500 ರಸ್ತೆ ‘ನುಂಗಿದ’ ಗುತ್ತಿಗೆದಾರರು

7

500 ರಸ್ತೆ ‘ನುಂಗಿದ’ ಗುತ್ತಿಗೆದಾರರು

Published:
Updated:
500 ರಸ್ತೆ ‘ನುಂಗಿದ’ ಗುತ್ತಿಗೆದಾರರು

ನವದೆಹಲಿ: ರಸ್ತೆಯನ್ನೇ ನಿರ್ಮಿಸದೆ ಹಣ ಪಡೆದುಕೊಂಡು ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ (ಪಿಎಂಜಿಎಸ್‌ವೈ) ಹಾದಿ ತಪ್ಪುವಂತೆ ಮಾಡಲಾಗಿದೆ. ಇದಕ್ಕೆ ರಾಜಕಾರಣಿಗಳು ಮತ್ತು ಗುತ್ತಿಗೆದಾರರ ನಡುವಣ ಅಪವಿತ್ರ ಬಂಧವೇ ಕಾರಣ ಎಂದು ಅಧ್ಯಯನವೊಂದು ಹೇಳಿದೆ.

ಸುಮಾರು 500ರಷ್ಟು ಸರ್ವಋತು ರಸ್ತೆಗಳನ್ನು ನಿರ್ಮಿಸಲು ಗುತ್ತಿಗೆದಾರರ ಹಣ ಪಡೆದುಕೊಂಡಿದ್ದಾರೆ. ಆದರೆ ರಸ್ತೆ ನಿರ್ಮಿಸಿಯೇ ಇಲ್ಲ. ಇದರಿಂದ ಸುಮಾರು 8.57 ಲಕ್ಷ ಗ್ರಾಮೀಣ ಜನರು ರಸ್ತೆಯಿಂದ ವಂಚಿತರಾಗಿದ್ದಾರೆ ಎಂದು ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯ ಹಾಗೂ ಪ್ಯಾರಿಸ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನ ಸಂಶೋಧಕರು ಹೇಳಿದ್ದಾರೆ.

‘ಬಿಲ್ಡಿಂಗ್‌ ಕನೆಕ್ಷನ್ಸ್‌: ಪೊಲಿಟಿಕಲ್‌ ಕರಪ್ಶನ್‌ ಎಂಡ್‌ ರೋಡ್‌ ಕನ್‌ಸ್ಟ್ರಕ್ಷನ್‌ ಇನ್‌ ಇಂಡಿಯಾ’ (ಸಂಪರ್ಕ ಕಾಮಗಾರಿ: ಭಾರತದಲ್ಲಿ ರಾಜಕೀಯ ಭ್ರಷ್ಟಾಚಾರ ಮತ್ತು ರಸ್ತೆ ನಿರ್ಮಾಣ) ಎಂಬ ಹೆಸರಿನ ಅಧ್ಯಯನ ವರದಿಯು ಜರ್ನಲ್‌ ಆಫ್‌ ಡೆವಲಪ್‌ಮೆಂಟ್‌ ಎಕನಾಮಿಕ್ಸ್‌ನಲ್ಲಿ ಪ್ರಕಟವಾಗಿದೆ.

ಸ್ಥಳೀಯ ಶಾಸಕನ ಜತೆ ಸಂಬಂಧ ಇರುವ ಗುತ್ತಿಗೆದಾರರು ರಸ್ತೆ ಯೋಜನೆಗಳ ಗುತ್ತಿಗೆ ಪಡೆದುಕೊಳ್ಳುವ ಪ್ರಮಾಣ ಶೇ 4ರಿಂದ ಶೇ 7ಕ್ಕೆ ಹೆಚ್ಚಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ರಸ್ತೆ ಸಂಪರ್ಕವೇ ಇಲ್ಲದ ಹಳ್ಳಿಗಳ ನಡುವೆ ಸಂಪರ್ಕ ಏರ್ಪಡಿಸುವುದಕ್ಕಾಗಿ 2000ದಲ್ಲಿ ಪಿಎಂಜಿಎಸ್‌ವೈ ಆರಂಭವಾಗಿತ್ತು. ಭ್ರಷ್ಟಾಚಾರ ತಡೆಗೆ ಬಲವಾದ ನಿಯಂತ್ರಣ ವ್ಯವಸ್ಥೆಯೂ ಈ ಯೋಜನೆಯಲ್ಲಿ ಇತ್ತು. ಆದರೆ ಅನುಷ್ಠಾನದಲ್ಲಿ ಭಾರಿ ಭ್ರಷ್ಟಾಚಾರ ಈ ಯೋಜನೆಯೊಳಗೆ ನುಸುಳಿದೆ ಎಂದು ಅಧ್ಯಯನ ಹೇಳಿದೆ.

‘ರಾಜಕೀಯ ಪ್ರಭಾವ ಹೊಂದಿರುವ ಗುತ್ತಿಗೆದಾರರಿಗೆ ನೀಡಲಾದ ರಸ್ತೆ ಯೋಜನೆಗಳು ನಿರ್ಮಾಣ ಆಗದೇ ಇರುವ ಸಾಧ್ಯತೆ ಹೆಚ್ಚು. ಪಿಎಂಜಿಎಸ್‌ವೈ ಅತ್ಯಂತ ಪರಿಣಾಮಕಾರಿ ಯೋಜನೆ. ಆದರೆ ರಾಜಕೀಯ ಹಸ್ತಕ್ಷೇಪದಿಂ

ದಾಗಿ ಇದರ ಅನುಷ್ಠಾನದ ಗುಣಮಟ್ಟ ಕುಸಿದಿದೆ’ ಎಂದು ಅಧ್ಯಯನ ತಂಡದ ಮುಖ್ಯಸ್ಥ ಜಾಕೋಬ್‌ ಎನ್‌. ಶಪೀರೊ ಹೇಳಿದ್ದಾರೆ. 

ಶಾಸಕರು ತಮ್ಮ ಸಾಮಾಜಿಕ ಜಾಲದ ಮೂಲಕ ಈ ‘ವ್ಯವಸ್ಥೆ’ಯನ್ನು ನಿರ್ವಹಿಸುತ್ತಾರೆ. ಈ ಜಾಲದಲ್ಲಿ ಪ್ರಾದೇಶಿಕ ಮಟ್ಟದ ಅಧಿಕಾರಿಗಳೂ ಇರುತ್ತಾರೆ.

ಅಧಿಕಾರಿಗಳು ಬಡ್ತಿಯನ್ನು ಎದುರು ನೋಡುತ್ತಿದ್ದರೆ ಅವರ ಉಸ್ತುವಾರಿಯಲ್ಲಿರುವ ಯೋಜನೆಗಳಲ್ಲಿ ಭ್ರಷ್ಟಾಚಾರದ ಸಾಧ್ಯತೆ ಕಡಿಮೆ ಎಂದೂ ವರದಿ ಹೇಳಿದೆ.

ಪರಿಹಾರ ಏನು

ಶಾಸಕರಿಗೆ ನಿರ್ದಿಷ್ಟ ಹೊಣೆಗಾರಿಕೆ ನಿಗದಿ ಮಾಡಬೇಕು. ರಸ್ತೆ ನಿರ್ಮಾಣದಲ್ಲಿ ಶಾಸಕರಿಗೆ ಯಾವುದೇ ಪಾತ್ರ ಇಲ್ಲ ಎಂದು ಮತದಾರರು ಭಾವಿಸಿದ್ದಾರೆ. ಹಾಗಾಗಿ ಮತ ಹಾಕುವಾಗ ರಸ್ತೆ ನಿರ್ಮಾಣದ ವಿಚಾರ ಮುಖ್ಯವಾಗುವುದಿಲ್ಲ. ಈ ವಿಚಾರದಲ್ಲಿ ಜನರು ಅಭ್ಯರ್ಥಿಗೆ ಶಿಕ್ಷೆ ನೀಡುವುದಿಲ್ಲ. ಪಿಎಂಜಿಎಸ್‌ವೈ ಹೊಣೆಯನ್ನು ಶಾಸಕರಿಗೆ ವಹಿಸಿದರೆ ಇದರಲ್ಲಿ ಭ್ರಷ್ಟಾಚಾರ ಆಗದಂತೆ ಅವರು ನೋಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ವರದಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry