ಇಎಸ್‌ಐ ಆಸ್ಪತ್ರೆಯಲ್ಲಿ ನಗುಮೊಗದ ಸೇವೆ

7

ಇಎಸ್‌ಐ ಆಸ್ಪತ್ರೆಯಲ್ಲಿ ನಗುಮೊಗದ ಸೇವೆ

Published:
Updated:
ಇಎಸ್‌ಐ ಆಸ್ಪತ್ರೆಯಲ್ಲಿ ನಗುಮೊಗದ ಸೇವೆ

ಗಬ್ಬುನಾರುವ ವಾರ್ಡ್‌ಗಳು, ಕೊಳೆಯಾದ ಬೆಡ್‌ಶೀಟ್‌ಗಳು, ಸಮಯಕ್ಕೆ ಸರಿಯಾಗಿ ಬಾರದ ವೈದ್ಯರು, ಸೂಕ್ತ ಚಿಕಿತ್ಸೆಯಿಲ್ಲದೆ ನರಳುವ ರೋಗಿಗಳು...

ಸರ್ಕಾರಿ ಆಸ್ಪತ್ರೆ ಎಂದಾಕ್ಷಣ ಜನಸಾಮಾನ್ಯರ ಮನದಲ್ಲಿ ಥಟ್ಟನೆ ಮೂಡುವ ಚಿತ್ರಗಳಿವು. ಆದರೆ, ಈ ಚಿತ್ರಣವನ್ನು ತಲೆಕೆಳಗೆ ಮಾಡುವಂತಿದೆ ರಾಜಾಜಿನಗರದ ಇಎಸ್‌ಐ (ರಾಜ್ಯ ಕಾರ್ಮಿಕರ ವಿಮಾ ನಿಗಮ) ಆಸ್ಪತ್ರೆ.

ಇಲ್ಲಿ ಯಾವ ಸೌಲಭ್ಯಕ್ಕೂ ಕೊರತೆಯಿಲ್ಲ. ನೀವು ಇಎಸ್‌ಐ ಕಾರ್ಡುದಾರರಾಗಿದ್ದಲ್ಲಿ ನಿಮಗಿಲ್ಲಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ದೊರೆಯುತ್ತದೆ. ಗಾಳಿ–ಬೆಳಕು ಚೆನ್ನಾಗಿ ಬರುವ ದೊಡ್ಡ ವಾರ್ಡ್‌ಗಳು, ಪ್ರತಿದಿನವೂ ಬದಲಾಗುವ ರೋಗಿಯ ಹಾಸಿಗೆಯ ಬೆಡ್‌ಶೀಟ್, ದಿನದ ಮೂರು ಹೊತ್ತೂ ಶುಚಿತ್ವ ಕಾಪಾಡುವ ಸಿಬ್ಬಂದಿ, ಸ್ವಚ್ಛ ಬಾತ್‌ರೂಂ, ರೋಗಿಗೆ ಅಗತ್ಯವಿದ್ದಾಗ ನೆರವಿಗೆ ಸ್ಪಂದಿಸುವ ವೈದ್ಯರು, ನರ್ಸ್‌ಗಳು, ಪೌಷ್ಟಿಕಾಂಶವುಳ್ಳ ಆಹಾರ... ಹೀಗೆ ರೋಗಿಗೆ ಬೇಕಾದ ಸಕಲ ಸೌಲಭ್ಯವೂ ಈ ಆಸ್ಪತ್ರೆಯಲ್ಲುಂಟು.

‘ನಮ್ಮ ಆಸ್ಪತ್ರೆ 500 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಶೀಘ್ರದಲ್ಲೇ ಈ ಸಂಖ್ಯೆ 750ಕ್ಕೆ ಏರಲಿದೆ. 2010–11ನೇ ಶೈಕ್ಷಣಿಕ ಸಾಲಿನಲ್ಲಿ ಆಸ್ಪತ್ರೆಯನ್ನು ವೈದ್ಯಕೀಯ ಸ್ನಾತಕೋತ್ತರ ಮತ್ತು ಸಂಶೋಧನಾ ಸಂಸ್ಥೆಯನ್ನಾಗಿ ಪರಿವರ್ತಿಸಲಾಗಿದೆ. ₹21 ಸಾವಿರ ಆದಾಯ ಮಿತಿಯೊಳಗಿರುವವರು ಇಎಸ್ಐ ಸೌಲಭ್ಯಕ್ಕೆ ಅರ್ಹರು’ ಎಂದು ಮಾಹಿತಿ ನೀಡುತ್ತಾರೆ ರಾಜಾಜಿನಗರ ಇಎಸ್ಐ ಆಸ್ಪತ್ರೆಯ ಮೆಡಿಕಲ್ ಸೂಪರಿಟೆಂಡೆಂಟ್ ರಚಿತಾ ಬಿಸ್ವಾಸ್.

ಆಸ್ಪತ್ರೆ 24X7 ಕೆಲಸ ಮಾಡುತ್ತದೆ. ಮಧ್ಯಾಹ್ನ 3.30ರ ತನಕವೂ ಹೊರ ರೋಗಿಗಳಿಗೆ (ಒಪಿಡಿ) ಚಿಕಿತ್ಸಾ ಸೌಲಭ್ಯವಿದೆ. ನಗರದ ಇತರ ಇಎಸ್‌ಐ ಆಸ್ಪತ್ರೆಯಲ್ಲಿ ಒಪಿಡಿ ವಿಭಾಗಕ್ಕೆ ಮಧ್ಯಾಹ್ನ 1ಕ್ಕೆ ಮುಕ್ತಾಯವಾಗುತ್ತದೆ. ತುರ್ತು ಚಿಕಿತ್ಸೆ ದಿನವಿಡಿ ಲಭ್ಯ. ಆರ್ಯುವೇದ ಚಿಕಿತ್ಸಾ ಸೌಲಭ್ಯವೂ ಇಲ್ಲಿದೆ.

ಸೂಪರ್ ಸ್ಪೆಷಾಲಿಟಿ ಸೇವೆ

ಸುಟ್ಟ ಗಾಯ–ಪ್ಲಾಸ್ಟಿಕ್ ಸರ್ಜರಿ, ಮೂತ್ರರೋಗ, ದಂತ ಚಿಕಿತ್ಸೆ, ಮೂಳೆ ಮತ್ತು ಕೀಲುರೋಗ, ನರರೋಗ, ಗ್ಯಾಸ್ಟ್ರೋಎಂಟ್ರೊಲಜಿ, ಕಾರ್ಡಿಯಾಲಜಿ, ಡಯಾಲಿಸಿಸ್, ಕಿಮಿಯೋಥೆರಪಿ ಸೌಲಭ್ಯಗಳಿವೆ.

ಸುಟ್ಟ ಗಾಯ–ಪ್ಲಾಸ್ಟಿಕ್ ಸರ್ಜರಿ, ಯೂರಾಲಜಿ, ನರರೋಗ, ಗ್ಯಾಸ್ಟ್ರೋಎಂಟ್ರೊಲಜಿ, ಕಾರ್ಡಿಯಾಲಜಿ, ಡಯಾಲಿಸಿಸ್, ಕಿಮಿಯೋಥೆರಪಿ ಸೌಲಭ್ಯಗಳಿವೆ. ಹೃದ್ರೋಗ ಚಿಕಿತ್ಸೆಗಾಗಿ ಶ್ರೀಜಯದೇವ ಹೃದ್ರೋಗ ಸಂಸ್ಥೆ ಸಹಭಾಗಿತ್ವದಲ್ಲಿ  ಹೃದ್ರೋಗಕ್ಕೆ ಸಂಬಂಧಿಸಿದಂತೆ ಎರಡು ಶಸ್ತ್ರಚಿಕಿತ್ಸಾ ಕೊಠಡಿ, ಆ್ಯಂಜಿಯೊಗ್ರಾಫಿ, ಆ್ಯಂಜಿಯೊಪ್ಲಾಸ್ಟಿ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ.

ಈ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಡಯಾಲಿಸ್‌ಗಾಗಿ 25 ಡಯಾಲಿಸಿಸ್ ಯಂತ್ರಗಳಿದ್ದು, ನಿತ್ಯವೂ 140 ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಟಿ ಸ್ಕ್ಯಾನ್, ಎಂಆರ್‌ಐ, ಎಕ್ಸ್‌ರೇ, ಕಂಪ್ಯೂಟರೀಕೃತ ರೆಡಿಯೋಗ್ರಾಫಿ ಹೀಗೆ ಅನೇಕ ಚಿಕಿತ್ಸಾ ಸೌಲಭ್ಯಗಳೂ ಇಲ್ಲಿವೆ.

ರಾಜಾಜಿನಗರದ ಇಎಸ್‌ಐ ಆಸ್ಪತ್ರೆ ಕುರಿತು ರೋಗಿಗಳು ಹಂಚಿಕೊಂಡ ಮಾತುಗಳಿವು...

**

ಸ್ವಚ್ಛವಾಗಿದೆ

‘ನಾನು ಬಸುರಿಯಾಗಿದ್ದಾಗಲೂ ಇದೇ ಆಸ್ಪತ್ರೆಯಲ್ಲಿ ತೋರಿಸಿಕೊಂಡಿದ್ದೆ. ಇಲ್ಲೇ ಸಿಸೇರಿಯನ್ ಹೆರಿಗೆ ಆಯಿತು. ಆಗಲೂ ನಾವು ಒಂದು ಪೈಸೆ ದುಡ್ಡು ಖರ್ಚು ಮಾಡಲಿಲ್ಲ. ಎಲ್ಲವೂ ಉಚಿತವಾಗಿ ಆಯಿತು. ಅದೇ ಖಾಸಗಿ ಆಸ್ಪತ್ರೆಗೆ ಹೆರಿಗೆ ಹೋಗಿದ್ದರೆ ಲಕ್ಷಾಂತರ ರೂಪಾಯಿ ಸುರಿಯಬೇಕಿತ್ತು. ನನ್ನ ಮಗುವಿಗೆ ಈಗ ಏಳು ತಿಂಗಳು. ಮೂತ್ರದ ಸೋಂಕಿನಿಂದ ಮಗು ಬಳಲುತ್ತಿದೆ. ಈಗ ಇಲ್ಲಿಯೇ ಅಡ್ಮಿಟ್ ಮಾಡಿದ್ದೇನೆ. ವಾರ್ಡ್ ಚೆನ್ನಾಗಿದೆ. ಬಾತ್‌ರೂಂ ಸ್ವಚ್ಛವಾಗಿದೆ. ವೈದ್ಯರು, ನರ್ಸ್‌ಗಳು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಚಿಕ್ಕ ಮಕ್ಕಳ ರೋಗಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಭಾಗವೇ ಇಲ್ಲಿದೆ. ಊರು ಬಿಟ್ಟು ಇಲ್ಲಿ ಬಂದು ಕೆಲಸ ಮಾಡುತ್ತಿರುವ ನಮ್ಮಂಥವರಿಗೆ ಇಎಸ್‌ಐ ಆಸ್ಪತ್ರೆಗಳು ವರದಾನ’ ಎಂದು ಭಾವುಕವಾಗಿ ನುಡಿಯುತ್ತಾರೆ ಕಲಬುರ್ಗಿಯ ರೇಣುಕಾ.

**

ಆರೈಕೆ ಚೆನ್ನಾಗಿದೆ

ಸೋಮಸಂದ್ರಪಾಳ್ಯದ ಬಿಬಿಎಂಪಿ ಘನತ್ಯಾಜ್ಯ ಘಟಕದಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ. ಯಂತ್ರಕ್ಕೆ ಪ್ಯಾಂಟು ಸಿಲುಕಿಕೊಂಡು ಕಾಲಿಗೆ ಪೆಟ್ಟಾಗಿ ನರ ಕತ್ತರಿಸಿಹೋಗಿತ್ತು. ಈ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಆಯಿತು. ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ವೈದ್ಯರು, ನರ್ಸ್‌ಗಳ ಆರೈಕೆ ಚೆನ್ನಾಗಿದೆ. ಗುಳಿಗೆಗಳನ್ನೂ ಅವರೇ ಕೊಡುತ್ತಾರೆ. ವೈದ್ಯರು ಬರೆದುಕೊಟ್ಟ ಗುಳಿಗೆ ಇಲ್ಲಿ ಸಿಗದಿದ್ದಾಗ ಚೀಟಿ ಬರೆದುಕೊಡುತ್ತಾರೆ. ಹೊರಗೆ ಮೆಡಿಕಲ್ ಶಾಪ್‌ನಿಂದ ಖರೀದಿಸಿದ ಗುಳಿಗೆಗೆ ರಸೀದಿ ಕೊಟ್ಟರೆ ಆ ಮೊತ್ತದ ಹಣವನ್ನು ಕೊಡುತ್ತಾರೆ. ಖಾಸಗಿ ಆಸ್ಪತ್ರೆಯಲ್ಲಿ ಇದೇ ಚಿಕಿತ್ಸೆಗೆ ಕನಿಷ್ಠ ಎರಡು ಲಕ್ಷ ರೂಪಾಯಿ ಖರ್ಚಾಗುತ್ತಿತ್ತು. ಆದರೆ, ಇಲ್ಲಿ ನನಗೆ ಒಂದು ನಯಾ ಪೈಸೆಯೂ ಖರ್ಚಾಗಲಿಲ್ಲ. ಇಂಥ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಬೇಕು. ಇದರಿಂದ ಕಾರ್ಮಿಕರಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಇಎಸ್‌ಐ ಆಸ್ಪತ್ರೆಯ ಒಳರೋಗಿ ಎಂ.ಕುಮಾರ್.

**

ದೊಡ್ಡಾಸ್ಪತ್ರೆಯಂಥ ಸೌಲಭ್ಯ

‘ನಮ್ಮದು ಮಂಡ್ಯ. ನನ್ನ ಮಗ ಇಲ್ಲೇ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಸೈಕಲ್ ಓಡಿಸುವಾಗ ಸಣ್ಣ ಅಪಘಾತವಾಗಿ ಕೈಗೆ ಪೆಟ್ಟಾಗಿತ್ತು. ಊರಿನಿಂದ ಬಂದು ಈ ಆಸ್ಪತ್ರೆಗೆ ದಾಖಲಾದೆ. ಇಲ್ಲಿ ಉತ್ತಮ ಸೌಲಭ್ಯವಿದೆ. ರೋಗಿಗಳ ಜತೆ ಉಳಿಯಲು ಒಬ್ಬರಿಗೆ ಅವಕಾಶವಿದೆ. ಸಕಾಲಕ್ಕೆ ಚಿಕಿತ್ಸೆ, ವೈದ್ಯರು ಶಿಫಾರಸು ಮಾಡಿದ ಊಟ ಕೊಡುತ್ತಾರೆ. ನಾವು ಬಡವರು. ದೊಡ್ಡಾಸ್ಪತ್ರೆಗೆ ಹೋಗುವಷ್ಟು ಸ್ಥಿತಿವಂತರಲ್ಲ. ಆದರೆ, ಈ ಆಸ್ಪತ್ರೆಯಲ್ಲಿ ದೊಡ್ಡಾಸ್ಪತ್ರೆಯಷ್ಟೇ ಚೆನ್ನಾಗಿರುವ ಸೌಲಭ್ಯ ಇರೋದು ನಮ್ಮಂಥವರಿಗೆ ಅನುಕೂಲವಾಗಿದೆ’ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ಮಂಡ್ಯದ ದೊಡ್ಡಯ್ಯ.

**

ಕೈಗುಣ ಚೆನ್ನಾಗಿದೆ

ನಾನು ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತೇನೆ. ನನಗೆ ಹರ್ನಿಯಾ ಆಗಿತ್ತು. ಇದಕ್ಕೂ ಮೊದಲು ಎರಡು ಆಸ್ಪತ್ರೆಗಳಲ್ಲಿ ತೋರಿಸಿ, ಆಪರೇಷನ್ ಮಾಡಿಸಿಕೊಂಡಿದ್ದೆ. ಆದರೆ, ಎರಡೂ ಕಡೆ ಚಿಕಿತ್ಸೆ ಸರಿಯಾಗಿರಲಿಲ್ಲ. ಅಲ್ಲಿ ತರಬೇತಿ ವಿದ್ಯಾರ್ಥಿಗಳು ಚಿಕಿತ್ಸೆ ನೀಡಿದ್ದರು. ಕೊನೆಗೆ ಈ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿಕೊಂಡೆ. ಇಲ್ಲಿನ ವೈದ್ಯರ ಕೈಗುಣ ಚೆನ್ನಾಗಿದೆ. ಆಪರೇಷನ್ ಯಶಸ್ವಿಯಾಗಿದೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ’ ಎಂದು ಇಎಸ್‌ಐ ಆಸ್ಪತ್ರೆ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು ಪುಟ್ಟಯ್ಯ.

**

ರಾಜಾಜಿನಗರ ಇಎಸ್‌ಐ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯವಿದೆ. ಶೀಘ್ರದಲ್ಲೇ ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯ 500ರಿಂದ 750ಕ್ಕೆ ಏರಲಿದೆ.

–ರಚಿತಾ ಬಿಸ್ವಾಸ್, ಮೆಡಿಕಲ್ ಸೂಪರಿಟೆಂಡೆಂಟ್, ಇಎಸ್‌ಐ ಆಸ್ಪತ್ರೆ, ರಾಜಾಜಿನಗರ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry