ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ: ಭಾರತ –ಪಾಕ್‌ ಚರ್ಚೆಗೆ ಅಡ್ಡಿ ಇಲ್ಲ

Last Updated 11 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮತ್ತು ಪಾಕಿಸ್ತಾನಗಳ ನಡುವೆ ರಚನಾತ್ಮಕ ದ್ವಿಪಕ್ಷೀಯ ಸಂಬಂಧ ಪುನರ್‌ಸ್ಥಾಪಿಸಲು ಮಾತುಕತೆ ನಡೆಸುವ ವಾತಾವರಣ ಇನ್ನೂ ಸೃಷ್ಟಿಯಾಗದಿದ್ದರೂ ಉಭಯ ರಾಷ್ಟ್ರಗಳು ಗಡಿಯಾಚೆಯಾಗಿನ ಭಯೋತ್ಪಾದನೆಯ ಬಗ್ಗೆ ಚರ್ಚೆ ನಡೆಸಬಹುದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಜೊತೆಗೆ, ಡಿಸೆಂಬರ್‌ 26ರಂದು ಬ್ಯಾಂಕಾಕ್‌ನಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್‌ ಡೊಭಾಲ್‌ ಮತ್ತು ಪಾಕಿಸ್ತಾನದ ಎನ್‌ಎಸ್‌ಎ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ನಾಸಿರ್‌ ಖಾನ್‌ ಜಂಜುವಾ ನಡುವೆ ರಹಸ್ಯ ಮಾತುಕತೆ ನಡೆದಿರುವುದನ್ನೂ ಅದು ದೃಢಪಡಿಸಿದೆ.

ಈ ಮಾತುಕತೆಯನ್ನು ಸರ್ಕಾರ ಅಧಿಕೃತವಾಗಿ ದೃಢಪಡಿಸುತ್ತಿರುವುದು ಇದೇ ಮೊದಲು. ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್‌ ಜಾಧವ್‌ ಅವರನ್ನು ಇಸ್ಲಾಮಾಬಾದ್‌ನಲ್ಲಿ ಅವರ ತಾಯಿ ಮತ್ತು ಪತ್ನಿ ಭೇಟಿಯಾದ ಮರುದಿನ ಈ ಸಭೆ ನಡೆದಿತ್ತು. ಇದಕ್ಕೂ ಮೊದಲು, 2015ರ ಡಿಸೆಂಬರ್‌ನಲ್ಲಿ ಎರಡೂ ರಾಷ್ಟ್ರಗಳ ಎನ್‌ಎಸ್‌ಎಗಳು ಮಾತುಕತೆ ನಡೆಸಿದ್ದರು.

‘ಭಯೋತ್ಪಾದನೆ ಮತ್ತು ದ್ವಿಪಕ್ಷೀಯ ಮಾತುಕತೆ ಎರಡೂ ಒಟ್ಟಾಗಿ ನಡೆಯಲು ಸಾಧ್ಯವಿಲ್ಲ ಎಂದು ನಾವು ಹೇಳಿದ್ದೆವು. ಆದರೆ, ಭಯೋತ್ಪಾದನೆಯ ಬಗ್ಗೆ ಮಾತುಕತೆ ನಡೆಸಬಹುದು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.

‘ಎನ್‌ಎಸ್‌ಎ ನಡುವೆ ಮಾತುಕತೆ ನಡೆದಿದೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಹೇಗೆ ದಮನ ಮಾಡಬಹುದು ಎಂಬುದರ ಬಗ್ಗೆ ಅವರು ಚರ್ಚೆ ನಡೆಸಿದ್ದಾರೆ. ಇದು ಪೂರ್ವನಿರ್ಧರಿತ ಸಭೆ’ ಎಂದು ಅವರು ಹೇಳಿದ್ದಾರೆ.

ಈ ಸಭೆಯಲ್ಲಿ ಜಾಧವ್‌ ಪ್ರಕರಣದ ಬಗ್ಗೆ ಚರ್ಚೆ ನಡೆದಿದೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT