ಪರೀಕ್ಷಾ ಕಾರ್ಯದ ಸಂಭಾವನೆ ಹೆಚ್ಚಳ

7

ಪರೀಕ್ಷಾ ಕಾರ್ಯದ ಸಂಭಾವನೆ ಹೆಚ್ಚಳ

Published:
Updated:

ಬೆಂಗಳೂರು:  ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಎಸ್‌ಎಸ್ಎಲ್‌ಸಿ ಪರೀಕ್ಷಾ ಶುಲ್ಕವನ್ನು ಸರ್ಕಾರ ಹೆಚ್ಚಳ ಮಾಡಿದ್ದರೂ ಮಾರ್ಚ್‌ 23ರಿಂದ ನಡೆಯುವ ಪರೀಕ್ಷೆಗಳಿಗೆ ಈ ಶುಲ್ಕ ಅನ್ವಯವಾಗುವುದಿಲ್ಲ. ಆದರೆ, ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿ ಸಂಭಾವನೆಯನ್ನು ತಕ್ಷಣದಿಂದಲೇ ಹೆಚ್ಚಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

2018ರ ಮಾರ್ಚ್‌– ಏಪ್ರಿಲ್‌ನಿಂದ ಪರಿಷ್ಕೃತ ಸಂಭಾವನೆಗಳು ಅನ್ವಯವಾಗಲಿವೆ. 2018ರ ಮಾರ್ಚ್‌– ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್‌ಎಸ್ಎಲ್‌ಸಿ ಪರೀಕ್ಷಾ ಶುಲ್ಕವನ್ನು ಈಗಾಗಲೇ ವಿದ್ಯಾರ್ಥಿಗಳಿಂದ ಕಟ್ಟಿಸಿಕೊಳ್ಳಲಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಪರೀಕ್ಷಾ ಶುಲ್ಕಗಳು 2019ರ ಪರೀಕ್ಷೆಗಳಿಗೆ ಅನ್ವಯವಾಗಲಿವೆ.

ಎಸ್‌ಎಸ್ಎಲ್‌ಸಿ ಪರೀಕ್ಷಾ ಶುಲ್ಕವನ್ನು ₹ 365ರಿಂದ ₹ 440ಕ್ಕೆ ಹೆಚ್ಚಿಸಲಾಗಿದೆ. ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಒಂದು ವಿಷಯದ ಶುಲ್ಕವನ್ನು ₹240ರಿಂದ ₹ 290ಕ್ಕೆ, ಎರಡು ವಿಷಯಗಳ ಶುಲ್ಕವನ್ನು ₹290ರಿಂದ ₹350ಕ್ಕೆ ಮತ್ತು ಮೂರು ಹಾಗೂ ಅದಕ್ಕೂ ಹೆಚ್ಚಿನ ವಿಷಯಗಳ ಶುಲ್ಕವನ್ನು ₹390ರಿಂದ ₹ 470ಕ್ಕೆ ಏರಿಕೆ ಮಾಡಲಾಗಿದೆ.

ಪ್ರಥಮ ಭಾಷೆಯ ಉತ್ತರ ಪತ್ರಿಕೆಯ ಮೌಲ್ಯ ಮಾಪನ ದರವನ್ನು ₹ 14.30 ರಿಂದ ₹17.20ಕ್ಕೆ, ದ್ವಿತೀಯ, ತೃತೀಯ ಭಾಷೆಯ ಉತ್ತರ ಪತ್ರಿಕೆಯ ಮೌಲ್ಯ ಮಾಪನ ದರವನ್ನು ₹ 13ರಿಂದ ₹ 15.60ಕ್ಕೆ ಮತ್ತು ಐಚ್ಛಿಕ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ದರವನ್ನು ₹ 13.80ರಿಂದ ₹16.60ಕ್ಕೆ ಹೆಚ್ಚಿಸಲಾಗಿದೆ.

ವಿಜ್ಞಾನ ವಿಷಯಗಳನ್ನು ಹೊರತುಪಡಿಸಿ 3 ಗಂಟೆಯ ಪ್ರಶ್ನೆ ಪತ್ರಿಕೆಗಳ ತಯಾರಿಯ ಸಂಭಾವನೆಯನ್ನು ₹ 6,000ದಿಂದ ₹ 7,200ಕ್ಕೆ, ಭೌತಶಾಸ್ತ್ರ, ರಸಾಯನಶಾಸ್ತ್ರ ಪಶ್ನೆ ಪತ್ರಿಕೆಗಳ ತಯಾರಿಯ ಸಂಭಾವನೆಯನ್ನು ₹4,200ರಿಂದ ₹5,040ಕ್ಕೆ, ಜೀವಶಾಸ್ತ್ರದ ಪಶ್ನೆ ಪತ್ರಿಕೆ ತಯಾರಿಯ ಸಂಭಾವನೆಯನ್ನು ₹3000ದಿಂದ ₹ 3,600ಕ್ಕೆ ಏರಿಕೆ ಮಾಡಲಾಗಿದೆ.

2 ಗಂಟೆಯ ಪ್ರಶ್ನೆ ಪತ್ರಿಕೆ ತಯಾರಿಯ ಸಂಭಾವನೆಯನ್ನು ₹4,800ರಿಂದ ₹ 5,760ಕ್ಕೆ ಮತ್ತು ಪಶ್ನೆ ಪತ್ರಿಕೆಗಳ ಭಾಷಾಂತರದ ಸಂಭಾವನೆಯನ್ನು ₹ 3,000ದಿಂದ ₹ 3,600ಕ್ಕೆ ಹೆಚ್ಚಿಸಲಾಗಿದೆ.

ಕಿರಿಯ ತಾಂತ್ರಿಕ ವಿದ್ಯಾರ್ಥಿಗಳ (ಜೆಟಿಎಸ್) ವಿಭಾಗದ ಪ್ರಾಯೋಗಿಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯ ಸೆಟ್‌ ಒಂದರ ಮೌಲ್ಯ ಮಾಪನದ ಸಂಭಾವನೆಯನ್ನು ₹ 325ರಿಂದ ₹390ಕ್ಕೆ ಹೆಚ್ಚಳ ಮಾಡಲಾಗಿದೆ. ಒಂದು ಬ್ಯಾಚ್‌ನ ಮೌಲ್ಯ ಮಾಪನದ ಸಂಭಾವನೆಯನ್ನು ₹ 260ರಿಂದ ₹ 315ಕ್ಕೆ ಹಾಗೂ ಮುಖ್ಯಸ್ಥರ ಸಂಭಾವನೆಯನ್ನು ₹1,300ರಿಂದ ₹1,560ಕ್ಕೆ ಏರಿಕೆ ಮಾಡಲಾಗಿದೆ.

ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಪ್ರತಿ ದಿನದ ಸಂಭಾವನೆಯನ್ನು ₹ 130ರಿಂದ ₹ 156ಕ್ಕೆ ಹೆಚ್ಚಿಸಲಾಗಿದೆ. ಮೌಲ್ಯ ಮಾಪನ ಕೇಂದ್ರದ ಜಂಟಿ ಮುಖ್ಯ ಅಧೀಕ್ಷಕರ ಸಂಭಾವನೆಯನ್ನು ₹ 5,233ರಿಂದ ₹ 6,280ಕ್ಕೆ ಹಾಗೂ ಉಪ ಮುಖ್ಯ ಪರೀಕ್ಷಕರ ಸಂಭಾವನೆಯನ್ನು ₹ 3,933ರಿಂದ ₹ 4,720ಕ್ಕೆ ಹೆಚ್ಚಿಸಲಾಗಿದೆ.

ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ದಿನಭತ್ಯೆಯನ್ನು ₹ 429ರಿಂದ ₹ 515ಕ್ಕೆ, ಇತರೆ ಪ್ರದೇಶಗಳ ಸಿಬ್ಬಂದಿಯ ದಿನ ಭತ್ಯೆ ₹ 338ರಿಂದ ₹ 406ಕ್ಕೆ ಹೆಚ್ಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry