‘ಮುತ್ತು’ ಮಾವನಿಗೆ ವಿಲನ್ ಆಗುವ ಬಯಕೆ!

7

‘ಮುತ್ತು’ ಮಾವನಿಗೆ ವಿಲನ್ ಆಗುವ ಬಯಕೆ!

Published:
Updated:
‘ಮುತ್ತು’ ಮಾವನಿಗೆ ವಿಲನ್ ಆಗುವ ಬಯಕೆ!

ಬಿಳಿ ಪಂಚೆ. ಮೇಲೊಂದು ಗಾಢಬಣ್ಣದ ಶರ್ಟ್. ಸದೃಢ ದೇಹ.ಮೊದಲ ನೋಟಕ್ಕೆ ಎಂಥವರನ್ನೂ ಆಕರ್ಷಿಸುವ ಕಣ್ಣುಗಳು... ಇದು ಜೀ ಕನ್ನಡ ವಾಹಿನಿಯ ‘ಯಾರೇ ನೀ ಮೋಹಿನಿ’ ಧಾರಾವಾಹಿಯ ಮುತ್ತು ಮಾವ ಪಾತ್ರಧಾರಿ ಚೇತನ್ ವಿಕ್ಕಿ ಅವರ ಬಾಹ್ಯ ಝಲಕ್.

ಸುರಸುಂದರ ಚೇತನ್ ಸಿನಿಮಾದಲ್ಲಿ ನಟಿಸುವ ಉದ್ದೇಶಕ್ಕಾಗಿ ಧಾರಾವಾಹಿಯನ್ನೇ ಆಯ್ಕೆ ಮಾಡಿಕೊಂಡವರು. ಬಾಲ್ಯದಲ್ಲೇ ನಟನೆ ಬಗ್ಗೆ ತೀವ್ರ ತುಡಿತ ಇದ್ದ ಚೇತನ್ ಮುಂದೊಂದು ದಿನ ದೊಡ್ಡ ನಟನಾಗಬೇಕೆಂಬ ಕನಸು ಕಂಡವರು. ಆ ಕನಸು ಈಗ ‘ಯಾರೇ ನೀ ಮೋಹಿನಿ’ಯಲ್ಲಿ ‘ಮುತ್ತು’ ಮಾವನ ಪಾತ್ರದ ಮೂಲಕ ಸಾಕಾರಗೊಳ್ಳುತ್ತಿದೆ.

‘ಅಭಿನಯದಲ್ಲಿ ನಾನಿನ್ನೂ ವಿದ್ಯಾರ್ಥಿ. ಆರಂಭದಲ್ಲೇ ಸಿನಿಮಾದಲ್ಲಿ ನಟಿಸುವುದಕ್ಕಿಂತ ಧಾರಾವಾಹಿ ಮೂಲಕವೇ ಬಣ್ಣದ ಬದುಕು ಆರಂಭಿಸಿದರೆ ಚೆಂದ ಅಂದುಕೊಂಡು ಕಿರುತೆರೆಗೆ ಬಂದೆ. ಇಲ್ಲಿ ಕಲಿಯುವುದು ಬಹಳಷ್ಟಿದೆ’ ಎಂದು ವಿನಮ್ರವಾಗಿ ನುಡಿಯುತ್ತಾರೆ ಅವರು.

‘ಯಾವುದೇ ನಾಟಕ ಶಾಲೆಯಲ್ಲಿ ನಾನು ಅಭಿನಯ ತರಬೇತಿಗೆ ಹೋಗಿಲ್ಲ. ಓದು ಮುಗಿಸಿ ನಟನೆಗೆ ಬರಬೇಕೆಂದುಕೊಂಡಿದ್ದಾಗ ನಿರ್ದೇಶಕಿ ಶ್ರುತಿ ನಾಯ್ದು ಅವರು ಆಡಿಷನ್‌ಗೆ ಕರೆದರು. ಆ ಧಾರಾವಾಹಿಯ ಪಾತ್ರಕ್ಕೆ ನಾನು ಸೂಕ್ತ ಎಂದೆನಿಸಿ ಆಯ್ಕೆಯಾದೆ. ನನಗೆ ಯಾರ ಬೆಂಬಲ, ಶಿಫಾರಸು ಇಲ್ಲ’ ಎಂದು ಮೊದಲ ಅವಕಾಶದ ಬಗ್ಗೆ ನೆನಪಿಸಿಕೊಳ್ಳುತ್ತಾರೆ ಚೇತನ್.

‘ಯಾರೇ ನೀ ಮೋಹಿನಿ’ಯಲ್ಲಿ ಮುತ್ತು ಎನ್ನುವ ಪಕ್ಕಾ ಹಳ್ಳಿಹೈದನ ಪಾತ್ರ. ಇಲ್ಲಿ ನನ್ನನ್ನು ಸ್ವಲ್ಪ ತಮಿಳು ಶೈಲಿಯಲ್ಲಿ ರೆಡಿ ಮಾಡಿದ್ದಾರಷ್ಟೇ. ಆದರೆ, ನಾನು ಪಕ್ಕಾ ಕನ್ನಡಿಗ. ಹುಟ್ಟಿ, ಬೆಳೆದದ್ದು ಬೆಂಗಳೂರಿನಲ್ಲೇ. ಅಪ್ಪ– ಅಮ್ಮ ಕೇಂದ್ರ ಸರ್ಕಾರದ ನೌಕರಿಯಲ್ಲಿದ್ದಾರೆ. ನಾನು ಸರ್ಕಾರಿ ನೌಕರಿ ಪಡೆಯಬೇಕೆಂಬ ಬಯಕೆ ಅವರದ್ದಾಗಿತ್ತು. ಆದರೆ, ನನಗೆ ನಟನೆಯ ತುಡಿತವಿತ್ತು. ಧಾರಾವಾಹಿಗೆ ಆಯ್ಕೆಯಾದ ಮೇಲೆ ಅಪ್ಪ– ಅಮ್ಮನೂ ಒಪ್ಪಿದರು. ನಿನಗಿಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡು ಎಂದು ಹರಸಿದರು. ಕಿರಿಯ ಸಹೋದರ ಇನ್ನೂ ಓದುತ್ತಿದ್ದಾನೆ’ ಎಂದು ಕೌಟುಂಬಿಕ ವಿವರ ಹಂಚಿಕೊಳ್ಳುತ್ತಾರೆ ಅವರು.

‘ನಾನು ಓದಿದ್ದು ನ್ಯಾಷನಲ್ ಸ್ಕೂಲಿನಲ್ಲಿ. ಅಲ್ಲಿಯೇ ಸಣ್ಣಪುಟ್ಟ ನಾಟಕಗಳನ್ನು ಮಾಡಿಕೊಂಡಿದ್ದೆ. ಮುಂದೆ ಕಾಲೇಜು ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಡಬ್‌ಸ್ಮ್ಯಾಷ್ ವಿಡಿಯೊ ಮಾಡುತ್ತಿದ್ದೆ. ‘ಮಾಣಿಕ್ಯ’ ಸಿನಿಮಾದ ಡಬ್ ಸ್ಮ್ಯಾಷ್ ವಿಡಿಯೊ ನೋಡಿದ ನಟ ಸುದೀಪ್ ಅವರು ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, ಕಮೆಂಟ್ ಮಾಡಿದ್ದರು. ಅಲ್ಲಿಂದ ನನ್ನ ಅದೃಷ್ಟದ ಬಾಗಿಲು ತೆರೆಯಿತು ನೋಡಿ’ ಎಂದು ಫ್ಲ್ಯಾಷ್ ಬ್ಯಾಕ್‌ ನೆನಪಿಸಿಕೊಳ್ಳುತ್ತಾರೆ ಚೇತನ್.

‘ಯಾರೇ ನೀ ಮೋಹಿನಿ’ ಧಾರಾವಾಹಿಗೆ ಆಯ್ಕೆಯಾಗಿರದಿದ್ದರೆ, ಪಿಡಿಒ ಆಗಿ ತುಮಕೂರು ಜಿಲ್ಲೆಯಲ್ಲಿರುತ್ತಿದ್ದೆ. ಆದರೆ, ಅಷ್ಟೊತ್ತಿಗೆ ಧಾರಾವಾಹಿಗೆ ಆಯ್ಕೆಯಾಗಿ, ಅದೃಷ್ಟ ಇಲ್ಲಿಗೆ ಕರೆತಂದಿತು. ನನಗೆ ನಟ ಶಂಕರನಾಗ್ ಅಂದ್ರೆ ಪ್ರಾಣ. ಇನ್ನು ಸುದೀಪ್‌ ಅಂದ್ರೆ ಸಖತ್ ಇಷ್ಟ. ಅವರ ಮ್ಯಾನರಿಸಂನ ಅಭಿಮಾನಿ’ ಎಂದು ಬಣ್ಣಿಸುತ್ತಾರೆ ಅವರು.

ಧಾರಾವಾಹಿಯಲ್ಲಿ ನನ್ನತ್ತೆ ಮಗಳು ಬೆಳ್ಳಿ ಅಂದ್ರೆ ನನಗೆ ತುಂಬಾ ಪ್ರೀತಿ. ಚಿಕ್ಕಂದಿನಲ್ಲಿ ಇಬ್ಬರೂ ಒಟ್ಟಿಗೆ ಬೆಳೆದವರು. ಅವಳಿಗೆ ಹೆಸರಿಟ್ಟಿದ್ದು ಕೂಡ ನಾನೇ. ಅವಳ ಬಗ್ಗೆ ಸಹಜವಾಗಿಯೇ ಕಾಳಜಿ ಇರುತ್ತೆ. ಆದರೆ, ಬೆಳ್ಳಿಯನ್ನು ಮದುವೆಯಾಗಬೇಕೆಂಬ ಭಾವದಲ್ಲಿ ನೋಡಿರೋದಿಲ್ಲ. ಇನ್ನು ಮಾಯಾ, ಆಪತ್ತಿನಲ್ಲಿದ್ದಾಗ ನನ್ನ ಪ್ರಾಣ ಉಳಿಸಿದವಳು. ಅವಳೂ ನನ್ನ ಪ್ರೀತಿಸುತ್ತಿರುವವಳು. ಪ್ರಾಣ ರಕ್ಷಿಸಿದವಳು ಎಂದು ಅವಳಿಗೆ ಮದುವೆಯಾಗುವ ಮಾತು ಕೊಟ್ಟಿದ್ದೇನೆ. ಚಿಕ್ಕಮ್ಮನನ್ನೇ ದೇವರೆಂದು ಆರಾಧಿಸುವ ಪಾತ್ರ ನನ್ನದು. ಅವರಲ್ಲೇ ಅಮ್ಮನನ್ನು ಕಾಣುವ ಸ್ವಭಾವ ಮುತ್ತುವಿನದು ಎಂದು ತಮ್ಮ ಪಾತ್ರದ ಹಿನ್ನೆಲೆ ಕಟ್ಟಿಕೊಡುತ್ತಾರೆ ಚೇತನ್.

ನಿಜಜೀವನದಲ್ಲಿ ಮಾಟ– ಮಂತ್ರ ನಂಬದ ಚೇತನ್, ದೇವಸ್ಥಾನಕ್ಕೆ ಹೋಗೋದು ಅಪರೂಪವಂತೆ. ಧಾರಾವಾಹಿಯಲ್ಲಿನ ದೇವರು, ಮೌಢ್ಯ ಇತ್ಯಾದಿ ಅವರಿಗೆ ಹೊಸ ಅನುಭವ ತಂದಿದೆಯಂತೆ. ಪಾತ್ರವಾಗಿ ಇದನ್ನು ಎಂಜಾಯ್ ಮಾಡ್ತಾ ಇದ್ದೀನಿ ಎನ್ನುವ ಚೇತನ್‌ಗೆ ಹುಡುಗಿಯರೇ ಹೆಚ್ಚು ಅಭಿಮಾನಿಗಳಂತೆ. ಆಗಾಗ, ಫೋನ್, ಫೇಸ್‌ಬುಕ್, ಟ್ವಿಟರ್‌ನಲ್ಲಿ ಮೆಸೇಜ್ ಮಾಡಿ ಕಾಡಿಸುವ ಹುಡುಗಿಯರಿಗೇನೂ ಕಮ್ಮಿಯಿಲ್ಲ ಎಂದು ನಾಚುತ್ತಾರೆ ಚೇತನ್.

ಸದ್ಯಕ್ಕೆ ಮದುವೆ ಬಗ್ಗೆ ಮಾತೇ ಇಲ್ಲ. ಧಾರಾವಾಹಿಯಲ್ಲಿ ನನ್ನ ವಯಸ್ಸಿಗೂ ಮೀರಿದ ಪಾತ್ರ ನನ್ನದು. ಇನ್ನು ಹತ್ತು ವರ್ಷದ ತನಕ ಮದುವೆಗೆ ಜಾಗವಿಲ್ಲ. ಲವ್ವು–ಗಿವ್ವು ಕೂಡ ಇಲ್ಲ. ಮೊದಲು ನಾನು ವೃತ್ತಿಯಲ್ಲಿ ಸೆಟಲ್ ಆಗಬೇಕು. ಆಮೇಲೆ ಮುಂದಿನದು ಎಂದು ದೃಢವಾಗಿ ಹೇಳುವ ಚೇತನ್‌ಗೆ, ಅಭಿನಯಕ್ಕೆ ಹೆಚ್ಚು ಅವಕಾಶವಿರುವ ವಿಲನ್ ಪಾತ್ರ ಮಾಡುವಾಸೆ. ಸಿನಿಮಾಗಳಲ್ಲಿ ನಾಯಕನೇ ಆಗಬೇಕೆಂದಿಲ್ಲ. ಪಾತ್ರ ಯಾವುದಾದರೂ ಸೈ. ಅಭಿನಯಕ್ಕೆ ಅವಕಾಶವಿರಬೇಕಷ್ಟೇ ಎನ್ನುವ ಅವರ ಎದುರು ಸದ್ಯಕ್ಕೆ ಒಂದು ಸಿನಿಮಾದ ಆಫರ್ ಕೂಡ ಇದೆಯಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry