ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಶೋಭಾ ಕರಂದ್ಲಾಜೆ

7
ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣ

ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಶೋಭಾ ಕರಂದ್ಲಾಜೆ

Published:
Updated:
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಶೋಭಾ ಕರಂದ್ಲಾಜೆ

ಮೂಡಿಗೆರೆ(ಚಿಕ್ಕಮಗಳೂರು): ‘ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆದರೆ, ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು’ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಪ್ರಕರಣದಲ್ಲಿ ಬಂಧಿಸಿರುವ ಬಿಜೆಪಿ ಮುಖಂಡನ ಅನಿಲ್‌ಗೂ ಮತ್ತು ಸ್ಥಳೀಯ ಪೊಲೀಸರಿಗೂ ವೈಷಮ್ಯ ಇತ್ತು ಎಂಬ ಕುರಿತು ನನಗೆ ಮಾಹಿತಿ ಇಲ್ಲ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರ ಬಗ್ಗೆ ವಿಶ್ವಾಸ ಇದೆ. ಈ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ ನ್ಯಾಯ ದೊರಕಿಸುತ್ತಾರೆ ಎಂಬ ಭರವಸೆ ಇದೆ’ ಎಂದು ಉತ್ತರಿಸಿದರು.

‘ಧನ್ಯಶ್ರೀ ಮನೆಯ ಅಕ್ಕಪಕ್ಕದಲ್ಲಿ ವಿವಿಧ ಧರ್ಮ, ಸಮುದಾಯದವರು ವಾಸಿಸುತ್ತಿದ್ದಾರೆ. ಅವರೊಂದಿಗೆ ನಾನು ಮಾತನಾಡಿದ್ದೇನೆ. ಎಲ್ಲರೂ ಸಾಮರಸ್ಯದಿಂದ ಇದ್ದಾರೆ. ಧನ್ಯಶ್ರೀ ಮನೆಯವರು ಕರೆದಾಗ ಅಕ್ಕಪಕ್ಕದವರು ಅವರ ಮನೆಗೆ ಹೋಗಿದ್ದೇ ತಪ್ಪು ಎಂದು ಪರಿಗಣಿಸುವುದು ಸರಿಯಲ್ಲ. ಇದು ಅನಗತ್ಯ ಭಯಕ್ಕೆ ಎಡೆಮಾಡಿಕೊಡುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಈ ಪ್ರಕರಣದಲ್ಲಿ ಬಂಧಿಸಿರುವ ಪ್ರಮುಖ ಆರೋಪಿ ಸಂತೋಷ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆತ ಯಾರು, ಎಲ್ಲಿಯವ, ಏನು ಮಾಡುತ್ತಿದ್ದ, ಧನ್ಯಶ್ರೀಯೊಂದಿಗೆ ಏಕೆ ಮಾತನಾಡುತ್ತಿದ್ದ ಇದಾವುದೂ ಗೊತ್ತಿಲ್ಲ’ ಎಂದರು.

‘ಪ್ರಕರಣದ ಮೊದಲ ದಿನದಿಂದಲೂ  ಸರ್ಕಾರದ ನಡೆ ಮತ್ತು ಪೊಲೀಸರ ನಡೆಯನ್ನು ಗಮನಿಸುತ್ತಿದ್ದೇವೆ. ಧನ್ಯಶ್ರೀ ಅಂತ್ಯ ಸಂಸ್ಕಾರವಾದ ಮರುದಿನದಿಂದ ತಂದೆ–ತಾಯಿ ಉಡುಪಿ ಜಿಲ್ಲೆಯಲ್ಲಿ ಇದ್ದಾರೆ. ಹೀಗಾಗಿ, ನಾಲ್ಕೈದು ದಿನ ತಡವಾಗಿ ಇಲ್ಲಿಗೆ ಬಂದಿದ್ದೇನೆ, ಬೇರೆ ಯಾವುದೇ ಉದ್ದೇಶ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ಪ್ರಕರಣದಲ್ಲಿ ಬಂಧಿಸಿರುವ ಆರೋಪಿ ಬಿಜೆಪಿಯ ಎಂ.ವಿ.ಅನಿಲ್‌ ಅವರ ಮನೆಗೆ ಶೋಭಾ ಭೇಟಿ ನೀಡಿದ್ದರು. ಅನಿಲ್‌ ಅವರ ತಂದೆ–ತಾಯಿ ಅವರಿಗೆ ಧೈರ್ಯ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry