ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹10 ನಾಣ್ಯ ಸಮಸ್ಯೆ ಈಗಲೂ ಜೀವಂತ

ಆರ್‌ಬಿಐ ಸ್ಪಷ್ಟನೆ ಬಳಿಕವೂ ನಾಣ್ಯ ಸ್ವೀಕರಿಸಲು ವ್ಯಾಪಾರಿಗಳ ಹಿಂದೇಟು
Last Updated 12 ಜನವರಿ 2018, 16:36 IST
ಅಕ್ಷರ ಗಾತ್ರ

ಬೆಂಗಳೂರು:  ಹತ್ತು ರೂಪಾಯಿ ನಾಣ್ಯವನ್ನು ಜನ ನಿರ್ಭೀತಿಯಿಂದ ಬಳಸಬಹುದು ಎಂದು ಆರ್‌ಬಿಐ ಮತ್ತು ವಿವಿಧ ಬ್ಯಾಂಕ್‌ಗಳು ಪದೇ ಪದೇ
ಸ್ಪಷ್ಟಪಡಿಸುತ್ತಿದ್ದರೂ ಅದರ ಚಲಾವಣೆ ಸಮಸ್ಯೆ ಈಗಲೂ ಇದೆ.

ಇದನ್ನು ಪರೀಕ್ಷಿಸುವ ಸಲುವಾಗಿಯೇ, ಹೋಟೆಲ್‌ವೊಂದರಲ್ಲಿ ಟೀ ಕುಡಿದು, ಬಿಲ್‌ ಪಾವತಿಸಲು ₹10ರ ನಾಣ್ಯ ನೀಡಿದಾಗ, ಕ್ಯಾಷಿಯರ್‌ ‘ಈ ನಾಣ್ಯವನ್ನು ತೆಗೆದುಕೊಂಡು ನಮ್ಮ ಮನೆಯಲ್ಲಿ ಪ್ರದರ್ಶನಕ್ಕೆ ಇಡಬೇಕಷ್ಟೆ. ಇದು ನಡಿಯಲ್ಲಮ್ಮ, ನೋಟು ಕೊಡಿ’ ಎಂದರು.

ಬ್ಯಾಂಕ್‌ಗಳು ನಾಣ್ಯ ನಿರಾಕರಿಸುವಂತಿಲ್ಲ ಎಂದು ಸಾರಿ ಸಾರಿ ಹೇಳಿವೆ. ಆದರೂ ನೀವು ಏಕೆ ತೆಗೆದುಕೊಳ್ಳುವುದಿಲ್ಲ ಎಂದು ಕೇಳಿದ್ದಕ್ಕೆ, ‘ಹಾಂ.. ನೀವು ಕೊಟ್ಟರೆ ತೆಗೆದುಕೊಳ್ಳಬೇಕು. ಅದೇ ನಾವು ಕೊಟ್ಟರೆ ಯಾರೂ ತೆಗೆದು
ಕೊಳ್ಳುವುದಿಲ್ಲ. ಅವನ್ನೆಲ್ಲ ಗುಡ್ಡೆ ಹಾಕಿಕೊಂಡು ಬ್ಯಾಂಕ್‌ಗೆ ಹೋಗೋದೇ ನಮ್ಮ ಕೆಲಸ ಆಗಿದೆ. ಸುಮ್ಮನೆ ಮಾತು ಬೇಡ, ನೋಟು ಕೊಡಿ ಮೇಡಂ’ ಎಂದು ಸುಮ್ಮನಾದರು.

ಮಾರುಕಟ್ಟೆ, ಕಿರಾಣಿ ಅಂಗಡಿ, ಆಟೊಗಳಲ್ಲೂ ₹10 ನಾಣ್ಯಗಳನ್ನು ಪಡೆಯಲು ಈಗಲೂ ಹಿಂದೇಟು ಹಾಕುತ್ತಿದ್ದಾರೆ. ‘ಈ ನಾಣ್ಯ ನಡೆಯಲ್ವಂತೆ, ನಕಲಿ ನಾಣ್ಯ ಬಂದಿವೆಯಂತೆ, ಬ್ಯಾಂಕಿನವರು ಪಡೆಯುತ್ತಿಲ್ಲವಂತೆ...’ ಎಂಬ ಅಂತೆ ಕಂತೆಗಳ ಮಾತುಗಳು ಇನ್ನೂ ಕೇಳಿಬರುತ್ತಿವೆ.

ನಾಣ್ಯದ ಸಮಸ್ಯೆ ಶುರುವಾಗಿದ್ದು ಹೀಗೆ: 2016ರ ನವೆಂಬರ್‌ನಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ನಂತರ ಬ್ಯಾಂಕ್‌ಗಳು ನೋಟುಗಳ ಬದಲಿಗೆ ನಾಣ್ಯಗಳನ್ನು ವಿತರಿಸಿದ್ದವು. ನೋಟುಗಳ ಚಲಾವಣೆ ಸುಧಾರಿಸಿದ ನಂತರ ಸಣ್ಣ ನಗರ ಮತ್ತು ಪಟ್ಟಣಗಳಲ್ಲಿನ ಬ್ಯಾಂಕ್‌ ಶಾಖೆಗಳು ನಾಣ್ಯಗಳನ್ನು ಮರಳಿ ಪಡೆಯಲು ಹಿಂದೇಟು ಹಾಕಿದ್ದವು. ಬ್ಯಾಂಕ್‌ಗಳಲ್ಲಿನ ಖಜಾನೆಯಲ್ಲಿ ನಾಣ್ಯಗಳನ್ನು ಸಂಗ್ರಹಿಸಿ ಇಡಲು ಸ್ಥಳಾವಕಾಶ ಇಲ್ಲದ ಕಾರಣಕ್ಕೆ ಬ್ಯಾಂಕ್‌ಗಳು ಈ ನಿರ್ಧಾರಕ್ಕೆ ಬಂದಿದ್ದವು. ಬ್ಯಾಂಕ್‌ಗಳು ಯಾವಾಗ ನಾಣ್ಯ ಪಡೆಯುವುದನ್ನು ನಿರಾಕರಿಸಿದವೋ ಆಗ ನಾನಾ ವದಂತಿಗಳು ಹಬ್ಬಿದವು.

‘ತಮಿಳುನಾಡಿನಲ್ಲಿ ಕೆಲ ಅಕ್ಕಸಾಲಿಗರು ₹10ರ ನಕಲಿ ನಾಣ್ಯ ಟಂಕಿಸುತ್ತಿದ್ದಾರಂತೆ...’, ‘ಆಂಧ್ರಪ್ರದೇಶದಲ್ಲಿ ಈಗಾಗಲೇ ಚಲಾವಣೆ ಸ್ಥಗಿತವಾಗಿದೆಯಂತೆ...’ ಎನ್ನುವ ಊಹಾಪೋಹ ಚರ್ಚೆಗೆ ಗ್ರಾಸವಾಗಿತ್ತು. ಇದರಿಂದಾಗಿ ರಾಜ್ಯದಲ್ಲಿಯೂ ₹10ರ ನಾಣ್ಯ ಚಲಾವಣೆ ಸ್ಥಗಿತವಾಯಿತು.

ಈ ಮಧ್ಯೆ ಬೆಳ್ಳಿ ಸುತ್ತ ಚಿನ್ನದ ಲೇಪನ ಮಾಡಿದಂತೆ ಕಾಣಿಸುವ ಈ ನಾಣ್ಯ ನೋಡಲು ಸುಂದರವಾಗಿದ್ದು, ಅಪರೂಪಕ್ಕೆ ಸಿಕ್ಕಿದಾಗ ಅದನ್ನು ಸಂಗ್ರಹಿಸಿಡುತ್ತಿದ್ದರು. ಇನ್ನು ಕೆಲವರು ಸಣ್ಣ ಉಳಿತಾಯ ಎಂಬಂತೆ ಗೋಲಕದ ಡಬ್ಬಿಯಲ್ಲಿ ಶೇಖರಿಸುತ್ತಿದ್ದರು. ಯಾವಾಗ ಗಾಳಿಸುದ್ದಿ ಹಬ್ಬಿತೋ ಆಗ ನಾಣ್ಯದ ಗಂಟು ಅವರಿಗೆ ಅಪಥ್ಯವಾಗಿ, ತ್ವರಿತವಾಗಿ ಖರ್ಚು ಮಾಡುವ ಮಾರ್ಗಕ್ಕಾಗಿ ಅವರೆಲ್ಲ ಹುಡುಕಾಡಿದರು. ಇದರಿಂದ ನಾಣ್ಯದ ಸಮಸ್ಯೆ ಜಟಿಲಗೊಂಡಿತು.

‘ಕಳೆದ ವರ್ಷ ಈ ಸಮಸ್ಯೆ ಪ್ರಾರಂಭವಾದಾಗ ಇದ್ದ ಪರಿಸ್ಥಿತಿ ಈಗಿಲ್ಲ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ಖಾಸಗಿ ಬಸ್‌ಗಳಲ್ಲಿ ನಾಣ್ಯ ಪಡೆಯುತ್ತಿದ್ದಾರೆ’ ಎಂದು ಶಿವಾಜಿನಗರದ ನಿವಾಸಿ ಗೌರಿ ತಿಳಿಸಿದರು.

‘₹10 ಸೇರಿ ಎಲ್ಲಾ ಮುಖಬೆಲೆಯ ನಾಣ್ಯಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಆದರೆ, ಗ್ರಾಹಕರೇ ಅವುಗಳನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ₹ 3,000 ಮೌಲ್ಯದ ನಾಣ್ಯಗಳು ನನ್ನಲ್ಲಿಯೇ ಉಳಿದಿವೆ. ಬ್ಯಾಂಕ್‌ಗೆ ಹೋಗಿ ಅದನ್ನು ಬದಲಿಸಿಕೊಂಡು ಬರಲು ಸಮಯವಾಗುತ್ತಿಲ್ಲ’
ಎಂದು ವ್ಯಾಪಾರಿ ಸುರೇಶ್‌ ಹೇಳಿದರು.

‘ತಿಂಗಳಿಂದ ಸುಮಾರು 50 ಮಂದಿ ಹತ್ತರ ನಾಣ್ಯಗಳನ್ನು ತಂದಿದ್ದರು’ ಎಂದು ಎಳನೀರು ವ್ಯಾಪಾರಿ ಶಿವಪ್ಪ ಹೇಳಿದರು.

‘ಅಂಗಡಿಗಳಲ್ಲಿ ಮಾತ್ರವಲ್ಲ, ಪತ್ತಿನ ಸಹಕಾರ ಸಂಘ, ಸೊಸೈಟಿ, ಹಾಲಿನ ಬೂತ್‌ ಹಾಗೂ ಕೆಲವು ಖಾಸಗಿ ಹಣಕಾಸು ಸಂಸ್ಥೆಗಳಲ್ಲೂ ₹10 ನಾಣ್ಯ ಪಡೆಯದ ಸ್ಥಿತಿ ತಿಂಗಳ ಹಿಂದೆ ಇತ್ತು’ ಎಂದು ಬಸವನಗುಡಿಯ ಮಂಜುನಾಥ್ ದೂರಿದರು.

ಹತ್ತರ ನಾಣ್ಯದ ರೂಪಾಂತರ

2005ರಲ್ಲಿ ಆರ್‌ಬಿಐ ಹತ್ತರ ನಾಣ್ಯವನ್ನು ಪರಿಚಯಿಸಿತು. ಅದರ ಒಂದು ಮುಖದ ಮೇಲ್ಭಾಗದಲ್ಲಿ ಇಂಡಿಯಾ ಎಂದು ಬರೆದಿತ್ತು. ಮಧ್ಯದಲ್ಲಿ ಅಶೋಕ ಸ್ತಂಭ ಹಾಗೂ 10 ಎಂದು ಎರಡು ಸಮಾನಾಂತರ ಗೆರೆಗಳ ನಡುವೆ ಬರೆಯಲಾಗಿತ್ತು. ಕೆಳಗಡೆ ಟಂಕಿಸಿದ ವರ್ಷವನ್ನು ನಮೂದಿಸಲಾಗುತ್ತಿತ್ತು.

2008ರಲ್ಲಿ ಇದರ ವಿನ್ಯಾಸ ಬದಲಿಸಿ, ಒಂದು ಮುಖದ ಮೇಲ್ಭಾಗದಲ್ಲಿ ಇಂಡಿಯಾ ಎಂದು ಬರೆದಿತ್ತು. ಮಧ್ಯದಲ್ಲಿ ಅಶೋಕ ಸ್ತಂಭ, ಅದರ ಮೇಲೆ ಹಾಗೂ ಕೆಳಗೆ ಒಂದೊಂದು ಗೆರೆ ಎಳೆಯಲಾಗಿತ್ತು. ಹಿಂಭಾಗದಲ್ಲಿ 10 ಎಂದು ಬರೆದು ಅದರ ಮೇಲ್ಭಾಗದಲ್ಲಿ 15 ಗೆರೆಗಳನ್ನು ಹಾಕಲಾಗಿತ್ತು.

2010ರ ಜುಲೈ 15ರಂದು ರೂಪಾಯಿಯ ಅಧಿಕೃತ ಚಿನ್ಹೆ (₹) ಘೋಷಿಸಲಾಯಿತು. ಅದನ್ನು ನಾಣ್ಯದಲ್ಲಿ ಮುದ್ರಿಸಲು 2011ರಲ್ಲಿ ಮತ್ತೊಮ್ಮೆ ವಿನ್ಯಾಸ ಬದಲಾಯಿತು. ಮುಂಭಾಗದಲ್ಲಿ ಅಶೋಕ ಸ್ತಂಭ ಹಾಗೂ ಅದರ ಬಲಭಾಗದಲ್ಲಿ ಇಂಡಿಯಾ ಎಂದು ಬರೆದಿದ್ದ ನಾಣ್ಯಗಳು ಚಲಾವಣೆಗೆ ಬಂದವು. 15 ಗೆರೆಗಳನ್ನು ಕಡಿಮೆ ಮಾಡಿ 10 ರೇಖೆಗಳಿಗೆ ಸೀಮಿತಗೊಳಿಸಿ, ಅದರ ಕೆಳಗೆ ರೂಪಾಯಿಯ ಚಿನ್ಹೆ ಇರುವಂತೆ ನಾಣ್ಯವನ್ನು ವಿನ್ಯಾಸಗೊಳಿಸಲಾಯಿತು.

ಹೀಗೆ ನಾಣ್ಯ ವಿಭಿನ್ನ ರೂಪಗಳನ್ನು ಪಡೆದಿದೆ. ಆದರೆ, ಹಳೆಯ ನಾಣ್ಯಗಳನ್ನು ನೋಡಿರದ ಕೆಲವರು ಇವು ನಕಲಿ ನಾಣ್ಯಗಳು ಎಂದು ಭಾವಿಸಿದ್ದರು. ಇದೂ ₹10 ನಾಣ್ಯ ಚಲಾವಣೆಗೆ ತೊಡಕಾಗಿತ್ತು.

ಸಮಸ್ಯೆ ಪರಿಹಾರಕ್ಕೆ ‘ನಾಣ್ಯ ಮೇಳ’

ನಾಣ್ಯಗಳನ್ನು ಬ್ಯಾಂಕ್‌ಗಳಿಗೆ ಮರಳಿಸಲು ಇಚ್ಛಿಸುವವರ ಅನುಕೂಲಕ್ಕಾಗಿ ‘ನಾಣ್ಯ ಮೇಳ’ ಏರ್ಪಡಿಸಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌, ವಾಣಿಜ್ಯ ಬ್ಯಾಂಕ್‌ಗಳಿಗೆ ಸೂಚಿಸಿದೆ.

‘ಆರ್‌ಬಿಐ ಹೊಸ ನಾಣ್ಯಗಳನ್ನು ಚಲಾವಣೆಗೆ ತಂದಾಗಲೆಲ್ಲ ನಾವು ನಾಣ್ಯ ಮೇಳವನ್ನು ಹಮ್ಮಿಕೊಳ್ಳುತ್ತೇವೆ. ಇದೇ ರೀತಿ ಶೀಘ್ರದಲ್ಲಿ ಮೇಳ ಏರ್ಪಡಿಸುತ್ತೇವೆ’ ಎಂದು ಕೆನರಾ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಂ.ಎಂ.ಚಿನಿವಾರ್‌ ತಿಳಿಸಿದರು.

ವ್ಯಾಪಾರಿಗಳ ಗೋಳು, ಗ್ರಾಹಕರ ಅಳಲು

ನನ್ನ ಬಳಿ ಇರುವ ನಾಣ್ಯಗಳೇ ದೂಳು ಹಿಡಿಯುತ್ತಿವೆ. ಹಾಗಾಗಿ ನಾನು ನಾಣ್ಯ ಸ್ವೀಕರಿಸುವುದನ್ನು ನಿಲ್ಲಿಸಿದ್ದೇನೆ

–ರಮೇಶ್‌, ಮಂಡಕ್ಕಿ ವ್ಯಾಪಾರಿ

ಗ್ರಾಹಕರು ತೆಗೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ಎರಡು ಬಾರಿ ಬ್ಯಾಂಕ್‌ಗೆ ಹೋಗಿದ್ದೇನೆ. ಎಷ್ಟು ಬಾರಿ ಅಲೆಯಲು ಸಾಧ್ಯ.

–ನಾಗರಾಜ್, ಆಟೊ ಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT