ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯ 5 ಕಡೆ ಉಚಿತ ವೈ–ಫೈ ಶೀಘ್ರ

ಮೊದಲ 30 ನಿಮಿಷ ಮಾತ್ರ ಉಚಿತ l ಮೊದಲ ಹಂತದಲ್ಲಿ 300 ಸ್ಥಳಗಳಿಗೆ ಸೇವೆ ವಿಸ್ತರಣೆ
Last Updated 11 ಜನವರಿ 2018, 19:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ 5 ಪ್ರದೇಶಗಳಲ್ಲಿ ಶೀಘ್ರವೇ ಸಾರ್ವಜನಿಕರಿಗೆ ಉಚಿತ ವೈ–ಫೈ ಸೌಲಭ್ಯ ಸಿಗಲಿದೆ.

ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಬಿಬಿಎಂಪಿ ಸಹಯೋಗದಲ್ಲಿ ಒದಗಿಸಲಿರುವ ಈ ಸೌಕರ್ಯಕ್ಕೆ ಇದೇ 15 ಅಥವಾ 16ರಿಂದ ಚಾಲನೆ ನೀಡಲು ಸಿದ್ಧತೆ ನಡೆದಿದೆ. ಈ ಸೌಕರ್ಯವನ್ನು ಮೊದಲ ಹಂತದಲ್ಲಿ 300 ಸ್ಥಳಗಳಿಗೆ ವಿಸ್ತರಿಸಲಾಗುತ್ತದೆ ಎಂದು ಪಾಲಿಕೆಯ ಐ.ಟಿ ವಿಭಾಗ ತಿಳಿಸಿದೆ.

ಈ ಸೌಲಭ್ಯ ಒದಗಿಸುವ ಸಲುವಾಗಿ ಸ್ಮಾರ್ಟ್‌ ಪೋಲ್‌ ಅಳವಡಿಸಲು ಮೆಜೆಸ್ಟಿಕ್‌, ಶಿವಾಜಿನಗರ ಬಸ್‌ ನಿಲ್ದಾಣ, ಕೆ.ಆರ್‌.ಮಾರ್ಕೆಟ್‌, ಬಿಬಿಎಂಪಿ ಕೇಂದ್ರ ಕಚೇರಿ ಹಾಗೂ ಹೊಸೂರು ರಸ್ತೆಯ ಮಾರುಕಟ್ಟೆಗಳಲ್ಲಿ ಸ್ಥಳ ಗುರುತಿಸಲಾಗಿದೆ. ಪ್ರತಿ ಕಂಬಕ್ಕೆ ತಲಾ ₹12 ಸಾವಿರದಂತೆ ಒಟ್ಟು ₹60 ಸಾವಿರ ಪಾವತಿಸಲಾಗುತ್ತದೆ. ಇದಕ್ಕೆ ಆಯುಕ್ತರು ಒಪ್ಪಿಗೆ ನೀಡಿದ್ದಾರೆ ಎಂದು ಪಾಲಿಕೆಯ ಒಎಫ್‌ಸಿ ವಿಭಾಗದ ಹೆಸರು ಹೇಳಲಿಚ್ಛಿಸದ ಅಧಿಕಾರಿ ತಿಳಿಸಿದರು.

ಬಸ್‌ ನಿಲ್ದಾಣಗಳಲ್ಲೂ ವೈ–ಫೈ: ನಗರದ ಪ್ರಮುಖ ಬಸ್ ನಿಲ್ದಾಣಗಳಾದ ಮೆಜೆಸ್ಟಿಕ್, ಶಿವಾಜಿನಗರ, ಶಾಂತಿನಗರ, ಜಯನಗರ, ಬನಶಂಕರಿ, ಯಶವಂತಪುರ, ಕೆಂಗೇರಿ, ದೊಮ್ಮಲೂರು, ವೈಟ್ ಫೀಲ್ಡ್, ಬನ್ನೇರುಘಟ್ಟ ಮತ್ತು ಕೋರಮಂಗಲ ಬಸ್ ನಿಲ್ದಾಣಗಳಲ್ಲಿ ಉಚಿತ ವೈ–ಫೈ ಸಂಪರ್ಕ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

7 ಕಂಪನಿಗಳಿಗೆ ಗುತ್ತಿಗೆ: ಏರ್‌ಟೆಲ್‌, ವೊಡಾಫೋನ್‌ ಟೆಲಿಕಾಂ ಕಂಪನಿಗಳ ಟವರ್‌ ನಿರ್ವಹಿಸುವ ಇಂಡಸ್‌ ಕಂಪನಿ ಮೊದಲ ಹಂತದಲ್ಲಿ 5 ಸ್ಥಳಗಳಲ್ಲಿ ವೈ–ಫೈ ಸಂಪರ್ಕ ಒದಗಿಸುವ ಸ್ಮಾರ್ಟ್‌ ಪೋಲ್‌ ಅಳವಡಿಸಲಿದೆ. ಈ ಸೇವೆ ಒದಗಿಸಲು 7 ಟೆಲಿಕಾಂ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಅವುಗಳು ಹೊಂದಿರುವ ಮೂಲಸೌಕರ್ಯಗಳಿಗೆ ಅನುಗುಣವಾಗಿ ಕನಿಷ್ಠ 175ರಿಂದ ಗರಿಷ್ಠ 200 ಸ್ಥಳಗಳಿಗೆ ವೈ–ಫೈ ಸೌಲಭ್ಯ ಒದಗಿಸಲು ಗುರಿ ನಿಗದಿ ಮಾಡಲಾಗಿದೆ. ಅಲ್ಲದೆ, 90 ದಿನಗಳ ಗಡುವು ನೀಡಲಾಗಿದೆ. ಗಡುವಿನೊಳಗೆ ಗುರಿ ಸಾಧಿಸದಿದ್ದರೆ ಗುತ್ತಿಗೆ ರದ್ದುಪಡಿಸಲಾಗುತ್ತದೆ ಎಂದು ತಿಳಿಸಿದರು.

ಮೊದಲ 30 ನಿಮಿಷ ಮಾತ್ರ ಉಚಿತ: ವೈ–ಫೈ ಬಳಕೆದಾರರಿಗೆ ಮೊದಲ 30 ನಿಮಿಷ ಉಚಿತ ಸೇವೆ ಲಭಿಸಲಿದೆ. ನಂತರದ ಅವಧಿಗೆ ಸೇವಾದಾರ ಕಂಪನಿ ನಿರ್ದಿಷ್ಟ ಶುಲ್ಕ ವಿಧಿಸಲಿದೆ. ಈ ಸೌಲಭ್ಯ ದುರ್ಬಳಕೆಯಾಗದಂತೆ ನಿಗಾ ವಹಿಸಲಾಗುತ್ತದೆ. ಇದಕ್ಕೆ ಪೊಲೀಸ್‌ ಇಲಾಖೆಯ ನೆರವು ಪಡೆಯಲಾಗುತ್ತದೆ ಎಂದು ಅವರು ತಿಳಿಸಿದರು.

ಎಲ್ಲ ವ್ಯವಹಾರಗಳೂ ಡಿಜಿಟಲೀಕರಣವಾಗುತ್ತಿವೆ. ಎಲ್ಲರಿಗೂ ಇಂಟರ್‌ನೆಟ್‌ ಸೌಲಭ್ಯ ಮುಕ್ತವಾಗಿ ಸಿಗಬೇಕು. ಇಡೀ ನಗರಾದ್ಯಂತ ವೈ–ಫೈ ಸೌಲಭ್ಯವನ್ನು ಪಾಲಿಕೆಯಿಂದಲೇ ಒದಗಿಸುವ ಬಗ್ಗೆ ಬಿಎಸ್‌ಎನ್‌ಎಲ್‌ನಿಂದ ಸರ್ವೆ ಮಾಡಿಸಲಾಗಿತ್ತು. ಈಗ ರಾಜ್ಯ ಸರ್ಕಾರವೇ ಈ ಯೋಜನೆ ಕೈಗೆತ್ತಿಕೊಂಡಿದೆ. ಮೊದಲ ಹಂತದಲ್ಲಿ ನಗರದ ಪ್ರಮುಖ ರಸ್ತೆಗಳು, ಪಾಲಿಕೆ ಕಚೇರಿಗಳು, ಬಸ್ ನಿಲ್ದಾಣಗಳಲ್ಲಿ ಉಚಿತವಾಗಿ ವೈ–ಫೈ ಸೌಲಭ್ಯ ಸಿಗಲಿದೆ ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT