ನಾಪತ್ತೆಯಾಗಿದ್ದ ಬಾಲಕಿ ಸುರಕ್ಷಿತ ಮನೆಗೆ

7
ಬಜರಂಗದಳ ಕಾರ್ಯಕರ್ತರ ಬೆದರಿಕೆ:

ನಾಪತ್ತೆಯಾಗಿದ್ದ ಬಾಲಕಿ ಸುರಕ್ಷಿತ ಮನೆಗೆ

Published:
Updated:

ಮಂಗಳೂರು: ಮುಸ್ಲಿಂ ಯುವಕನ ಜತೆ ಮಾತನಾಡಿರುವುದಾಗಿ ಆರೋಪಿಸಿ, ಬಜರಂಗದಳದ ಕಾರ್ಯಕರ್ತರು ಮನೆಗೆ ನುಗ್ಗಿ ಬೆದರಿಕೆ ಹಾಕಿದ ಬಳಿಕ ನಾಪತ್ತೆಯಾಗಿದ್ದ ಬಂಟ್ವಾಳ ತಾಲ್ಲೂಕಿನ ದಲಿತ ಬಾಲಕಿ ಗುರುವಾರ ಪತ್ತೆಯಾಗಿದ್ದಾಳೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು, ಬಾಲಕಿಯ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು.

ಬಾಲಕಿಯು ತನ್ನ ಸಂಬಂಧಿಕರ ಮನೆಯಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು, ಆಕೆಯನ್ನು ಸುರಕ್ಷಿತವಾಗಿ ತಾಯಿಗೆ ಒಪ್ಪಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಬಜರಂಗದಳದ ಕಾರ್ಯಕರ್ತರು ಬೆದರಿಕೆಯಿಂದ ಹೆದರಿದ್ದ ಈ ಬಾಲಕಿ, ತನಗೆ ತೊಂದರೆ ಮಾಡಬಹುದು ಎಂಬ ಆತಂಕದಿಂದ ಸೋಮವಾರ ಬೆಳಿಗ್ಗೆ ಬಸ್‌ ಏರಿ, ಸಂಬಂಧಿಕರ ಮನೆಗೆ ತೆರಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಜರಂಗದಳದ 10 ಕಾರ್ಯಕರ್ತರ ತಂಡ ಭಾನುವಾರ ರಾತ್ರಿ ಈ ಬಾಲಕಿಯ ಮನೆಗೆ ಹೋಗಿ, ‘ನಿಮ್ಮ ಮಗಳು ಮುಸ್ಲಿಂ ಯುವಕನ ಜತೆ ಮಾತನಾಡುತ್ತಿದ್ದು, ಇದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಊರಿನಿಂದ ಹೊರ ಹೋಗಬೇಕು’ ಎಂದು ಬೆದರಿಕೆ ಹಾಕಿದ್ದರು.

ಈ ಕುರಿತು ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಪೊಲೀಸರು, ಆಟೊ ಚಾಲಕ ಉಮೇಶ್‌ (33) ಮತ್ತು ಸಣ್ಣ ಹೋಟೆಲ್‌ ನಡೆಸುತ್ತಿರುವ ರಮೇಶ್‌ (48) ಎಂಬುವರನ್ನು ಬಂಧಿಸಿದ್ದರು. ಮರುದಿನ ಈ ಬಾಲಕಿಯ ಮನೆಯಿಂದ ನಾಪತ್ತೆಯಾಗಿದ್ದಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry