ನೇರ ವೇತನ ಪಾವತಿ: ಪ್ರತಿಭಟನೆ ಮುಂದೂಡಿಕೆ

7

ನೇರ ವೇತನ ಪಾವತಿ: ಪ್ರತಿಭಟನೆ ಮುಂದೂಡಿಕೆ

Published:
Updated:

ಬೆಂಗಳೂರು: ಬಿಬಿಎಂಪಿಯಿಂದಲೇ ವೇತನ ನೇರ ಪಾವತಿ ಮಾಡುವಂತೆ ಒತ್ತಾಯಿಸಿ ಸೋಮವಾರದಿಂದ ಕೆಲಸ ಸ್ಥಗಿತಗೊಳಿಸಲು ನಿರ್ಧರಿಸಿದ್ದ ಕರ್ನಾಟಕ ಪ್ರದೇಶ ಗುತ್ತಿಗೆ ಪೌರಕಾರ್ಮಿಕರು, ಚಾಲಕರು ಮತ್ತು ಮೇಲ್ವಿಚಾರಕರ ಸಂಘವು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ.

‘ಮೇಯರ್‌ ಆರ್‌.ಸಂಪತ್‌ ರಾಜ್‌ ಅವರು ಚೀನಾ, ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ದೆಹಲಿ ಹಾಗೂ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌ ಅವರು ಹಜ್‌ಗೆ ಹೋಗಿದ್ದಾರೆ. ಅವರು ಇಲ್ಲದಿದ್ದಾಗ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ. ಹೀಗಾಗಿ, ಎಂದಿನಂತೆ ಕಸದ ವಿಲೇವಾರಿಯಲ್ಲಿ ತೊಡಗುತ್ತೇವೆ. ಮೂವರು ರಾಜಧಾನಿಗೆ ವಾಪಸ್‌ ಬಂದ ಬಳಿಕ, ಅವರೊಂದಿಗೆ ಚರ್ಚಿಸುತ್ತೇವೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸದ್ದರೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಸಂಘದ ಅಧ್ಯಕ್ಷ ಸಿ.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾಲಿಕೆಯು ಪೌರಕಾರ್ಮಿಕರಿಗೆ ಜನವರಿಯಿಂದ ವೇತನ ನೇರ ಪಾವತಿ ಮಾಡುತ್ತಿದೆ. ಆದರೆ, ಮೇಲ್ವಿಚಾರಕರು, ಆಟೊ ಹಾಗೂ ಕಾಂಪ್ಯಾಕ್ಟರ್‌ಗಳ ಚಾಲಕರು, ಸಹಾಯಕರಿಗೆ ಗುತ್ತಿಗೆದಾರರ ಮೂಲಕ ವೇತನ ಪಾವತಿ ಮಾಡಲಾಗುತ್ತಿದೆ. ಪೌರಕಾರ್ಮಿಕರು ಹಾಗೂ ನಾವು ಅನೇಕ ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಮಗೂ ವೇತನ ನೇರ ಪಾವತಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ಪಾಲಿಕೆಯ ತಾರತಮ್ಯ ನೀತಿಯಿಂದಾಗಿ ನಾವು ಬೀದಿಪಾಲಾಗುವ ಸ್ಥಿತಿ ಉದ್ಭವಿಸಿದೆ. ಗುತ್ತಿಗೆದಾರರು ಆರ್ಥಿಕ ಹೊರೆಯ ನೆಪದಲ್ಲಿ ನಮ್ಮನ್ನು ಕೆಲಸದಿಂದ ತೆಗೆಯುವ ಸಾಧ್ಯತೆ ಇದೆ. ಎಲ್ಲರೂ ಅಭದ್ರತೆಯಿಂದ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅಳಲು ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry