ಗೋಡೆಗಳಿಗೊಂದು ಬಣ್ಣದ ಸ್ಪರ್ಶ

7

ಗೋಡೆಗಳಿಗೊಂದು ಬಣ್ಣದ ಸ್ಪರ್ಶ

Published:
Updated:
ಗೋಡೆಗಳಿಗೊಂದು ಬಣ್ಣದ ಸ್ಪರ್ಶ

ಅದೊಂದು ಪುಟ್ಟದಾದ ಚಿಕ್ಕ ಮನೆ. ಹೊರಗಡೆಯಿಂದ ನೋಡಿದರೆ ಸಾಮಾನ್ಯ ಮನೆಯಂತೆ ಕಾಣುತ್ತಿತ್ತು. ಆದರೆ ಮನೆಯ ಒಳಗೆ ಅಡಿ ಇಟ್ಟರೆ ಹೊಸತೊಂದು ಲೋಕವೇ ತೆರೆದುಕೊಳ್ಳುತ್ತದೆ. ಗೋಡೆಯ ಮೇಲೆ ಬಳಿದ ಬಣ್ಣಗಳು ಮನಸ್ಸಿಗೇನೋ ಮುದ ನೀಡುವಂತಿತ್ತು. ಅಲ್ಲಲ್ಲಿ ಹಾರುವ ಚಿಟ್ಟೆಗಳು, ಅಲ್ಲೆಲ್ಲೂ ಗೋಡೆಯ ಪೂರ್ವ ದಿಕ್ಕಿನಲ್ಲಿ ಅಲಂಕರಿಸಿದ ಬುದ್ಧನ ಪ್ರತಿಮೆ, ಅಡುಗೆ ಮನೆಯ ಗೋಡೆಯ ಮೇಲೆ ಹಣ್ಣು–ತರಕಾರಿಗಳು, ಮಕ್ಕಳ ಕೋಣೆಯಲ್ಲಿ ಅರಳಿದ ನಕ್ಷತ್ರಲೋಕ ನೋಡಿದ ತಕ್ಷಣ ವಾವ್ ಎನ್ನುವಂತೆ ಮಾಡಿತ್ತು. ಇವೆಲ್ಲ ಮನೆಯ ಒಳಾಂಗಣ ವಿನ್ಯಾಸದ ಹೊಸ ಟ್ರೆಂಡ್‌. ಕಳೆದ ಕೆಲ ವರ್ಷದಿಂದ ಬಳಕೆಯಲ್ಲಿದ್ದ ಈ ಟ್ರೆಂಡ್ ಇತ್ತೀಚೆಗೆ ಹೆಚ್ಚು ಪ್ರಖ್ಯಾತಿ ಹೊಂದುತ್ತಿದೆ.

ಇತ್ತೀಚೆಗೆ ಜನರು ಹೊರಾಂಗಣ ಅಲಂಕಾರಕ್ಕಿಂತ ಒಳಾಂಗಣ ಅಲಂಕಾರಕ್ಕೆ ಜನರು ಹೆಚ್ಚು ಒತ್ತು ನೀಡುತ್ತಿದ್ದಾರೆ. ಅದೊಂದು ಟ್ರೆಂಡ್ ಆಗಿದೆ ಕೂಡ. ಕಳೆದ ವರ್ಷ ಒಂದಷ್ಟು ಬಣ್ಣಗಳು ಗೋಡೆಗೆ ಮೆರುಗು ನೀಡಿದ್ದರೆ ಈ ವರ್ಷ ಬೇರೆಯದೇ ಬಣ್ಣಗಳು ಗೋಡೆಯನ್ನು ಅಲಂಕರಿಸುತ್ತವೆ. ಬಣ್ಣಗಳ ಆಯ್ಕೆಯೂ ಕೂಡ ಹಿಂದಿಗಿಂತ ಭಿನ್ನವಾಗಿದೆ. ಹಿಂದೆಲ್ಲಾ ಮ್ಯಾಚಿಂಗ್ ಬಣ್ಣಗಳನ್ನೇ ಜನರು ಹೆಚ್ಚು ಇಷ್ಟಪಡುತ್ತಿದ್ದರು. ಆದರೆ ಇಂದು ಹಾಗಲ್ಲ. ತೀರಾ ವಿರುದ್ಧವಾದ ಬಣ್ಣಗಳೇ ಗೋಡೆಯ ಅಂದವನ್ನು ಹೆಚ್ಚಿಸುತ್ತಿದೆ. ಅಲ್ಲದೇ ಜನರು ಅದನ್ನೇ ಮೆಚ್ಚುತ್ತಿದ್ದಾರೆ ಕೂಡ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿನ್ಯಾಸದಲ್ಲಿ ಅಷ್ಟೊಂದು ಬದಲಾವಣೆಗಳಾಗಿಲ್ಲ ಎನ್ನುವುದು ವಿನ್ಯಾಸಕಾರರ ಮಾತು.

ಟೆಕ್ಚ್ಸರ್ ಪೇಂಟಿಂಗ್ ಇತ್ತೀಚೆಗೆ ಜನರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿದೆ. ಕಪಾಟು, ಪೀಠೋಪಕರಣಗಳಿಗೆ ನೀಡುವಷ್ಟೇ ಒತ್ತನ್ನು ಗೋಡೆಯ ವಿನ್ಯಾಸಕ್ಕೆ ನೀಡುತ್ತಿದ್ದಾರೆ ಎನ್ನುವುದು ವಿನ್ಯಾಸಕರ ಅಭಿಮತ. ಹೊಸ ಹೊಸ ಟ್ರೆಂಡ್‌ಗಳು ಬಂದಾಗ ಅದರಲ್ಲೆ ವಿಭಿನ್ನತೆಯನ್ನು ಗುರುತಿಸಿ ಅದನ್ನು ಗೋಡೆಗಳನ್ನು ಮೂಡಿಸುವಲ್ಲಿ ಅನೇಕ ವಿನ್ಯಾಸಕಾರರು ಯಶಸ್ವಿಯಾಗಿದ್ದಾರೆ.

ಬಣ್ಣಗಳ ವಿನ್ಯಾಸ: ಗೋಡೆಗೆ ಯಾವುದೋ ಒಂದು ಬಣ್ಣ ಬಳಿದು ಸುಂದರವಾಗಿ ಕಾಣುವಂತೆ ಮಾಡುವುದು ಹಿಂದಿನಿಂದಲೂ ರೂಢಿಯಲ್ಲಿದೆ. ಆದರೆ ಇಂದು ಬಣ್ಣಗಳಲ್ಲೂ ವಿನ್ಯಾಸವನ್ನು ರೂಪಿಸುವುದು ಹೊಸ ಟ್ರೆಂಡ್‌. ಒಂದೇ ಕೋಣೆಯ ಗೋಡೆ ಅರ್ಧದಷ್ಟು ಒಂದು ಬಣ್ಣ ಬಳಿದರೆ, ಅದಕ್ಕೆ ವಿರುದ್ಧವಾದ ಬಣ್ಣವನ್ನು ಇನ್ನೂ ಅರ್ಧ ಗೋಡೆಗಳಿಗೆ ಬಳಿಯುತ್ತಾರೆ. ಇದು ಹೊಸತೊಂದು ವಿನ್ಯಾಸವನ್ನು ರೂಪಿಸುತ್ತದೆ. ಕೆಲವರು ಮನೆಯ ಗೋಡೆಗಳಿಗೆ ಬಳಿಯುವ ಬಣ್ಣಗಳಲ್ಲೂ ವಾಸ್ತುವನ್ನು ನೋಡುತ್ತಾರೆ. ವಾಸ್ತುವಿನ ಆಧಾರದ ಮೇಲೆ ಯಾವ ಬಣ್ಣ ಯಾವ ಗೋಡೆಗೆ ಬೇಕು ಎಂದು ನಿರ್ಧರಿಸುತ್ತಾರೆ.

ಪ್ರತಿ ಬಣ್ಣಕ್ಕೂ ಒಂದೊಂದು ಅರ್ಥವಿರುವ ಕಾರಣಕ್ಕೆ ಪರಿಕಲ್ಪನೆಯೂ ಕೂಡ ಬಣ್ಣದ ಅರ್ಥಗಳೊಂದಿಗೆ ತಳಕು ಹಾಕಿಕೊಳ್ಳುತ್ತವೆ. ಬಣ್ಣಗಳ ಆಯ್ಕೆ ಕೂಡ ವಾಸಸ್ಥಳ ಹಾಗೂ ಕಾರ್ಪೋರೇಟ್ ಗೋಡೆಗಳಿಗೆ ಭಿನ್ನವಾಗಿದೆ. ಕಾರ್ಪೋರೇಟ್‌ ಗೋಡೆಗಳಲ್ಲಿ ಸಾಮಾನ್ಯವಾಗಿ ಬಿಳಿಬಣ್ಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಆದರೆ ಮನೆಗಳಲ್ಲಿ ಕಂಪು, ಕಪ್ಪು, ತಿಳಿಹಳದಿ. ಕಡು ಕಿತ್ತಳೆ, ಕ್ರೀಮ್, ನೇರಳೆ, ತಿಳಿ ಹಸಿರು ಬಣ್ಣವನ್ನು ಹೆಚ್ಚು ಬಳಸುತ್ತಾರೆ. ಕಡು ಬಣ್ಣವನ್ನು ಇಷ್ಟ ಪಡದೇ ಇರುವವರು ಸಾಮಾನ್ಯವಾಗಿ ತಿಳಿಬಣ್ಣದಲ್ಲೇ ವಿರುದ್ಧವಾದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ವಾಲ್ ಡೆಕ್ಲಾಸ್‌: ಕೆಲವು ಮನೆಗಳ ಒಳಾಂಗಣ ವಿನ್ಯಾಸವೂ ಒಂದು ಪೂರ್ಣ ಪರಿಕಲ್ಪನೆಯನ್ನು ಹೊಂದಿರುತ್ತದೆ. ರಾಮಾಯಣ, ಮಹಾಭಾರತ, ಮರದ ಮೇಲೆ ಕೂತು ಮರಿಗೆ ತುತ್ತು ನೀಡುತ್ತಿರುವ ತಾಯಿ ಹಕ್ಕಿ, ಎಲ್ಲೋ ಗೋಡೆಯ ಮೇಲೆ ಹಾರುತ್ತಿರುವ ಚಿಟ್ಟೆಗಳ ಹಿಂಡು, ಗರಿಬಿಚ್ಚಿ ಕುಣಿಯುತ್ತಿರುವ ನವಿಲು ಹೀಗೆ ಭಿನ್ನವಾದ ವಿನ್ಯಾಸಗಳು ಇತ್ತೀಚೆಗೆ ಗೋಡೆಯ ಮೇಲೆ ಹೊಸತೊಂದು ನೋಟವನ್ನೇ ನೀಡುತ್ತಿವೆ. ಇದನ್ನು ವಾಲ್ ಡೆಕ್ಲಾಸ್ ಎನ್ನುತ್ತಾರೆ.

ಮಕ್ಕಳ ಕೋಣೆಗೆ ಅವರಿಗೆ ಇಷ್ಟವಾದ ಛೋಟಾ ಬೀಮ್‌, ಬಾರ್ಬಿ ಡಾಲ್‌, ಹಕ್ಕಿಗೂಡು ಹೀಗೆ ಅವರಿಗೆ ಇಷ್ಟವಾಗುವಂತ ವಿನ್ಯಾಸವನ್ನು ರೂಪಿಸುತ್ತಾರೆ. ಗೋಡೆಯ ಬಣ್ಣವೂ ಡೆಕ್ಲಾಸ್‌ನ ಬಣ್ಣವೂ ಒಂದಕ್ಕೊಂದು ಭಿನ್ನವಾಗಿರುತ್ತದೆ. ಎಬಿಸಿಡಿ ಚಾರ್ಟ್‌ ಅನ್ನು ಕೂಡ ಡೆಕ್ಲಾಸ್‌ನಲ್ಲಿ ರಚಿಸಬಹುದು.

ಡೆಕ್ಲಾಸ್‌ ಎಲ್ಲಾ ವಿನ್ಯಾಸವನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ ತಿಳಿ ಬಣ್ಣದ ಗೋಡೆಯ ಮೇಲೆ ಕಡು ಬಣ್ಣದ ಡೆಕ್ಲಾಸ್‌ ವಿನ್ಯಾಸವನ್ನೇ ರೂಪಿಸುತ್ತಾರೆ. ಇದರಿಂದ ಕೋಣೆಯೊಳಗೆ ಪ್ರವೇಶಿಸಿದ ತಕ್ಷಣ ನಮ್ಮ ಕಣ್ಣಿನ ನೋಟ ಆ ವಿನ್ಯಾಸದತ್ತಲೇ ಹೊರಳುತ್ತದೆ.

2018ರಲ್ಲಿ ಹೆಚ್ಚು ಬೇಡಿಕೆ ಇರುವ ಬಣ್ಣಗಳು: ತಿಳಿಗುಲಾಬಿ ಬಣ್ಣ, ಕಡುಗೆಂಪು, ನೇರಳೆ, ನೇರಳೆ ಹಾಗೂ ಗುಲಾಬಿ ಮಿಶ್ರಿತ ಬಣ್ಣ, ಕಡುಕಪ್ಪು, ಹಸಿರು ಮತ್ತು ಹಳದಿಬಣ್ಣದ ಕಾಂಬಿನೇಷನ್, ಇವೆಲ್ಲವೂ 2018ರಲ್ಲಿ ವಿನ್ಯಾಸಕರು ಆಯ್ಕೆ ಮಾಡಿರುವ ಒಂದಷ್ಟು ಬಣ್ಣಗಳು. ಗೋಡೆಯ ಬಣ್ಣಕ್ಕೆ ವಿರುದ್ಧವಾದ ಬಣ್ಣದಲ್ಲೇ ಪೀಠೋಪಕರಣ, ಪಾಟ್‌ಗಳು, ಕರ್ಟನ್‌ಗಳು, ನೆಲಹಾಸುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇವೆಲ್ಲವೂ ಕೋಣೆಗೆ ಹೊಸ ಸ್ವರ್ಶ ನೀಡುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry