ತಾಕತ್ತಿದ್ದರೆ ಆರ್‌ಎಸ್‌ಎಸ್‌, ಶ್ರೀರಾಮಸೇನೆ, ಬಜರಂಗದಳ ನಿಷೇಧಿಸಲಿ: ಮುತಾಲಿಕ್‌ ಸವಾಲು

7

ತಾಕತ್ತಿದ್ದರೆ ಆರ್‌ಎಸ್‌ಎಸ್‌, ಶ್ರೀರಾಮಸೇನೆ, ಬಜರಂಗದಳ ನಿಷೇಧಿಸಲಿ: ಮುತಾಲಿಕ್‌ ಸವಾಲು

Published:
Updated:
ತಾಕತ್ತಿದ್ದರೆ ಆರ್‌ಎಸ್‌ಎಸ್‌, ಶ್ರೀರಾಮಸೇನೆ, ಬಜರಂಗದಳ ನಿಷೇಧಿಸಲಿ: ಮುತಾಲಿಕ್‌ ಸವಾಲು

ಚಿಕ್ಕಮಗಳೂರು: ‘ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಆರ್‌ಎಸ್‌ಎಸ್‌, ಶ್ರೀರಾಮಸೇನೆ, ಬಜರಂಗದಳ ಸಂಘಟನೆಗಳನ್ನು ನಿಷೇಧಿಸಲಿ’ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಸವಾಲು ಹಾಕಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಿಎಫ್‌ಐ ಸಂಘಟನೆ ರಾಜ್ಯದ 21 ಜಿಲ್ಲೆಗಳಲ್ಲಿ ಚಟುವಟಿಕೆ ಹೊಂದಿದೆ. ಕರ್ನಾಟಕದಲ್ಲಿ ನಡೆದಿರುವ ಸರಣಿ ಕೊಲೆಗಳ ಏಳು ಪ್ರಕರಣಗಳಲ್ಲಿ ಈ ಸಂಘಟನೆಯ ಹೆಸರು ಇದೆ. ಪಿಎಫ್‌ಐ ಸಂಘಟನೆ ನಿಷೇಧ ಮಾಡಬೇಕೇ ಹೊರತು ಬಜರಂಗದಳ, ಶ್ರೀರಾಮಸೇನೆ ದಳವನ್ನಲ್ಲ. ದೇಶಭಕ್ತ ಸಂಘಟನೆಗಳ ಬಗ್ಗೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ಪಿಎಫ್‌ಐ ಜತೆ ನಮ್ಮ ಸಂಘಟನೆಗಳನ್ನು ಹೋಲಿಕೆ ಮಾಡುವುದೇ ಮೂರ್ಖತನ’ ಎಂದರು.

‘ಆರ್‌ಎಸ್‌ಎಸ್‌, ಬಿಜೆಪಿಯವರು ಉಗ್ರಗಾಮಿಗಳು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಬಾಲಿಶವಾದುದು. ಈ ರೀತಿಯ ಹೇಳಿಕೆ ನೀಡುವ ಮೂಲಕ ಅವರು ಅಪಹಾಸ್ಯಕ್ಕೀಡಾಗುತ್ತಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್‌ನವರು ಉಗ್ರಗಾಮಿಗಳು ಎಂಬುದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಬಳಿ ದಾಖಲೆಗಳಿದ್ದರೆ ತಕ್ಷಣವೇ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿ, ಇವೆರಡನ್ನೂ ನಿಷೇಧಿಸುವಂತೆ ಆಗ್ರಹಿಸಲಿ. ಮುಸ್ಲಿಂ ವೋಟುಗಳಿಗಾಗಿ ಈ ರೀತಿ ಹೇಳಿಕೆ ನೀಡಿದರೆ, ಹಿಂದೂಗಳ ವೋಟುಗಳನ್ನು ಕಳೆದುಕೊಳ್ಳುತ್ತೇವೆ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು. ಹೇಳಿಕೆಯನ್ನು ವಾಪಸ್‌ ಪಡೆಯಬೇಕು’ ಎಂದು ಆಗ್ರಹಿಸಿದರು.

‘ಹಿಂದೂ ಭಯೋತ್ಪಾದನೆ ಎಂಬುದನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್‌. ಹಿಂದು ವಿರೋಧಿ ನೀತಿ, ಮುಸ್ಲಿಂ ತುಷ್ಟೀಕರಣದಿಂದ ಕಾಂಗ್ರೆಸ್‌ ಮೂಲೆಗುಂಪಾಗಿದೆ’ ಎಂದು ಟೀಕಿಸಿದರು.

‘ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆಗೆ ಶ್ರದ್ಧಾಂಜಲಿ ಹೇಳುತ್ತೇವೆ. ವಿದ್ಯಾರ್ಥಿನಿ ಇಷ್ಟೊಂದು ಸೂಕ್ಷ್ಮ ಇರಬಾರದಿತ್ತು. ವಿದ್ಯಾರ್ಥಿನಿ ಮನೆಗೆ ಹೋಗಿದ್ದ ಹಿಂದೂ ಸಂಘಟಕರು ಸಾಯಿಸಲು ಹೋಗಿರಲಿಲ್ಲ, ಬಚಾವ್‌ ಮಾಡಲು ಹೋಗಿದ್ದರು. ಆ ವಿದ್ಯಾರ್ಥಿನಿ ಮುಸ್ಲಿಂ ಯುವಕನೊಂದಿಗೆ ಓಡಿ ಹೋಗಿದ್ದರೆ ಮನೆಯಲ್ಲಿ ತಾಯಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಮುದ್ದಿನಿಂದ ಸಾಕಿದ ಮಗಳು ಓಡಿಹೋಗಿದ್ದಕ್ಕೆ ಮನನೊಂದು ತಾಯಿ ಸಾಯುತ್ತಿದ್ದರು’ ಎಂದು ಪ್ರತಿಕ್ರಿಯಿಸಿದರು.

‘ಧನ್ಯಶ್ರೀಗೆ ಬುದ್ದಿಹೇಳಲು ಹಿಂದೂ ಸಂಘಟಕರು ಅವರ ಮನೆಗೆ ಹೋಗಿದ್ದಾರೆ ವಿನಾ ಕೊಂದುಹಾಕಲು ಹೋಗಿಲ್ಲ. ಧನ್ಯಶ್ರೀ ಆತ್ಮಹತ್ಯೆಯು ಹಿಂದೂ ಸಂಘಟಕರಿಗೆ ಎಚ್ಚರಿಕೆಯ ಪಾಠ’ ಎಂದರು.

ತಾಕತ್ತಿದ್ದರೆ ಗೋರಕ್ಷಕರನ್ನು ತಡೆಯಲಿ

‘ಗೋಮಾಂಸ ಸಾಗಣೆ ತಡೆಯುವ ಗೋರಕ್ಷಕರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ‍್ರೀಕರ್ ಹೇಳಿರುವುದು ಖಂಡನೀಯ. ಹೇಳಿಕೆಯನ್ನು ಹಿಂಪಡೆಯಬೇಕು. ಬೆಳಗಾವಿಯಿಂದ ಗೋಮಾಂಸ ಸಾಗಣೆ ಮಾಡಲು ಬಿಡುವುದಿಲ್ಲ, ತಾಕತ್ತಿದ್ದರೆ ಗೋರಕ್ಷಕರನ್ನು ತಡೆಯಲಿ’ ಎಂದು ಸವಾಲು ಹಾಕಿದರು.

‘ದತ್ತಮಾಲಾ ಅಭಿಯಾನದಲ್ಲಿ ದತ್ತಪೀಠದ ಗುಹೆಯ ಗರ್ಭಗುಡಿಗೆ ನಾಗಸಾಧುಗಳಿಗೆ ಪ್ರವೇಶ ಮತ್ತು ಪೂಜೆ ನಿರಾಕರಣೆ ಪ್ರಕರಣದ ವಿಚಾರಣೆಗೆ ಇಲ್ಲಿನ ಜೆಎಂಎಫ್‌ಸಿ ಒಂದನೇ ಹಚ್ಚುವರಿ ಕೋರ್ಟ್‌ಗೆ ಹಾಜರಾಗಿದ್ದೆವು. ಮುಂದಿನ ವಿಚಾರಣೆ ಫೆಬ್ರುವರಿ 14ಕ್ಕೆ ನಿಗದಿಯಾಗಿದೆ. ಶ್ರೀರಾಮಸೇನೆಯ ಕೆ.ವಿ.ಮಹೇಶ್‌ಕುಮಾರ್‌ ಕಟ್ಟಿನಮನೆ, ಮೋಹನ್‌ಭಟನ್‌, ದುರ್ಗಾಸೇನೆ ಶಾರದಮ್ಮ ವಿಚಾರಣೆಗೆ ಹಾಜರಾಗಿದ್ದೆವು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry