ಪ್ರೈಸ್‌ ವಾಟರ್‌ಹೌಸ್‌ಗೆ ‘ಸೆಬಿ’ ನಿಷೇಧ

7
ಸತ್ಯಂ ಪ್ರಕರಣ: 9 ವರ್ಷಗಳ ನಂತರ ನಿರ್ಧಾರ

ಪ್ರೈಸ್‌ ವಾಟರ್‌ಹೌಸ್‌ಗೆ ‘ಸೆಬಿ’ ನಿಷೇಧ

Published:
Updated:
ಪ್ರೈಸ್‌ ವಾಟರ್‌ಹೌಸ್‌ಗೆ ‘ಸೆಬಿ’ ನಿಷೇಧ

ನವದೆಹಲಿ : ಬಹುಕೋಟಿ ಸತ್ಯಂ ಕಂಪ್ಯೂಟರ್‌ ಸರ್ವಿಸಸ್‌ ಹಗರಣದಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದಂತೆ ಲೆಕ್ಕಪತ್ರ ತಪಾಸಣಾ ಸಂಸ್ಥೆ ಪ್ರೈಸ್‌ ವಾಟರ್‌ಹೌಸ್‌ ಮೇಲೆ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಎರಡು ವರ್ಷಗಳ ನಿಷೇಧ ವಿಧಿಸಿದೆ.

ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಸಂಸ್ಥೆಗಳ ಲೆಕ್ಕಪತ್ರ ತಪಾಸಣೆ ನಡೆಸಿ ಪ್ರಮಾಣ ಪತ್ರ ನೀಡುವುದರ ಮೇಲೆ ಈ ನಿಷೇಧ ಅನ್ವಯವಾಗಲಿದೆ. ಜತೆಗೆ ಅಕ್ರಮವಾಗಿ ಸಂಪಾದಿಸಿರುವ ₹ 13 ಕೋಟಿಗಳನ್ನು ಬಡ್ಡಿಸಹಿತ ಪಾವತಿಸಲೂ ಸೂಚಿಸಿದೆ.

ಒಂಬತ್ತು ವರ್ಷಗಳ ಹಿಂದೆ ನಡೆದಿದ್ದ ಸತ್ಯಂ ಕಂಪ್ಯೂಟರ್‌  ಹಗರಣಕ್ಕೆ ಸಂಬಂಧಿಸಿದಂತೆ ‘ಸೆಬಿ’ ಈಗ ಈ ಆದೇಶ ಹೊರಡಿಸಿದೆ. ಲೆಕ್ಕಪತ್ರ ತಪಾಸಣಾ ಸಂಸ್ಥೆಯು ಈ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಎರಡು ಬಾರಿ ಪ್ರಯತ್ನ ನಡೆಸಿತ್ತು. ಆದರೆ ಅವುಗಳು ನಿರೀಕ್ಷಿತ ಫಲ ನೀಡಿರಲಿಲ್ಲ. ಲೆಕ್ಕಪತ್ರ ತಪಾಸಣೆಯ ಪ್ರಮುಖ ಸಂಸ್ಥೆಯ ವಿರುದ್ಧ ಷೇರುಪೇಟೆ ನಿಯಂತ್ರಣ ಮಂಡಳಿಯು ವಿಧಿಸಿರುವ ಅತ್ಯಂತ ಕಠಿಣ ಆದೇಶವೂ ಇದಾಗಿದೆ.

‘ಸೆಬಿ’ ಕೈಗೊಂಡ ತನಿಖೆ ಮತ್ತು ಹೊರಡಿಸಿರುವ ಆದೇಶವು ನಮಗೆ ನಿರಾಶೆಗೊಳಿಸಿದೆ. ಈ ಆದೇಶ ಜಾರಿಗೆ ತಡೆಯಾಜ್ಞೆ ಪಡೆಯುವ ಬಗ್ಗೆ ನಮಗೆ ವಿಶ್ವಾಸ ಇದೆ’ ಎಂದು ಪ್ರೈಸ್‌ ವಾಟರ್‌ಹೌಸ್‌ ಪ್ರತಿಕ್ರಿಯಿಸಿದೆ.

‘ಪ್ರೈಸ್‌ವಾಟರ್‌ ಹೌಸ್‌ ಬ್ರ್ಯಾಂಡ್‌ ಹೆಸರಿನಡಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಲೆಕ್ಕಪತ್ರ ತಪಾಸಣೆ ನಡೆಸುವ ಸಂಸ್ಥೆಗಳ ಮೇಲೆ ‘ಸೆಬಿ’ 2 ವರ್ಷಗಳ ನಿಷೇಧ ವಿಧಿಸಿದೆ. 2017–18ನೇ ಹಣಕಾಸು ವರ್ಷದ ಲೆಕ್ಕಪತ್ರ ತಪಾಸಣೆಗೆ ಈ ನಿಷೇಧ ಅನ್ವಯಗೊಳ್ಳಲಾರದು.

ಪ್ರೈಸ್‌ ವಾಟರ್‌ಹೌಸ್‌ ಬೆಂಗಳೂರು ಮತ್ತು ಅದರ ಈ ಹಿಂದಿನ ಪಾಲುದಾರ ಸಂಸ್ಥೆಗಳಾದ ಎಸ್‌. ಗೋಪಾಲಕೃಷ್ಣನ್‌ ಮತ್ತು ಶ್ರೀನಿವಾಸ್‌ ತಲ್ಲೂರಿ ಕಾನೂನುಬಾಹಿರವಾಗಿ ಮಾಡಿಕೊಂಡಿರುವ ₹ 13 ಕೋಟಿ ಲಾಭವನ್ನು ಶೇ 12ರ ಬಡ್ಡಿ ದರದಲ್ಲಿ 45 ದಿನಗಳಲ್ಲಿ ಪಾವತಿಸಬೇಕು ಎಂದೂ ‘ಸೆಬಿ’ ನಿರ್ದೇಶನ ನೀಡಿದೆ.

ಸತ್ಯಂನಲ್ಲಿ ನಡೆದ ಹಗರಣದಲ್ಲಿ ಪಿಡಬ್ಯ್ಯು ಸಂಸ್ಥೆಗಳು ಉದ್ದೇಶಪೂರ್ವಕವಾಗಿ ಯಾವುದೇ ತಪ್ಪು ಎಸಗಿಲ್ಲ ಎಂದು ಪ್ರೈಸ್‌ ವಾಟರ್‌ಹೌಸ್‌ ಹೇಳಿಕೊಂಡಿದೆ.

***

ಸತ್ಯಂ ಹಗರಣ

ಸಂಸ್ಥೆಯ ಹಣಕಾಸು ಲೆಕ್ಕಪತ್ರಗಳಲ್ಲಿ  ದೊಡ್ಡ ಪ್ರಮಾಣದ  ವಂಚನೆ ಎಸಗಲಾಗಿದೆ ಎಂದು ಸತ್ಯಂ ಕಂಪ್ಯೂಟರ್‌ನ ಅಂದಿನ ಅಧ್ಯಕ್ಷರಾಗಿದ್ದ ಬಿ. ರಾಮಲಿಂಗರಾಜು ಅವರು ಒಪ್ಪಿಕೊಂಡಿದ್ದರಿಂದ ಈ ಹಗರಣವು 2009ರ ಜನವರಿಯಲ್ಲಿ ಬೆಳಕಿಗೆ ಬಂದಿತ್ತು.

2000 ರಿಂದ 2008ರ ಅವಧಿಯಲ್ಲಿ ಪಿಡಬ್ಲ್ಯು ಸಂಸ್ಥೆಗಳು ಸತ್ಯಂ ಕಂಪ್ಯೂಟರ್‌ಗೆ ಸಲ್ಲಿಸಿದ ಸೇವೆಗೆ ₹ 23 ಕೋಟಿಗಳಷ್ಟು ಶುಲ್ಕ ಪಡೆದಿದ್ದವು. ಇದರಲ್ಲಿ ₹ 13 ಕೋಟಿಗಳನ್ನು ಪಿಡಬ್ಲ್ಯು ಬೆಂಗಳೂರಿಗೆ ಪಾವತಿಸಲಾಗಿತ್ತು. ಈ ಕಾನೂನುಬಾಹಿರ ಲಾಭವನ್ನು ಸಂಸ್ಥೆ ಈಗ ಮರಳಿಸಬೇಕಾಗಿದೆ. ಸಂಸ್ಥೆಯ ಹಣಕಾಸು ಹೇಳಿಕೆಗಳಿಗೆ ಪ್ರಮಾಣಪತ್ರ ನೀಡುವಲ್ಲಿ ‘ಪಿಡಬ್ಲ್ಯು’ ಲೆಕ್ಕಪತ್ರ ತಪಾಸಣಾ ಸಂಸ್ಥೆಯ ಕರ್ತವ್ಯಗಳನ್ನು ಉಲ್ಲಂಘಿಸಿತ್ತು ಎಂದು ‘ಸೆಬಿ’ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry