ನಡೆಯದ ಸಭೆ: ಬಗೆಹರಿಯದ ಮಂಡ್ಯ ಡಿಸಿಸಿ ಗೊಂದಲ

7

ನಡೆಯದ ಸಭೆ: ಬಗೆಹರಿಯದ ಮಂಡ್ಯ ಡಿಸಿಸಿ ಗೊಂದಲ

Published:
Updated:

ಬೆಂಗಳೂರು: ಮಂಡ್ಯ ಜಿಲ್ಲಾ ಕಾಂಗ್ರೆಸ್‌ ಸಮಿತಿ (ಡಿಸಿಸಿ)ಯಲ್ಲಿ ಉಂಟಾಗಿರುವ ಗೊಂದಲ ಪರಿಹರಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಬುಧವಾರ ಕರೆದಿದ್ದ ಸಭೆಗೆ ಜಿಲ್ಲೆಯ ‍ಪ್ರಮುಖರು ಗೈರು ಹಾಜರಾಗಿದ್ದರಿಂದಾಗಿ ಸಭೆ ನಡೆಯಲಿಲ್ಲ.

ಮಂಡ್ಯ ಶಾಸಕ ಎಂ.ಎಚ್‌. ಅಂಬರೀಷ್ ಬಿಟ್ಟರೆ ಬೇರೆ ಪ್ರತಿನಿಧಿಗಳು ಸಭೆಗೆ ಬರಲಿಲ್ಲ. ಹೀಗಾಗಿ ಮಧ್ಯಾಹ್ನ 12ಗಂಟೆವರೆಗೂ ಕಾಯ್ದ ವೇಣುಗೋಪಾಲ್‌ ವಿಜಯಪುರಕ್ಕೆ ತೆರಳಿದರು ಎಂದು ಮೂಲಗಳು ತಿಳಿಸಿವೆ.

‘ಮಂಡ್ಯ ಡಿಸಿಸಿ ಅಧ್ಯಕ್ಷರಾಗಿ ಸಿ.ಡಿ. ಗಂಗಾಧರ ಅವರನ್ನು ನೇಮಕ ಮಾಡಿರುವುದಕ್ಕೆ ಶಾಸಕರಾದ ಅಂಬರೀಷ್‌ ಹಾಗೂ ಪಿ.ಎಂ. ನರೇಂದ್ರ ಸ್ವಾಮಿ ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಪಕ್ಷದ ಜಿಲ್ಲಾ ಘಟಕದಲ್ಲಿ ಗೊಂದಲ ಹುಟ್ಟುಹಾಕಿದೆ. ಗೊಂದಲ ಪರಿಹರಿಸುವ ಜವಾಬ್ದಾರಿಯನ್ನು ಎಐಸಿಸಿ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗದ ಉಸ್ತುವಾರಿ ವಿಷ್ಣುನಾಥನ್‌ಗೆ ವಹಿಸಲಾಗಿತ್ತು.

ಬೆಂಗಳೂರಿನಲ್ಲಿದ್ದ ವೇಣುಗೋಪಾಲ್‌ ಅವರು ಜಿಲ್ಲಾ ಪ್ರಮುಖರ ಸಭೆ ಕರೆದು ಸಮಸ್ಯೆ ಬಗೆಹರಿಸಲು ಮುಂದಾಗಿದ್ದರು. ಯಾರನ್ನೂ ಕೇಳದೇ ಗಂಗಾಧರ ನೇಮಕ ಮಾಡಿರುವುದರಿಂದ ಜಿಲ್ಲಾ ಪ್ರಮುಖರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಹೀಗಾಗಿ ಬಹುತೇಕರು ಸಭೆಗೆ ಬರಲಿಲ್ಲ’ ಎಂದು ಮೂಲಗಳು ಹೇಳಿವೆ.

ಸರ್ಕಾರದ ಸಾಧನಾ ಸಮಾವೇಶ ಮಂಡ್ಯದಲ್ಲಿ ಶುಕ್ರವಾರ ನಡೆಯಲಿದ್ದು, ಅದರ ಸಿದ್ಧತೆಯಲ್ಲಿ ತೊಡಗಿರುವುದರಿಂದ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ನರೇಂದ್ರಸ್ವಾಮಿ ತಿಳಿಸಿದ್ದರು ಎಂದೂ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry