ರಾಜಿ ತೆರಿಗೆ ವ್ಯಾಪ್ತಿ: ಎಲ್ಲ ಸೇವೆ ಸೇರ್ಪಡೆಗೆ ವಿರೋಧ

7
ಜಿಎಸ್‌ಟಿ

ರಾಜಿ ತೆರಿಗೆ ವ್ಯಾಪ್ತಿ: ಎಲ್ಲ ಸೇವೆ ಸೇರ್ಪಡೆಗೆ ವಿರೋಧ

Published:
Updated:

ನವದೆಹಲಿ : ರೆಸ್ಟೊರಂಟ್ಸ್‌ಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ‘ರಾಜಿ ತೆರಿಗೆ’ (ಕಂಪೋಸಿಷನ್‌ ಸ್ಕೀಮ್‌) ವ್ಯಾಪ್ತಿಗೆ ತರುವುದನ್ನು ಕೇಂದ್ರ ಸರ್ಕಾರ ನೇಮಿಸಿದ್ದ  ಕಾಯ್ದೆ ಪರಾಮರ್ಶೆ ಸಮಿತಿ ವಿರೋಧಿಸಿದೆ.

ಇದನ್ನು ಆಯ್ಕೆ ಮಾಡಿಕೊಂಡ ವಹಿವಾಟುದಾರರು ಒದಗಿಸುವ ಸೇವೆಗಳನ್ನು ತೆರಿಗೆಗೆ ಒಳಪಡುವ ವಹಿವಾಟಿನ ಶೇ 10ರಷ್ಟಕ್ಕೆ ಅಥವಾ ₹ 5 ಲಕ್ಷಕ್ಕೆ ಸೀಮಿತಗೊಳಿಸಲೂ ಸಮಿತಿಯು ಶಿಫಾರಸು ಮಾಡಿದೆ.  ಕೇಂದ್ರ ಮತ್ತು ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಈ ಸಮಿತಿಯಲ್ಲಿ 10 ಮಂದಿ ಸದಸ್ಯರು ಇದ್ದಾರೆ. ಈ ವಹಿವಾಟುದಾರರು ಪೂರೈಸುವ ಸೇವೆಗಳ ಮೇಲೆ ಶೇ 18ರಷ್ಟು ಮೀರದ ಪ್ರತ್ಯೇಕ ‘ರಾಜಿ ತೆರಿಗೆ’ ವಿಧಿಸಬೇಕು ಎಂದೂ ಸಮಿತಿ ಸಲಹೆ ನೀಡಿದೆ.

ಉದ್ದಿಮೆ, ವ್ಯಾಪಾರ ವಲಯದ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯ ಸಲಹೆಗಳನ್ನು ಆಧರಿಸಿ ಈ ಕಾಯ್ದೆ ಪರಾಮರ್ಶೆ ಸಮಿತಿಯು ಶಿಫಾರಸುಗಳನ್ನು ಮಾಡಿದೆ. ಎಲ್ಲ ಬಗೆಯ ಸೇವೆ ಒದಗಿಸುವವರಿಗೆ ‘ರಾಜಿ ತೆರಿಗೆ’ ಅನ್ವಯಗೊಳಿಸಬೇಕು ಎಂದು ಸಮಿತಿಯು ಇದಕ್ಕೂ ಮೊದಲು ಸಲಹೆ ನೀಡಿತ್ತು.

15 ಲಕ್ಷಕ್ಕೂ ಹೆಚ್ಚು ವಹಿವಾಟುದಾರರು ‘ರಾಜಿ ತೆರಿಗೆ’ ಆಯ್ಕೆ ಮಾಡಿಕೊಂಡಿದ್ದಾರೆ. ರಿಯಾಯ್ತಿ ದರದಲ್ಲಿ ತೆರಿಗೆ ಪಾವತಿಸಲು ಇದು ಅನುವು ಮಾಡಿಕೊಡುತ್ತದೆ. ಈ ಯೋಜನೆಯಡಿ ವರ್ತಕರು ಮತ್ತು ತಯಾರಕರು ಶೇ 1ರಷ್ಟು ಮತ್ತು ರೆಸ್ಟೊರಂಟ್ಸ್‌ಗಳು ಶೇ 5ರಷ್ಟು ಜಿಎಸ್‌ಟಿ ಪಾವತಿಸಬಹುದು. ವಾರ್ಷಿಕ ವಹಿವಾಟು ₹ 1.5 ಕೋಟಿ ಮೀರದ ಸರಕುಗಳ ತಯಾರಕರು, ರೆಸ್ಟೊರಂಟ್‌ ಮಾಲೀಕರು ಮತ್ತು ವರ್ತಕರೂ ಈ ಯೋಜನೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ.

ನವೆಂಬರ್‌ ತಿಂಗಳಲ್ಲಿ ನಡೆದಿದ್ದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಗರಿಷ್ಠ ವಹಿವಾಟಿನ ಮಿತಿಯನ್ನು ₹ 1.5 ಕೋಟಿಗೆ ಹೆಚ್ಚಿಸಲಾಗಿತ್ತು.  ಶಾಸನಬದ್ಧ ಗರಿಷ್ಠ ಮಿತಿಯನ್ನು ₹ 2 ಕೋಟಿಗೆ ಹೆಚ್ಚಿಸಲು ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿ ತರಲೂ ನಿರ್ಧರಿಸಿತ್ತು. ಸದ್ಯದ ಮಟ್ಟಿಗೆ ಈ ಗರಿಷ್ಠ ಮಿತಿಯನ್ನು ₹ 1.5 ಕೋಟಿಗೆ ನಿಗದಿಪಡಿಸಲು ಕಾಯ್ದೆ ಪರಾಮರ್ಶೆ ಸಮಿತಿ ಸಲಹೆ ನೀಡಿದೆ. ಸರಕು ಮತ್ತು ಸೇವೆಗಳ ಅಂತರ ರಾಜ್ಯ ವಹಿವಾಟಿನಲ್ಲಿ ತೊಡಗಿಕೊಂಡಿರುವ ವರ್ತಕರಿಗೆ ಈ ಯೋಜನೆ ವಿಸ್ತರಿಸಬಾರದು ಎಂದೂ ಸಮಿತಿ ಸೂಚಿಸಿದೆ.

ಇದೇ 18ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಶಿಫಾರಸುಗಳನ್ನು ಚರ್ಚೆಗೆ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry