ಹಿರಿಯರ ದೊಡ್ಡಸ್ತಿಕೆ

6

ಹಿರಿಯರ ದೊಡ್ಡಸ್ತಿಕೆ

Published:
Updated:

ನಟ ರಾಜ್‌ಕುಮಾರ್ ಅವರಿಗೆ ಎಚ್ಚಮ ನಾಯಕ ಕುರಿತು ಚಿತ್ರ ತಯಾರಿಸುವ ಯೊಚನೆ ಮೂಡಿತ್ತು. ಆದರೆ ಆ ಚಿತ್ರದಲ್ಲಿ ಒಂದು ಧರ್ಮದವರ ಮನಸ್ಸಿಗೆ ನೋವಾಗುವ ಪ್ರಸಂಗ ಇರುವುದನ್ನು ತಿಳಿದು, ಆ ಯೋಜನೆಯನ್ನೇ ಕೈಬಿಟ್ಟರಂತೆ. ತಬಲಾ ವಾದಕ ಜಾಕಿರ್ ಹುಸೇನ್ ಅವರು ಈಚೆಗೆ ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆಯಲು ಹೋದಾಗ, ಪಕ್ಕಾ ವೈಷ್ಣವರಂತೆ ನಡೆದುಕೊಂಡು ಎಲ್ಲರ ಹೃದಯ ಗೆದ್ದರು. ವೈಯಕ್ತಿಕ ಪ್ರತಿಷ್ಠೆ ಬಿಟ್ಟು, ಜನಸಮೂಹವನ್ನು ಗೌರವಿಸುವ ದೊಡ್ಡಸ್ತಿಕೆ ಇದು.

ಚಿಂತಕರು, ಸಾಹಿತಿಗಳು, ಕಲಾವಿದರು ಮತ್ತು ಜನ ನಾಯಕರಲ್ಲಿ ಇರಬೇಕಾದ ಗುಣ ಇದು. ಆದರೆ ಎಲ್ಲರೂ ಇದನ್ನು ಮರೆತಂತಿದೆ. ಇತ್ತೀಚೆಗೆ ಸಾಹಿತಿಯೊಬ್ಬರು ಎಲ್ಲ ಕನ್ನಡಿಗರೂ ಹಬ್ಬದಂತೆ ಸಂಭ್ರಮಗೊಳ್ಳುವ ಸಮಾರಂಭದಲ್ಲಿ ರಾಜಕೀಯ ಪಕ್ಷವೊಂದರ ಪರ ಪ್ರಚಾರದಂತಹ ಭಾಷಣ ಮಾಡಿ ಸಭಾಮರ್ಯಾದೆ ಮರೆತರು. ಇನ್ನೊಂದು ಕಡೆ ಒಬ್ಬ ರಾಜಕೀಯ ನಾಯಕರು ಒಂದು ದೇವಸ್ಥಾನಕ್ಕೆ ಹೋಗುವ ಸಂದರ್ಭದಲ್ಲಿ ಅಲ್ಲಿಗೆ ಬರುವ ಭಕ್ತರ ಅಲಿಖಿತ ಸಂಪ್ರದಾಯ ಮತ್ತು ನಡೆನುಡಿಯನ್ನು ಪಾಲಿಸದೆ ಬಹಿರಂಗವಾಗಿ ತಮ್ಮ ವೈಯಕ್ತಿಕ ಹಕ್ಕನ್ನು ಚಲಾಯಿಸಿ ಅನೇಕರ ಮನಸ್ಸಿಗೆ ನೋವನ್ನು ಉಂಟುಮಾಡಿದರು. ತಮ್ಮ ವಿರೋಧಿಗಳನ್ನೂ ಗೆಲ್ಲಬೇಕು ಎಂದು ಬಯಸುವ ನಾಯಕನಿಗೆ ಇದು ಹೇಳಿ ಮಾಡಿಸಿದ ನಡವಳಿಕೆ ಅಲ್ಲ.

ಈಗ ಚುನಾವಣೆಯ ಕಾವು ಏರುತ್ತಲಿದೆ. ಈ ಕಾವಿನಲ್ಲಿ ಸುಸಂಸ್ಕೃತ ನುಡಿ–ನಡೆ ಆವಿಯಾಗದೆ ಉಳಿಸಿಕೊಂಡು ಕನ್ನಡನಾಡಿನ ಸಂಸ್ಕೃತಿ ಇತರರಿಗೆ ಮಾದರಿಯಾಗುವಂತೆ ರಾಜಕಾರಣಿಗಳೂ ಅವರಿಗೆ ಪರಾಕು ಹೇಳುವ ಸಾಹಿತಿಗಳೂ ಎಚ್ಚರ ವಹಿಸಿವುದು ಅಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry