ಐಐಎಸ್‌ಸಿಯಲ್ಲಿ ಸ್ಮಾರ್ಟ್‌ ಬೈಸಿಕಲ್‌ ಸೌಲಭ್ಯ

7

ಐಐಎಸ್‌ಸಿಯಲ್ಲಿ ಸ್ಮಾರ್ಟ್‌ ಬೈಸಿಕಲ್‌ ಸೌಲಭ್ಯ

Published:
Updated:
ಐಐಎಸ್‌ಸಿಯಲ್ಲಿ ಸ್ಮಾರ್ಟ್‌ ಬೈಸಿಕಲ್‌ ಸೌಲಭ್ಯ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಕ್ಯಾಂಪಸ್‌ನಲ್ಲಿ ಬಾಡಿಗೆ ಆಧಾರದಲ್ಲಿ ಸ್ಮಾರ್ಟ್‌ ಬೈಸಿಕಲ್‌ ಒದಗಿಸುವ ಸೇವೆ ಆರಂಭವಾಗಿದೆ.

ಬಾಡಿಗೆಗೆ ‘ಜೂಮ್‌ ಕಾರು’ ನೀಡುತ್ತಿರುವ ಪಿಇಡಿಎಲ್‌ ಕಂಪನಿ ಜತೆಗೆ ಐಐಎಸ್‌ಸಿ ಸ್ಮಾರ್ಟ್‌ ಬೈಸಿಕಲ್‌ ಸೌಲಭ್ಯ ಒದಗಿಸಲು ಒಪ್ಪಂದ ಮಾಡಿಕೊಂಡಿದೆ. ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ಬಳಕೆಗೆ 100 ಸ್ಮಾರ್ಟ್ ಬೈಸಿಕಲ್‌ಗಳು ಲಭ್ಯವಿವೆ. ಗುರುವಾರ ಈ ಸೌಲಭ್ಯ ವಿದ್ಯುಕ್ತವಾಗಿ ಆರಂಭಗೊಂಡಿತು.

400 ಎಕರೆ ಪ್ರದೇಶದ ಕ್ಯಾಂಪಸ್‌ನಲ್ಲಿ ಮುಖ್ಯದ್ವಾರ, ಗ್ರಂಥಾಲಯ, ಆಡಳಿತ ವಿಭಾಗ ಸೇರಿ 24 ಪ್ರಮುಖ ಸ್ಥಳಗಳಲ್ಲಿ ಬೈಸಿಕಲ್‌ ಡಾಕಿಂಗ್ ಸ್ಟೇಷನ್‌ ಸ್ಥಾಪಿಸಲಾಗಿದೆ.

ಪಿಇಡಿಎಲ್‌ ಪರಿಚಯಿಸಿರುವ ತಂತ್ರಜ್ಞಾನ ಸೌಲಭ್ಯದ ಬೈಸಿಕಲ್‌ಗಳನ್ನು ಬಳಕೆದಾರರು ಮೊಬೈಲ್‌ನಿಂದ ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಬಳಸಬಹುದು. ಡಿಜಿಟಲ್‌ ವಾಲೆಟ್‌ ಮತ್ತು ಪೇಟಿಎಂ ಮೂಲಕವೂ ಬೈಸಿಕಲ್‌ ಬಾಡಿಗೆ ಹಣ ಪಾವತಿಸಬಹುದು. 30 ನಿಮಿಷ ಬಳಕೆಗೆ ₹1 ನಿಗದಿಪಡಿಸಲಾಗಿದೆ. ಬಳಕೆದಾರರು ಕ್ಯಾಂಪಸ್‌ನಲ್ಲಿರುವ ಯಾವುದೇ ಡಾಕಿಂಗ್‌ ಸ್ಟೇಷನ್‌ನಿಂದ ಬೈಸಿಕಲ್‌ ಪಡೆದು ಕ್ಯಾಂಪಸ್‌ ಒಳಗೆ ಸುತ್ತಾಡಬಹುದಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ಕ್ಯಾಂಪಸ್‌ಗೆ ಭೇಟಿ ನೀಡುವ ಸಂದರ್ಶಕರು ಈ ಬೈಸಿಕಲ್‌ಗಳನ್ನು ಬಳಸಲು ಅವಕಾಶ ನೀಡಲಾಗಿದೆ.

ಸ್ಮಾರ್ಟ್‌ ಲಾಕ್‌ ಮತ್ತು ಕಳ್ಳತನ ನಿಗ್ರಹ ವ್ಯವಸ್ಥೆಯನ್ನು ಈ ಬೈಸಿಕಲ್‌ನಲ್ಲಿ ಅಳವಡಿಸಲಾಗಿದೆ. ಬೈಸಿಕಲ್‌ ಯಾವ ಜಾಗದಲ್ಲಿ ನಿಂತಿದೆ, ಎಲ್ಲಿ ಸಂಚರಿಸುತ್ತಿದೆ ಎನ್ನುವ ಮಾಹಿತಿ ಒದಗಿಸುವ ಜಿಪಿಎಸ್‌ ಸೌಲಭ್ಯವೂ ಇದೆ. ನಿಲ್ಲಿಸಿದ ಜಾಗದಿಂದ ಬೈಸಿಕಲ್‌ ಸಂಪರ್ಕ ಕಳೆದುಕೊಂಡರೇ ತಕ್ಷಣ ನಿಯಂತ್ರಣ ಕೊಠಡಿಗೆ ಸಂದೇಶ ರವಾನೆಯಾಗುತ್ತದೆ.

ಪಿಇಡಿಎಲ್‌ ಮಾರುಕಟ್ಟೆ ವಿಭಾಗದ ರಕ್ಷಾ ನಾಯ್ಕ್‌, ‘ಮೋಟರ್‌ ವಾಹನ ರಹಿತ ಕ್ಯಾಂಪಸ್‌ ಮಾಡುವುದು ನಮ್ಮ ಆಲೋಚನೆ. ಈ ಮೊದಲು ಕ್ಯಾಂಪಸ್‌ನಲ್ಲಿ ಬೈಸಿಕಲ್‌ ಬಳಕೆ ಇದ್ದರೂ ಅಷ್ಟೇನು ಪರಿಣಾಮಕಾರಿಯಾಗಿರಲಿಲ್ಲ. ಬಹಳಷ್ಟು ಜನರ ಬಳಿ ಸ್ಮಾರ್ಟ್‌ ಬೈಸಿಕಲ್‌ಗಳು ಮತ್ತು ಸ್ಮಾರ್ಟ್‌ ಲಾಕಿಂಗ್‌ ವ್ಯವಸ್ಥೆ ಹೊಂದಿರುವ ಬೈಸಿಕಲ್‌ಗಳಿರಲಿಲ್ಲ. ಪಿಇಡಿಎಲ್‌ ಒದಗಿಸುತ್ತಿರುವ ತಂತ್ರಜ್ಞಾನಾಧಾರಿತ ಸೌಲಭ್ಯದ ಬೈಸಿಕಲ್‌ಗಳು ಈ ಕೊರತೆ ನೀಗಿಸಲಿವೆ. ಬೈಸಿಕಲ್‌ ಬಳಕೆಯನ್ನೂ ಉತ್ತೇಜಿಸಲಿದೆ’ ಎಂದರು.

ಕೋರಮಂಗಲ ಮತ್ತು ಎಚ್ಎಸ್‌ಆರ್‌ ಲೇಔಟ್‌ನಲ್ಲಿ ಪಿಇಡಿಎಲ್‌ ಬೈಸಿಕಲ್‌ ಡಾಕಿಂಗ್‌ ಸ್ಟೇಷನ್‌ ಹೊಂದಿದೆ. ಸದ್ಯದಲ್ಲೇ ಇನ್ನಷ್ಟು ಸ್ಥಳಗಳಿಗೆ ಈ ಸೌಲಭ್ಯ ವಿಸ್ತರಿಸಲಿದೆ ಎಂದು ತಿಳಿಸಿದರು.

ಐಐಎಸ್‌ಸಿಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗ ಮತ್ತು ಸಾರಿಗೆ ‍ಪ್ರಯೋಗಾಲಯದ ಮುಖ್ಯಸ್ಥ ಡಾ.ಅನೀಶ್‌ ವರ್ಮ, ‘ಸಾರಿಗೆ ಎಂಜಿನಿಯರಿಂಗ್‌ ಪ್ರಯೋಗಾಲಯವು ನಮ್ಮ ನಗರ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಸುಸ್ಥಿರ ಸಾರಿಗೆ ಸೌಲಭ್ಯಕ್ಕೆ ಬೇಕಾದ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು, ಅದರಲ್ಲೂ ಸಾರ್ವಜನಿಕ ಬಳಕೆ ಬೈಸಿಕಲ್‌ ಯೋಜನೆ ಉತ್ತೇಜಿಸುವ ನಿಟ್ಟಿನಲ್ಲಿ ವೈಜ್ಞಾನಿಕ ಯೋಜನೆಗಳನ್ನು ರೂಪಿಸುತ್ತಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry