ಬಾನ್ಸುರಿಯಲ್ಲಿ ಬಾಗೇಶ್ರೀ ಮೋಡಿ

7

ಬಾನ್ಸುರಿಯಲ್ಲಿ ಬಾಗೇಶ್ರೀ ಮೋಡಿ

Published:
Updated:
ಬಾನ್ಸುರಿಯಲ್ಲಿ ಬಾಗೇಶ್ರೀ ಮೋಡಿ

ಹಿಂದೂಸ್ತಾನಿ ಸಂಗೀತದ ಬಾನ್ಸುರಿ ವಾದನದಲ್ಲಿ ಪಂ. ಹರಿಪ್ರಸಾದ್‌ ಚೌರಾಸಿಯ ಅವರು ಮೇರು ಶಿಖರ. ಚಿಕ್ಕಂದಿನಿಂದಲೂ ನೀವು ಅವರೊಂದಿಗೆ ಒಡನಾಡುತ್ತಲೇ ಬಂದಿದ್ದೀರಿ. ನಿಮ್ಮ ಅನುಭವಗಳೇನು?

ಪಂ.ಹರಿಪ್ರಸಾದ್‌ ಚೌರಾಸಿಯ ಅವರ ಬಳಿ ಸಂಗೀತ ಅಭ್ಯಾಸ ಆರಂಭವಾದದ್ದೇ ಒಂದು ವಿಶಿಷ್ಟ ಮತ್ತು ರೋಚಕ ಅನುಭವ. ಅವರು ಯಾವಾಗಲೂ ಬ್ಯುಸಿ ಇರುತ್ತಿದ್ದರು. ದೇಶ ವಿದೇಶಗಳನ್ನು ಸುತ್ತುತ್ತಾ ಕಛೇರಿ ಕೊಡುತ್ತಿದ್ದರು. ಅವರು ವಿವಿಧ ವೇದಿಕೆಗಳಲ್ಲಿ ಬಾನ್ಸುರಿ ನುಡಿಸುತ್ತಿದ್ದುದನ್ನು ನೋಡುತ್ತಲೇ ನುಡಿಸಾಣಿಕೆ, ಬೆರಳಿನ ತಂತ್ರಗಾರಿಕೆ, ರಾಗಗಳನ್ನು ಪ್ರಸ್ತುತಪಡಿಸುವ ರೀತಿ, ಸಾಥಿದಾರರೊಂದಿಗಿನ ಹೊಂದಾಣಿಕೆ... ಇತ್ಯಾದಿ ವಿಷಯಗಳನ್ನು ಕಲಿತೆ.

ವೇದಿಕೆ ಮೇಲೆ ಕಾರ್ಯಕ್ರಮ ಕೊಡುವ ರೀತಿಯನ್ನು ಬಹುಬೇಗ ಕರಗತ ಮಾಡಿಕೊಂಡೆ. ಆರು ವರ್ಷದ ಬಾಲಕನಾಗಿದ್ದಾಗಲೇ ದೂರದರ್ಶನದಲ್ಲಿ ಬಾನ್ಸುರಿ ನುಡಿಸಿದ್ದೆ. ಇದೊಂದು ಬಹಳ ಅಪರೂಪದ ಅವಕಾಶ. ಅದಾಗಿ ಒಂಬತ್ತನೇ ವಯಸ್ಸಿಗೆ ಮುಂಬೈಯ ಸೇಂಟ್‌ ಜೇವಿಯಸ್‌ ಸ್ಕೂಲ್‌ನಲ್ಲಿ ಮೊದಲ ಸಾರ್ವಜನಿಕ ಕಾರ್ಯಕ್ರಮ ನೀಡಿದೆ. ಅಲ್ಲಿ ವೇದಿಕೆ ಮೇಲೆ ಹೋದಾಗ ಬಹಳ ಭಯ ಆಯ್ತು. ಕುರ್ತಾ ಧರಿಸಿದ್ದ ನಾನು ‘ಬಾಗೇಶ್ರೀ’ಯನ್ನು ಕಣ್ಣುಮುಚ್ಚಿ ನುಡಿಸಲಾರಂಭಿಸಿದೆ. ಐನೂರು ಜನರ ಒಂದು ಸಾವಿರ ಕಣ್ಣುಗಳು ನನ್ನ ಮೇಲೇ ನೆಟ್ಟಿದ್ದವು. ಅವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದಾಗ ಅವ್ಯಕ್ತ ಆನಂದ ಉಂಟಾಯಿತು. ರಷ್ಯಾದಲ್ಲಿ ಮೊದಲ ಬಾರಿಗೆ ಪಂ.ಹರಿಪ್ರಸಾದ್‌ ಚೌರಾಸಿಯ ಜತೆಗೆ 13ನೇ ವಯಸ್ಸಿಗೆ ಮೊದಲ ಬಾನ್ಸುರಿ ಕಛೇರಿ ನೀಡಿದ್ದು ಕೂಡ ಅದ್ಭುತ ಅನುಭವವೇ ಸರಿ.

ಬಾನ್ಸುರಿ ಸೋಲೊ ಅಲ್ಲದೆ ಹಲವಾರು ಜುಗಲ್‌ಬಂದಿ ‌ಕಛೇರಿಗಳನ್ನೂ ನೀಡಿ ಹೆಸರಾದವರು ನೀವು. ಎರಡು ವಾದ್ಯಗಳ ಜತೆಗೆ ಮತ್ತು ಗಾಯನ–ವಾದನಗಳ ಮಧ್ಯೆ ಹೊಂದಾಣಿಕೆ ಸೃಷ್ಟಿಸುವುದು ಹೇಗೆ?

ಜುಗಲ್‌ಬಂದಿ ಕಛೇರಿ ನೀಡುವಾಗ ಹಲವಾರು ಅಂಶಗಳನ್ನು ನಾವು ಗಮನದಲ್ಲಿಡಬೇಕಾಗುತ್ತದೆ. ಬರೀ ವಾದ್ಯ, ರಾಗಗಳು ಮಾತ್ರವಲ್ಲ, ಇಬ್ಬರು ಪರಸ್ಪರ ಅರ್ಥ ಮಾಡಿಕೊಂಡು ರಾಗಗಳನ್ನು ಪ್ರಸ್ತುತಪಡಿಸಬೇಕು. ಬಾನ್ಸುರಿ–ಸರೋದ್‌, ಬಾನ್ಸುರಿ–ಸಿತಾರ್‌ ಅಲ್ಲದೆ ಉಸ್ತಾದ್‌ ರಶೀದ್‌ಖಾನ್‌, ದೇವಕಿ ಪಂಡಿತ್‌ ಮುಂತಾದ ಪ್ರಸಿದ್ಧ ಗಾಯಕರ ಜತೆಗೂ ಹಲವಾರು ಜುಗಲ್‌ಬಂದಿ ಕಛೇರಿ ನೀಡಿದ್ದೇನೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಕೊಳಲಿನ ಜತೆಗೂ ಬಾನ್ಸುರಿ ನುಡಿಸಿದ್ದೇನೆ. ಪಂ.ಚೌರಾಸಿಯ–ಪಂ.ಶಿವಕುಮಾರ್‌ ಶರ್ಮ ಅವರ ಬಾನ್ಸುರಿ–ಸಂತೂರ್‌ ಜುಗಲ್‌ಬಂದಿ ನನಗೆ ಬಹಳ ಇಷ್ಟ. ಏನೇ ಆದರೂ ನನಗೆ ಜುಗಲ್‌ಬಂದಿಗಿಂತ ಸೋಲೊ ಕಛೇರಿ ಕೊಡುವುದೇ ಮೊದಲ ಆದ್ಯತೆ. ಇಲ್ಲಿ ನಮ್ಮ ಇಷ್ಟ ಪ್ರಕಾರ ರಾಗಗಳನ್ನು ವಿಸ್ತರಿಸಬಹುದು, ನಮ್ಮ ‘ಮನೋಧರ್ಮ’ವನ್ನು ಅಭಿವ್ಯಕ್ತಿಸಬಹುದು.

ಮಧ್ಯರಾತ್ರಿಯ ಸುಮಧುರ ರಾಗ ಬಾಗೇಶ್ರೀ. ಬಹುತೇಕ ಕಛೇರಿಗಳಲ್ಲಿ ಈ ರಾಗಕ್ಕೆ ಆದ್ಯತೆ ನೀಡುತ್ತಾ ಬಂದಿದ್ದೀರಿ. ಇದರ ಜತೆಗೆ ಬೇರೆ ಯಾವ ರಾಗಗಳನ್ನು ನೀವು ಹೆಚ್ಚು ಇಷ್ಟಪಡುತ್ತೀರಿ? 

ಬಾಗೇಶ್ರೀ ಜೊತೆಗೆ ಸುಮಧುರ ರಾಗಗಳಾದ ಯಮನ್‌, ಭೂಪಾಲಿ, ಹಂಸಧ್ವನಿ, ಜೋಗ್‌, ದೇಸ್‌, ಚಂದ್ರಕೌಂಸ್, ಬಿಹಾಗ್‌, ತೋಡಿ, ಆಹಿರ್‌ಭೈರವ್‌... ರಾಗಗಳನ್ನೂ ಬಹಳ ಪ್ರೀತಿಸುತ್ತೇನೆ. ದೇಶ ವಿದೇಶಗಳಲ್ಲಿ ಸಾಕಷ್ಟು ಕಛೇರಿಗಳಲ್ಲಿ ಈ ರಾಗಗಳನ್ನು ನುಡಿಸಿದ್ದೇನೆ. ರಾಗಗಳ ಬಗ್ಗೆ ಆಳವಾದ ಅಧ್ಯಯನವನ್ನೂ ಮಾಡಿದ್ದೇನೆ. ಬಿದಿರಿನಿಂದ ಮಾಡಿದ ಈ ಸುಷಿರ ವಾದ್ಯದಲ್ಲಿ ಈ ರಾಗಗಳಿಗೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡಿ ಕೇಳುಗರನ್ನು ತೃಪ್ತಿಪಡಿಸುತ್ತಿದ್ದೇನೆ.

ಇತ್ತೀಚಿನ ಕೆಲ ದಿನಗಳಲ್ಲಿ ತಬಲಾ ಮಾಂತ್ರಿಕ ಉಸ್ತಾದ್‌ ಜಾಕೀರ್‌ ಹುಸೇನ್‌ ಅವರೊಂದಿಗೆ ವಿಶ್ವದ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಬಾನ್ಸುರಿ ನುಡಿಸುತ್ತಾ ಬರುತ್ತಿದ್ದೀರಿ. ಸುಷಿರ ವಾದ್ಯ– ಲಯವಾದ್ಯ ನಾದವನ್ನು ಒಂದೇ ವೇದಿಕೆಯಲ್ಲಿ ಒಟ್ಟೊಟ್ಟಿಗೇ ಸವಿಯುವ ಅವಕಾಶ ಸಹೃದಯರಿಗೆ. ನಿಮಗೆ ಏನನಿಸುತ್ತದೆ?

ಉಸ್ತಾದ್‌ ಜಾಕೀರ್‌ ಹುಸೇನ್‌ ಸಂಗೀತದ ಮೌಂಟ್‌ ಎವರೆಸ್ಟ್‌. ಅವರ ಸಂಗೀತ ಶಕ್ತಿ, ಅಸಾಧಾರಣ ಪಾಂಡಿತ್ಯ ವರ್ಣನೆಗೂ ನಿಲುಕದ್ದು. ಅವರೊಂದಿಗೆ ಒಂದೇ ವೇದಿಕೆಯಲ್ಲಿ ಕಾರ್ಯಕ್ರಮ ನೀಡುವುದು ನನ್ನ ಅದೃಷ್ಟವೇ ಸರಿ. ಜತೆಗೆ ಅವರು ವೇದಿಕೆಗಳಲ್ಲಿ ಮಾಡಿಕೊಳ್ಳುವ ಹೊಂದಾಣಿಕೆ ಅದ್ಭುತ, ಅನನ್ಯ. ತಬಲಾ ಬೋಲ್‌ಗಳ ಮೂಲಕವೇ ಅವರು ರಾಗಗಳನ್ನೂ ಅರಳಿಸುವ ಪರಿ ನಿಜಕ್ಕೂ ಸೋಜಿಗವೇ ಸರಿ. ನಾನು ಅವರಿಗಿಂತ ಬಹಳ ಚಿಕ್ಕವನು. ಆದರೆ ವೇದಿಕೆಗಳಲ್ಲಿ ಅವರು ಎಂದೂ ಹಾಗೆ ನೋಡಲೇ ಇಲ್ಲ. ಸಂಗೀತದ ಎರಡು ಪ್ರಮುಖ ಅಂಶಗಳಾದ ಮಾಧುರ್ಯ ಮತ್ತು ಲಯ ಎರಡನ್ನೂ ಸಮಾನವಾಗಿ ಕಂಡು ನುಡಿಸುವುದು ಅವರ ಹೆಚ್ಚುಗಾರಿಕೆ. ಜಾಕೀರ್‌ ಹುಸೇನ್‌ ಅವರೊಂದಿಗೆ ಈಗಾಗಲೇ ಅಮೆರಿಕದ ಅನೇಕ ಕಡೆಗಳಲ್ಲಿ, ಯೂರೋಪ್‌, ಇಂಗ್ಲೆಂಡ್‌ ಮುಂತಾದ ರಾಷ್ಟ್ರಗಳಲ್ಲಿ ಕಛೇರಿ ನೀಡಿದ್ದೇನೆ. ಇವೆಲ್ಲವೂ ಅತ್ಯಂತ ಸ್ಮರಣೀಯ ಕಛೇರಿಗಳು ಎಂದೇ ನಾನು ಭಾವಿಸುತ್ತೇನೆ.

ಶಾಸ್ತ್ರೀಯ ಸಂಗೀತದ ಜತೆಗೆ ಸಿನಿಮಾ, ಫ್ಯೂಷನ್‌, ಜಾಸ್‌ ಸಂಗೀತ ಪ್ರಕಾರಗಳಲ್ಲಿಯೂ ನೀವು ಸಾಕಷ್ಟು ಕೃಷಿ ಮಾಡಿದ್ದೀರಿ. ವಿದೇಶೀ ಸಂಗೀತಗಾರರೊಂದಿಗೂ ಅನನ್ಯ ಸಂಬಂಧ ಹೊಂದಿ ಅವರೊಂದಿಗೂ ನುಡಿಸಿದ್ದೀರಿ. ನಿಮ್ಮ ಆದ್ಯತೆ ಯಾವುದು?

ಸಾಕಷ್ಟು ಆಲ್ಬಂಗಳಲ್ಲಿ, ರೆಕಾರ್ಡಿಂಗ್‌ಗಳಲ್ಲಿ ಫ್ಯೂಷನ್‌ ಕಛೇರಿಗಳಲ್ಲಿ ಸಂಗೀತದ ವಿವಿಧ ಪ್ರಕಾರಗಳನ್ನು ನುಡಿಸುತ್ತಾ ಬಂದಿದ್ದೇನೆ. ವಿದೇಶಿ ವಾದ್ಯಗಾರರೊಂದಿಗೂ ನುಡಿಸಿದ್ದೇನೆ. ಫ್ಯೂಷನ್‌ ಆಲ್ಬಂಗಳು ಬಹಳ ಜನಪ್ರಿಯವೂ ಆಗಿವೆ. ಜಾಸ್‌ ಕೂಡ ಇಷ್ಟವಾದ ನುಡಿಸಾಣಿಕೆಯೇ. ಏನೇ ಆದರೂ ನನ್ನ ಮೊದಲ ಆದ್ಯತೆ ಶಾಸ್ತ್ರೀಯ ಸಂಗೀತಕ್ಕೇ. ನನ್ನ ಗುರು ಮತ್ತು ಸಂಬಂಧಿ ಪಂ.ಚೌರಾಸಿಯ ಅವರೂ ನನಗೆ ಯಾವ ಪ್ರಕಾರ ನುಡಿಸುವಾಗಲೂ ನಿರ್ಬಂಧ ಹೇರಲಿಲ್ಲ. ಏನೇ ನುಡಿಸಿದರೂ ತೃಪ್ತಿಯಿಂದ, ಎಂಜಾಯ್‌ ಮಾಡಿಕೊಂಡೇ ನುಡಿಸು ಎಂದು ಹುರಿದುಂಬಿಸಿದರು. ನಾನು ಹೆಚ್ಚಿನ ಒತ್ತಾಸೆ ನೀಡುವುದು ಪಾರಂಪರಿಕ ಹಿಂದೂಸ್ತಾನಿ ಸಂಗೀತಕ್ಕೇ.

ಬಾಲಿವುಡ್‌ ಹಿನ್ನೆಲೆ ಸಂಗೀತದಲ್ಲೂ ನಿಮ್ಮ ಒಲವು, ಸಾಧನೆ ಕಡಿಮೆಯದ್ದಲ್ಲ. ಹಲವು ಸಿನಿಮಾ ಗೀತೆಗಳಲ್ಲಿ ನಿಮ್ಮ ಬಾನ್ಸುರಿ ನಾದ ಅನುರಣಿಸಿದೆ. ಬಾಲಿವುಡ್‌ನೊಂದಿಗೆ ನೀವು ಸಂಪರ್ಕ ಬೆಳೆಸಿಕೊಂಡದ್ದು ಹೇಗೆ?

ಹಲವಾರು ಹಿಂದಿ ಸಿನಿಮಾಗಳ ಗೀತೆಗಳಿಗೆ ರಾಗ ಸಂಯೋಜನೆ ಮಾಡಿದ್ದೇನೆ. ಬಾನ್ಸುರಿ ನುಡಿಸಿದ್ದೇನೆ. ಸಿನಿಮಾ ಉದ್ಯಮದಲ್ಲಿ ಸಾಕಷ್ಟು ಹಣ ಗಳಿಕೆ ಮಾಡಬಹುದು. ನೆಮ್ಮದಿಯ ಬದುಕಿಗೆ ‘ಲಕ್ಷ್ಮಿ’ಯೂ ಬೇಕಲ್ಲವೇ? ಸಂಗೀತ ನಿರ್ದೇಶಕರಾದ ಲಕ್ಷ್ಮೀಕಾಂತ್‌ ಪ್ಯಾರೆಲಾಲ್‌, ಕಲ್ಯಾಣ್‌ಜಿ ಆನಂದ್‌ಜಿ, ಅನು ಮಲಿಕ್‌ ಮುಂತಾದವರ ಜತೆಗೆ ಸಿನಿಮಾ ಸಂಗೀತದಲ್ಲಿ ಬಹಳಷ್ಟು ತೊಡಗಿಸಿಕೊಂಡಿದ್ದೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry