ಮಾನ್ಯತೆ ಸಿಕ್ಕರೆ ನಾನೂ ಲಿಂಗಾಯತ ಧರ್ಮಕ್ಕೆ

7

ಮಾನ್ಯತೆ ಸಿಕ್ಕರೆ ನಾನೂ ಲಿಂಗಾಯತ ಧರ್ಮಕ್ಕೆ

Published:
Updated:
ಮಾನ್ಯತೆ ಸಿಕ್ಕರೆ ನಾನೂ ಲಿಂಗಾಯತ ಧರ್ಮಕ್ಕೆ

ಕೂಡಲಸಂಗಮ: ‘ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ದೊರೆತಲ್ಲಿ ಆ ಧರ್ಮವನ್ನು ನಾನೂ ಸ್ವೀಕರಿಸುವೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಗುರುವಾರ ಇಲ್ಲಿ ಹೇಳಿದರು.

ಬಸವಧರ್ಮ ಪೀಠ ಆಯೋಜಿಸಿದ್ದ ಶರಣ ಮೇಳದಲ್ಲಿ ಮಾತನಾಡಿದ ಅವರು, ‘ಈಗಾಗಲೇ ಬಸವ ಧರ್ಮ ಪಾಲಿಸುತ್ತಿದ್ದೇನೆ. ಶರಣರು ಹೇಳಿದಂತೆ ಕಲ್ಲು, ಕಟ್ಟಿಗೆ ಪೂಜೆ ಮಾಡುತ್ತಿಲ್ಲ. ಮಾತನಾಡುವ ದೇವರಿಗೆ ಮಾತ್ರ ಕೈಮುಗಿಯುತ್ತೇನೆ. ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆ ಸಿಗಲೇಬೇಕು. ಅದಕ್ಕೆ ನನ್ನ ಬೆಂಬಲವಿದೆ’ ಎಂದರು.

‘ಒಂದೇ ಧರ್ಮಕ್ಕೆ ಜೋತು ಬಿದ್ದಿರುವ ಪಕ್ಷವೊಂದು ಲಿಂಗಾಯತರನ್ನು ಕಡೆಗಣಿಸುತ್ತಿದೆ. ಕೆಲವರು ತಾವೇ ಧರ್ಮದ ಗುತ್ತಿಗೆ ಹಿಡಿದವರು ಎಂದು ಭಾವಿಸಿದ್ದಾರೆ. ಲಿಂಗಾಯತರು ಪ್ರತ್ಯೇಕವಾದರೆ, ತಮ್ಮವರ ಸಂಖ್ಯೆ ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕೆ ಪ್ರತ್ಯೇಕತೆಗೆ ವಿರೋಧ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.

‘ಲಿಂಗಾಯತ ಮನುಷ್ಯ ಧರ್ಮ. ಮನುಷ್ಯತ್ವ ಒಪ್ಪುವ ಎಲ್ಲರೂ ಇದರಲ್ಲಿ ಸೇರ್ಪಡೆಯಾಗಬಹುದು. ಜಾತಿ ವ್ಯವಸ್ಥೆಯ ಶ್ರೇಣೀಕೃತ ಸಮಾಜದಲ್ಲಿ ಜಾತ್ಯತೀತ ಕಲ್ಪನೆಗೆ ಬಸವಣ್ಣ ನಾಂದಿ ಹಾಡಿದರು. ಅಂದು ಅವರು ತಂದು ಕೊಟ್ಟ ಸಮಾನತೆಯಿಂದ ಇಂದು ನಾನು ಸಚಿವನಾಗಿದ್ದೇನೆ’ ಎಂದರು.

ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಮಾತನಾಡಿ, ‘ಲಿಂಗಾಯತರು, ವೀರಶೈವರು ಕೂಡಿ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಅದು ಎಂದಿಗೂ ಸಾಧ್ಯವಿಲ್ಲ’ ಎಂದರು.

‘ಪ್ರತ್ಯೇಕ ಧರ್ಮ ಕುರಿತಂತೆ ಸರ್ಕಾರ ರಚಿಸಿದ ಸಮಿತಿಯ ಸದಸ್ಯರು ಧರ್ಮದ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ. ವಿಚಾರಶೀಲರಾಗಿದ್ದಾರೆ. ಹಾಗಿದ್ದರೂ ವರದಿ ಸಲ್ಲಿಸಲು ಆರು ತಿಂಗಳ ಕಾಲಾವಕಾಶ ಕೇಳಿರುವುದು ಸಲ್ಲ. ಒಂದೇ ತಿಂಗಳಲ್ಲಿ ವರದಿ ಪಡೆಯಲು ಮುಖ್ಯಮಂತ್ರಿ ಮುಂದಾಗಬೇಕು’ ಎಂದು ಮನವಿ ಮಾಡಿದರು.

‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಪಾಲ್ಗೊಳ್ಳುವಂತೆ’ ಸಚಿವ ಆಂಜನೇಯ ಅವರಿಗೆ ಮನವಿ ಮಾಡಿದ ಮಾತೆ ಮಹಾದೇವಿ, ‘ಧರ್ಮದ ಸ್ಥಾನಮಾನ ಪಡೆಯುವ ವಿಚಾರದಲ್ಲಿ ವೈದಿಕರ ಕೈಗೊಂಬೆಯಾಗಿರುವ ಯಡಿಯೂರಪ್ಪ ಅವರಿಗಿಂತ ಸಿದ್ದರಾಮಯ್ಯ ಮೇಲೆ ಹೆಚ್ಚು ವಿಶ್ವಾಸ ಇದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry