ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಾಮದಾಯಕ ಸುಖಾಸನ

Last Updated 11 ಜನವರಿ 2018, 19:30 IST
ಅಕ್ಷರ ಗಾತ್ರ

ಯೋಗದ ಆರಂಭದಲ್ಲಿ ಅಭ್ಯಾಸ ಮಾಡುವ ಆಸನ ಸುಖಾಸನ. ಇದು ಹಿತವಾದ, ಸುಖಕರವಾದ ಆಸನವಾಗಿದೆ. ಸಾಮಾನ್ಯವಾಗಿ ಊಟಕ್ಕೆ ಸುಖಾಸನದಲ್ಲಿ ಕುಳಿತುಕೊಳ್ಳುತ್ತಾರೆ. ಮೊಣಕಾಲಿನ ಭಾಗ ಈ ಆಸನದಲ್ಲಿ ಎಳೆತಕ್ಕೆ ಒಳಗಾಗುತ್ತದೆ ಹಾಗೂ ಈ ಆಸನದಲ್ಲಿ ತುಂಬಾ ಹೊತ್ತು ಕುಳಿತುಕೊಳ್ಳಬಹುದಾಗಿದೆ. ಹೆಚ್ಚಿನ ಎಲ್ಲಾ ವಯೋಮಿತಿಯವರು ಈ ಆಸನದಲ್ಲಿ ಕುಳಿತುಕೊಳ್ಳುತ್ತಾರೆ. ಈ ಆಸನದಲ್ಲಿ ಕುಳಿತುಕೊಳ್ಳುವಾಗ ಬೆನ್ನು ನೇರಮಾಡಿದರೆ ಪೃಷ್ಠದ ಭಾಗ, ಬೆನ್ನು ಮೂಳೆಯ ಭಾಗಕ್ಕೆ ಯಾವುದೇ ರೀತಿಯ ಒತ್ತಡವಾಗುವುದಿಲ್ಲ. ಹಿತವಾದ ಅನುಭವ ದೊರಕುತ್ತದೆ.

ಅಭ್ಯಾಸಕ್ರಮ: ಜಮಖಾನ ಹಾಸಿದ ನೆಲದ ಮೇಲೆ ಬೆನ್ನು, ಕುತ್ತಿಗೆ ನೇರಮಾಡಿ ದಂಡಾಸನದಲ್ಲಿ ಕುಳಿತುಕೊಳ್ಳಬೇಕು. ಅನಂತರ ಬಲಗಾಲನ್ನು ಮಡಚಬೇಕು. ಎಡಗಾಲನ್ನು ಎಡಬದಿಗೆ ಮಡಚಬೇಕು (ಚಿತ್ರದಲ್ಲಿ ಇರುವಂತೆ). ಕೈಗಳಲ್ಲಿ ಚಿನ್ಮುದ್ರೆ ಮಾಡಿ ಬೆನ್ನು ಕುತ್ತಿಗೆ ನೇರಮಾಡಿ ಕುಳಿತುಕೊಳ್ಳಬೇಕು. ಸ್ವಲ್ಪ ಹೊತ್ತು ಸಾಮಾನ್ಯ ಉಸಿರಾಟದಲ್ಲಿಯೇ ವಿರಮಿಸಬೇಕು. ಅನಂತರ ವಿಶ್ರಾಂತಿ. ಈ ಆಸನದಲ್ಲಿ ಅಭ್ಯಾಸ ಆದರೆ ಪದ್ಮಾಸನ ಕಲಿಯಲು ಸುಲಭವಾಗುತ್ತದೆ.

ಪ್ರಯೋಜನಗಳು: ಇದೊಂದು ಸರಳ ಯೋಗಾಸನ. ನೆಲದ ಮೇಲೆ ಕುಳಿತು ಮಾಡುವ ಆಸನವಾಗಿದೆ. ಯೋಗದ ಸುಲಭ ಭಂಗಿ ಇದು. ಯೋಗದಲ್ಲಿ ಪ್ರಾಣಾಯಾಮ, ಧ್ಯಾನಕ್ಕೆ ಬಳಸುತ್ತಾರೆ. ಸಂಸ್ಕೃತದಲ್ಲಿ ಸುಖಮ್ ಎಂದರೆ ಆರಾಮ, ಸುಲಭ, ಸಂತೋಷದಾಯಕ ಇತ್ಯಾದಿ ಅರ್ಥವಿದೆ. ಮನಸ್ಸಿಗೆ ನೆಮ್ಮದಿ ಶಾಂತಿ ಒದಗಿ ಬರುತ್ತದೆ.

* ಯಾರಿಗೆ ಪದ್ಮಾಸನ, ವಜ್ರಾಸನ ಮಾಡಲು ಸಾಧ್ಯವಿಲ್ಲವೋ ಅಂತವರು ಸುಖಾಸನದಲ್ಲಿ ಪ್ರಾಣಾಯಾಮ, ಧ್ಯಾನ ಮಾಡಬಹುದು

* ಕಾಲಿನ ನರಗಳ ಸೆಳೆತ ನಿವಾರಣೆಯಾಗುತ್ತದೆ. ಮೂಲಧಾರ ಚಕ್ರದ ಸುಸ್ಥಿತಿಗೆ ಸಹಕಾರಿಯಾಗುತ್ತದೆ

* ಮೊಣಕಾಲುಗಳು ಬಲಗೊಳ್ಳುತ್ತವೆ

* ಬೆನ್ನು ಹುರಿಗೆ ಹೆಚ್ಚು ಒತ್ತಡವಾಗುವುದಿಲ್ಲ, ಬೆನ್ನು ನೇರ ಮಾಡಲು ಸುಲಭವಾಗುತ್ತದೆ

* ಸುಖಾಸನದಿಂದ ತುಂಬಾ ಪ್ರಯೋಜನಗಳಿವೆ. ಎಷ್ಟು ಹೊತ್ತು ಬೇಕಾದರೂ ಈ ಆಸನದಲ್ಲಿ ಕುಳಿತು ಕೊಳ್ಳಬಹುದು. ಯಾವುದೇ ರೀತಿಯ ಅಡ್ಡಪರಿಣಾಮ ಇರುವುದಿಲ್ಲ. ನೆಲದ ಮೇಲೆ ಕುಳಿತು ಊಟ ಮಾಡುವ ಹೆಚ್ಚಿನವರು ಈ ಆಸನದಲ್ಲೇ ಕುಳಿತುಕೊಳ್ಳುತ್ತಾರೆ

* ದೇಹದ ನಿಯಂತ್ರಣ ಮತ್ತು ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಕಾಲುಗಳ ಬಿಗಿತವನ್ನು ನಿವಾರಿಸುತ್ತದೆ

(ವಿಶೇಷ ಸೂಚನೆ: ತುಂಬಾ ಮಂಡಿನೋವು, ಸೊಂಟ ನೋವು ಇದ್ದವರು ಈ ಆಸನ ಅಭ್ಯಾಸ ಮಾಡುವುದು ಬೇಡ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT