ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರು ಹೆದ್ದಾರಿ ದರೋಡೆಕೋರರ ಬಂಧನ

Last Updated 11 ಜನವರಿ 2018, 9:37 IST
ಅಕ್ಷರ ಗಾತ್ರ

ಹುಣಸೂರು: ದರೋಡೆ ನಡೆಸಲು ಹೆದ್ದಾರಿಯಲ್ಲಿ ಹೊಂಚು ಹಾಕುತ್ತಿದ್ದ ಆರೋಪಿಗಳು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ಬುಧವಾರ ಸಿಕ್ಕಿಬಿದ್ದಿದ್ದಾರೆ.

ಬಂಧಿತರೆಲ್ಲರೂ ಪಿರಿಯಾ ಪಟ್ಟಣ ತಾಲ್ಲೂಕಿನವರು. ವಿರಾಜಪೇಟೆಯವನಾಗಿದ್ದು, ಪಿರಿಯಾ ಪಟ್ಟಣ ತಾಲ್ಲೂಕಿನ ಬುವನಹಳ್ಳಿಯಲ್ಲಿ ನೆಲೆಸಿರುವ ಕಾರು ಚಾಲಕ ರಮೇಶ್‌, ಹಳಿಯೂರಿನ ಸುನೀಲ್‌, ಗಿರಗೂರಿನ ಫೈರೋಜ್‌, ಕೊಪ್ಪದ ಅಮೀರ್‌ ಹಾಗೂ ಗುಡ್ಡೇನಹಳ್ಳಿಯ ಫ್ರಾನ್ಸಿಸ್‌ ಬಂಧಿತರು.

‘ತಾಲ್ಲೂಕಿನ ಚಿಲ್ಕುಂದ ಬಳಿಯ ಬೋರೆ ಹೊಸಹಳ್ಳಿ ಗೇಟ್‌ ಬಳಿ ಕಾರು ನಿಲ್ಲಿಸಿಕೊಂಡು ನಿಂತಿದ್ದರು. ಸ್ಥಳೀಯರು ಅನುಮಾನಗೊಂಡು ಮಾಹಿತಿ ನೀಡಿದರು. ಬಳಿಕ ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ ಸಿಪಿಐ ಪೂವಯ್ಯ ನೇತೃತ್ವದಲ್ಲಿ ಮೂರು ತಂಡ ರಚಿಸಿ ಬಂಧಿಸಲಾಯಿತು’ ಎಂದು ಗ್ರಾಮಾಂತರ ಪೊಲೀಸ್‌ ಠಾಣೆ ಪಿಎಸ್‌ಐ ಪುಟ್ಟಸ್ವಾಮಿ ತಿಳಿಸಿದರು.

ಪಿರಿಯಾಪಟ್ಟಣ ಮತ್ತು ಸುತ್ತಲಿನ ಹೊಲಗಳಲ್ಲಿ ತೇಗದ ಮರ ಕಳವು ಮಾಡಿ ರಾತ್ರಿ ಸಂಚರಿಸುವ ಲಾರಿ ಅಥವಾ ಟಿಪ್ಪರ್‌ಗಳಲ್ಲಿ ಮಡಿಕೇರಿ ಹಾಗೂ ಮೈಸೂರಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದರು. ಕಾರಿನಲ್ಲಿ ಕೈ ಗರಗಸ, 3 ಮಚ್ಚು, ₹ 5 ಲಕ್ಷ ಮೌಲ್ಯದ 9 ತೇಗದ ಮರದ ದಿಮ್ಮಿಗಳು, ₹ 35 ಸಾವಿರ ನಗದು ಕಂಡುಬಂದಿದೆ. 5 ಪ್ಯಾಕೇಟ್ ಕಾರದಪುಡಿ, ಮರಾಕಾಸ್ತ್ರಗಳೂ ಇದ್ದವು ಎಂದು ಅವರು ಮಾಹಿತಿ ನೀಡಿದರು.

ತಾಲ್ಲೂಕಿನ ತಟ್ಟೆಕೆರೆ, ಚಿಲ್ಕುಂದ, ಅತ್ತಿಕುಪ್ಪೆ ಗ್ರಾಮಗಳಲ್ಲಿ ತೇಗದ ಮರ ಕಳುವಾದ ದೂರುಗಳು ದಾಖಲಾಗಿದ್ದವು.

ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣೆ ಸಿಬ್ಬಂದಿಯಾದ ಬಸಪ್ಪ, ಲೋಕೇಶ್‌, ರಮೇಶ್, ನವೀನ್‌ಕುಮಾರ್‌, ಸಂತೋಷ್‌, ಮೋಹನ್ ಕುಮಾರ್‌, ದಿನೇಶ್‌, ರವಿ, ರಾಜರತ್ನಂ ಭಾಗವಹಿಸಿದ್ದರು.

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT