ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರೊಂದು ಮತ ನಾಶಗೊಳಿಸಿ ಏಕತೆ ಸಾಧಿಸುವುದು ಹಗಲುಗನಸು!

Last Updated 11 ಜನವರಿ 2018, 19:33 IST
ಅಕ್ಷರ ಗಾತ್ರ

‘ಏಳಿ, ಎದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ’ ಎಂಬ ಉಪನಿಷತ್ತಿನ ಶ್ಲೋಕವನ್ನು ಜನಪ್ರಿಯಗೊಳಿಸಿದ ವರು ಸ್ವಾಮಿ ವಿವೇಕಾನಂದರು. ಸ್ಫೂರ್ತಿ, ಶಿಕ್ಷಣ ಮತ್ತು ಬದ್ಧತೆಯ ಮೂಲಕ ನವಭಾರತ ನಿರ್ಮಿಸಲು, ವಿಶೇಷವಾಗಿ ಯುವಜನ ಸೇರಿದಂತೆ ಪ್ರತಿ ಭಾರತೀಯರಿಗೂ ಈ ಮಾತು ಪ್ರೇರಣೆಯಾಗಬೇಕಿದೆ.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಯುವಜನರ ಪ್ರಮಾಣ ಶೇ 65ರಷ್ಟಿದೆ. ಯುವಜನರ ಶಕ್ತಿ ಬಳಸಿಕೊಂಡು ತನ್ನ ನಿಜ ಸಾಮರ್ಥ್ಯ ಸಾಬೀತುಪಡಿಸಿಕೊಳ್ಳಲು ಭಾರತಕ್ಕೆ ಇಂತಹ ಸುಸಮಯ ಬೇರೆಂದೂ ಒದಗಿರಲಿಲ್ಲ. ಜಾಗತಿಕ ಮಾಹಿತಿ ತಂತ್ರಜ್ಞಾನ ಉದ್ದಿಮೆ ದೃಷ್ಟಿಯಿಂದ ರಾಷ್ಟ್ರವು ಮುಂಚೂಣಿಯಲ್ಲಿದ್ದು, ಸೇವಾ ಕ್ಷೇತ್ರವು ಒಟ್ಟಾರೆ ರಾಷ್ಟ್ರೀಯ ಉತ್ಪಾದನೆಗೆ (ಜಿಡಿಪಿ) ಗಣನೀಯ ಕೊಡುಗೆ ನೀಡುತ್ತಿದೆ.

ಆದರೆ, ರಾಷ್ಟ್ರದ ಬಹುವಲಯಗಳ ಬೆಳವಣಿಗೆ ಸಾಧ್ಯವಾಗಬೇಕೆಂದರೆ ಉತ್ಪಾದನೆ, ಕೃಷಿ, ಇಂಧನ ಮತ್ತು ಮೂಲಸೌಕರ್ಯ ನಿರ್ಮಾಣಗಳಲ್ಲಿ ತ್ವರಿತ ಅಭಿವೃದ್ಧಿ ಸಾಧಿಸುವುದು ಅಗತ್ಯವಾಗಿದೆ. ಹೀಗಾದರೆ, ನಾವು ನಿಗದಿ ಮಾಡಿಕೊಂಡಿರುವ 10-15 ವರ್ಷಗಳಿಗಿಂತ ಮುನ್ನವೇ ರಾಷ್ಟ್ರವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಲಿದೆ.

ಸ್ವಾಮಿ ವಿವೇಕಾನಂದರು ಒಮ್ಮೆ ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಪತ್ರಕರ್ತರ ಬಳಿ ಮಾತನಾಡುತ್ತಾ, ‘ಇದು ನಿಮ್ಮ ಶತಮಾನವಾಗಿದೆ; ಆದರೆ 21ನೇ ಶತಮಾನವು ಭಾರತದ್ದಾಗಲಿದೆ’ ಎಂದಿದ್ದರು.

ಭಾರತವು ಎಲ್ಲಾ ಅಡೆತಡೆಗಳನ್ನು ದಾಟಿ ಮುಂಚೂಣಿ ಆರ್ಥಿಕತೆಯ ರಾಷ್ಟ್ರವಾಗಲಿದೆಯೇ ಎಂಬ ಸಂಶಯ ಈಗಲೂ ಸಂದೇಹವಾದಿಗಳನ್ನು ಹಾಗೂ ನಿರಾಶಾವಾದಿಗಳನ್ನು ಕಾಡುತ್ತಿರಬಹುದು. ಆದರೆ ಇತ್ತೀಚಿನ ಬೆಳವಣಿಗೆ ಮಾದರಿಗಳನ್ನು ಅವಲೋಕಿಸಿದರೆ ಆಶಾವಾದಿಗಳಾಗಿ
ರಲು ಸಾಕಷ್ಟು ಕಾರಣಗಳಿವೆ ಎಂಬುದು ಮನವರಿಕೆಯಾಗುತ್ತದೆ.

ಭಾರತದ ಆರ್ಥಿಕತೆಯ ಸದೃಢತೆ ಕುರಿತು ವಿಶ್ವಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ಬಾಹ್ಯ ಸಂಸ್ಥೆಗಳ ವರದಿಗಳು ಅಭಿಪ್ರಾಯಪಡುತ್ತಿರುವುದು ದೇಶವು ಸೂಕ್ತ ಬೆಳವಣಿಗೆಯ ಪಥದಲ್ಲಿದೆ ಎಂಬುದನ್ನು ಸೂಚಿಸುತ್ತದೆ.

ಇದರ ನಡುವೆಯೇ, ನಮ್ಮ ಅಭ್ಯುದಯಕ್ಕೆ ಇರುವ ವಿಘ್ನಗಳನ್ನೂ ಗುರುತಿಸಿಕೊಳ್ಳಬೇಕಿದೆ. ರಾಷ್ಟ್ರದ ಸಾಮಾಜಿಕ ಸಾಮರಸ್ಯ, ಸಮೃದ್ಧ, ಶಾಂತಿಯುತ, ಸಮಗ್ರ ಮತ್ತು ಸಮಾನ ಅವಕಾಶಗಳಿಗೆ ತೊಡಕಾಗಿರುವ ಹಲವು ಸಿದ್ಧಾಂತಗಳ ಸಂಕುಚಿತ ಪೂರ್ವಗ್ರಹಗಳನ್ನು ನವ
ಭಾರತದ ಭದ್ರಬುನಾದಿಯ ಆಳದಲ್ಲಿ ಹುಗಿಯಬೇಕಾಗಿದೆ.

ರಾಷ್ಟ್ರದ ಪಿತಾಮಹ ಹೇಳಿರುವಂತೆ, ಭಾರತವು ಗ್ರಾಮಗಳ ನಾಡಾಗಿದೆ. ಗ್ರಾಮೀಣ ಜನರ ಬೆಳವಣಿಗೆಯ ಪರ್ವದ ಭಾಗವಾಗದೇ ಹೋದಲ್ಲಿ ಪ್ರಗತಿ ಎಂಬುದು ಮರೀಚಿಕೆಯಷ್ಟೇ ಆಗುತ್ತದೆ. ಅಭಿವೃದ್ಧಿ ಎಂಬುದು ಮೊದಲಿಗೆ ಬೇರುಮಟ್ಟದಿಂದ ಆರಂಭವಾಗಬೇಕು ಎಂಬ ಧೋರಣೆ ಅಳವಡಿಸಿಕೊಂಡು ಗ್ರಾಮಗಳನ್ನು ಸಮೃದ್ಧ ಹಾಗೂ ಸ್ವಾವಲಂಬಿ ಆರ್ಥಿಕ ಘಟಕಗಳಾಗಿ ಪರಿವರ್ತಿಸಬೇಕಿದೆ. ಇದೇ ವೇಳೆ, ಕೃಷಿ
ಯನ್ನು ಲಾಭದಾಯಕ ವೃತ್ತಿಯನ್ನಾಗಿಸಿ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಬೇಕಾಗಿದೆ. ಆಹಾರ ಭದ್ರತೆಗೆ ಯಾವುದೇ ಭಂಗವಾಗದಿರುವ ದಿಸೆಯಲ್ಲಿ ಕೃಷಿಕರ ಕಲ್ಯಾಣಕ್ಕೆ ಅಗ್ರ ಆದ್ಯತೆ ನೀಡಬೇಕಾಗಿದೆ.

ಇತ್ತೀಚಿನ ದಿನಗಳಲ್ಲಿ ರಾಷ್ಟ್ರದ ಬೆಳವಣಿಗೆಗೆ ಪೂರಕವಾದವುಗಳಿಗಿಂತ ಕ್ಷುಲ್ಲಕ ಸಂಗತಿಗಳೇ ಹೆಚ್ಚಾಗಿ ಸಾರ್ವಜನಿಕ ಚರ್ಚೆಯ ವಿಷಯಗಳಾಗಿ ಗಮನಸೆಳೆಯುತ್ತಿವೆ. ಸಮೂಹ ಸಂವಹನದ ಪ್ರಬಲ ಸಾಧನಗಳಾದ ಮಾಧ್ಯಮ ಮತ್ತು ಸಿನಿಮಾ ಉದ್ಯಮ ಗಂಭೀರ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಈಗ ಬಂದಿದೆ. ಸಕಾರಾತ್ಮಕ ಬದಲಾವಣೆಯ ವೇಗವರ್ಧಕಗಳು ನಮಗೆ ಬೇಕಾಗಿವೆ. ವಿಚಾರಶೀಲ, ವಸ್ತುನಿಷ್ಠ, ಭರವಸೆಯ, ದಿಟ್ಟತನದಿಂದ ಕೂಡಿದ ಹಾಗೂ ಸಂಯಮದ ಧ್ವನಿಗಳು ಇಂದಿನ ಅಗತ್ಯವಾಗಿವೆ. ನಮ್ಮಂತಹ ಸಂಸದೀಯ ಪ್ರಜಾಪ್ರಭುತ್ವವಿರುವ ರಾಷ್ಟ್ರದ ಅಭ್ಯುದಯದಲ್ಲಿ ಜನಪ್ರತಿನಿಧಿಗಳ ಪಾತ್ರ ಅತ್ಯಂತ ಮಹತ್ವದ್ದು. ಅವರು ಇತರರೆಲ್ಲರಿಗೂ ಮಾದರಿಯಾಗಬೇಕು.

ಸ್ವಾಮಿ ವಿವೇಕಾನಂದರ ಬೋಧನೆಗಳು ಸಾರ್ವಕಾಲಿಕವಾಗಿದ್ದು ಇಡೀ ಜಗತ್ತಿಗೆ ದೀವಟಿಗೆ ಆಗಬಲ್ಲವು ಎಂಬುದನ್ನು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ. ವಿವೇಕಾನಂದರು 1893ರಲ್ಲಿ ವಿಶ್ವ ಧಾರ್ಮಿಕ ಸಂಸತ್‍ನಲ್ಲಿ ಯಾವ ವಿಚಾರಗಳನ್ನು ಪ್ರತಿಪಾದಿಸಿದರೋ ಅವು, 125 ವರ್ಷಗಳ ನಂತರ ಈಗಲೂ ಪ್ರಸ್ತುತವಾಗಿವೆ.

‘ಜಗತ್ತಿಗೆ ಸಂಯಮ ಮತ್ತು ವಿಶ್ವಾತ್ಮಕ ದೃಷ್ಟಿಯನ್ನು ಬೋಧಿಸಿದ ಧರ್ಮಕ್ಕೆ ಸೇರಿದವನಾಗಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ. ವಿಶ್ವ ಸಹಿಷ್ಣುತೆಯಲ್ಲಿ ವಿಶ್ವಾಸವಿರಿಸಿರುವ ನಾವು ಎಲ್ಲ ಮತಗಳನ್ನೂ ಅವು ಇರುವ ರೀತಿಯಲ್ಲೇ ಒಪ್ಪಿಕೊಳ್ಳುತ್ತೇವೆ. ಎಲ್ಲ ಧರ್ಮಗಳಿಗೆ ಸೇರಿದ ನಿರಾಶ್ರಿತರಿಗೆ ಹಾಗೂ ಭೂಮಂಡಲದ ಎಲ್ಲ ರಾಷ್ಟ್ರಗಳ ನೊಂದವರಿಗೆ ಆಶ್ರಯ ನೀಡಿದ ಹಿರಿಮೆಯಿರುವ ರಾಷ್ಟ್ರದ ಪ್ರಜೆಯಾಗಿರುವುದು ಸಂತಸ ಮೂಡಿಸುತ್ತದೆ’ ಎಂಬ ನುಡಿಗಳನ್ನು ಅವರು ಆಡಿದ್ದರು.

‘ಮತೀಯ ಪಕ್ಷಪಾತ, ಅಸಹಿಷ್ಣುತೆ, ಮತಾಂಧತೆ ಈ ಸುಂದರ ವಸುಂಧರೆಯನ್ನು ಬಹು ಹಿಂದಿನಿಂದಲೂ ಕಾಡುತ್ತಲೇ ಇವೆ. ಇದರಿಂದಾಗಿ ಜಗತ್ತಿನಲ್ಲಿ ಹಿಂಸೆ, ರಕ್ತಪಾತ ಮಡುಗಟ್ಟಿವೆ; ನಾಗರಿಕತೆಗಳು ನಾಶವಾಗಿ, ರಾಷ್ಟ್ರಗಳು ಹತಾಶವಾಗಿವೆ. ಒಂದೊಮ್ಮೆ ಈ ರಾಕ್ಷಸೀ ಪ್ರವೃತ್ತಿಗಳು ಇಲ್ಲದೇ ಹೋಗಿದ್ದರೆ ಮನುಕುಲವು ಈಗಿರುವುದಕ್ಕಿಂತ ಅದೆಷ್ಟೋ ಉನ್ನತ ಮಟ್ಟದಲ್ಲಿರುತ್ತಿತ್ತು’ ಎಂದೂ ಅವರು ಪ್ರತಿಪಾದಿಸಿದ್ದರು.

ಮತೀಯ ಏಕತೆಯ ಸಮಾನ ಭೂಮಿಕೆಯ ಬಗ್ಗೆ ಉಲ್ಲೇಖಿಸುತ್ತಾ, ‘ಯಾವುದೇ ಒಂದು ಮತ ಮೇಲುಗೈ ಸಾಧಿಸುವುದರಿಂದ ಅಥವಾ ಬೇರೊಂದು ಮತವನ್ನು ನಾಶಗೊಳಿಸುವುದರಿಂದ ಇಂತಹ ಏಕತೆ ಬರುತ್ತದೆಂದು ಯಾರಾದರೂ ಭಾವಿಸಿದ್ದರೆ ಅದೊಂದು ನನಸಾಗದ ಹಗಲುಗನಸಾಗುತ್ತದೆ’ ಎಂದೂ ಅವರು ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದ್ದರು.

ಎಲ್ಲ ಬಗೆಯ ನಂಬಿಕೆಗಳ ಜನರು ಶಾಂತಿಯುತ ಸಹಬಾಳ್ವೆಯಿಂದ ಇರಬೇಕಾದರೆ ಮತೀಯ ಸಹಿಷ್ಣುತೆ ಅತ್ಯಂತ ಪ್ರಮುಖ ಎಂಬ ಸಂದೇಶವನ್ನು ಮತ್ತೊಮ್ಮೆ ನೆನಪಿಸುವ ಸಲುವಾಗಿ, ವಿವೇಕಾನಂದರು ವಿಶ್ವ ಧಾರ್ಮಿಕ ಸಂಸತ್‍ನಲ್ಲಿ ಆಡಿದ ಮಾತುಗಳನ್ನು ನಾನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಅಜ್ಞಾನಿಗಳು, ಮತೀಯ ಅಸಹಿಷ್ಣುಗಳು ತಮ್ಮ ದೃಷ್ಟಿಯನ್ನು ಇತರರ ಮೇಲೆ ಬಲವಂತದಿಂದ ಹೇರಲು ಪ್ರಯತ್ನಿಸಿದಾಗ ಹಾಗೂ ಏಕಸ್ವಾಮ್ಯ ಸಾಧಿಸಲು ಹೊರಟಾಗ ಸಮಸ್ಯೆಗಳು ಶುರುವಾಗುತ್ತವೆ.

ಯಾವುದೇ ಮತವಾದರೂ ಇಂತಹ ವರ್ತನೆಯನ್ನು ಸಹಿಸಿಕೊಳ್ಳಲಾಗದು ಹಾಗೂ ಸಹಿಸಿಕೊಳ್ಳಬಾರದು. ಜಾತೀಯ ವಿಘ್ನಗಳನ್ನು ನಿವಾರಿಸಲು ಮುಖ್ಯವಾಗಿ ರಾಜಕೀಯ ಪಕ್ಷಗಳು ಸೇರಿದಂತೆ ಅಭ್ಯುದಯಾಕಾಂಕ್ಷಿಗಳಾದ ಎಲ್ಲರೂ ಪ್ರಯತ್ನಿಸಬೇಕು. ಚುನಾವಣಾ ರಾಜಕೀಯದಲ್ಲಿ ಜಾತಿಬಲ, ಹಣಬಲ ಹಾಗೂ ಮತೀಯ ಬಲದ ಆಟ ನಡೆಯಲು ಅವಕಾಶ ಕೊಡಬಾರದು. ಜನರು ಅಭ್ಯರ್ಥಿಗಳ ನಡತೆ, ದಕ್ಷತೆ, ಶ್ರೇಷ್ಠತೆಯನ್ನು ಆಧರಿಸಿ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು.

ಜಾತಿ ಎಂಬುದು ಸಾಮಾಜಿಕ ವ್ಯವಸ್ಥೆಯಾಗಿತ್ತೇ ವಿನಾ ಮತೀಯ ವ್ಯವಸ್ಥೆ ಆಗಿರಲಿಲ್ಲ ಎಂಬುದು ವಿವೇಕಾನಂದರ ಗ್ರಹಿಕೆಯಾಗಿತ್ತು. ಜಾತಿ ಎಂಬುದು ನಮ್ಮ ಸಮಾಜದ ಸಹಜ ವಿಕಾಸದಿಂದ ಒಡಮೂಡಿದ ವ್ಯವಸ್ಥೆ ಎನ್ನುವ ನಿಲುವು ಅವರದ್ದಾಗಿತ್ತು. ‘ಒಂದು ಕಾಲಘಟ್ಟದಲ್ಲಿ ಈ ವ್ಯವಸ್ಥೆಯು ಅಗತ್ಯ ಹಾಗೂ ಅನುಕೂಲಕರವಾಗಿತ್ತು. ಅದರ ಆಗಿನ ಉದ್ದೇಶ ಈಡೇರಿದೆ...’ ಎಂದು ಹೇಳಿದ್ದ ಅವರು, ‘ಹಿಂದೂ ಮತಕ್ಕೆ ಈಗ ಜಾತಿ ವ್ಯವಸ್ಥೆಯ ಆಸರೆ ಬೇಕಾಗಿಲ್ಲ’ ಎಂದಿದ್ದರು ಕೂಡ.

ಭಾರತದಲ್ಲಿ ಈಗ ಯುವಸಮೂಹ ಹೆಚ್ಚಾಗಿರುವುದರಿಂದ ಕ್ಷಿಪ್ರ ಬೆಳವಣಿಗೆ ಸಾಧಿಸಲು ಈ ರಾಷ್ಟ್ರಕ್ಕೆ ಇರುವಷ್ಟು ಅವಕಾಶ ಬೇರೆ ಯಾವುದಕ್ಕೂ ಇಲ್ಲ. ‘ಪ್ರತಿಯೊಬ್ಬರನ್ನೂ ಮಾನವರನ್ನಾಗಿಸಬೇಕೆಂಬುದೇ ನನ್ನ ಬದುಕಿಯ ಧ್ಯೇಯ. ನಾನು ರಾಜಕಾರಣಿಯಾಗಲೀ ಸಮಾಜ ಸುಧಾರಕನಾಗಲೀ ಅಲ್ಲ... ಸ್ಫೂರ್ತಿಯ ಬಗ್ಗೆ ಮಾತ್ರ ನಾನು ಕಾಳಜಿ ವಹಿಸುತ್ತೇನೆ. ಅದು ಸೂಕ್ತವಾಗಿದ್ದಾಗ ಬೇರೆಲ್ಲವೂ ತಂತಾನೇ ಸರಿಹೋಗುತ್ತವೆ’ ಎಂಬ ಮಾತುಗಳನ್ನೂ ಸ್ವಾಮಿ ವಿವೇಕಾನಂದರು ಆಡಿದ್ದರು.

ಶಿಕ್ಷಣವು ‘ಬದುಕು ಕಟ್ಟುವ, ಮಾನವ ನಿರ್ಮಾಣದ ಹಾಗೂ ನಡತೆಗಳನ್ನು ರೂಪಿಸುವ ಚಿಂತನೆಗಳ ಸಮಪಾಕವಾಗಿರಬೇಕು’ ಎಂಬುದು ವಿವೇಕಾನಂದರ ಆಶಯವಾಗಿತ್ತು. ಸಾಮಾಜಿಕ ಪರಿವರ್ತನೆಗೆ ಇಂಬು ನೀಡುವ ಜ್ಞಾನಶಾಲಿ, ಕೌಶಲಪೂರಿತ ಮತ್ತು ಆರೋಗ್ಯಕರ ಮನೋಧೋರಣೆಯ ಮಹಿಳಾ ಮತ್ತು ಪುರುಷ ಸಮೂಹ ನಮಗೀಗ ಬೇಕಾಗಿದೆ. ವಿಶ್ವಾತ್ಮಕ ಮೌಲ್ಯಗಳಿಂದ ಕೂಡಿದ ಸಾಕ್ಷರತೆ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನಾವು ಬಲಯುತಗೊಳಿಸಬೇಕಿದೆ.

ವಿವೇಕಾನಂದರು ಜಾತಿ, ಮತಗಳ ಎಲ್ಲೆ ಮೀರಿ ಮಾನವೀಯತೆಯ ಉನ್ನತಿಯಲ್ಲಿ ನಂಬಿಕೆ ಹೊಂದಿದ್ದರು. ಮನುಕುಲದ ಉಳಿವು ಹಾಗೂ ಏಳ್ಗೆಯಲ್ಲಿ ಆಧ್ಯಾತ್ಮಿಕತೆಯ ಪ್ರಾಮುಖ್ಯದ ಬಗ್ಗೆಯೂ ಅವರು ಒತ್ತಿ ಹೇಳಿದ್ದರು. ‘ಸೇವೆಯ ಮೂಲಕ ಎಲ್ಲ ಜೀವಿಗಳಲ್ಲೂ ಇರುವ ದೇವರನ್ನು ಪೂಜಿಸಿ’ ಎಂದಿದ್ದರು. ಮಾನವೀಯ ಸೇವೆಯು ಆಧ್ಯಾತ್ಮಿಕ ಉನ್ನತಿಯೆಡೆಗಿನ ಮೆಟ್ಟಿಲು ಎಂದು ಬೋಧಿಸಿದ ಅವರ ಮಾತುಗಳು ನಮ್ಮ ಈಗಿನ ರಾಷ್ಟ್ರೀಯ ಸಂದರ್ಭದಲ್ಲಿ ಬಲು ಮುಖ್ಯವಾಗುತ್ತವೆ.

ಪ್ರಬುದ್ಧ ಅಧ್ಯಾತ್ಮ ಬೋಧಕರಾಗಿದ್ದ ಅವರು ಪಾಶ್ಚಿಮಾತ್ಯರಿಗೆ ನಮ್ಮ ವೇದಾಂತ ಮತ್ತು ಯೋಗವನ್ನು ಪರಿಚಯಿಸಿದರು. ವಸಾಹತುಶಾಹಿ ಬ್ರಿಟಿಷರ ಆಳ್ವಿಕೆಯಿದ್ದ ವೇಳೆ ಭಾರತೀಯರಲ್ಲಿ ದೇಶಭಕ್ತಿ ಮೊಳಕೆಯೊಡೆಯುವಂತೆ ಮಾಡಿದರು. ವಿಶ್ವ ಧಾರ್ಮಿಕ ಸಮಾವೇಶದಲ್ಲಿ ಆಡಿದ ಮಾತುಗಳ ಮೂಲಕ ಹಿಂದುತ್ವ ಎಂದರೇನು, ಅದು ಎಂತಹ ಜೀವನಶೈಲಿಯನ್ನು ಪುಷ್ಟೀಕರಿಸುತ್ತದೆ ಎಂಬುದನ್ನು ಸಮರ್ಪಕವಾಗಿ ಎತ್ತಿತೋರಿಸಿದರು.

ಪೂರ್ವ- ಪಶ್ಚಿಮ ರಾಷ್ಟ್ರಗಳ ನಡುವೆ ಸೇತುವಿನಂತೆ ಸೇವೆ ಸಲ್ಲಿಸಿದ ಅವರು ಮಾನವಕುಲದ ಆಧ್ಯಾತ್ಮಿಕ ಬುನಾದಿ ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ಬದುಕು ಮತ್ತು ಬೋಧನೆಗಳನ್ನು ನಾವು ಪ್ರಚುರಪಡಿಸಬೇಕಾದ ಅಗತ್ಯವಿದೆ ಎಂಬುದು ನನ್ನ ಅನಿಸಿಕೆ. ಇದರಿಂದ ಪಾಶ್ಚಿಮಾತ್ಯ ಪರಿಕಲ್ಪನೆಗಳು ಹಾಗೂ ಜೀವನಶೈಲಿಗಳಿಂದ ಪ್ರಭಾವಿತರಾಗಿ ಭೋಗ ಸಂಸ್ಕೃತಿಗೆ ಮಾರುಹೋಗುತ್ತಿರುವ ನಮ್ಮ ಯುವಪೀಳಿಗೆಗೆ ಭಾರತದ ಸಾಂಸ್ಕೃತಿಕ ಹಿರಿಮೆ, ಅಧ್ಯಾತ್ಮ ಪರಂಪರೆಯ ಗರಿಮೆ ಏನೆಂಬುದು ಮೈಗೂಡುತ್ತದೆ. ಯುವಜನಾಂಗವು ಅವರ ಆದರ್ಶವನ್ನು ಅಂತರ್ಗತಗೊಳಿಸಿಕೊಳ್ಳಬೇಕಿದೆ.

ಸ್ವಾಮಿ ವಿವೇಕಾನಂದರು ಮಹಾನ್ ರಾಷ್ಟ್ರ ನಿರ್ಮಾತೃ. ಪ್ರಗತಿಗೆ ಭಂಗವೆಸಗುವ, ಜನರನ್ನು ವಿಭಜಿಸುವ ಪ್ರವೃತ್ತಿ ಹೆಚ್ಚುತ್ತಿರುವ ಇಂದಿನ ದಿನಮಾನದಲ್ಲಿ ಅವರ ಬೋಧನೆಗಳು ಹೆಚ್ಚೆಚ್ಚು ಪ್ರಸ್ತುತವಾಗಿವೆ. ಬಹಳ ಪೂರ್ವದಿಂದಲೂ ಭಾರತೀಯರಾದ ನಾವು 'ಸರ್ವಧರ್ಮ ಸಮಭಾವ' ಪರಿಕಲ್ಪನೆಯನ್ನು ನಂಬಿಕೊಂಡು ಬಂದವರೇ ಆಗಿದ್ದೇವೆ. ಶಾಂತಿಯುತ ಸಹಬಾಳ್ವೆಯನ್ನು ಎತ್ತಿಹಿಡಿಯುತ್ತಲೇ ಇದ್ದೇವೆ. ನಮ್ಮ ಶ್ರೀಮಂತ ನಾಗರಿಕತೆಯ ಚಿಲುಮೆಗಳನ್ನು ಪುನಶ್ಚೇತನಗೊಳಿಸಲು ಮತ್ತು ಪುನರ್‍ಮನನ ಮಾಡಿಕೊಳ್ಳಲು ಇದು ಸೂಕ್ತ ಸಮಯವಾಗಿದೆ.

ವಿವೇಕಾನಂದರು ನಮ್ಮ ಸಮಾಜವು 'ವಿವೇಕ'ದಿಂದ ಕೂಡಿದ 'ಸದಾನಂದ' ಕಾಣುವುದಕ್ಕೆ ಮಾರ್ಗದರ್ಶಕರಾಗಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT