ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿಯಾನು...!

7

ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿಯಾನು...!

Published:
Updated:

ಬೆಂಗಳೂರು: ‘ಮಗಳನ್ನು ತಂದೆಯೇ ಅಪಹರಿಸಿ ಆಸ್ಟ್ರೇಲಿಯಾಕ್ಕೆ ಕರೆದುಕೊಂಡು ಹೋಗಿದ್ದಾನೆ. ಆತನ ವಶದಲ್ಲಿರುವ ಮಗಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಬಹದು' ಎಂಬ ಆರೋಪಕ್ಕೆ ಸಂಬಂಧಿಸಿದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ ಸರ್ಕಾರಿ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

‘ತಂದೆಯ ಅಪಕೃತ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಬಂಧಿಸಿದ ರಾಣೆಬೆನ್ನೂರು ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಅನ್ನು ಅಮಾನತು ಮಾಡಲಾಗಿದೆ’ ಎಂದು ಸರ್ಕಾರಿ ವಕೀಲರು ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಎಚ್‌.ಬಿ.ಪ್ರಭಾಕರ ಶಾಸ್ತ್ರಿ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ರವಿ ಮಳಿಮಠ, ‘ಹಾಗಿದ್ದರೆ ಅಮಾನತು ಮಾಡಿದ ಮೇಲೆ ಅವರನ್ನು ಪುನಃ ಅಲ್ಲಿಯೇ ಕರ್ತವ್ಯಕ್ಕೆ ಏಕೆ ನಿಯೋಜಿಸಿದಿರಿ’ ಎಂದು ಪ್ರಶ್ನಿಸಿದರು.

ಇದಕ್ಕೆ ಸರ್ಕಾರಿ ವಕೀಲರು, ‘ಸ್ವಾಮಿ, ಕರ್ತವ್ಯ ಲೋಪದ ಮೇಲೆ ಅಮಾನತು ಮಾಡಲಾಗಿದೆ. ಪುನಃ ಅಲ್ಲಿಯೇ ಕರ್ತವ್ಯ ನಿಯೋಜನೆ ಮಾಡಿರುವುದಕ್ಕೆ ಸದ್ಯ ದಾಖಲೆಗಳಿಲ್ಲ. ಪರಿಶೀಲಿಸಿದ ಮೇಲೆ ತಿಳಿಸುತ್ತೇನೆ. ಒಂದಷ್ಟು ಕಾಲಾವಕಾಶ ಬೇಕು’ ಎಂದು ಕೋರಿದರು.

ಇದನ್ನು ಒಪ್ಪದ ನ್ಯಾಯಮೂರ್ತಿಗಳು, ‘ರಾಣೆಬೆನ್ನೂರು ದೂರ ಏನಿಲ್ಲ. ಬೇಕಾದಷ್ಟು ವಿಮಾನಗಳಿವೆ. ಹೋಗಿ, ನಾಳೆಯೇ ದಾಖಲೆಗಳನ್ನು ಪಡೆದುಕೊಂಡು ಬನ್ನಿ’ ಎಂದು ತಾಕೀತು ಮಾಡಿದರು!

‘ಸರ್ಕಾರ ಮನಸ್ಸಿಗೆ ಬಂದಂತೆ ಕಾನೂನು ಉಲ್ಲಂಘಿಸಿ ವರ್ತಿಸಿದರೆ ಕೋರ್ಟ್‌ ಸುಮ್ಮನಿರುವುದಿಲ್ಲ. ನಿಮ್ಮ ಕಾಗಕ್ಕ–ಗುಬ್ಬಕ್ಕ ಕಥೆಗಳೆಲ್ಲಾ ನಮಗೆ ಬೇಕಿಲ್ಲ. ನೀವು ಹೀಗೆಯೇ ಮಾಡಿದರೆ ನಿಮ್ಮ ಹಿರಿಯ ಅಧಿಕಾರಿಗಳನ್ನು ಕೋರ್ಟ್‌ ಮುಂದೆ ಕರೆಸಬೇಕಾಗುತ್ತದೆ. ಅಷ್ಟೇಕೆ ಸಾಲಿಸಿಟರ್ ಜನರಲ್‌ ಅವರನ್ನೂ ಕರೆಸಬೇಕಾದೀತು’ ಎಂದು ಎಚ್ಚರಿಸಿದರು.

ಏನಿದು ಪ್ರಕರಣ?: ಹೇಬಿಯಸ್ ಕಾರ್ಪಸ್‌ ಅರ್ಜಿ ಸಲ್ಲಿಸಿರುವ 38 ವರ್ಷದ ಮಹಿಳೆ ರಾಣೆಬೆನ್ನೂರಿನವರು. ಇವರು ವಿಜಯಪುರದ ಸಿವಿಲ್‌ ಎಂಜಿನಿಯರ್ ಒಬ್ಬರನ್ನು 2004ರಲ್ಲಿ ಮದುವೆಯಾಗಿದ್ದರು. 2005ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸಿದೆ. ಇವರೆಲ್ಲಾ ಕುಟುಂಬ ಸಮೇತ ದುಬೈಗೆ ಹೋಗಿ ನೆಲೆಸಿದ್ದರು. ನಂತರ 2007ರಲ್ಲಿ ಅಲ್ಲಿಂದ ಆಸ್ಟ್ರೇಲಿಯಾಕ್ಕೆ ಹೋಗಿ ನೆಲೆಸಿದ್ದು ಈಗ ಆಸ್ಟ್ರೇಲಿಯಾದ ಪೌರತ್ವ ಪಡೆದಿದ್ದಾರೆ.

ಏತನ್ಮಧ್ಯೆ ಪತ್ನಿ, ‘ನನ್ನ ಗಂಡ ಸದ್ಯ ಸಿಡ್ನಿಯ ರೋಡ್‌ ಅಂಡ್‌ ಮೆರೈನ್‌ ಕಂಪನಿಯಲ್ಲಿ ರಸ್ತೆ ನಿರ್ಮಾಣ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದಾನೆ. ಕುಡುಕನಾಗಿರುವ ಅವನು ಲಂಪಟ, ಮಾದಕ ದ್ರವ್ಯಗಳ ವ್ಯಸನಿಯೂ ಹೌದು. ನನಗೀಗ ವಿಪರೀತ ದೈಹಿಕ, ಮಾನಸಿಕ, ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ’ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.

‘ಗಂಡನ ಕಿರುಕುಳ ತಾಳಲಾರದೆ ನಾವು 2017ರ ಏಪ್ರಿಲ್ 14ರಂದು ಭಾರತಕ್ಕೆ ಮಗಳೊಂದಿಗೆ ಬಂದೆ. ಆದರೆ, ಪತಿ, ನಾಲ್ಕು ದಿನಗಳ ನಂತರ ನನ್ನ ತಾಯಿಯ ಮನೆಗೆ ಬಂದು ಮಗಳನ್ನು ಬಲವಂತದಿಂದ ಕರೆದುಕೊಂಡು ಹೋಗಿದ್ದಾನೆ. ಈ ಕುರಿತು ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಲು ಹೋದರೆ ಸಬ್‌ ಇನ್‌ಸ್ಪೆಕ್ಟರ್‌, ನನ್ನ ಪತಿಯ ಪರವಾಗಿಯೇ ವರ್ತಿಸಿ ಅನ್ಯಾಯ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry