ಈಡೇರಿದ ‘ಶತಾಯ ಗತಾಯ’ ಕನಸು

7

ಈಡೇರಿದ ‘ಶತಾಯ ಗತಾಯ’ ಕನಸು

Published:
Updated:
ಈಡೇರಿದ ‘ಶತಾಯ ಗತಾಯ’ ಕನಸು

ಜೀವನದಲ್ಲಿ ಶತಾಯ ಗತಾಯ ಒಂದು ಸಿನಿಮಾ ನಿರ್ದೇಶಿಸಬೇಕೆಂಬ ಕನಸು ಕಂಡವರು ಸಂದೀಪ್‌ ಗೌಡ. ಕೊನೆಗೂ ಆ ಕನಸು ಈಡೇರಿಸಿದ ಖುಷಿ ಅವರ ಮೊಗದಲ್ಲಿತ್ತು. ಯಶಸ್ವಿಯಾಗಿ ಚಿತ್ರ ಪೂರ್ಣಗೊಳಿಸಿದ ಹುಮ್ಮಸ್ಸು ಅವರ ಮಾತುಗಳಲ್ಲಿ ಎದ್ದುಕಾಣುತ್ತಿತ್ತು. ಕಷ್ಟಪಟ್ಟು ಮಾಡಿರುವ ಸಿನಿಮಾ ಜನರಿಗೂ ಇಷ್ಟವಾಗಲಿದೆ ಎಂಬ ವಿಶ್ವಾಸವೂ ಅವರಲ್ಲಿತ್ತು.

‘ಶತಾಯ ಗತಾಯ’ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ‘ರವಿನಂದನ್‌ ಜೈನ್ ಚಿತ್ರಕ್ಕೆ ಉತ್ತಮ ಸಂಗೀತ ನೀಡಿದ್ದಾರೆ. ಅವರ ಬಾವಿಯಲ್ಲಿ ಸಾಕಷ್ಟು ನೀರಿತ್ತು. ನಾನು ಸಾಕಷ್ಟು ತೋಡಿಕೊಂಡಿದ್ದೇನೆ. ಅಲ್ಲಿ ಇನ್ನು ಎಷ್ಟು ನೀರು ಇದೆಯೋ ಗೊತ್ತಿಲ್ಲ’ ಎಂದು ಮಾತಿಗಿಳಿದರು ನಿರ್ದೇಶಕ ಸಂದೀಪ್‌ ಗೌಡ.

‘ಮೊದಲ ಬಾರಿಗೆ ಚಿತ್ರ ನಿರ್ದೇಶಿಸಿದ್ದೇನೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ನಾನೇ ಬರೆದಿದ್ದೇನೆ’ ಎಂದ ಅವರು ಈ ಚಿತ್ರಕ್ಕೆ ಬಂಡವಾಳ ಕೂಡ ಹೂಡಿದ್ದಾರೆ.

ಇದು ಹಳ್ಳಿಯೊಂದರಲ್ಲಿ ನಡೆಯುವ ಸತ್ಯ ಘಟನೆ ಆಧಾರಿತ ಚಿತ್ರ ಎಂದು ಚಿತ್ರತಂಡ ಹೇಳಿಕೊಂಡಿದೆ. ದ್ವೇಷ ಸಾಧನೆಗಾಗಿ ಕೊಲೆಗಳ ಸರಣಿ ನಡೆಯುತ್ತದೆಯಂತೆ. ಸಸ್ಪೆನ್ಸ್‌, ಥ್ರಿಲ್ಲರ್ ಇರುವ ಈ ಸಿನಿಮಾದ ಚಿತ್ರೀಕರಣ ಹಾಸನ ಜಿಲ್ಲೆಯ ಹಿರಿಸಾವೆ ಗ್ರಾಮದಲ್ಲಿ ನಡೆದಿದೆ.

(ರಘು ರಾಮಪ್ಪ, ಸಂದೀಪ್‌ಗೌಡ)

ನಾಯಕ ರಘು ರಾಮಪ್ಪ ಅವರ ಮೊಗದಲ್ಲೂ ಚಿತ್ರ ಉತ್ತಮವಾಗಿ ಮೂಡಿಬಂದಿರುವ ಖುಷಿ ಇತ್ತು. ‘ನಿರ್ದೇಶಕರೇ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಹಾಗಾಗಿ, ಸಮಸ್ಯೆ ಎದುರಾಗಲಿಲ್ಲ’ ಎಂದ ಅವರು ತಮ್ಮ ಪಾತ್ರದ ಗುಟ್ಟುಬಿಟ್ಟು ಕೊಡಲಿಲ್ಲ.

ನಾಯಕಿ ಸೋನು ಗೌಡ ಅವರದು ಮಾಡೆಲಿಂಗ್ ವೃತ್ತಿ. ಇದು ಅವರ ಮೊದಲ ಚಿತ್ರ. ‘ನನ್ನದು ನಗರದಿಂದ ಹಳ್ಳಿಗೆ ಬರುವ ಹುಡುಗಿಯ ಪಾತ್ರ. ಚಿತ್ರದಲ್ಲಿನ ಪಾತ್ರ ನನಗೆ ಖುಷಿ ಕೊಟ್ಟಿದೆ’ ಎಂದಷ್ಟೇ ಹೇಳಿದರು.

ಹಾಡುಗಳನ್ನು ಬಿಡುಗಡೆಗೊಳಿಸಿದ ನಟ ಶ್ರೀಮುರಳಿ ಚಿತ್ರತಂಡಕ್ಕೆ ಶುಭ ಕೋರಿದರು. ಕೌರವ ವೆಂಕಟೇಶ್‌ ಚಿತ್ರದ ಮೂರು ದೃಶ್ಯಗಳಿಗೆ ಸಾಹಸ ಸಂಯೋಜಿಸಿದ್ದಾರೆ. ಆಲ್ಫಾ ಬ್ಯಾನರ್‌ನಡಿ ಈ ಚಿತ್ರ ನಿರ್ಮಿಸಲಾಗಿದೆ. ರವಿನಂದನ್‌ ಜೈನ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಶಿವಪ್ರದೀಪ್, ಕುರಿ ಪ್ರತಾಪ್, ಗೋವಿಂದೇಗೌಡ(ಜಿ.ಜಿ), ಎಂ.ಎಸ್‌. ಉಮೇಶ್‌, ಗಡ್ಡಪ್ಪ ತಾರಾಗಣದಲ್ಲಿದ್ದಾರೆ. ಫೆಬ್ರುವರಿಯಲ್ಲಿ ಜನರ ಮುಂದೆ ಬರಲು ಚಿತ್ರತಂಡ ಸಜ್ಜಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry