ವೈಚಾರಿಕ ಸ್ಪಷ್ಟತೆ ಇಲ್ಲದ ವಾದ

7
ಹಿಂದೂ ಆಗಿರುವುದಕ್ಕೂ ಗೋಹತ್ಯೆ ನಿಷೇಧ ಶಾಸನಕ್ಕೂ ಯಾವುದೇ ಸಂಬಂಧವಿಲ್ಲ

ವೈಚಾರಿಕ ಸ್ಪಷ್ಟತೆ ಇಲ್ಲದ ವಾದ

Published:
Updated:

ಐದನೆಯ, ಆರನೆಯ ತರಗತಿಯ ಮಕ್ಕಳೆಲ್ಲ ತೋಳಿನ ಮಾಂಸ ಖಂಡವನ್ನು ಉಬ್ಬಿಸಿ, ‘ತಾಕತ್ತಿದ್ದರೆ ಇಲ್ಲಿಗೆ ಹೊಡಿ ನೋಡುವಾ’ ಎಂದು ಪಕ್ಕದವನಿಗೆ ಸವಾಲು ಹಾಕುವುದು ಇದೆ. ‘ಹಿಂದೂ ಆಗಿದ್ದರೆ ಗೋಹತ್ಯೆ ನಿಷೇಧ ಮಾಡಿ ನೋಡುವಾ’ ಎನ್ನುವುದು ಹೆಚ್ಚು ಕಡಿಮೆ ಇಂಥದೇ ಸವಾಲಿನಂತೆ ಭಾಸವಾಗುತ್ತದೆ.

ಯಾರೇ ವ್ಯಕ್ತಿ ಹಿಂದೂ ಆಗಿರುವುದು ವೈಯಕ್ತಿಕ ಆಯ್ಕೆ. ಆದರೆ ಗೋಹತ್ಯೆ ನಿಷೇಧ ಮಾಡುವುದು ಸಾಂವಿಧಾನಿಕ ಪ್ರಕ್ರಿಯೆಯ ಪರಿಣಾಮವಾಗಿ ಆಗಬೇಕಾದದ್ದು. ಇಂದಿನವರೆಗೂ ಪರಿಪೂರ್ಣ ಗೋಹತ್ಯೆ ನಿಷೇಧವನ್ನು ಯಾರೂ ಮಾಡಿಲ್ಲ. ಹಾಗಿದ್ದರೆ ಇದುವರೆಗೆ ಆಡಳಿತದಲ್ಲಿ ಯಾರೂ ಹಿಂದೂಗಳೇ ಇರಲಿಲ್ಲ ಎಂದು ಅರ್ಥವೇ?

‘ನಾನೊಬ್ಬ ಹಿಂದೂ. ನಾನು ಗೋವಿನ ಸೇವಕ ಮತ್ತು ಪೂಜಕ. ಗೋಪೂಜೆಯನ್ನು ಇಡೀ ಜಗತ್ತಿನ ಮುಂದೆ ಸಮರ್ಥಿಸಿಕೊಳ್ಳುತ್ತೇನೆ. ಆದರೆ ನನ್ನ ಧರ್ಮವೇ ಭಾರತದ ಎಲ್ಲರ ಧರ್ಮವೂ ಅಲ್ಲ. ಆದ್ದರಿಂದ ಗೋಹತ್ಯಾ ನಿಷೇಧದ ಕಾನೂನು ಮಾಡಬಾರದು’ ಎಂದವರು ಮಹಾತ್ಮ ಗಾಂಧಿ.

ಗೋಮಾಂಸ ಭಕ್ಷಣೆ ಮತ್ತು ಗೋಹತ್ಯೆಯ ಚರ್ಚೆಯಲ್ಲಿ ಎರಡು ಸನ್ನಿವೇಶ ಇರುವುದನ್ನು ಅರ್ಥ ಮಾಡಿಕೊಳ್ಳಬೇಕು. ಮೊದಲನೆಯದು, ಅದರ ಸಾಮಾಜಿಕ ಆಯಾಮ. ಎಂದರೆ, ಹಿಂದೂ ವ್ಯವಸ್ಥೆಯಲ್ಲಿರುವವರಲ್ಲೂ ಗೋಮಾಂಸ ಸೇವಿಸುವವರಿದ್ದಾರೆ. ಆದರೆ  ಈ ಜನರಲ್ಲಿ ಗೋಹತ್ಯಾ ನಿಷೇಧ ಎಂಬ ಕಾನೂನಿನ ವಿಚಾರ ಬಂದಾಗ ಸೆಕ್ಯುಲರ್ ಹೋರಾಟಗಾರರನ್ನು ಹೊರತುಪಡಿಸಿದರೆ ಉಳಿದವರಲ್ಲಿ ಗೋವಿನ ರಾಜಕೀಯದ ಒಂದು ಭಾವನೆ ಇರುತ್ತದೆ. ಈ ಭಾವನೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ.

ಬ್ರಾಹ್ಮಣರು ಮಾತ್ರ ಗೋವನ್ನು ನೆಚ್ಚಿಕೊಂಡವರೆಂಬ ವಿಚಾರ ತಪ್ಪು. ಮೂಲತಃ ಗೋಹತ್ಯೆ ಮಾಡಬಾರದೆಂಬ ಪ್ರಸ್ತಾಪ ಬ್ರಾಹ್ಮಣ ಸಾಹಿತ್ಯದ ಭಾಗವಾದ ಋಗ್ವೇದದಲ್ಲಿ ಬರುತ್ತದೆ. ಮನುಷ್ಯರು, ಜಾನುವಾರುಗಳು (ಕೇವಲ ಗೋವು ಅಲ್ಲ) ಮತ್ತು ಕುದುರೆಗಳನ್ನು ಕೊಲ್ಲುವುದನ್ನು ಖಂಡಿಸುವ ಋಗ್ವೇದ, ಅಂಥವರಿಗೆ ಅಗ್ನಿಯು ಶಿಕ್ಷೆ ಕೊಡಬೇಕೆಂದು ಪ್ರಾರ್ಥಿಸುತ್ತದೆ. ವೇದ ಕಾಲದ ಜನರು ಪಶುಪಾಲಕರಾಗಿದ್ದರು. ಜಾನುವಾರು ಹತ್ಯೆ ಮಾಡಬಾರದೆಂದುದು ಸಹಜ.

ಭಾರತದ ಅನೇಕ ರಾಜರು ಸೋತದ್ದು ಕುದುರೆಗಳ ಕೊರತೆಯಿಂದಾಗಿ. ಕುದುರೆ ಸೈನ್ಯದ ಕೊರತೆಯಿಂದಾಗಿ ಆನೆಗಳ ಸೈನ್ಯವಿಟ್ಟುಕೊಂಡು, ಕುದುರೆ ಸೈನ್ಯವನ್ನೇ ಹೊಂದಿದ್ದ ಮುಸ್ಲಿಂ ಅರಸರ ಸೈನ್ಯದಿಂದ. ಹಾಗಿರುವಾಗ ಕುದುರೆಯನ್ನು ಕೊಲ್ಲಬಾರದೆಂದಿದ್ದೂ ಸಹಜವೇ.

ಕ್ರಿ.ಪೂ. 1000ದ ಸುಮಾರಿನಲ್ಲಿ ಗೋಪೂಜೆಯು ಹಿಂದೂ ಧರ್ಮದ ನಂಬಿಕೆಯ ರೂಪ ಪಡೆಯಿತು ಎಂದು ಹ್ಯಾರಿಸ್ ಎಂಬ ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ. ಆದರೆ ಈ ಚಿಂತನೆಯು ಸಾಮಾಜಿಕ ಆಯಾಮದಿಂದ ರಾಜಕೀಯ ಆಯಾಮವನ್ನು ಪಡೆದದ್ದು, ಸಿಂಧ್ ಪ್ರಾಂತ್ಯದ ಮೇಲೆ ಅರಬ್ಬರ ದಾಳಿ ಪ್ರಾರಂಭವಾದ ನಂತರ. ಅರಬ್ಬರು ಕೂಡ ಗೋಹತ್ಯೆಯನ್ನು ರಾಜಕೀಯ ಉಪಕರಣವಾಗಿಯೇ ತೆಗೆದುಕೊಂಡರು. ಇತಿಹಾಸಕಾರ ಅಲ್ಬೆರೂನಿಯ ದಾಖಲೆಗಳ ಪ್ರಕಾರ, 8ನೆಯ ಶತಮಾನದಲ್ಲಿ ಸಿಂಧ್‌ನ ಮೇಲೆ ದಾಳಿ ಮಾಡಿದ ಮಹಮ್ಮದ್ ಬಿನ್ ಖಾಸಿಂ ಸಾರ್ವಜನಿಕವಾಗಿ ಗೋವನ್ನು ಕೊಂದು ಮಾಂಸವನ್ನು ಹಂಚಿದ್ದು ರಾಜಕೀಯ ಪರಮಾಧಿಕಾರದ ಸಂದೇಶವಾಗಿತ್ತು.

ಅಲ್ಲಿಂದ ನಂತರ ಇದು ದೀರ್ಘ ಕಾಲದ ರಾಜಕಾರಣವೇ ಆಯಿತು. ಮುಸ್ಲಿಮೇತರರ ವಿಶ್ವಾಸವನ್ನು ಪಡೆದವರೆಂದು ಗುರುತಿಸಲಾದ ಹುಮಾಯೂನ್, ಅಕ್ಬರ್, ಮೂರನೆಯ ಬಹಾದ್ದೂರ್ ಷಾ ಜಫರ್... ಈ ಎಲ್ಲರೂ ಗೋವಿನ ರಾಜಕೀಯದಲ್ಲಿ ಮುಸ್ಲಿಂ, ಕ್ರಿಶ್ಚಿಯನೇತರರ ಭಾವನೆಗಳಿಗೆ ಸ್ಪಂದಿಸಿದವರು ಎಂದು ಗಮನಿಸಬೇಕು. ಹಿಂದೂಗಳ ದೇಶದ ವ್ಯಾಪ್ತಿಯಲ್ಲಿ ತಾನು ಗೋಮಾಂಸ ತಿನ್ನುವುದಿಲ್ಲವೆಂದು ಹುಮಾಯೂನ್‌ ಪ್ರಕಟಿಸಿದ್ದ. ಗೋಹತ್ಯೆ ಅಪರಾಧ ಎಂದು ಅಕ್ಬರ್ ಶಾಸನ ಮಾಡಿದ್ದ. ಅವನ ಉನ್ನತಾಧಿಕಾರಿಯೊಬ್ಬ

ಗೋಹತ್ಯೆ ಮಾಡಿದಾಗ ಗಡಿಪಾರಿನ ಶಿಕ್ಷೆ ವಿಧಿಸಿದ್ದ. 1857ರಲ್ಲಿ ಹಿಂದೂ– ಮುಸ್ಲಿಂ ಸೈನಿಕರು ಒಟ್ಟಾಗಿ ‘ಭಾರತದ ಚಕ್ರವರ್ತಿ’ ಎಂದು ಘೋಷಿಸಿದ್ದಂತಹ ಬಹಾದ್ದೂರ್ ಷಾ ಸ್ವತಂತ್ರವಾಗಿ ಆಳಿದ್ದು ಕಡಿಮೆ ಅವಧಿಯಾದರೂ ಗೋಹತ್ಯೆಗೆ ಮರಣದಂಡನೆಯ ಶಿಕ್ಷೆ ಘೋಷಿಸಿದ್ದ. ಅಂದರೆ ಗೋಹತ್ಯೆಯ ವಿಚಾರವು ಧಾರ್ಮಿಕ ರಾಜಕಾರಣದ ರೂಪ ಪಡೆದಿತ್ತು. ಈ ವೇಳೆಗೆ ಇದು ಬ್ರಾಹ್ಮಣರ ವ್ಯಾಪ್ತಿಯನ್ನು ಮೀರಿ ಬೆಳೆದಿತ್ತು. ಅಕ್ಬರನ ಮುಂದೆ ಗೋಹತ್ಯೆ ನಿಷೇಧದ ಪ್ರಸ್ತಾಪವನ್ನು ಒಯ್ದವರು ಜೈನರು. ಸಿಖ್ ಧರ್ಮವು ಉಳಿದೆಲ್ಲ ಧರ್ಮಗಳಿಗಿಂತ ಹೆಚ್ಚು ಸ್ಪಷ್ಟವಾಗಿ, ‘ಗೋವು, ಕೋಣ, ಎಮ್ಮೆ, ಎತ್ತುಗಳು ಸಿಖ್ಖರ ಜೀವನದ ಆಧಾರಗಳಾಗಿದ್ದು ಇವುಗಳನ್ನು ಯಾವ ಕಾರಣಕ್ಕೂ ಕೊಲ್ಲಬಾರದು’ ಎನ್ನುತ್ತದೆ.

ಆದರೆ ಗೋಹತ್ಯೆಯ ಕುರಿತ ಈ ಎಲ್ಲ ಅಂಶಗಳು, ಭಾವನೆಗಳು ರಾಜಕೀಯಾತ್ಮಕವಾಗಿ ವ್ಯಕ್ತಗೊಂಡವುಗಳೇ ವಿನಾ ಆಹಾರದ ಪದ್ಧತಿಯಲ್ಲಿ ಆದ ಬದಲಾವಣೆ ಅಲ್ಲ. ಮುಸ್ಲಿಂ, ಕ್ರೈಸ್ತರು ಮಾತ್ರವಲ್ಲದೆ ಬೇರೆಯವರಲ್ಲೂ ಗೋಮಾಂಸ ಸೇವಿಸುವವರು ಹಿಂದೆಯೂ ಇದ್ದರು. ಈಗಲೂ ಇದ್ದಾರೆ. ಇದು ಸಾಮಾಜಿಕ ಸತ್ಯ.

ಗೋಮಾಂಸ ಸೇವನೆಯನ್ನು ಯಾವುದೇ ಕಾಯ್ದೆಯ ಕಾರಣಕ್ಕೆ ಯಾರೂ ಬಿಡುವುದಿಲ್ಲ. ಬಿಟ್ಟಿದ್ದರೆ ಅದು ಸದ್ಭಾವನೆಯಿಂದ. ಗಾಂಧೀಜಿಯ ಸಾಕಷ್ಟು ಮುಸ್ಲಿಂ ಅನುಯಾಯಿಗಳು ಬಿಟ್ಟಿದ್ದರು. ಅದಕ್ಕೆ ಗಾಂಧಿ ಕಾರಣರೇ ವಿನಾ ಕಾಯ್ದೆ ಅಲ್ಲ. ಯಾಕೆ? ಖಿಲಾಫತ್‌ ಚಳವಳಿ ನಡೆಯುವಾಗ ಮುಸ್ಲಿಂ ಹೋರಾಟಕ್ಕೆ ಕಾಂಗ್ರೆಸ್ಸಿನ ಬೆಂಬಲಬೇಕು ಎಂಬ ಕಾರಣಕ್ಕಾಗಿ ಗಾಂಧಿ ಭಾಗವಹಿಸುವ ಮುಸ್ಲಿಮರ ಸಭೆಯಲ್ಲಿ ಗಾಂಧಿ ಪ್ರತಿಪಾದಿಸುವ ಗೋಹತ್ಯೆ ನಿಷೇಧದ ಠರಾವನ್ನು ಮಂಡಿಸಲು ಸಿದ್ಧತೆ ನಡೆಯುತ್ತದೆ. ಆಗ ಗಾಂಧಿ, ‘ನೀವಿದನ್ನು ಮಾಡಿದರೆ ನಾವು ಅದನ್ನು ಮಾಡುತ್ತೇವೆ ಎನ್ನಲು ನಾನು ವ್ಯಾಪಾರಕ್ಕೆ ಬಂದವನಲ್ಲ. ಗೋಹತ್ಯೆ ನಿಷೇಧವನ್ನು ನಿಮ್ಮ ಸ್ವಂತ ಇಚ್ಛೆಯಿಂದ ಯಾವಾಗ ಬೇಕಾದರೂ ಮಾಡಿ. ನಮ್ಮ ಬೆಂಬಲಕ್ಕೂ ಅದಕ್ಕೂ ಸಂಬಂಧವಿಲ್ಲ’ ಎನ್ನುತ್ತಾರೆ.

ಮಹಾರಾಜ ರಣಜಿತ್ ಸಿಂಗ್ ಗೋಹತ್ಯೆಯನ್ನು ಸಂಪೂರ್ಣ ನಿಷೇಧ ಮಾಡಿದ್ದ. ಆದರೂ ಅದು ಜಾರಿಗೆ ಬರಲಿಲ್ಲ. ಆಹಾರ- ನಿದ್ರೆ-ಮೈಥುನಗಳು ಎಲ್ಲ ಜೀವಿಗಳ ಮೂಲಭೂತ ಅಗತ್ಯಗಳು. ಅವು ದೊರೆಯದಿದ್ದರೆ ಮನೋವಿಜ್ಞಾನದ ಪರಿಭಾಷೆಯ ‘ಜಿಯೊಸ್ಮಾಸಿಸ್’ ಸ್ಥಿತಿ ನಿರ್ಮಾಣವಾಗುತ್ತದೆ. ಈ ವಿಷಯಗಳಲ್ಲಿ ವಿಶಾಲ ವ್ಯಾಪ್ತಿಯ ಸಲಹಾತ್ಮಕ ಕಾನೂನುಗಳು ಸ್ವಲ್ಪ ಕೆಲಸ ಮಾಡಬಹುದು. ಆದರೆ ಕಠಿಣ ಕಾನೂನುಗಳು ಈ ವಿಷಯಗಳನ್ನು ನಿರ್ವಹಿಸಲಾರವು. ರಾಜಕೀಯಾತ್ಮಕ ಸನ್ನಿವೇಶದಲ್ಲಿ ಒಬ್ಬ ಹಿಂದೂವಿನ ಧೋರಣೆ ಏನೇ ಇರಬಹುದು. ಆದರೆ ಒಂದು ಆಹಾರದ ಪದ್ಧತಿಯಾಗಿ ಬಹುತೇಕ ಹಿಂದೂಗಳು ಮಾಂಸಾಹಾರಿಗಳೇ. ಮಾಂಸಾಹಾರಿ ದೇವರುಗಳನ್ನೂ ಹಿಂದೂಗಳು ಪೂಜಿಸುತ್ತಾರೆ. ಹಾಗೆ ನೋಡಿದರೆ, ಬ್ರಾಹ್ಮಣನಾಗಿದ್ದ ಪರಶುರಾಮನನ್ನು ಚಿತ್ಪಾವನ ಬ್ರಾಹ್ಮಣರನ್ನು ಬಿಟ್ಟರೆ ಬೇರೆ ಬ್ರಾಹ್ಮಣರೇ ಪೂಜಿಸುವುದಿಲ್ಲ. ಅವರು ಪೂಜಿಸುವ ರಾಮ-ಕೃಷ್ಣರೂ ಮಾಂಸಾಹಾರಿಗಳೇ. ಹಿಂದೂಗಳಲ್ಲಿ ಭೂತಾರಾಧಕರು, ಮಾರಮ್ಮ, ಚೌಡಮ್ಮನ ಆರಾಧಕರೂ ಇದ್ದಾರೆ. ಆರಾಧನೆಗೂ ಅಲ್ಲಿ ಮಾಂಸ ಬೇಕು.

ರಾಜಕೀಯಾತ್ಮಕ ಧೋರಣೆಯನ್ನು ಹೊರತುಪಡಿಸಿದರೆ, ಆಹಾರದ ಪದ್ಧತಿಯಾಗಿ ಮಾಂಸಾಹಾರಿಗಳು ಗೋಮಾಂಸಕ್ಕೆ ಬಹಳ ವಿರೋಧಿಗಳಾಗಿರುವ ಸಾಧ್ಯತೆ ಕಡಿಮೆ. ತಳಸಮುದಾಯದ ಬಹಳ ಪಂಗಡಗಳು ಗೋಮಾಂಸವನ್ನು ಆಹಾರದ ಪದ್ಧತಿಯಾಗಿಯೇ ಹೊಂದಿವೆ. ಹಾಗಾದರೆ ಅವರೆಲ್ಲ ಹಿಂದೂಗಳಲ್ಲವೇ?

‘ದಲಿತರೂ ಹಿಂದೂಗಳೇ’ ಎಂದು ಒಂದು ಕಡೆಯಲ್ಲಿ ಹೇಳುತ್ತಾ, ಇನ್ನೊಂದು ಕಡೆಯಲ್ಲಿ ‘ಹಿಂದೂ ಆಗಿದ್ದರೆ ಗೋಹತ್ಯೆ ನಿಷೇಧ ಮಾಡಬೇಕು’ ಎನ್ನುವುದು ವೈಚಾರಿಕ ಸ್ಪಷ್ಟತೆ ಇಲ್ಲದ ವಾದವಾಗುತ್ತದೆ. ಗೋಹತ್ಯೆ ನಿಷೇಧ ಮಾಡದೆಯೂ ಹಿಂದೂ ಆಗಿ ಧಾರಾಳವಾಗಿ ಇರಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry