ಅಮಿತ್‌ ಷಾ ಒಬ್ಬ ಪುಂಗಿದಾಸ: ಸಿ.ಎಂ ಲೇವಡಿ

7

ಅಮಿತ್‌ ಷಾ ಒಬ್ಬ ಪುಂಗಿದಾಸ: ಸಿ.ಎಂ ಲೇವಡಿ

Published:
Updated:
ಅಮಿತ್‌ ಷಾ ಒಬ್ಬ ಪುಂಗಿದಾಸ: ಸಿ.ಎಂ ಲೇವಡಿ

ಕೊಳ್ಳೇಗಾಲ: ‘ಜೈಲಿನಲ್ಲಿದ್ದು ಬಂದ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಷಾ ಒಬ್ಬ ಪುಂಗಿದಾಸ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.

ನಗರದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ಸಾಧನಾ ಸಮಾವೇಶ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸವಲತ್ತುಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ ಮತಗಳ ಮಧ್ಯೆ ವಿಷಬೀಜ ಬಿತ್ತುತ್ತಿರುವ ಬಿಜೆಪಿಯನ್ನು ಅಧಿಕಾರಕ್ಕೇರಲು ಬಿಡಬೇಡಿ. ಅಧಿಕಾರದಲ್ಲಿದ್ದಾಗ ಅವರು ರೈತರ ಸಾಲ ಮನ್ನಾ ವಿಚಾರದಲ್ಲಿ ಗೋಸುಂಬೆತನ ತೋರಿದ್ದರು. ದಲಿತರು ಹಾಗೂ ಹಿಂದುಳಿದ ವರ್ಗದವರ ಮೇಲೆ ದಬ್ಬಾಳಿಕೆ ಮಾಡಿದ್ದರು. ಈಗ ದಲಿತರ ಪರ ಮಾತನಾಡುತ್ತಿದ್ದಾರೆ. ಬಿಜೆಪಿಯ ನಡಿಗೆ ದಲಿತರ ಮನೆಗೆ ಎಂಬ ನಾಟಕ ಶುರು ಮಾಡಿದ್ದಾರೆ. ಅವರ ಮಿಷನ್ 150 ರಿಂದ 50ಕ್ಕೆ ಇಳಿದಿದೆ ಎಂದು ವ್ಯಂಗ್ಯವಾಡಿದರು.

ದೇಶಕ್ಕೆ ಅತ್ಯುತ್ತಮ ಸಂವಿಧಾನ ನೀಡಿದ ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಗೌರವ ತೋರದ ಯಾವ ವ್ಯಕ್ತಿಯೂ ದೇಶದಲ್ಲಿರಲು ಅರ್ಹರಲ್ಲ. ಸಂವಿಧಾನವು ಎಲ್ಲ ಜಾತಿ, ವರ್ಗಗಳಿಗೂ ಸೇರಿದ್ದು. ಆದರೆ, ಬಿಜೆಪಿ ನಾಯಕರಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ. ಸಂವಿಧಾನವನ್ನು ಬದಲಾಯಿಸುವ ಮಾತನ್ನಾಡುತ್ತಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಗ್ರಾಮ ಪಂಚಾಯಿತಿ ಸದಸ್ಯನಾಗಲೂ ಅರ್ಹರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಯಣ್ಣಗೆ ಮೆಚ್ಚುಗೆ: ಶಾಸಕ ಜಯಣ್ಣ ಅವರದ್ದು ಮಾತು ಕಡಿಮೆ. ಆದರೆ, ಕಾರ್ಯದಲ್ಲಿ ಮುಂದು. ಅವರು ಸರಳ ಹಾಗೂ ಸಜ್ಜನ ವ್ಯಕ್ತಿ. ಆಗಾಗ್ಗೆ ಆರೋಗ್ಯ ಕೈಕೊಡುತ್ತಿದ್ದರೂ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಸವಲತ್ತು ವಿತರಣೆ: ಮಹದೇಶ್ವರ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಶ್ರಮಶಕ್ತಿ ಸಾಲ ಯೋಜನೆ, ಕೃಷಿ ಯಾಂತ್ರೀಕರಣ ಯೋಜನೆಯಡಿ ಸಣ್ಣ ಟ್ರ್ಯಾಕ್ಟರ್, ಪಶು ಯೋಜನೆಯಲ್ಲಿ ಕುರಿ ಮತ್ತು ಹಸು, ನಗರಸಭೆ ವತಿಯಿಂದ ಗ್ಯಾಸ್, ಕಂದಾಯ ಇಲಾಖೆಯ ಅಕ್ರಮ ಸಕ್ರಮ ಯೊಜನೆಯಡಿ ಸಾಗುವಳಿ ಚೀಟಿಗಳನ್ನು ವಿತರಿಸಿದರು.

ನಂತರ, ₹20 ಕೋಟಿ ವೆಚ್ಚದ ಸರ್‌ ಕಾಟನ್ ಕಾಲುವೆ, ₹11.30 ಕೋಟಿಯ ಬಸ್ ನಿಲ್ದಾಣ, ₹13 ಕೋಟಿ ವೆಚ್ಚದ ಮೊರಾರ್ಜಿ ದೇಸಾಯಿ ವಸತಿ ಸಂಕೀರ್ಣ, ₹ 73.59 ಕೋಟಿ ವೆಚ್ಚದ 56 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ₹ 3.80 ಕೋಟಿ ವೆಚ್ಚದ ಮುಳ್ಳೂರು ಮತ್ತು ಕೊಳ್ಳೇಗಾಲ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ವಿವಿಧ ಕಟ್ಟಡಗಳ ಉದ್ಘಾಟನೆಗಳನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಎಂ.ಸಿ. ಮೋಹನಕುಮಾರಿ, ಸಂಸದ ಆರ್.ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ಉಪಾಧ್ಯಕ್ಷ ಜೆ. ಯೋಗೇಶ್‌, ನಗರಸಭೆ ಅಧ್ಯಕ್ಷ ಶಾಂತರಾಜು, ಮಾಜಿ ಶಾಸಕ ಎಸ್. ಬಾಲರಾಜು, ಯಳಂದೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಿಂಗರಾಜು, ಮುಖಂಡ ಕಿನಕಹಳ್ಳಿ ರಾಚಯ್ಯ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry