ಮೆಟ್ರೊ ವಿಸ್ತರಣೆ: ಹೂಡಿಕೆದಾರರ ಆಕರ್ಷಣೆ

7

ಮೆಟ್ರೊ ವಿಸ್ತರಣೆ: ಹೂಡಿಕೆದಾರರ ಆಕರ್ಷಣೆ

Published:
Updated:
ಮೆಟ್ರೊ ವಿಸ್ತರಣೆ: ಹೂಡಿಕೆದಾರರ ಆಕರ್ಷಣೆ

ಬೆಂಗಳೂರಿನ ಅಭಿವೃದ್ಧಿಯ ವೇಗ ಭೌಗೋಳಿಕವಾಗಿ ವಿಸ್ತರಣೆಗೊಳ್ಳುತ್ತಾ, ಸಾಕಷ್ಟು ಪ್ರದೇಶಗಳು ಬಡಾವಣೆ, ಟೆಕ್ ಪಾರ್ಕ್‌ಗಳಾಗಿ ಮಾರ್ಪಾಡಾಗಿವೆ. ಇದರಲ್ಲಿ ಯಲಹಂಕವೂ ಒಂದು. ದಶಕಗಳಿಂದ ಹಂತ ಹಂತವಾಗಿ ಅಭಿವೃದ್ಧಿ ಹೊಂದಿ ವ್ಯವಸ್ಥಿತ ವಸತಿ ಯೋಗ್ಯ ಪ್ರದೇಶವಾಗಿ ಯಲಹಂಕ ಬದಲಾಗಿದೆ.

80-90ರ ದಶಕಗಳಲ್ಲಿ, ಭಾರತೀಯ ರೈಲ್ವೆ ಗಾಲಿ ಕಾರ್ಖಾನೆ, ಮದರ್ ಡೈರಿ, ಎಸ್ಕಾರ್ಟ್ಸ್ ನಂತಹ ಬೃಹತ್ ಉದ್ದಿಮೆಗಳು ಇಲ್ಲಿ ಆರಂಭವಾದವು. ಅಲ್ಲಿಂದ ಮುಂದೆ ಇಲ್ಲಿನ ಸುತ್ತಲ ಪ್ರದೇಶಗಳು ಗಣನೀಯವಾಗಿ ಬೆಳೆಯುತ್ತಾ ಹೋಯಿತು. ಇಲ್ಲಿರುವ ವ್ಯವಸ್ಥಿತ ಬಡಾವಣೆ, ವಿಶಾಲ ರಸ್ತೆಗಳು, ಒಳಚರಂಡಿ ವ್ಯವಸ್ಥೆ, ನೀರಿನ ಸಂಪರ್ಕ, ಉದ್ಯಾನವನಗಳಿಂದ ಕೂಡಿರುವ ಈ ಪ್ರದೇಶವು ಹೂಡಿಕೆದಾರರನ್ನು ಆಕರ್ಷಿಸುತ್ತಿವೆ.

10 ವರ್ಷಗಳ ಹಿಂದೆ ನಗರದ ಹೊರವಲಯ ಎಂದೇ ಗುರುತಿಸಿಕೊಂಡಿದ್ದ ಯಲಹಂಕದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾಪನೆ ನಂತರ ರಿಯಲ್‌ ಎಸ್ಟೇಟ್‌ ಚಟುವಟಿಕೆಗಳು ಗರಿಗೆದರಿದವು. ಯಲಹಂಕ ಪೊಲೀಸ್ ಠಾಣೆ ಸರ್ಕಲ್‌ನಿಂದ ಸಾಗುವ ದೊಡ್ಡಬಳ್ಳಾಪುರ ರಸ್ತೆಗೆ ಹೊಂದಿಕೊಂಡಿರುವಂತೆ ಇರುವ ಪುಟ್ಟೇನಹಳ್ಳಿ, ಅನಂತಪುರ, ರಾಮಗೊಂಡನಹಳ್ಳಿ, ಕೆಂಚೇನಹಳ್ಳಿ, ನಾಗೇನಹಳ್ಳಿ, ಅವಲಹಳ್ಳಿ, ಸಿಂಗನಾಯಕನಹಳ್ಳಿ, ರಾಜಾನುಕುಂಟೆ ಭಾಗದಲ್ಲಿ ಪ್ರತಿಷ್ಠಿತ ಖಾಸಗಿ ಬಿಲ್ಡರ್‌ಗಳು ಅಪಾರ್ಟ್‌ಮೆಂಟ್‌, ವಿಲ್ಲಾಗಳನ್ನು ನಿರ್ಮಾಣ ಮಾಡಿದ್ದಾರೆ.

ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್, ಕಿರ್ಲೊಸ್ಕರ್ ಟೆಕ್ ಪಾರ್ಕ್, ಮ್ಯಾಗ್ನಮ್ ಟೆಕ್ ಪಾರ್ಕ್‌ಗಳಲ್ಲಿ ಅನೇಕ ಪ್ರತಿಷ್ಠಿತ ಐಟಿ ಕಂಪನಿಗಳಿವೆ. ಬಾಶೆಟ್ಟಿಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಬೃಹತ್ ಉದ್ದಿಮೆಗಳು ನೆಲೆ ಕಂಡುಕೊಂಡಿವೆ. ಈ ಎಲ್ಲ ಕಾರಣಗಳಿಂದಾಗಿ ಯಲಹಂಕ ಕಾರ್ಮಿಕರ ನೆಚ್ಚಿನ ವಸತಿ ಪ್ರದೇಶ ಎನಿಸಿಕೊಂಡಿದೆ. ಯಲಹಂಕ ಪೊಲೀಸ್ ಠಾಣೆ ಸರ್ಕಲ್ ಬಳಿ ಆರ್‌ಎಂಝಡ್ ಸಂಸ್ಥೆ ಹೊಸದಾಗಿ ಮಾಲ್ ಅನ್ನು ನಿರ್ಮಿಸಿದೆ.

(ಪ್ರಶಾಂತ್‌)

ಯಲಹಂಕದಲ್ಲಿ ಈಗಾಗಲೇ ರೈಲು ನಿಲ್ದಾಣವಿದ್ದು, ಕಂಟೋನ್‌ಮೆಂಟ್‌, ಬೆಂಗಳೂರು ಸಿಟಿ, ದೊಡ್ಡಬಳ್ಳಾಪುರ ಭಾಗದಿಂದ ಡೆಮು–ಮೆಮು ರೈಲು ಸೇವೆ ಲಭ್ಯ. ಮುಂದಿನ ದಿನಗಳಲ್ಲಿ ಮೆಟ್ರೊ ರೈಲು ಸಹ ಯಲಹಂಕಕ್ಕೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ಇದು ರಿಯಲ್ ಎಸ್ಟೇಟ್ ಬೆಳವಣಿಗೆಗೆ ಇನ್ನಷ್ಟು ವೇಗ ನೀಡುವ ನಿರೀಕ್ಷೆ ಇದೆ.

ಇಲ್ಲಿ ಬಿಎಂಎಸ್‌ಐಟಿ ಎಂಜಿನಿಯರಿಂಗ್ ಕಾಲೇಜು, ರೆವಾ ವಿಶ್ವವಿದ್ಯಾಲಯ, ನಿಟ್ಟೆ ಕಾಲೇಜು ಸೇರಿದಂತೆ ಕೆಲ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿವೆ. ಇದರ ಜತೆಗೆ ವಿಶ್ವ ವಿದ್ಯಾಪೀಠ ಶಾಲೆ, ಪ್ರೆಸಿಡೆನ್ಸಿ ಶಾಲೆ, ಸ್ಟೋನ್‌ಹೀಲ್ ಇಂಟರ್‌ನ್ಯಾಷನಲ್ ಸ್ಕೂಲ್, ವಿದ್ಯಾಶಿಲ್ಪ ಶಾಲೆ, ಕೆನಡಿಯನ್ ಇಂಟರ್‌ನ್ಯಾಷನಲ್ ಸ್ಕೂಲ್, ಡೆಲ್ಲಿ ಪಬ್ಲಿಕ್ ಸ್ಕೂಲ್, ಮಲ್ಯ ಇಂಟರ್‌ನ್ಯಾಷನಲ್ ಸ್ಕೂಲ್ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಇಲ್ಲಿವೆ. ಕ್ರೀಡೆ ಹಾಗೂ ಮನರಂಜನೆಗೆ ರಮಣ ಮಹರ್ಷಿ ಕ್ಯಾಲಿಫೋರ್ನಿಯಾ, ರಾಯಲ್ ಆರ್ಚಿಡ್, ರೈಲ್ ವಿಲ್ ಆಫೀಸರ‍್ಸ್ ಕ್ಲಬ್, ಯಲಹಂಕ ನ್ಯೂ ಟೌನ್ ಕ್ಲಬ್‌ಗಳು ಇವೆ. ಹೂಡಿಕೆ ನಿರ್ಧಾರವನ್ನು ಪ್ರಭಾವಿಸುವ ಅಂಶಗಳಲ್ಲಿ ಇವೂ ಸೇರಿವೆ.

ದೊಡ್ಡಬಳ್ಳಾಪುರ ರಸ್ತೆಯ ಪ್ರದೇಶದಲ್ಲಿ ಬೃಹತ್ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ಖಾಸಗಿ ಬಿಲ್ಡರ್‌ಗಳಲ್ಲಿ ತೀವ್ರ ಪೈಪೋಟಿ ಇದೆ. 2 ಬಿಎಚ್‌ಕೆ, 3 ಬಿಎಚ್‌ಕೆ, ಐಷಾರಾಮಿ ವಿಲ್ಲಾಗಳಿಗೆ ಸಾಕಷ್ಟು ಬೇಡಿಕೆಯೂ ಇದೆ. ಪ್ರೆಸ್ಟೀಜ್, ಎಲಿಗಂಟ್, ಡಿ.ಎಸ್.ಮ್ಯಾಕ್ಸ್, ಪಿರಮಿಡ್, ಲೆಗಸಿ, ಶ್ರೀ ರಾಮ್, ಸೂರ್ಯ, ಹೆರಿಟೇಜ್ ಸೇರಿದಂತೆ ಹಲವು ಪ್ರತಿಷ್ಠಿತ ಕಂಪೆನಿಗಳು ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಿವೆ.

‘ಬೆಂಗಳೂರು ಉತ್ತರ ಭಾಗ, ಮುಖ್ಯವಾಗಿ ಯಲಹಂಕ ಸುತ್ತಮುತ್ತಲ ಪ್ರದೇಶ ಸಾಕಷ್ಟು ಅಭಿವೃದ್ಧಿ ಕಂಡಿದೆ. ಪ್ರಸ್ತುತ ಪ್ರತಿ ಚದರ ಅಡಿಯ ಮೌಲ್ಯ ₹5,000 ಆಸುಪಾಸು ಇದೆ. ಸುಮಾರು ನಾಲ್ಕು ವರ್ಷಗಳಲ್ಲಿ ಇದು ₹8,000 ಮುಟ್ಟವ ಸಾಧ್ಯತೆ ಇದೆ’ ಎನ್ನುತ್ತಾರೆ ಎಲಿಗಂಟ್ ಸಂಸ್ಥೆಯ ವ್ಯವಸ್ಥಾಪಕ ಪ್ರಶಾಂತ್.

‘ಅಟ್ಟೂರು, ಅಳ್ಳಾಳಸಂದ್ರ, ಅರೋಹಳ್ಳಿ ಬಳಿಯ ಕೆರೆಗಳನ್ನು ಪುನಃಶ್ಚೇತನಗೊಳಿಸಿ ಸುಂದರ ಉದ್ಯಾನವನಗಳನ್ನಾಗಿ ಮಾಡಿದ್ದಾರೆ. ‘ಬಯಪ’ (ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಪ್ರದೇಶ ಯೋಜನೆ) ಭವಿಷ್ಯದಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿಗೆ ಆರ್ಥಿಕ ಉತ್ತೇಜನ ನೀಡುತ್ತದೆ’ ಎಂದು ಸ್ಥಳೀಯ ನಿವಾಸಿ ವಾಸುದೇದ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

*

ನಾಗವಾರದಿಂದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಸ್ತರಣೆಯಾಗುವ ಮೆಟ್ರೊ ರೈಲು ಯಲಹಂಕ ಮೂಲಕ ಹಾದು ಹೋಗುತ್ತದೆ. ಯಲಹಂಕ ರೈಲ್ವೆ ಸ್ಟೇಷನ್ ಈಗ ಜಂಕ್ಷನ್ ಆಗಿ ಮಾರ್ಪಟ್ಟಿದೆ. ಸಬರನ್ ರೈಲ್ವೆ ಯೋಜನೆ ಅನುಷ್ಠಾನಗೊಂಡರೆ ಸಾರಿಗೆ ಸಂಪರ್ಕ ಇನ್ನಷ್ಟು ಸುಧಾರಣೆಗೊಳ್ಳುತ್ತದೆ.

–ಮುನೇಗೌಡ, ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ವಕೀಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry