ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಮಾಂಗಕ್ಕೆ ಒದ್ದು ವ್ಯಾಪಾರಿಯ ಹತ್ಯೆ!

ಅನೈತಿಕ ಸಂಬಂಧ ಶಂಕೆ * ಪತ್ನಿಗೆ ಬುದ್ಧಿ ಹೇಳಿದ್ದ ಆಟೊ ಚಾಲಕ
Last Updated 11 ಜನವರಿ 2018, 19:59 IST
ಅಕ್ಷರ ಗಾತ್ರ

ಬೆಂಗಳೂರು: ತನ್ನ ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ಮೇಲೆ ಸೈಯದ್ ಹುಸೇನ್ (19) ಎಂಬ ಬಟ್ಟೆ ವ್ಯಾಪಾರಿಯನ್ನು ಮರ್ಮಾಂಗಕ್ಕೆ ಒದ್ದು ಕೊಲೆಗೈದಿದ್ದ ಶಿವಶಂಕರ್, ಸಿ.ಸಿ.ಟಿ.ವಿ ಕ್ಯಾಮೆರಾ ನೀಡಿದ ಸುಳಿವಿನಿಂದ ವಿವೇಕನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ವಿವೇಕನಗರದ ಶ್ಯಾಮಣ್ಣ ರಸ್ತೆ ನಿವಾಸಿ ಶಿವಶಂಕರ್ (34) ಎಂಬಾತನನ್ನು ಬಂಧಿಸಿದ್ದೇವೆ. ಆಟೊ ಚಾಲಕನಾದ ಈತ, ಜ.5ರ ರಾತ್ರಿ ಹುಸೇನ್‌ನನ್ನು ಮನೆ ಹತ್ತಿರದ ಪಾರ್ಕ್‌ಗೆ ಕರೆದೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದ.

ಮರುದಿನ ಮಧ್ಯಾಹ್ನ ಹೊಟ್ಟೆ ನೋವು ಕಾಣಿಸಿಕೊಂಡು ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ ಹುಸೇನ್, ರಾತ್ರಿ 11 ಗಂಟೆಗೆ ಕೊನೆಯುಸಿರೆಳೆದ. ಸಾಯುವ ಮುನ್ನ ಆತ, ‘ಶ್ಯಾಮಣ್ಣ ರಸ್ತೆ ಹುಡುಗರು ಹೊಡೆದರು’ ಎಂದು ವೈದ್ಯರ ಬಳಿ ಹೇಳಿದ್ದ. ಆ ಸುಳಿವು ಆಧರಿಸಿ ಪೊಲೀಸರು ಆರೋಪಿಯನ್ನು ‌ಪತ್ತೆ ಮಾಡಿದ್ದಾರೆ.

ಹೊಡೆತ ತಿಂದು, ಮದ್ಯ ಕುಡಿದ! : ‘ರೋಸ್‌ ಗಾರ್ಡನ್‌ ಬಸ್ ನಿಲ್ದಾಣದ ಬಳಿ ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಹುಸೇನ್‌ಗೆ, ಕೆಲ ದಿನಗಳ ಹಿಂದೆ ಶಿವಶಂಕರ್‌ನ ಪತ್ನಿಯ ಪರಿಚಯವಾಗಿತ್ತು. ಕ್ರಮೇಣ ಅವರಿಬ್ಬರ ನಡುವೆ ಸಲುಗೆ ಬೆಳೆದಿತ್ತು. ಇತ್ತೀಚೆಗೆ ಈ ವಿಚಾರ ತಿಳಿದ ಪತಿ, ಆತನಿಂದ ದೂರ ಇರುವಂತೆ ಪತ್ನಿಗೆ ಬುದ್ಧಿ ಹೇಳಿದ್ದ. ಅಲ್ಲದೆ, ಹುಸೇನ್‌ಗೂ ಎಚ್ಚರಿಕೆ ನೀಡಿದ್ದ’ ಎಂದು ಪೊಲೀಸರು ಹೇಳಿದ್ದಾರೆ.

‘ಜ.5ರ ರಾತ್ರಿ ಸಹ ಅವರಿಬ್ಬರೂ ರಸ್ತೆಯಲ್ಲಿ ನಿಂತು ಮಾತನಾಡುತ್ತಿದ್ದರು. ಗೆಳೆಯರಿಂದ ಈ ವಿಚಾರ ತಿಳಿದು ಕೆಂಡಾಮಂಡಲನಾದ ಆರೋಪಿ, ಕೂಡಲೇ ಅಲ್ಲಿಗೆ ತೆರಳಿ ಹುಸೇನ್‌ನನ್ನು ಸಮೀಪದ ಪಾರ್ಕ್‌ಗೆ ಎಳೆದೊಯ್ದಿದ್ದ. ಅಲ್ಲಿ ಮನಸೋಇಚ್ಛೆ ಥಳಿಸಿದ್ದನಲ್ಲದೆ, ಮರ್ಮಾಂಗಕ್ಕೂ ಒದ್ದಿದ್ದ.’

‘ಬಳಿಕ ಶಿವಶಂಕರ್ ಅದೇ ರಸ್ತೆಯಲ್ಲಿರುವ ‘ಹ್ಯಾಪಿ ಬಾರ್‌’ಗೆ ಹೋಗಿದ್ದ. ಸ್ವಲ್ಪ ಸಮಯ ಚೇತರಿಸಿಕೊಂಡ ಬಳಿಕ ಹುಸೇನ್ ಸಹ ಸ್ನೇಹಿತರೊಂದಿಗೆ ಅದೇ ಬಾರ್‌ಗೆ ಹೋಗಿ ಮದ್ಯ ಕುಡಿದಿದ್ದ. ಆ ನಂತರ ಹೊಟ್ಟೆನೋವಿನಿಂದ ನರಳಾಡಲು ಶುರು ಮಾಡಿದ ಆತನನ್ನು, ಸ್ನೇಹಿತರು ಆಟೊದಲ್ಲಿ ಮನೆಗೆ ಬಿಟ್ಟಿದ್ದರು.’ ‘ಏನಾಯಿತೆಂದು ಕುಟುಂಬ ಸದಸ್ಯರು ವಿಚಾರಿಸಿದಾಗ, ‘ಬೈಕ್‌ನಿಂದ ಬಿದ್ದೆ’ ಎಂದು ಹುಸೇನ್‌ ಸುಳ್ಳು ಹೇಳಿದ್ದ. ಮರುದಿನ ಮಧ್ಯಾಹ್ನ ಮತ್ತೊಮ್ಮೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಕುಟುಂಬ ಸದಸ್ಯರು ಆತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದರು. ತಪಾಸಣೆ ನಡೆಸಿದ ವೈದ್ಯರು, ‘ಮರ್ಮಾಂಗ ಹಾಗೂ ಕಿಡ್ನಿಗೆ ಪೆಟ್ಟು ಬಿದ್ದಿದೆ. ಬದುಕುಳಿಯುವ ಸಾಧ್ಯತೆ ಕಡಿಮೆ’ ಎಂದಿದ್ದರು.

ತನಿಖೆ ಚುರುಕು: ಕೊಲೆ (ಐಪಿಸಿ 302) ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ ವಿವೇಕನಗರ ಪೊಲೀಸರು, ಶ್ಯಾಮಣ್ಣ ರಸ್ತೆಯ ಹುಡುಗರನ್ನು ವಿಚಾರ
ಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಂಡರು. ಹುಸೇನ್‌ನನ್ನು ಶಿವಶಂಕರ್ ಎಳೆದೊಯ್ದಿದ್ದ ದೃಶ್ಯ, ಬಾರ್ ಸಮೀಪದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ಸುಳಿವು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT