾಮ ಸಭೆಗಳನ್ನು ನಿಯಮಿತವಾಗಿ ನಡೆಸದೆ ಸ್ಥಳೀಯ ಜನಪ್ರನಿಧಿಗಳ ಗಮನಕ್ಕೆ ತರದೆ, ವಸತಿ ಸೌಲಭ್ಯ ಸೇರಿದಂತೆ ಸರ್ಕಾರದ ಸವಲತ್ತುಗಳನ್ನು ಅನರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿದೆ ಎಂದು ಸದಸ್ಯರಾದ ನಿಂಗೇಗೌಡ, ಕೃಷ್ಣೇಗೌಡ ದೂರಿದರು.

ಎಲ್ಲ 36 ಗ್ರಾ.ಪಂ ಪಿಡಿಒಗಳ ಸಭೆ ನಡೆಸಿ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷೆ ವೀಣಾ ಮಂಜುನಾಥ್ ಸಭೆಗೆ ತಿಳಿಸಿದರು.

ಜಿ.ಪಂ ಸದಸ್ಯೆ ರತ್ನಮ್ಮ ಲೋಕೇಶ್‌, ಕಾರ್ಯನಿರ್ವಾಹಕ ಅಧಿಕಾರಿ ಯಶವಂತ್‌ ಸಭೆಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry